ನ್ಯೂಸ್

ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ ‘ದೀಪಾಲಕ್ಷ್ಮಿಯ ಕೈಗಳು' | Story writing Competition

| ಚಂದ್ರಿಕಾ ಹೆಗಡೆ

ಅವಳ ಹೆಸರು ದೀಪಾಲಕ್ಷ್ಮಿ. ಮನೆಕೆಲಸದ ಹೆಂಗಸು. ಬೆಳಗ್ಗೆ ಆರುವರೆಗೆಲ್ಲಾ ಮನೆ ಬಿಟ್ಟರೆ ಏಳು ಗಂಟೆಗೆಲ್ಲಾ ಸಮೀಪದಲ್ಲಿರುವ ಅಪಾರ್ಟ್​ಮೆಂಟ್ ತಲುಪಿ ಮೂರನೇ ಅಂತಸ್ತಿನಲ್ಲಿರುವ ಮುನ್ನೂರಾ ಎಂಟನೇ ಮನೆಯ ಮುಂದೆ ನಿಂತು ಕರೆಕ್ಟ್ ಆಗಿ ಕಾಲಿಂಗ್ ಬೆಲ್ ಒತ್ತುತ್ತಾಳೆ. ಸರಸರನೆ ಅರ್ಧ ಗಂಟೆಯಲ್ಲೇ ಆ ಮನೆಯ ಕೆಲಸ ಮುಗಿಸಿ ಅದೇ ಅಪಾರ್ಟ್ ಮೆಂಟಿನ ಮತ್ತೆರಡು ಮನೆಯ ಕೆಲಸ ಮುಗಿಸುವಷ್ಟರಲ್ಲಿ ಗಂಟೆ ಹತ್ತೂವರೆಯಾಗಿರುತ್ತದೆ. ನಂತರ ಅದೇ ವೇಗದಲ್ಲಿ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಬಂಗಲೆಯಂತಾ ದೊಡ್ಡ ಮನೆಯೊಂದಕ್ಕೆ ಹೋದರೆ ಅಲ್ಲಿಯ ಕೆಲಸದ ಸಮಯಕ್ಕೆ ಲೆಕ್ಕವಿಲ್ಲ. ಅಂತೂ ಮಧ್ಯಾಹ್ನ ಒಂದಕ್ಕೆ ಮನೆ ತಲುಪಿ ಸ್ನಾನ ಊಟ ಮುಗಿಸಿ ಮತ್ತೆ ಮೂರರಿಂದ ಸಂಜೆ ಏಳರ ತನಕ ಮತ್ತೊಂದು ಮನೆಗೆ ಮಗುವನ್ನು ನೋಡಿಕೊಳ್ಳಲು ಹೋಗುತ್ತಾಳೆ.

ಅವಳ ಹೆಸರು ದೀಪಾಲಕ್ಷ್ಮಿ ಅಂದೆನಲ್ಲ, ಆದರೆ ಯಾರೂ ಅವಳನ್ನು ದೀಪಾ ಎಂದು ಮುದ್ದಾಗಿ ಕರೆಯುವುದಿಲ್ಲ. ಮನೆಕೆಲಸದವರ ಹೆಸರು ಸಾಮಾನ್ಯವಾಗಿ ಲಕ್ಷ್ಮಮ್ಮ, ರಂಗಮ್ಮ, ಗೌರಿ ಅಥವಾ ಸಿದ್ದವ್ವ …ಮಂಜಮ್ಮ… ಹೀಗೇ ಏನಾದರೂ ಇರಬೇಕೆಂದು ಎಲ್ಲರೂ ಅಂದುಕೊಂಡು ಬಿಟ್ಟಿದ್ದಾರೆ. ಹಾಗಾಗಿಯೇ ಸಾಮಾನ್ಯವಾಗಿ ಎಲ್ಲರೂ ಅವಳನ್ನು ಲಕ್ಷ್ಮಮ್ಮ ಅಥವಾ ಲಕ್ಷ್ಮೀ ಎಂದೇ ಕರೆಯುತ್ತಾರೆ. ಆದರೆ ಆ ಮುನ್ನೂರಾ ಎಂಟನೇ ಮನೆಯ ಹುಡುಗಿ ಮಾತ್ರ ಅವಳನ್ನು ದೀಪಾ ಎಂದು ಸ್ವೀಟಾಗಿ ಕರೆಯುತ್ತಾಳೆ. ಆ ಹುಡುಗಿ ಸರಿ ಸುಮಾರು ತನ್ನ ಮಗಳ ವಯಸಿನವಳೇ ಆದರೂ ದೀಪಾಲಕ್ಷ್ಮಿ ಅವಳನ್ನು ಮೇಡಮ್ ಎಂದೇ ಕರೆಯುತ್ತಾಳೆ. ಆ ಹುಡುಗಿ ಮತ್ತವಳ ಗಂಡ ಹೊಸದಾಗಿ ಮದುವೆಯಾದವರು.

ಗಂಡ ಹೆಂಡತಿ ಇಬ್ಬರೂ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಬೆಳಗಿಗೆಲ್ಲಾ ಮನೆ ಬಿಟ್ಟರೆ ಮತ್ತೆ ಮನೆ ಸೇರುವುದು ರಾತ್ರಿಯೇ. ಹಾಗಾಗಿ ಆ ಮನೆಯಲ್ಲಿ ದೀಪಾಲಕ್ಷ್ಮಿಗೆ ಹೆಚ್ಚು ಕೆಲಸವಿಲ್ಲ. ಆ ಹುಡುಗಿಗಿನ್ನೂ ಸರಿಯಾಗಿ ಅಡಿಗೆ ಮಾಡಲು ಬಾರದು. ಹಾಗಾಗಿ ಹೆಚ್ಚಿಗೆ ದಿನ ಹೊರಗೇ ತಿನ್ನುತ್ತಾರೆ ಅಥವಾ ಏನಾದರೂ ಮನೆಗೇ ಆರ್ಡರ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಸಿಂಕಿನಲ್ಲಿ ಹೆಚ್ಚಿಗೆ ಪಾತ್ರೆಗಳಿರುವುದಿಲ್ಲ. ಇದ್ದ ನಾಲ್ಕು ಪಾತ್ರೆ ಬೇಗ ಬೇಗ ತೊಳೆದು, ಅಷ್ಟೇನೂ ಕೊಳೆಯಾಗಿರದ ನೆಲ ಗುಡಿಸಿ ಒರೆಸಿ, ಮೆಲು ದನಿಯಲ್ಲಿ ಬೇಕಾದಷ್ಟೇ ಮಾತಾಡುವ ಆ ಚಿಕ್ಕ ಮೇಡಮ್ ಕೊಡುವ, ಸಕ್ಕರೆ ಸ್ವಲ್ಪ ಹೆಚ್ಚಾಗಿಯೇ ಹಾಕಿದ ಸಿಹಿ ಚಹಾ ಕುಡಿದು ಹೊರಟು ಬಿಟ್ಟರೆ ಆಯಿತು. ಇಲ್ಲಿ ಬಟ್ಟೆ ತೊಳೆಯುವ, ಒಣಗಿಸುವ ಕೆಲಸವಿಲ್ಲ. ಅವರೇ ವಾಶಿಂಗ್ ಮಶೀನ್ ಹಾಕಿಕೊಳ್ಳುತ್ತಾರೆ. ವಾರಕ್ಕೊಂದು ದಿನ ಬಾತ್ ರೂಮ್ ಟಾಯಲೆಟ್ ಕ್ಲೀನ್ ಮಾಡಿ, ಬಾಲ್ಕನಿಗಳನ್ನು ತೊಳೆದರಾಯಿತು.

