ನ್ಯೂಸ್

ಪರಂಪರೆ: ಸವೋನ್ನತ ಕ್ಷಾತ್ರಧರ್ಮ ಪಾಲನೆ

ಚಾತುರ್ವರ್ಣಾಶ್ರಮಗಳ ಧರ್ಮಪಾಲನೆಯ ಕುರಿತು ಯುಧಿಷ್ಠಿರನಿಗೆ ತಿಳಿಸುತ್ತಲಿದ್ದ ಭೀಷ್ಮಾಚಾರ್ಯರು ಮುಂದುವರಿದು ‘ರಾಜದಂಡ ನೀತಿ’ಯ ಮಹತ್ವವನ್ನು ಈ ಬಗೆಯಲ್ಲಿ ಹೇಳತೊಡಗಿದರು.

‘ಯುಧಿಷ್ಠಿರ! ಪ್ರಜಾವರ್ಗದಲ್ಲಿ ನಾಲ್ಕು ವರ್ಣ ಹಾಗೂ ನಾಲ್ಕು ಆಶ್ರಮಗಳ ಪ್ರವರ್ತನೆಯ ಧರ್ಮ, ನೀತಿಯ ಬದ್ಧತೆಯು ಉಳಿಯುವಂತೆ ನೋಡಿಕೊಳ್ಳಲು ರಾಜನು ಧಾರಣೆಗೈದಿರುವ ‘ದಂಡನೀತಿ’ ಬಹು ಮುಖ್ಯ.

ಈ ವಿಚಾರವಾಗಿ ಪ್ರಾಚೀನ ಕಾಲದಲ್ಲಿ ವೇನವಂಶೀಯನಾದ ಮಾಂಧಾತ ಮತ್ತು ಇಂದ್ರನ ರೂಪದಲ್ಲಿ ಕಾಣಿಸಿಕೊಂಡ ಮಹಾವಿಷ್ಣು ಒಂದೆಡೆ ಸಂಭಾಷಣೆ ಗೈದಿರುವುದು ನೀತಿಶಾಸ್ತ್ರದಲ್ಲಿ ಬಂದಿದೆ. ಅದರ ಅನ್ವಯ ಹೀಗೆ ಹೇಳಬಹುದು: ‘ಜಗತ್ತಿನಲ್ಲಿ ಭಗವಾನ್ ಮಹಾವಿಷ್ಣುವು ಧರ್ಮನಾಶಕರಾಗಿದ್ದ ರಾಕ್ಷಸರನ್ನೂ ದಶ್ಯುಗಳನ್ನೂ ನಾಶಗೈದು ಧರ್ಮದ ರಕ್ಷಣೆ ಮಾಡಿರುವುದು ಅವನಲ್ಲಿರುವ ಕ್ಷಾತ್ರಶಕ್ತಿ ಹಾಗೂ ಕ್ಷಾತ್ರಧರ್ಮ ಧಾರಣೆಗೈದಿರುವುದರಿಂದಲೇ ಹೌದು. ಅದೇ ರಾಜಧರ್ಮವೆಂದು ಸ್ಥಾಪಿಸಲ್ಪಟ್ಟಿದೆ. ತೋರುವ ಎಲ್ಲ ಅನ್ಯಧರ್ಮಗಳು ಕೂಡ ಆ ಕ್ಷಾತ್ರಧರ್ಮದ ಅಂಗವಾಗಿಯೇ ಪ್ರಕಟಗೊಂಡಿವೆ. ರಾಜನು ಎನಿಸಿದ್ದರೂ ಅವನು ಕ್ಷಾತ್ರದೃಷ್ಟಿಯಿಂದ ಕೂಡಿರದೆ ಇದ್ದರೆ ಪರಮ ಗತಿಯನ್ನು ಪಡೆಯಲಾರನು. ರಾಜನಿಗೆ ಕ್ಷಾತ್ರಧರ್ಮಪಾಲನೆ ಶ್ರೇಷ್ಠವಾದುದು. ಅನ್ಯ ಧರ್ಮಗಳೆಲ್ಲವೂ ಶೇಷ ಧರ್ಮಗಳು ಎಂದು ಪರಿಗಣಿಸಲ್ಪಟ್ಟಿವೆ. ಅರ್ಥಾತ್ ಎಲ್ಲ ಧರ್ಮಗಳೂ ಕ್ಷಾತ್ರಧರ್ಮದ ಆಶ್ರಯದಲ್ಲಿಯೇ ಇರುವಂಥವುಗಳಾಗಿವೆ. ಅಂಥ ಆಶ್ರಯಿತ ಧರ್ಮಗಳೆಲ್ಲವೂ ಅನೇಕ ಸಲ ನಷ್ಟ ಹೊಂದಿರುವುದಿದೆ. ಆಗೆಲ್ಲ ಕ್ಷಾತ್ರಶಕ್ತಿಯೇ ಅದರ ಪುನರುತ್ಥಾನಗೈದಿರುವ ಚರಿತ್ರೆ ಯುಗಯುಗಗಳಲ್ಲಿಯೂ ಘಟಿಸಲಿದೆ.

