ನ್ಯೂಸ್

ವಿಜಯವಾಣಿ ಫೋನ್​ ಇನ್​| ನಾನೇ ಸೋಮಣ್ಣ ಮಾತಾಡ್ತಾ ಇದ್ದೀನಿ ಹೇಳಣ್ಣಾ

ಹಲೋ, ನಾನೇ ಸಚಿವ ಸೋಮಣ್ಣ ಮಾತನಾಡೋದು ಹೇಳಿ...? ಪ್ರತಿ ಪೋನ್ ಕರೆ ಸ್ವೀಕಾರ ಮಾಡುತ್ತಲೇ ಮಾತಿನ ಮೋಡಿಯಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಸೋಮಣ್ಣ, ಹೇಳವ್ವ ತಾಯಿ, ಹೇಳಪ್ಪ ತಂದೆ ಎಂದು ಸಂಬೋಧಿಸಿ ಅವರಲ್ಲಿ ವಿಶ್ವಾಸ ತುಂಬುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿದ್ದರು. ಇದು ಅಪ್ಪಟ ಸೋಮಣ್ಣ ಸ್ಟೈಲ್.

ಸೋಮಣ್ಣ ಸುಮ್ಮನೆ ಕೂರುವವನು ಅಲ್ಲಣ್ಣ ಸತತ ಒಂದೂವರೆ ಗಂಟೆಗಳ ಕಾಲ ಪೋನ್ ಕರೆಗಳನ್ನು ಸ್ವೀಕರಿಸಿ ಉತ್ತರಿಸಿದ ಸೋಮಣ್ಣ, ಮನೆ ಹಂಚಿಕೆ ಸಂಬಂದ ಯಾರಿಗೂ ನಯಾ ಪೈಸೆ ಹಣ ಕೊಡ ಬೇಡಿ. ಯಾರಾದರೂ ಹಣ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು. ನಾನು ಬಡವರ ಪರವಾಗಿ ಕೆಲಸ ಮಾಡುವವನು. ಈ ಸೀಟಿನಲ್ಲಿ ಕುಳಿತು ಕೆಲಸ ಮಾಡದಿದ್ದರೆ ಸರಿಯಾಗುತ್ತಾ? ಹೇಳಿ ಎನ್ನುತ್ತಿದ್ದ ಸೋಮಣ್ಣ, ಸುಮ್ಮನೆ ಕೂರುವವನು ಅಲ್ಲಣ್ಣ ಎಂದು ಮಾತಿಗೆ ಷರಾ ಬರೆಯುತ್ತಿದ್ದದ್ದು ವಿಶೇಷ.

ಹಿಂದೆ ಬಿಜೆಪಿ ಸರ್ಕಾರದಲ್ಲಿ ವಸತಿ ಇಲಾಖೆ ನಿಭಾಯಿಸಿ ಸೈ ಅನ್ನಿಸಿಕೊಂಡಿದ್ದ ಸೋಮಣ್ಣರಿಗೆ ಈ ಬಾರಿಯೂ ಅದೇ ವಿಶ್ವಾಸದಲ್ಲಿ ಸಿಎಂ ಯಡಿಯೂರಪ್ಪ ವಸತಿ ಇಲಾಖೆ ಜವಾಬ್ದಾರಿ ವಹಿಸಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ಬಡವರು, ನಿರಾಶ್ರಿತರು, ವಸತಿ ರಹಿತರಿಗೆ ಸತತ ಪರಿಶ್ರಮ ಹಾಕಿ, ಬದ್ದತೆಯಿಂದ ಕೆಲಸ ಮಾಡುತ್ತಿರುವ ಸೋಮಣ್ಣ, ಇಲಾಖೆಯಲ್ಲಿ ಹಲವು ಸುಧಾರಣೆ ಮಾಡುವ ಮೂಲಕ ಹೊಸತನ ತಂದವರು. ಸಚಿವರಾದ ಮೇಲೆ ಒಂದು ಸುತ್ತು ರಾಜ್ಯದ ಉದ್ದಗಲಕ್ಕೂ ಸುತ್ತಾಡಿ ಬಂದಿರುವ ಸೋಮಣ್ಣ ಅವರಿಗೆ ವಿಜಯವಾಣಿ ಪೋನ್-ಇನ್ ಕಾರ್ಯಕ್ರಮದಲ್ಲಿ ಕರೆಗಳ ಸುರಿಮಳೆಯೇ ಹರಿದು ಬಂತು.

ಪ್ರತಿ ಪೋನ್ ಕರೆಗಳನ್ನು ಅಷ್ಟೇ ತನ್ಮಯತೆಯಿಂದ ಸ್ವೀಕರಿಸಿ, ಕರೆ ಮಾಡಿದವರ ದುಃಖ ದುಮ್ಮಾನಗಳಿಗೆ ಕಿವಿಯಾಗುತ್ತಿದ್ದರು. ಅಷ್ಟೇಅಲ್ಲದೆ, ಸ್ಥಳದಲ್ಲಿಯೇ ಪರಿಹಾರ ಕ್ರಮಗಳನ್ನು ತೆಗೆದುಕೊಂಡರು. ಇನ್ನು ಕೆಲವರಿಗೆ ತಮ್ಮ ಮನೆಯ ಬಳಿ ಬರುವಂತೆ ಹೇಳಿ ಅವರ ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಂದಾದರು. ಹಲವರಿಗೆ ತಮ್ಮ ಪೋನ್ ನಂಬರ್ ಕೂಡ ನೀಡಿ, ಕೆಲಸ ಆಗದಿದ್ದರೆ ಪೋನ್ ಮಾಡುವಂತೆಯೂ ಸೂಚನೆ ನೀಡಿದರು.