ಸಾಧಾರಣವಾಗಿ ಈಗ ಸಿಟಿಗಳಲ್ಲಿ ಮನೆಗೆಲಸದವರು ಟಾಯ್ಲೆಟ್ಟಿನ ಕಮೋಡ್ ಮತ್ತು ಉಂಡು ಕೈ ತೊಳೆಯುವ ವಾಶ್ ಬೇಸಿನ್ ತೊಳೆಯುವುದಿಲ್ಲ ಎಂದು ಮೊದಲೇ ಕಟ್ಟುನಿಟ್ಟಾಗಿ ಹೇಳಿಬಿಟ್ಟಿರುತ್ತಾರೆ. ಮನೆಗೆ ನೆಂಟರು ಬಂದರೆ ಆ ತಿಂಗಳು ಇಂತಿಷ್ಟು ದುಡ್ಡು ಜಾಸ್ತಿ ಕೊಡಬೇಕು ಎಂದು ಕರಾರು ಮಾಡಿಕೊಂಡಿರುತ್ತಾರೆ. ಜಾಸ್ತಿ ಜನ ಮನೆಗೆ ಬಂದಷ್ಟೂ ಸಿಂಕ್​ನಲ್ಲಿ ಬೀಳುವ ಪಾತ್ರೆಗಳ ರಾಶಿ ದೊಡ್ಡದಾಗುತ್ತದೆ, ನೆಲ, ಬಾತ್ ರೂಮ್ ಹೆಚ್ಚು ಕೊಳೆಯಾಗುತ್ತದೆ ಎನ್ನುವ ಮುನ್ನೆಚ್ಚರಿಕೆ ಇದು. ಈ ಕರಾರನ್ನು ದೀಪಾಲಕ್ಷ್ಮಿಯೂ ತಾನು ಕೆಲಸಕ್ಕೆ ಸೇರುವ ಎಲ್ಲಾ ಮನೆಗಳಲ್ಲೂ ಹೇಳುತ್ತಿದ್ದರೂ, ಟಾಯ್ಲೆಟ್ ಕಮೋಡ್ ಮತ್ತು ವಾಶ್ ಬೇಸಿನ್ ತೊಳೆಯಲು ಒಪ್ಪಿಕೊಳ್ಳುತ್ತಿದ್ದಳು.

ಈ ಕೆಲಸಕ್ಕೆ ಜನ ಸಿಗುವುದೇ ಕಷ್ಟವಾದ್ದರಿಂದ ಮನೆಯವರು ಅದಕ್ಕಾಗಿ ತಿಂಗಳಿಗೆ ಸಾವಿರ ರೂಪಾಯಿ ಆದರೂ ಹೆಚ್ಚಿಗೆ ಕೊಡಲು ಒಪ್ಪಿಕೊಳ್ಳುತ್ತಿದ್ದರು. ಈ ಹೆಚ್ಚುವರಿ ದುಡ್ಡಿನಾಸೆಗಾಗಿಯೇ ದೀಪಾಲಕ್ಷ್ಮಿ ಈ ಕೆಲಸವನ್ನು ಒಪ್ಪಿಕೊಳ್ಳುತ್ತಿದ್ದುದು. ಅವಳಿಗೂ ದುಡ್ಡಿನ ಅವಶ್ಯಕತೆ ಅಷ್ಟೇ ಇತ್ತಲ್ಲ. ಈ ಚಿಕ್ಕ ಮೇಡಮ್ ಮನೆಯಂತಿದ್ದರೆ ಪರವಾಗಿರಲಿಲ್ಲ. ಗಂಡ ಹೆಂಡತಿ ಇಬ್ಬರೇ ಇರುವುದು, ಇಬ್ಬರೂ ತುಂಬಾ ಕ್ಲೀನು. ವಾರವಾದರೂ ಟಾಯ್ಲೆಟ್ಟು ಈಗ ತೊಳೆದಂತೇ ಇರುತ್ತದೆ. ಆದರೆ ಎಲ್ಲಾ ಕಡೆಯೂ ಹಾಗಿರುವುದಿಲ್ಲ. ಮಕ್ಕಳು ಮರಿ, ವಯಸ್ಸಾದವರು ಇರುವ ಮನೆಗಳಲ್ಲಿ ಇಷ್ಟು ಕ್ಲೀನು ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲವರಂತೂ ತುಂಬಾ ಗಲೀಜು. ಹೇಗೂ ಕೆಲಸದವಳು ಬರುತ್ತಾಳಲ್ಲ ಎಂದು ಮನೆಯವರು ಸರಿಯಾಗಿ ನೀರು ಹಾಕುವ ಗೋಜಿಗೂ ಹೋಗಿರುವುದಿಲ್ಲ.

ಇಂತಾ ಮನೆಗಳಲ್ಲಿ ಟಾಯ್ಲೆಟ್ ತೊಳೆಯುವ ಕೆಲಸ ಎಂದರೆ ದೀಪಾಲಕ್ಷ್ಮಿಗೆ ಕುತ್ತಿಗೆಗೇ ಬರುತ್ತದೆ. ಆದರೆ ವಿಧಿಯಿಲ್ಲ. ದುಡ್ಡು ಅವಳನ್ನು ಕಟ್ಟಿ ಹಾಕುತ್ತದೆ. ಅದರಲ್ಲೂ ಆ ಬಂಗಲೆಯ ಮನೆಗೆ ಹೋಗುವುದೆಂದರೆ …..ಅಬ್ಬಾ! ಅಪಾರ್ಟ್ ಮೆಂಟಿನ ಡಾಕ್ಟರಮ್ಮನ ಮನೆಯಲ್ಲಿ ತಿಂದ ತಿಂಡಿ ಅಲ್ಲಿ ಗಂಟಲಿಗೆ ಬಂದು ಒತ್ತುತ್ತದೆ. ಅದರ ನೆನಪಿನಿಂದಲೇ ದೀಪಾಲಕ್ಷ್ಮಿಗೆ ಹೊಟ್ಟೆ ತೊಳೆಸುತ್ತದೆ. ಅಪಾರ್ಟ್ ಮೆಂಟಿನ ಮೂರನೇ ಮನೆಯ ಕೆಲಸ ಮುಗಿಸಿ ಹೊರಬಿದ್ದ ದೀಪಾಲಕ್ಷ್ಮಿ ಉರಿಯುತ್ತಿದ್ದ ಅಂಗೈಯನ್ನು ಚೂಡೀದಾರ್ ವೇಲಿನಿಂದ ತಿಕ್ಕಿಕೊಳ್ಳುತ್ತಾ ಬೇಗ ಬೇಗ ಬಂಗಲೆಯ ಮನೆಯತ್ತ ನಡೆಯುತ್ತಿದ್ದಳು.

ಎಷ್ಟೋ ವರುಷಗಳಿಂದ ಪಾತ್ರೆ ತಿಕ್ಕೀ ತಿಕ್ಕೀ, ಬಟ್ಟೆ ತೊಳೆದು ಬಚ್ಚಲು ಉಜ್ಜಿ ಅವಳ ಅಂಗೈಗಳು ಸವೆದು ಗೆರೆಗಳೆಲ್ಲಾ ಅಳಿಸಿಹೋಗಿದ್ದವು. ಉರಿ ತುರಿಕೆ ತಾಳಲಾರದೆ ಅವಳು ತನ್ನ ಕೈಗಳನ್ನೊಮ್ಮೆ ಕಣ್ಣೆದುರಿಗೆ ಎತ್ತಿ ಹಿಡಿದು ನೋಡಿಕೊಂಡಳು. ಅಂಗೈ, ಬೆರಳುಗಳು, ಬೆರಳ ಸಂದಿಯೆಲ್ಲಾ ಕೆಂಪಾಗಿ ಸಣ್ಣ ಸಣ್ಣ ಗುಳ್ಳೆಗಳೆದ್ದು ಒಡೆದು, ಅಲ್ಲಲ್ಲಿ ಚರ್ಮ ಸುಲಿದಿದ್ದು ಉಗುರುಗಳು ಕಪ್ಪಗಾಗಿ ಸವೆದು ವಿಕಾರವಾಗಿ ಕಾಣುತ್ತಿತ್ತು. ಯಾವುದೋ ಮನೆಯ ವಿಮ್ಮು, ಸರ್ಫು…, ರಿನ್ನು…, ಮತ್ತೊಂದು ಮನೆಯ ಹಾರ್ಪಿಕ್ಕು ಡೊಮೆಕ್ಸು, ಇನ್ನೊಂದು ಮನೆಯ ಮತ್ಯಾವುದೋ ಬ್ರಾಂಡಿನ ಪಾತ್ರೆ ತೊಳೆಯುವ ಸೋಪು, ರಿನ್ನು, ಏರಿಯಲ್​ಗಳು, ನೆಲ ಒರೆಸುವ ಫಿನಾಯಿಲ್ಲುಗಳು ನಿರಂತರವಾಗಿ ಅವಳ ಕೈಗಳನ್ನು ತಾಕಿ ತಾಕಿ ಇತ್ತೀಚೆಗೆ ಅವಳ ಕೈಗಳಲ್ಲಿ ಅಲರ್ಜಿ ಶುರುವಾಗಿತ್ತು.