ಕ್ಷಾತ್ರಧರ್ಮಶೀಲನು ಯುದ್ಧರಂಗಕ್ಕೆ ಇಳಿದ ಸಂದರ್ಭದಲ್ಲಿ ತನ್ನ ದೇಹಧರ್ಮದ ಬಗ್ಗೆ ಮೋಹಿತನಾಗದೆ ಆಹುತಿ ಕೊಡುವನು. ಸಮಸ್ತ ಪ್ರಜೆಗಳ ಮೇಲೆಯೂ ಸಮಾನ ದಯಾಪರನಾಗಿರುವದು, ಲೋಕವ್ಯವಹಾರಗಳ ಬಗ್ಗೆ ಸುಜ್ಞಾತನಾಗಿರುವುದು, ಪ್ರಜೆಗಳ ಹಿತರಕ್ಷಣೆಯನ್ನು ನೋಡಿಕೊಳ್ಳುವುದು, ಪೀಡಿತರಾದವರನ್ನು ದುಃಖ ಕಷ್ಟಗಳಿಗೆ ಸಿಲುಕಿದವರನ್ನು ಅದರಿಂದ ಮುಕ್ತಗೊಳಿಸಿ ನೆಮ್ಮದಿ ನೀಡುವುದು ಇವೆಲ್ಲವೂ ಕ್ಷಾತ್ರಧರ್ಮದ ಸ್ಥಿರವಾದ ಲಕ್ಷಣಗಳಾಗಿವೆ.