ಸೋಪು ಮುಟ್ಟಿದರೆ ಸಾಕು ಕೈಗಳು ಭಗಭಗನೆ ಉರಿಯುತ್ತಾ ಅಸಹನೀಯ ತುರಿಕೆ ಶುರುವಾಗುತ್ತಿತ್ತು. ಮೊನ್ನೆ ಅವಳ ಕೈಗಳನ್ನು ಅಚಾನಕ್ ಆಗಿ ನೋಡಿದ ಆ ಡಾಕ್ಟರಮ್ಮ ಏನಾಗಿದೆಯೆಂದು ವಿಚಾರಿಸಿ, ಆಯಿಂಟ್​ಮೆಂಟೊಂದನ್ನು ಹಚ್ಚಿಕೊಳ್ಳಲು ಕೊಟ್ಟಿದ್ದರು. ಮತ್ತು ಕೆಲಸ ಮಾಡುವಾಗ ಕೈಗಳಿಗೆ ಗ್ಲೋವ್ಸ್ ಹಾಕಿಕೊಳ್ಳಲು ಸೂಚಿಸಿದ್ದಳು. "ಅಯ್ಯೋ ಮೇಡಮ್ ಅದೆಲ್ಲಾ ನನ್ನಿಂದ ಎಲ್ಲಿ ಸಾಧ್ಯ" ಎಂದು ದೀಪಾಲಕ್ಷ್ಮಿ ಅಲವತ್ತುಕೊಂಡಾಗ "ಇರು, ನಾನೇ ಆಸ್ಪತ್ರೆಯಿಂದ ತಂದುಕೊಡುತ್ತೇನೆ" ಎಂದು ತಾವೇ ಒಂದಷ್ಟು ಗ್ಲೋವ್ಸ್​ಗಳನ್ನು ತಂದುಕೊಟ್ಟು ಒತ್ತಾಯ ಮಾಡಿ ಹಾಕಿಸಿದ್ದಳು. ಅದನ್ನು ಹಾಕಿಕೊಂಡು ಪಾತ್ರೆ ತೊಳೆಯುವ ಕೆಲಸ ನಿಧಾನವಾಗಿ ದೀಪಾಲಕ್ಷ್ಮಿಗೆ ಇರುಸುಮರುಸಾದರೂ ಡಾಕ್ಟರ್ ಅಮ್ಮನ ಒತ್ತಾಯಕ್ಕೆ ಅವನ್ನು ಧರಿಸಿಯೇ ಕೆಲಸ ಮಾಡಬೇಕಾಯ್ತು.

ಡಾಕ್ಟರಮ್ಮನಿಗೆ ದೀಪಾಲಕ್ಷ್ಮಿಯ ಕೈಗಳ ಬಗ್ಗೆ ಇಷ್ಟು ಕಾಳಜಿಯೋ ಅಥವಾ ಅವಳು ತನ್ನ ಸೋಂಕಿನ ಕೈಗಳಿಂದ ತನ್ನ ಪಾತ್ರೆಗಳನ್ನು ತೊಳೆಯಬಾರದೆಂಬ ಎಚ್ಚರಿಕೆಯೋ….. ಎನ್ನುವುದು ಈ ದೀಪಾಲಕ್ಷ್ಮಿಯ ತಲೆಗೆ ಹೊಳೆಯಲೇ ಇಲ್ಲ. ದೀಪಾಲಕ್ಷ್ಮಿ ಬಂಗಲೆಯ ಮನೆ ತಲುಪಿ ಸಿಂಕಿನಲ್ಲಿ ರಾಶಿ ಬಿದ್ದಿದ್ದ ಪಾತ್ರೆಗಳನ್ನು ಕೈಗೆ ಗ್ಲೋವ್ಸ್ ಧರಿಸಿ ತೊಳೆಯಲು ಶುರು ಮಾಡಿದಾಗ ಮನೆಯ ಯಜಮಾನಿ ಮತ್ತು ಮಗಳ ಮನೆಗೆ ವಿಶ್ರಾಂತಿಗಾಗಿ ಬಂದಿದ್ದ ಅವಳ ವಯಸ್ಸಾದ ಅಮ್ಮ ಮುಸಿ ಮುಸಿ ನಗುತ್ತಾ, ಪಿಸಪಿಸನೆ ಮಾತಾಡಿಕೊಂಡಿದ್ದನ್ನು ನೋಡಿಯೂ ನೋಡದಂತೆ ದೀಪಾಲಕ್ಷ್ಮಿ ತನ್ನ ಕೆಲಸ ಮಾಡತೊಡಗಿದಳು. ಈ ಮನೆಯೂ ದೊಡ್ಡದು, ಮನೆಯಲ್ಲಿ ಜನವೂ ಜಾಸ್ತಿ. ಈ ಯಜಮಾನಿಯ ಗಂಡ, ಮಗ ಸೊಸೆ, ಮಗಳು ಎಲ್ಲರೂ ಹೊರಗೆ ಕೆಲಸಕ್ಕೆ ಹೋಗುತ್ತಾರೆ.

ಎರಡು ಮೊಮ್ಮಕ್ಕಳು ಸ್ಕೂಲಿಗೆ ಹೋಗುತ್ತಾರೆ. ಅವರೆಲ್ಲಾ ಹೋದ ನಂತರ ಈ ಅಮ್ಮ ಮಗಳು ಇಬ್ಬರೇ ಮನೆಯಲ್ಲಿರುವುದು. ಇಬ್ಬರೂ ಮಹಾ ಕಿರಿ…ಕಿರಿ. ಜನ ಜಾಸ್ತಿ ಇರುವುದರಿಂದ ಪಾತ್ರೆ ಬಟ್ಟೆಗಳು ಯಥೇಚ್ಛವಾಗಿಯೇ ಇರುತ್ತವೆ. ವಾಶಿಂಗ್ ಮಶೀನಿನಲ್ಲಿ ಬಟ್ಟೆಗಳು ಸರಿಯಾಗಿ ಚೊಕ್ಕವಾಗುವುದಿಲ್ಲ, ಬೇಗ ಹಾಳಾಗುತ್ತವೆ ಎಂದು ಮಶೀನಿಗೆ ಹಾಕದೆ ಕೈಯಲ್ಲೇ ತೊಳೆಸುತ್ತಾರೆ. ಪಾತ್ರೆಗಳಂತೂ ಸರಿಯಾಗಿ ನೀರೂ ಹಾಕದೆ ಸಿಂಕಿನಲ್ಲಿ ಬಡಿದಿರುವುದರಿಂದ ಅವುಗಳೆಲ್ಲಾ ಒಣಗಿ ಹಿಡಿದು, ಅವನ್ನು ಚೊಕ್ಕಮಾಡಲು ದೀಪಾಲಕ್ಷ್ಮಿ ಹರಸಾಹಸ ಮಾಡಬೇಕಾಗುತ್ತದೆ. ಇಷ್ಟಾದರೂ ಅವಳ ಕೆಲಸ ಅವರಿಗೆ ಸರಿಹೋಗುವುದಿಲ್ಲ. ನಿತ್ಯ ಏನಾದರೊಂದು ಕಿರಿ ಕಿರಿ…., ಹಾಗೆ ಮಾಡು ಹೀಗೆ ಮಾಡು ಎನ್ನುವ ಸಲಹೆ, ಮಾಡಿದ್ದು ಸರಿಯಾಗಿಲ್ಲ ಎಂದು ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಿಸುವುದು…….

'ಅಯ್ಯಪ್ಪಾ! ಯಾಕಾದರೂ ಈ ಮನೆ ಒಪ್ಪಿಕೊಂಡೆನೋ ' ಎಂದು ಅವಳಿಗೆ ಸಾಕು ಸಾಕಾಗುತ್ತದೆ. ಆದರೆ ಅವರ ಮನೆಯಲ್ಲಿ ಸಿಕ್ಕುವ ಜಾಸ್ತಿ ದುಡ್ಡಿನಾಸೆ ಅವಳನ್ನು ಈ ಕೆಲಸ ಬಿಡದಂತೆ ತಡೆಯುತ್ತದೆ. ಇವರ ಮನೆಯ ಬಾತ್ ರೂಮ್ ಮತ್ತು ಟಾಯ್ಲೆಟ್ ತೊಳೆಯಲು ಒಪ್ಪಿಕೊಂಡಿದ್ದು ದೊಡ್ಡ ತಪ್ಪು ಎಂದು ಅವಳಿಗೆ ಈಗೀಗ ಅನಿಸತೊಡಗಿದೆ. ಮಕ್ಕಳು ಮರಿ ಇರುವ ಮನೆ, ಗಲೀಜು ಮಾಡಿರುತ್ತಾರೆ. ಅದರಲ್ಲೂ ಆ ದೊಡ್ಡಮ್ಮನಂತೂ… ಛೇ! ಈ ಜನ ಸರಿ ಇಲ್ಲ ಎಂದು ಅವಳಿಗನ್ನಿಸುತ್ತದೆ. ಆದರೂ ಮಗಳ ಓದು ಮುಗಿಯುವವರೆಗೂ ಈ ಮನೆ ಕೆಲಸ ಬಿಡುವ ಹಾಗಿಲ್ಲ. ಅಡ್ವಾನ್ಸ್ ಬೇರೆ ತೆಗೆದುಕೊಂಡುಬಿಟ್ಟಿದ್ದಾಳೆ.

ಈ ಮನೆಯ ಕೆಲಸ ಮುಗಿಸಿ ಹೊರಟ ದೀಪಾಲಕ್ಷ್ಮಿಯ ಕೈಗಳು ಕೈಗಳು ಮತ್ತಷ್ಟು ಭಗಭಗನೆ ಉರಿಯಲಾರಂಭಿಸಿದವು. ಮತ್ತೊಮ್ಮೆ ತನ್ನ ಒರಟಾದ ಅಂದಗೆಟ್ಟ ಕೈಗಳನ್ನು ನೋಡಿಕೊಂಡಳು. ಆ ದಿನ ಮಗಳು ರಶ್ಮಿ ಕಾಲೇಜಿಗೆ ಹೊರಟವಳು ಉಗುರಿಗೆ ನೇಲ್ ಪಾಲಿಶ್ ಹಚ್ಚಿಕೊಳ್ತಾ ಇದ್ದವಳು" ಅಮ್ಮಾ ನಿಂಗೂ ಹಚ್ತೀನಿ ಬಾಮ್ಮಾ" ಎಂದಿದ್ದಳು. "ಅಯ್ಯೋ ನಂಗ್ಯಾಕಮ್ಮಾ, ಈ ಕೊಳಕು ಕೈಗಳಿಗೆ ಬಣ್ಣ, ನೀನೇ ಹಚ್ಚಿಕೊಳ್ಳಮ್ಮಾ ಕಂದಾ" ಎಂದು ಇವಳು ಹೇಳಿದಾಗ ಅಮ್ಮನ ಕೈಗಳನ್ನು ನೋಡಿ ರಶ್ಮಿ ಬೇಜಾರಾಗಿದ್ದಳು. "ಇನ್ನು ಒಂದೇ ವರ್ಷ ಅಮ್ಮಾ…., ನನ್ನ ಓದು ಮುಗಿದು ಒಂದು ಒಳ್ಳೇ ಕೆಲಸ ಸಿಕ್ಕಿದ ಮೇಲೆ ನೀನು ಈ ಕೆಲಸ ಮಾಡೋದು ಬೇಡ. ಅರಾಮಾಗಿ ಮನೆಯಲ್ಲೇ ಇರು. ಆಗ ನಿನ್ನ ಕೈಗಳೂ ನನ್ನ ಕೈಗಳ ಹಾಗೇ ಆಗುತ್ತವೆ , ನೋಡು" ಎನ್ನುತ್ತಾ ಹೂವಿನಂತೆ ಮೃದುವಾದ ತನ್ನ ಕೈಗಳಿಂದ ಅಮ್ಮನ ಒರಟು ಕೈಗಳನ್ನು ಹಿಡಿದು ಹೇಳಿದ್ದಳು.

ದೀಪಾಲಕ್ಷ್ಮಿಯ ಆಸೆಯೂ ಅದೇ ಆಗಿತ್ತು. ಏನಾದರೂ ಆಗಲಿ, ತನ್ನ ಮಗಳು ತನ್ನಂತೆ ಕಷ್ಟ ಪಡಬಾರದು. ಅವಳು ಚನ್ನಾಗಿ ಓದಿ, ಒಳ್ಳೆಯ ಕೆಲಸ ಹಿಡಿದು ಸುಖವಾಗಿ ಬಾಳಬೇಕು. ಅವಳ ಕೈಗಳು ಎಂದಿಗೂ ತನ್ನ ಕೈಗಳಂತೆ ಕೊಳಕು ಕೆಲಸ ಮಾಡಬಾರದು. ತನಗೆ ಎಷ್ಟೇ ಕಷ್ಟವಾದರೂ ಸರಿ. ಅದಕ್ಕಾಗಿ ಅವಳು ಮಗಳ ಬಳಿ ಮನೆಯಲ್ಲೂ ಒಂದು ಪಾತ್ರೆಯನ್ನೂ ತೊಳೆಸುವುದಿಲ್ಲ. ಆ ಚಿಕ್ಕ ಮೇಡಮ್​ನಂತೆ ರಶ್ಮಿಯೂ ದೊಡ್ಡ ಕಂಪನಿಯಲ್ಲಿ ಕೆಲಸ ಹಿಡಿದು ಶಿಸ್ತಾಗಿ ಆಫೀಸಿಗೆ ಹೋಗಿ ಬರಬೇಕು. ಈ ಕೊಳಕು ಶೆಡ್ಡಿನ ಮನೆ ಬಿಟ್ಟು ಸುಂದರವಾದ ಸ್ವಚ್ಛ ಮನೆಯಲ್ಲಿ ವಾಸಿಸಬೇಕು.

ಚಿಕ್ಕ ಮೇಡಮ್​ನಂತೆ ಒಳ್ಳೆಯವನಾದ, ವಿದ್ಯಾವಂತನಾದ ಹುಡುಗನನ್ನು ಮದುವೆಯಾಗಿ ಆರಾಮಾಗಿ ಇರಬೇಕು…..ಇದು ಅವಳ ಕನಸು. ಈ ಕನಸನ್ನು ನನಸು ಮಾಡಿಕೊಳ್ಳಲು ದೀಪಾಲಕ್ಷ್ಮಿ ಉರಿಯುವ ಕೈಗಳನ್ನೂ ಲೆಕ್ಕಿಸದೆ ಇನ್ನೂ ನಾಲ್ಕು ಮನೆಗಳ ಟಾಯ್ಲೆಟ್​ಗಳನ್ನಾದರೂ ತೊಳೆಯುತ್ತಾಳೆ. ಮಗಳು ಹೇಳಿದಂತೆ ಇನ್ನು ಒಂದೇ ವರ್ಷ.. ನಂತರ ಅವಳು ಚಿಕ್ಕ ಮೇಡಮ್ ನಂತೇ…., ದೀಪಾಲಕ್ಷ್ಮಿ ಆ ಚಿಕ್ಕ ಮೇಡಮ್​ನಲ್ಲಿ ತನ್ನ ಮಗಳನ್ನೇ ಕಾಣುತ್ತಾಳೆ. ತನ್ನ ನನಸಾಗುವ ಕನಸು ಹೇಗಿರಬಹುದೆನ್ನುವುದನ್ನು ಅವಳು ಆ ಮನೆಯಲ್ಲಿ ಊಹಿಸಿಕೊಳ್ಳುತ್ತಾಳೆ. ಅದಕ್ಕಾಗಿಯೇ ಅವಳಿಗೆ ಆ ಮನೆಗೆ ಹೋಗುವುದೆಂದರೆ ಏನೋ ಖುಷಿ.

ಆದರೂ ಇತ್ತೀಚೆಗೆ ದೀಪಾಲಕ್ಷ್ಮಿಗೆ ಈ ಕೆಲಸ ಅಸಹನೀಯವಾಗುತ್ತಿದೆ. ಅವಳ ಈ ಬದುಕು ಇಂದು ನಿನ್ನೆಯದಲ್ಲ. ಅವಳು ಚಿಕ್ಕವಳಿರುವಾಗಲೇ ಅವಳ ಅಪ್ಪ-ಅಮ್ಮ ಅವಳನ್ನು ಸ್ಕೂಲು ಬಿಡಿಸಿ, ನಗರದಲ್ಲಿ ಯಾರದೋ ಮನೆಯ ಮನೆಗೆಲಸಕ್ಕೆ ಕಳಿಸಿ ಬಿಟ್ಟಿದ್ದರು. ಕೊನೇ ಪಕ್ಷ ತಾನು ಹತ್ತನೇ ತರಗತಿಯವರೆಗಾದರೂ ಓದಬೇಕಿತ್ತು ಎಂದು ಅವಳಿಗೆ ಅನಿಸುತ್ತದೆ. ಒಂದು ಪ್ರಾಥಮಿಕ ಶಾಲೆಯ ಟೀಚರ್ ಆದರೂ ಸಾಕಾಗಿತ್ತು, ತನ್ನ ಮನೆಯ ಹತ್ತಿರ ಇರುವ ಸ್ಕೂಲಿಗೆ ನೀಟಾಗಿ ಬರುವ ಟೀಚರಮ್ಮನ ಹಾಗಾದರೂ ಇರಬಹುದಿತ್ತು ಎಂದು ಎಷ್ಟೋ ಸಲ ಅಂದುಕೊಳ್ಳುತ್ತಾಳೆ. ತನ್ನ ಅಪ್ಪ ತನ್ನನ್ನು ಸ್ಕೂಲಿಗೆ ಕಳಿಸದೆ ಅನ್ಯಾಯ ಮಾಡಿಬಿಟ್ಟ ಎಂದು ಅವಳಿಗೆ ಯಾವಾಗಲೂ ಅನ್ನಿಸುತ್ತಿರುತ್ತದೆ.