ಯಾರಾದರೂ ಕಾಮ ಕ್ರೋಧಗಳಿಗೆ ಸಿಲುಕಿ ಅವಿಧೇಯರಾಗಿ ವರ್ತಿಸತೊಡಗಿದರೆ ಕ್ಷಾತ್ರತೇಜವುಳ್ಳ ರಾಜನು ತನ್ನಲ್ಲಿರುವ ದಂಡಶಕ್ತಿಯಿಂದಲೇ ಅವರಿಗೆ ಭಯವನ್ನು ಹುಟ್ಟಿಸಿ ಸರಿಯಾದ ದಾರಿಯಲ್ಲಿ ಪ್ರವರ್ತಿಸುವಂತೆ ಮಾಡಲು ಶಕ್ತನಾಗುತ್ತಾನೆ. ಸತ್ಯಶೀಲನೂ ಸದಾಚಾರಿಯೂ ಆದವನು ರಾಜನಿಂದಲೇ ಸುರಕ್ಷತೆಯನ್ನು ಪಡೆದು ತನ್ನ ಧರ್ಮಶೀಲತೆಯಲ್ಲಿ ಮುನ್ನಡೆಸುತ್ತಿರುತ್ತಾನೆ. ಹೀಗೆ ಕ್ಷಾತ್ರಧರ್ಮವು ಈ ಸಂಸಾರದಲ್ಲಿ ಸರ್ವತೋಮುಖವಾಗಿ ಸವೋನ್ನತ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಎಲ್ಲ ವರ್ಣಧರ್ವಿುಯರೂ ಕ್ಷಾತ್ರಧರ್ಮದ ಆಶ್ರಯದಲ್ಲಿಯೇ ಹಾಗೂ ಅದರ ಸಹಯೋಗದಿಂದಲೇ ತಮ್ಮ ತಮ್ಮ ಸ್ವಧರ್ಮದ ನಡೆಯನ್ನು ಪಾಲಿಸಿಕೊಂಡಿರುತ್ತಾರೆ. ಭಿನ್ನಭಿನ್ನ ಉಪಾಯ, ನೀತಿ-ನಿಯಮಗಳು, ಪುರುಷಾರ್ಥ ಹಾಗೂ ಸಂಪೂರ್ಣ ವೃತ್ತಿ-ಪ್ರವೃತ್ತಿ ಈ ಎಲ್ಲವುಗಳ ಮೂಲಕವೇ ನಾಲ್ಕು ವರ್ಣಗಳ ರಕ್ಷಣೆಯಾಗುತ್ತದೆ. ಈ ಕಾರಣದಿಂದಲೇ ವರ್ಣಗಳಲ್ಲಿ ಕ್ಷಾತ್ರವೂ, ಆಶ್ರಮಗಳಲ್ಲಿ ಗೃಹಸ್ಥಾಶ್ರಮವೂ ಶ್ರೇಷ್ಠ ಹಾಗೂ ಪರಿಪೂರ್ಣವಾದ ಧರ್ಮವೆಂದು ಪ್ರತಿಪಾದಿಸಲ್ಪಟ್ಟಿವೆ.

ಯಾರು ಧನಸಂಪಾದನೆಯಲ್ಲಿಯೇ ಆಸಕ್ತರಾಗಿ ನೀತಿ ಮರ್ಯಾದೆಯನ್ನು ಮೀರಿ ವರ್ತಿಸುತ್ತಾರೋ ಅವರು ಮನುಷ್ಯರೆಂದು ಕರೆಸಿಕೊಳ್ಳಲು ಅರ್ಹರಾಗುವುದಿಲ್ಲ. ಅಂಥವರು ಪಶುವರ್ಗಕ್ಕೆ ಸೇರಲ್ಪಡುತ್ತಾರೆ. ಅಂಥವರನ್ನು ಸರಿಯಾದ ದಾರಿಗೆ ಎಳೆತಂದು ಅರ್ಥಪ್ರಾಪ್ತಿಯ ಜತೆಗೆ ನೀತಿ-ಧರ್ಮಪಾಲನೆ ಗೈಯುವಂತೆ ಮಾಡುವ ಬಲವನ್ನು ಕ್ಷಾತ್ರಧರ್ಮ ಹೊಂದಿರುತ್ತದೆ. ಕ್ಷತ್ರಿಯನು ಇದನ್ನು ಉನ್ನತ ಶಿಖರಕ್ಕೆ ತಲುಪಿಸಬೇಕು. ನಿಷ್ಕಲ್ಮಶ ಹೃದಯದ ಯುಧಿಷ್ಠಿರ! ವಿಧಾತನೇ ನಿರ್ಧರಿಸಿರುವ ಆಜ್ಞೆಯ ಅನ್ವಯ ರಾಜಧರ್ಮವು ಪೂರ್ವಕಾಲದಿಂದಲೂ ಪ್ರಚಲಿತವಾಗಿದೆ. ಈ ರಾಜಧರ್ಮ ಪಾಲನೆಯು ಅತ್ಯಂತ ಶ್ರೇಷ್ಠವಾದುದಾಗಿದೆ.’

(ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ)

(ನಾಳೆ, ಯೋಗವಾಸಿಷ್ಠ ಗ್ರಂಥವನ್ನು ಕುರಿತಾದ ಸ್ವರ್ಣವಲ್ಲೀ ಸ್ವಾಮೀಜಿಯವರ ಅಂಕಣ ‘ಯೋಗವಾಸಿಷ್ಠ’)