ಈಗೀಗ ಊರಿಗೆ ಹೋದಾಗ ನೋಡುತ್ತಾಳೆ, ಹಳ್ಳಿಯ ಎಲ್ಲಾ ಮಕ್ಕಳೂ ಎಷ್ಟು ಶಿಸ್ತಿನಿಂದ ಶಾಲೆಗೆ ಹೋಗುತ್ತಾರೆ. ಈಗಿನ ಮಕ್ಕಳೇ ಪುಣ್ಯವಂತರು, ಅವರಿಗೆ ಎಲ್ಲಾ ಸೌಲಭ್ಯಗಳೂ ಸಿಕ್ಕುತ್ತವೆ, ನಾನೂ ಈ ಕಾಲದಲ್ಲೇ ಹುಟ್ಟಬೇಕಾಗಿತ್ತು ಎಂದು ಸಾವಿರ ಸಲ ಅಂದುಕೊಳ್ಳುತ್ತಾಳೆ. ನಂತರ ಅವಳ ಮದುವೆಯಾಯಿತು. ಅವಳ ಗಂಡ ನಗರದಲ್ಲಿ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಒಬ್ಬ ಮಗ ಹುಟ್ಟಿದ. ನಂತರ ಗಂಡನ ಕುಡಿತದ ಚಟ ಜಾಸ್ತಿಯಾಗಿ ಅವನ ದುಡಿತವೆಲ್ಲಾ ಅದಕ್ಕೇ ಸರಿಯಾದಾಗ ದೀಪಾಲಕ್ಷ್ಮಿಗೆ ಮತ್ತೆ ಮನೆಗೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ಮಗಳು ಹುಟ್ಟಿದ ಮೇಲೆ ಗಂಡನ ಕುಡಿತ ತಾಳಲಾರದಷ್ಟು ಹೆಚ್ಚಾದಾಗ ಒಂದು ದಿನ ದೀಪಾಲಕ್ಷ್ಮಿ ಸಿಡಿದು ಬಿದ್ದಳು.

ಗಂಡ ಮನೆ ಬಿಟ್ಟು ಮತ್ತೆ ಯಾವಳ ಮನೆಗೋ ಹೋಗಿ ಸೇರಿಕೊಂಡಿದ್ದ. ಪೀಡೆ ತಪ್ಪಿತೆಂದು ತನ್ನ ಪಾಡಿಗೆ ತಾನು ಕೆಲಸ ಮಾಡಿ ಬದುಕು ನೋಡಿಕೊಂಡಳು ಇವಳು. ಮಗ ಚನ್ನಾಗಿ ಓದಲೆಂದು ಆಸೆಪಟ್ಟು ಓದಿಸಿದಳು. ಪಿಯುಸಿ ಮುಗಿಸುವಷ್ಟರಲ್ಲಿ, ದುಡಿಮೆಯ ರುಚಿ ಕಂಡ ಅವನು ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಅವನ ಸಂಬಳ ಅವನ ಖರ್ಚಿಗೆ ಸರಿಯಾಗುತ್ತದೆ. ಅವನೀಗ ಮನೆ ಬಿಟ್ಟು ಫ್ಯಾಕ್ಟರಿಯ ಹತ್ತಿರವೇ ಸ್ನೇಹಿತರ ಜೊತೆ ರೂಮು ಮಾಡಿಕೊಂಡು ಇದ್ದಾನೆ. ಯಾವಾಗಾದರೂ ಮನೆಗೆ ಬಂದಾಗ ಸಾವಿರ, ಎರಡು ಸಾವಿರ ಅಮ್ಮನ ಕೈಗೆ ಇಟ್ಟು ಹೋಗುತ್ತಾನೆ.

ಮಗಳು ತುಂಬಾ ಬುದ್ದಿವಂತೆ. ಮೊದಲಿನಿಂದಲೂ ಚನ್ನಾಗಿ ಓದುತ್ತಿದ್ದಾಳೆ. ಈಗ ಇಂಜನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದಾಳೆ. ಪಾತ್ರೆ ತಿಕ್ಕಿ… ತಿಕ್ಕೀ… ತನ್ನ ಕೈಗಳು ಬಿದ್ದು ಹೋದರೂ ಸರಿ, ರಶ್ಮಿ ಯಾವುದೇ ತೊಂದರೆ ಇಲ್ಲದೆ ಓದು ಮುಗಿಸಬೇಕು. ಅವಳ ಕೈಗಳು ಯಾವತ್ತೂ ತನ್ನ ಹಾಗೆ ಕೊಳೆಯಾಗಬಾರದು ಇದು ದೀಪಾಲಕ್ಷ್ಮಿಯ ಗುರಿ ಮತ್ತು ಕನಸು. ರಶ್ಮಿ ಕೂಡಾ ಅಮ್ಮನ ಕಷ್ಟ ಅರ್ಥ ಮಾಡಿಕೊಂಡಿದ್ದಾಳೆ. ತಾನು ಕೆಲಸಕ್ಕೆ ಸೇರಿದ ಮೇಲೆ ಅಮ್ಮನನ್ನು ತುಂಬಾ ಚನ್ನಾಗಿ ನೋಡಿಕೊಳ್ಳಬೇಕೆಂದು ಅಂದುಕೊಂಡಿದ್ದಾಳೆ. ದೀಪಾಲಕ್ಷ್ಮಿ ಮನೆಗೆ ಬಂದಾಗ ರಶ್ಮಿ ಇನ್ನೂ ಕಾಲೇಜಿನಿಂದ ಬಂದಿರಲಿಲ್ಲ. ಬೆಳಗ್ಗೆ ಎದ್ದು ಗಡಿಬಿಡಿಯಲ್ಲಿ ಒಂದು ಚಿತ್ರಾನ್ನ ಮಾಡಿಟ್ಟು ಬಂದಿದ್ದಳು. ಮನೆ ತುಂಬಾ ಗಲೀಜಾಗಿತ್ತು.

ಇಕ್ಕಟ್ಟಾದ ಅಡಿಗೆ ಮನೆಯಲ್ಲಿ ತೊಳೆಯುವ ಪಾತ್ರೆಗಳು ಹಾಗೇ ಇದ್ದವು. ಗೂಡಿನಂತ ಬಾತ್ರೂಮ್ ಹಾಗೂ ಟಾಯ್ಲೆಟ್ಗಳು ಕ್ಲೀನ್ ಮಾಡಲಾಗದೆ ವಾಸನೆ ಬರುತ್ತಾ ಇತ್ತು. ಎಲ್ಲರ ಮನೆ ಕೆಲಸ ಮುಗಿಸಿ ಸುಸ್ತಾಗಿ ಬರುವ ದೀಪಾಲಕ್ಷ್ಮಿಗೆ ತನ್ನ ಮನೆಕೆಲಸ ಮಾಡಿಕೊಳ್ಳುವಷ್ಟು ತ್ರಾಣ ಉಳಿದಿರುವುದಿಲ್ಲ. ಊಟ ಮಾಡಿ ಸುಮ್ಮನೆ ಬಿದ್ದುಕೊಳ್ಳುವಾ ಅನಿಸುತ್ತದೆ. ಆದರೆ ಮನೆಯ ಗಲೀಜು ನೋಡಲಾಗುವುದಿಲ್ಲ. ತಾನು ಕೆಲಸ ಮಾಡುವ ಮನೆಗಳ ಹಾಗೆ ತನ್ನ ಮನೆಯೂ ಸ್ವಚ್ಛವಾಗಿ ಫಳಫಳ ಹೊಳೆಯುವ ಹಾಗಿರಬೇಕು ಎಂದು ಅವಳಿಗನ್ನಿಸುತ್ತದೆ. ಹಾಗಾಗಿ ಏಳಲಾರದೇ ಎದ್ದು ಪಾತ್ರೆಗಳನ್ನು ಉಜ್ಜಿ ತೊಳೆಯುತ್ತಾಳೆ. ತನ್ನ ಮತ್ತು ಮಗಳ ಬಟ್ಟೆಗಳನ್ನು ಮತ್ತೆ ಸರ್ಫ್ ಹಾಕಿ ತೊಳೆದು ಒಣಹಾಕುತ್ತಾಳೆ. ಆದರೆ ಅವಳಿಗೆ ಬೇಜಾರಾಗುವುದು ತನ್ನ ಮನೆಯ ಬಚ್ಚಲು ಹಾಗೂ ಟಾಯ್ಲೆಟ್ ನೋಡಿದಾಗ. ಎಷ್ಟು ನೀರು ಹಾಕಿ ತೊಳೆದರೂ ಅವು ಸ್ವಚ್ಛವಾಗುವುದಿಲ್ಲ, ತನ್ನ ಕೈಗಳ ಹಾಗೇ ಎಂದು ಅವಳಿಗೆ ಅನಿಸಿಬಿಡುತ್ತದೆ. ಆದರೂ ಸ್ವಚ್ಛ ಮಾಡಿಯೇ ತೀರಬೇಕೆಂದು ಹಠ ತೊಟ್ಟವಳಂತೆ ಸುಸ್ತಾಗುವವರೆಗೂ ತಿಕ್ಕಿ ತಿಕ್ಕಿ ತೊಳೆಯುತ್ತಾಳೆ.

ಹೀಗೆ ಇಡೀ ದಿನ ಟಾಯ್ಲೆಟ್, ಬಾತ್ ರೂಂ ತೊಳೆದೂ ತೊಳೆದೂ ತನ್ನ ಕೈಗಳು ತುಂಬಾ ಕೊಳೆಯಾಗಿವೆ ಎಂದವಳಿಗೆ ತೀವ್ರವಾಗಿ ಅನ್ನಿಸಿದಾಗ ಮತ್ತೆ ಚನ್ನಾಗಿ ಸೋಪು ಹಚ್ಚಿ ಕೈಗಳನ್ನು ಉಜ್ಜಿ ಉಜ್ಜಿ ತೊಳೆಯುತ್ತಾಳೆ. ಎಷ್ಟೇ ಉಜ್ಜಿದರೂ ಚೊಕ್ಕವಾದ ಹಾಗೆ ಅವಳಿಗೆ ಅನಿಸುವುದಿಲ್ಲ. ಊಟ ಮಾಡುವಾಗಲೂ ತನ್ನ ಕೈಗಳು ಬಚ್ಚಲು ವಾಸನೆ ಬಂದ ಹಾಗೇ ಅವಳಿಗೆ ಭಾಸವಾಗುತ್ತದೆ. ಅದಕ್ಕಾಗಿ ಅವಳೀಗ ಒಂದು ಡೆಟಾಲ್ ಹ್ಯಾಂಡ್ ವಾಷ್ ತಂದಿಟ್ಟುಕೊಂಡಿದ್ದಾಳೆ. ಮನೆಗೆ ಬಂದ ಕೂಡಲೇ ಕೈ ತುಂಬಾ ಹ್ಯಾಂಡ್ ವಾಷ್ ಹಾಕಿ ಗಟ್ಟಿಯಾಗಿ ಉಜ್ಜಿ ನೊರೆ ಬರುವಂತೆ ಕೈಗಳನ್ನು ತೊಳೆಯುತ್ತಾಳೆ. ಹೀಗೆ ತೊಳೆದೂ ತೊಳೆದೂ ಅವಳ ಅಂಗೈಗಳ ಚರ್ಮ ಮತ್ತೂ ಸುಲಿದು ಹೋಗಿದೆ. ಸೋಪು ತಾಗಿದೊಡನೆ ಅಂಗೈ ಇನ್ನೂ ಉರಿಯಲಾರಂಭಿಸುತ್ತದೆ. ಈಗೀಗ ಅವಳಿಗೆ ಊಟ ಕೂಡ ಸರಿಯಾಗಿ ಸೇರುವುದಿಲ್ಲ.

ಊಟಕ್ಕೆ ಕುಳಿತರೆ ಮೂಗಿಗೇ ಅಂಟಿಕೊಂಡಿದೆಯೇನೋ ಎಂಬಂತೆ ಮತ್ತದೇ ಟಾಯ್ಲೆಟ್ ವಾಸನೆ. ರಾತ್ರಿ ಮಲಗಿದರೂ ಅದೇ…. ಬೆಳತನಕ, ಗಲೀಜಾಗಿರುವ ಟಾಯ್ಲೆಟ್ ಉಜ್ಜಿ ಉಜ್ಜಿ ತೊಳೆದಂತೇ ಕನಸು. ಅವಳಿಗೆ ಸಾಕಾಗಿ ಹೋಗಿದೆ. ಯಾವಾಗ ಈ ಕೆಲಸ ಬಿಟ್ಟೇನೋ ಅನ್ನುವಂತಾಗಿದೆ. ರಶ್ಮಿ ಹೇಳುತ್ತಲೇ ಇದ್ದಾಳೆ, ಅಮ್ಮಾ ಇನ್ನೊಂದೇ ವರ್ಷ, ಆಮೇಲೆ ನೀನು ಈ ಕೆಲಸ ಮಾಡಬೇಕಾಗಿಲ್ಲ ಅಂತ. ದೀಪಾಲಕ್ಷ್ಮಿ ಎಂದಿನಂತೆ ಬೆಳಿಗ್ಗೆ ಎದ್ದು ಅಪಾರ್ಟ್ ಮೆಂಟಿನ ಮೂರು ಮನೆಗಳ ಕೆಲಸ ಮುಗಿಸಿ ಬಂಗಲೆ ಮನೆಗೆ ಬಂದಾಗ ಮನೆಯೊಡತಿ ಇವಳಿಗಾಗೇ ಕಾದು ಕುಳಿತಂತಿತ್ತು. ಒಳಗಿನ ಕೋಣೆಯಿಂದ ದೊಡ್ಡಮ್ಮ ನರಳುವ ದ್ವನಿ ಕೇಳುತ್ತಿತ್ತು. ಇವಳನ್ನು ಕಂಡೊಡನೆ ಯಜಮಾನಿ ನಯವಾದ ಧ್ವನಿಯಲ್ಲಿ, "ಲಕ್ಷ್ಮಮ್ಮಾ ನಮ್ಮ ಅಮ್ಮನಿಗೆ ಸ್ವಲ್ಪ ಅರಾಮಿಲ್ಲ. ಜ್ವರ, ಹೊಟ್ಟೆ ಬೇರೆ ಸರಿಯಿಲ್ಲ. ಪಾಪ, ವಯಸ್ಸಾತಲ್ವಾ, ಪದೇ ಪದೇ ಟಾಯ್ಲೆಟ್ಟಿಗೆ ಹೋಗಿ ಸುಸ್ತಾಗಿಬಿಟ್ಟಿದ್ದಾರೆ.

ನೀನಿವತ್ತು ಬೇರೇನೂ ಕೆಲಸ ಮಾಡೋದು ಬೇಡ. ಅರ್ಜಂಟಾಗಿ ಟಾಯ್ಲೆಟ್ ಒಂದು ಕ್ಲೀನ್ ಮಾಡಿಕೊಟ್ಟುಬಿಡು ಸಾಕು ಅಂದಳು. ಇದೇನಪ್ಪಾ…. ಎಂದುಕೊಳ್ಳುತ್ತಾ ದೀಪಾಲಕ್ಷ್ಮಿ ಟಾಯ್ಲೆಟ್ಟಿಗೆ ಹೋಗಿ ನೋಡಿದಾಗ ರಪ್ಪನೆ ಗಬ್ಬುನಾತ ಮೂಗಿಗೆ ರಾಚಿತು. ಅಲ್ಲಿನ ರಾಡಿ ಕಂಡು ದೀಪಾಲಕ್ಷ್ಮಿ ವ್ಯಾಕ್ …ಎನ್ನುತ್ತಾ ಮೂಗು ಬಾಯಿ ಮುಚ್ಚಿಕೊಂಡಳು. ಒಂದು ಕ್ಷಣ ತಲೆ ಗುಮ್ಮೆಂದು ತಿರುಗಿದಂತಾಯಿತು. ಹೇಗೋ ಸಾವರಿಸಿಕೊಂಡು ಮೂಗು ಬಾಯಿಗೆ ಬಿಗಿಯಾಗಿ ದುಪ್ಪಟ್ಟಾ ಬಿಗಿದುಕೊಂಡು ಅರ್ಧ ಬಾಟಲು ಲೈಜಾಲ್ ಹೊಯ್ದು ದಬದಬನೆ ನೀರು ಸುರುವಿ ಅದಷ್ಟನ್ನು ಸ್ವಚ್ಛಗೊಳಿಸಬೇಕಾದರೆ ಸಾಕುಸಾಕಾಯಿತು. ಅಷ್ಟರಲ್ಲಿ, "ಲಕ್ಷಮ್ಮಾ ಅಲ್ಲಿ ಕ್ಲೀನ್ ಮಾಡಿ ಮುಗಿದರೆ ಕೊಂಚ ಇಲ್ಲಿ ಬರ್ತೀರಾ" ಎಂದು ಯಜಮಾನತಿ ದೊಡ್ಡಮ್ಮನ ಕೋಣೆಯಿಂದ ಕೂಗಿದ್ದು ಕೇಳಿಸಿತು.

ದೀಪಾಲಕ್ಷ್ಮಿ ಅಲ್ಲಿಗೆ ಹೋದಾಗ ಯಜಮಾನಿ ತನ್ನಮ್ಮನ ಬಳಿ " ಅಮ್ಮಾ ನೀನೇನೂ ಯೋಚನೆ ಮಾಡಬೇಡ, ಲಕ್ಷ್ಮಿ ಬಂದಿದ್ದಾಳೆ. ಅವಳೆಲ್ಲಾ ಕ್ಲೀನ್ ಮಾಡಿ ಬಟ್ಟೆ ಬದಲಾಯಿಸಿ ಕೊಡ್ತಾಳೆ" ಅನ್ನುವುದು ಕೇಳಿಸಿತು. ಪಾಪ! ವಯಸ್ಸಾದವರಲ್ವಾ ಎಂದುಕೊಳ್ಳುತ್ತಾ ಇಲ್ಲವೆನ್ನಲಾರದೇ ದೀಪಾಲಕ್ಷ್ಮಿ ಆ ಅಮ್ಮನ ಗಲೀಜೆಲ್ಲಾ ಚೊಕ್ಕ ಮಾಡಿ ಬಟ್ಟೆ ಬದಲಾಯಿಸುವಾಗ, ಯಜಮಾನಿ ದೂರವೇ ನಿಂತು ಹಾಗೆ ಮಾಡು….ಹೀಗೆ ಮಾಡು…. ಎಂದು ಸಲಹೆ ನೀಡುತ್ತಲೇ ಇದ್ದಳು. ಎಲ್ಲಾ ಕೆಲಸ ಮುಗಿಸಿದಾಗ ಅವರು ಘಮಘಮಿಸುವ ಹೊಸ ಸೋಪೊಂದನ್ನು ದೀಪಾಲಕ್ಷ್ಮಿಯ ಕೈಗಿಟ್ಟು ಹೇಳಿದರು" ಕೈಕಾಲು ತೊಳೆದುಕೊಂಡು ಬನ್ನಿ ಲಕ್ಷಮ್ಮಾ, ಟೀ ಮಾಡಿಕೊಡುತ್ತೇನೆ. ಬೇಜಾರು ಮಾಡ್ಕೋಬೇಡಿ, ಈ ಕೆಲಸಕ್ಕೇ ಅಂತ ಎಕ್ಸ್ ಟ್ರಾ ಪೇ ಮಾಡ್ತೇನೆ" ಎಂದರು.

ದೀಪಾಲಕ್ಷ್ಮಿಗೆ ಟೀ ಬಿಟ್ಟು ಒಂದು ಗುಟುಕು ನೀರೂ ಹೊಟ್ಟೆಗಿಳಿಯುವ ಪರಿಸ್ಥಿತಿ ಇರಲಿಲ್ಲ. "ಟೀ ಏನೂ ಬೇಡಾ ಅಮ್ಮ, ನಾನು ಮನೆಗೆ ಹೋಗ್ತೇನೆ" ಎನ್ನುತ್ತಾ ಬಚ್ಚಲಿಗೆ ಹೋಗಿ ಸೋಪಿನಿಂದ ತಿಕ್ಕಿ ತಿಕ್ಕಿ ಕೈ ಕಾಲು ತೊಳೆದುಕೊಂಡು ಮನೆಗೆ ಹೊರಟಳು. ಮನೆಗೆ ಹೋದರೂ ಸಮಾಧಾನವಿಲ್ಲ. ಕಣ್ಮುಚ್ಚಿದರೆ ಅದೇ ಗಲೀಜಾದ ಟಾಯ್ಲೆಟ್ ಕಣ್ಮುಂದೆ ಬರುತ್ತಿತ್ತು. ಬಾತ್ ರೂಮಿಗೆ ಹೋಗಿ ನೀರು ಕಾಯಿಸಿ ಮನಸೋ ಇಚ್ಛೆ ಸ್ನಾನ ಮಾಡಿದಳು. ಸ್ನಾನ ಮಾಡಿ ಬಟ್ಟೆ ಬದಲಾಯಿಸಿದರೂ ಯಾಕೋ ಕೈಗಂಟಿದ ವಾಸನೆ ಹೋದ ಹಾಗೆ ಅನಿಸಲಿಲ್ಲ. ಮತ್ತೆ ಹೋಗಿ ನಲ್ಲಿಯ ಕೆಳಗೆ ಕೈಗಳನ್ನು ಹಿಡಿದುಕೊಂಡು ಡೆಟಾಲ್​ನಿಂದ ತಿಕ್ಕಿ ತಿಕ್ಕಿ ತೊಳೆಯತೊಡಗಿದಳು. ಕೈ ಕೆಂಪಾಗಿ ಉರಿಯುತ್ತಿದ್ದರೂ ಮತ್ತೆ ಮತ್ತೆ ಸ್ಕ್ರಬ್ಬರ್​ನಿಂದ ತಿಕ್ಕಿ ತೊಳೆದಳು. ಕೈ ಚರ್ಮ ಕಿತ್ತು ರಕ್ತ ಬರುವಂತಾದರೂ ವಾಸನೆ ಹೋದಂತೆ ಅನಿಸಲಿಲ್ಲ.

ಅವಳಿಗೀಗ ಊಟವೂ ಬೇಡವೆನಿಸಿತು. ತಲೆ ನೋಯುತ್ತಿತ್ತು. ಅವತ್ತು ಭಾನುವಾರವಾದ್ದರಿಂದ ಮಗುವನ್ನು ನೋಡಿಕೊಳ್ಳಲು ಹೋಗುವ ಕೆಲಸವಿರಲಿಲ್ಲ. ರಶ್ಮಿ ಗೆಳತಿಯರ ಜೊತೆ ಹೊರಗೆ ಹೋಗಿದ್ದಳು. ದೀಪಾಲಕ್ಷ್ಮಿ ಸುಮ್ಮನೆ ಮಲಗಿಬಿಟ್ಟಳು. ರಾತ್ರಿಯಾದಂತೆ ಮೈ ಬಿಸಿಯಾಗಿ ಜ್ವರ ಬಂದಿತ್ತು. ರಾತ್ರಿಯಿಡೀ ಅರೆ ನಿದ್ದೆ…. ಎಚ್ಚರ, ಕಣ್ಣು ಮುಚ್ಚಿದರೆ, ತಾನು ಟಾಯ್ಲೆಟ್ ರೂಮಿನಲ್ಲಿಯೇ ಮಲಗಿದಂತೆ ಕನಸು. ಬೆಳಕು ಹರಿಯುವಾಗ ದೀಪಾಲಕ್ಷ್ಮಿ ತುಂಬಾ ಸುಸ್ತಾಗಿದ್ದಳು. ರಶ್ಮಿ ಇವತ್ತು ಕ್ಯಾಂಪಸ್ ಇಂಟರ್ ವ್ಯೂ ಇದೆ ಎಂದು ಬೇಗ ತಯಾರಾಗಿ ಹೊರಟುಹೋಗಿದ್ದಳು. ದೀಪಾಲಕ್ಷ್ಮಿ ಆಯಾಸದಿಂದಲೇ ಎದ್ದು ಕೆಲಸಕ್ಕೆ ಹೊರಟಳು. ಚಿಕ್ಕ ಮೇಡಮ್ ವೀಕೆಂಡಿನಲ್ಲಿ ಮನೆಯಲ್ಲಿರದೇ ಇದ್ದುದರಿಂದ ಅಲ್ಲಿ ಹೆಚ್ಚು ಕೆಲಸವೇನಿರಲಿಲ್ಲ. ಇದ್ದ ನಾಲ್ಕು ಪಾತ್ರೆಗಳನ್ನು ತೊಳೆದು ಚೊಕ್ಕವಾಗಿಯೇ ಇದ್ದ ನೆಲವನ್ನೊಮ್ಮೆ ಗುಡಿಸಿ ಒರೆಸಿದಂತೆ ಮಾಡುವಷ್ಟರಲ್ಲಿ ಕೆಲಸ ಬೇಗ ಮುಗಿದಿತ್ತು.

ಇನ್ನೊಂದು ಮನೆ ಕೆಲಸ ಮುಗಿಸಿ ಡಾಕ್ಟರಮ್ಮನ ಮನೆಗೆ ಬರುವಷ್ಟರಲ್ಲಿ ದೀಪಾಲಕ್ಷ್ಮಿಗೆ ಮತ್ತೆ ಜ್ವರ ಏರತೊಡಗಿತ್ತು. ಇನ್ನು ಕೆಲಸ ಮಾಡಲಾರೆ ಎನ್ನಿಸಿದಾಗ "ಮೇಡಮ್, ಯಾಕೋ ಮೈ ಹುಷಾರಿಲ್ಲ, ಪಾತ್ರೆ ತೊಳೆದುಕೊಟ್ಟು ಮನೆಗೆ ಹೋಗಿ ಬಿಡ್ತೇನೆ. ಉಳಿದ ಕೆಲಸ ನಾಳೆ ಮಾಡಿಕೊಡ್ತೇನೆ ಮೇಡಮ್" ಎಂದಳು. ಗಾಬರಿ ಬಿದ್ದ ಡಾಕ್ಟರ್ ಮೇಡಮ್ಮು ಅಯ್ಯೋ ಲಕ್ಷ್ಮೀ ಅದು ಹೇಗಾಗುತ್ತೆ, ಇವತ್ತು ಮನೆಗೆ ನಮ್ಮತ್ತೆ ಮಾವ ಬರೋರಿದಾರೆ. ನಮ್ಮತ್ತೆ ತುಂಬಾ ಕ್ಲೀನು. ಮನೆ ಗಲೀಜಾಗಿದ್ರೆ ಅವರಿಗೆ ಆಗೋದೇ ಇಲ್ಲ. ಇವತ್ತು ಮನೆ, ಬಾತ್ ರೂಮ್, ಟಾಯ್ಲೆಟ್ ಕ್ಲೀನ್ ಮಾಡದೆ ಬಿಡೋ ಹಾಗೇ ಇಲ್ಲ. ಒಂದು ಕೆಲಸ ಮಾಡು, ನಿಂಗೆ ಜ್ವರ, ಮೈ ಕೈ ನೋವಿಗೆ ಮಾತ್ರೆ ಕೊಡ್ತೀನಿ.

ಬಿಸಿ ಬಿಸಿಯಾಗಿ ಕಾಫೀ ಮಾಡಿ ಕೊಡ್ತೀನಿ. ತಗೊಂಡು ಸ್ವಲ್ಪ ಹೊತ್ತು ಇಲ್ಲೇ ರೆಸ್ಟ್ ಮಾಡು. ಸ್ವಲ್ಪ ಕಡಿಮೆ ಆದಮೇಲೆ ಎದ್ದು ನಿಧಾನವಾಗಿ ಕೆಲಸ ಮಾಡುವಿಯಂತೆ" ಎನ್ನುತ್ತಾ ಕಾಫೀ ಮಾಡಿ ತಂದು ಜೊತೆಗೊಂದು ಜ್ವರದ ಟ್ಯಾಬ್ಲೆಟ್ ಕೊಟ್ಟರು. "ನೋಡು ನಾನು ಈಗ್ಲೇ ಆಸ್ಪತ್ರೆಗೆ ಹೋಗಬೇಕು. ಆದ್ರೂ ಪರವಾಗಿಲ್ಲ. ನೀನು ನಿಧಾನವಾಗಿ ನಿನ್ನ ಕೆಲಸ ಮುಗಿಸು. ಕೀ ಕೊಟ್ಟು ಹೋಗುತ್ತೇನೆ. ನೀನು ಕೆಲಸ ಮುಗಿಸಿ ಹೋಗುವಾಗ ಎದುರು ಮನೆ ಆಂಟಿ ಹತ್ತಿರ ಕೀ ಕೊಟ್ಟು ಹೋಗು. ಬಾತ್ರೂಮ್ ಟಾಯ್ಲೆಟ್ ಕ್ಲೀನಾಗಿ ತೊಳೆದುಬಿಡು ಆಯ್ತಾ? ಇಲ್ಲಾಂದ್ರೆ ನಮ್ಮತ್ತೆ ಸಿಟ್ಟು ಮಾಡ್ಕೋತಾರೆ. ಬಾಗಿಲು ಸರಿಯಾಗಿ ಹಾಕ್ಕೋ, ಹುಷಾರು" ಎನ್ನುತ್ತಾ ಗಡಿಬಿಡಿಯಿಂದ ಕೀ ಡೈನಿಂಗ್ ಟೇಬಲ್ ಮೇಲಿಟ್ಟು, ಪರ್ಸು ಮೊಬೈಲು, ಕಾರಿನ ಕೀ ಹಿಡಿದು ಹೊರಟೇ ಬಿಟ್ಟರು ಡಾಕ್ಟರಮ್ಮ.

ಒಂದು ಕ್ಷಣ ದಿಕ್ಕೆಟ್ಟು ನಿಂತರೂ ಸುಧಾರಿಸಿಕೊಂಡ ದೀಪಾಲಕ್ಷ್ಮಿ ಮಾತ್ರೆ ನುಂಗಿ, ಕಾಫಿ ಕುಡಿದು ತನ್ನ ಕೆಲಸ ಶುರುಮಾಡಿದಳು. ನಿಧಾನವಾಗಿಯೇ ಉಳಿದೆಲ್ಲಾ ಕೆಲಸ ಮುಗಿಸಿ ಬಾತ್ ರೂಮಿಗೆ ಬಂದಾಗ ಸಣ್ಣಗೆ ತಲೆ ತಿರುಗಲಾರಂಭಿಸಿತು. ಬಾತ್ ರೂಮ್ , ಕಮೋಡ್ ತುಂಬಾ ಹಾರ್ಪಿಕ್ ಸುರಿದು ಬ್ರಷನಿಂದ ಬಚ್ಚಲು ನೆಲ ತಿಕ್ಕಲಾರಂಭಿಸಿದಳು. ಹಾರ್ಪಿಕ್ ಘಾಟಿಗೆ ತಲೆ ಸಿಡಿದು ಹೊಟ್ಟೆ ತೊಳೆಸಲಾರಂಭಿಸಿತು. ನೆಲ ತಿಕ್ಕಿ ಮುಗಿಸಿ ಕಮೋಡ್ ಸ್ವಚ್ಛಗೊಳಿಸಲು ಬ್ರಷ್ ಹಿಡಿದು ಬಗ್ಗಿದಳು. ಕಮೋಡ್​ನ ಗಬ್ಬು ವಾಸನೆಗೆ ಹೊಟ್ಟೆಯಲ್ಲಿ ತಳಮಳವೆದ್ದು ಕುಡಿದ ಕಾಫಿಯೆಲ್ಲಾ ವ್ಯಾಕ್ ಎಂದು ಬಾಯಿಗೇ ಬಂತು. ವ್ಯಾಕ್….ವ್ಯಾಕ್ .. ಎಂದು ಕರುಳೇ ಕಿತ್ತುಬರುವಂತೆ ಕಮೋಡ್ ತುಂಬಾ ವಾಂತಿ ಮಾಡಿಕೊಳ್ಳತೊಡಗಿದಳು. ಕಣ್ಣು ಮಂಜು ಮಂಜಾಯಿತು. ತಲೆ ಜೋರಾಗಿ ಗಿರಿ …ಗಿರಿಗುಟ್ಟಲಾರಂಭಿಸಿತು. ಮೈಯೆಲ್ಲಾ ಬೆವರು ಕಿತ್ತುಬಂತು.

ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಬಗ್ಗಿದ ತಲೆ ಎತ್ತಲಾಗದೇ ಮುಖ ಅಡಿಯಾಗಿ ಕಮೋಡ್ ಮೇಲೆ ಬಿದ್ದೇ ಬಿಟ್ಟಳು. ಕಮೋಡಿನ ಗಬ್ಬು ವಾಸನೆ ರಪ್ಪನೆ ಮೂಗಿಗಡರಿ ಉಸಿರು ಕಟ್ಟಿದಂತಾಯಿತು. ಜೋರಾಗಿ ಕಿರುಚಿಕೊಳ್ಳಬೇಕೆಂದು ದೀಪಾಲಕ್ಷ್ಮಿ ಪ್ರಯತ್ನಿಸುತ್ತಿರುವಾಗಲೇ ನಿಧಾನಕ್ಕೆ ಅವಳಿಗೆ ಎಚ್ಚರ ತಪ್ಪತೊಡಗಿತು.