ಹಣಕ್ಕೇನು ಕೊರತೆಯಾಗದು!: ಸೋಮಣ್ಣ ಜತೆ ಮುಖಾಮುಖಿ

  • ಗುಡಿಸಲುಮುಕ್ತ ರಾಜ್ಯದ ಕನಸು ನನಸಾಗುತ್ತಲೇ ಇಲ್ಲವಲ್ಲ... ಕಾರಣ ಏನು?

2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತದೆ. ಅಷ್ಟರಲ್ಲಾದರೂ ವಸತಿ ರಹಿತರಿಗೆ ಸೂರು ಕಲ್ಪಿಸಬೇಕೆಂಬುದು ಪ್ರಧಾನಿ ಆಶಯ. ರಾಜ್ಯ ಕೂಡ ಗುಡಿಸಲುಮುಕ್ತ ಅಗಬೇಕೆಂಬ ಬಯಕೆ ನನ್ನದು. ವಸತಿ ಇಲಾಖೆ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದು, ಒಂದು ದಿಟ್ಟ ಕ್ರಮಕೈಗೊಂಡು ಗುರಿ ಸಾಧಿಸುತ್ತೇವೆ.

  • ಕೇಂದ್ರದಿಂದ ವಸತಿ ಯೋಜನೆಗೆ ಎಷ್ಟು ಅನುದಾನ ನಿರೀಕ್ಷೆ ಮಾಡಿದ್ದೀರಿ? ನೀವು ಅಧಿಕಾರ ವಹಿಸಿಕೊಂಡ ಮೇಲೆ ಎಷ್ಟು ಬಂದಿದೆ? ತೃಪ್ತಿ ಇದೆಯೇ?

1.25 ಲಕ್ಷ ಮನೆಗಳನ್ನು ನಾನು ಬಂದ ಮೇಲೆ ನೀಡಿದೆ. ಪ್ರತಿ ಮನೆಗೆ 1.5 ಲಕ್ಷ ರೂ. ಕೇಂದ್ರ ಸರ್ಕಾರ ನೀಡುತ್ತದೆ. ರಾಜ್ಯ ಸರ್ಕಾರ 1.20 ಲಕ್ಷ ರೂ. ಮ್ಯಾಚಿಂಗ್ ಗ್ರಾಂಟ್ ಹಾಕಿದರೆ 2.70 ಲಕ್ಷ ರೂ.ನಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ. ಬೇರೆ ಯೋಜನೆಗಳು ಮತ್ತು ಫಲಾನುಭವಿಗಳಿಗೆ ಬಡ್ಡಿರಹಿತ ಸಾಲದ ಮಾರ್ಗ ತೋರಿಸಿ ಹಣ ಹೊಂದಿಸಲಾಗುತ್ತದೆ. ಇದೀಗ ರಾಷ್ಟ್ರೀಕೃತ ಬ್ಯಾಂಕುಗಳು ಸಹ ನೆರವು ನೀಡಲು ಮುಂದೆ ಬರುತ್ತಿವೆ.

  • ವಸತಿ ಯೋಜನೆಗಳಿಗೆ ಕರೊನಾ ಸಂದರ್ಭದಲ್ಲಿ ಹಣಕಾಸು ಸಮಸ್ಯೆಯಾಗುವುದಿಲ್ಲವೇ?

ಕೇಂದ್ರ ಸರ್ಕಾರ 4 ದಿನಗಳ ಹಿಂದಷ್ಟೇ ಅನುದಾನ ಬಿಡುಗಡೆ ಮಾಡಿದೆ.ಮತ್ತಷ್ಟು ಸಿಗುವ ನಿರೀಕ್ಷೆ ಇದೆ. ವಸತಿ ಯೋಜನೆ ಕೇಂದ್ರದ ಆದ್ಯತೆ ಆಗಿರುವುದರಿಂದ ಹಣಕ್ಕೇನು ಕೊರತೆಯಾಗಲಿಕ್ಕಿಲ್ಲ.

  • ಪ್ರವಾಹಪೀಡಿತ ಪ್ರದೇಶದಲ್ಲಿ ಮನೆ ನಿರ್ವಿುಸುವ ಕಾರ್ಯ ಎಲ್ಲಿಗೆ ಬಂತು, ದೂರು ದೊಡ್ಡ ಪ್ರಮಾಣದಲ್ಲಿದೆಯಲ್ಲ.

ಪ್ರವಾಹಪೀಡಿತ ಪ್ರದೇಶದಲ್ಲಿ ನೀಡಲಾದ ಮನೆಗಳ ಪೈಕಿ ಅನೇಕರು ಒಂದನೇ ಕಂತು ಪಡೆದು ಅಲ್ಲಿಂದ ಹೊರಟಿದ್ದಾರೆ. ಇನ್ನು ಕೆಲಕಡೆ ಸಣ್ಣ ಪುಟ್ಟ ಸಮಸ್ಯೆ ಇದ್ದರೂ, ಸರಿಪಡಿಸಲಾಗುತ್ತಿದೆ. ಕೊಡಗಿಗೆ 13-14 ಬಾರಿ ಹೋಗಿ ಬಂದಿದ್ದೇನೆ. ಸರ್ಕಾರದಿಂದ ಮನೆ ನೀಡಲಾಗುತ್ತಿದ್ದು, ಸುಧಾಮೂರ್ತಿ ಅವರು 200 ಮನೆ ಕಟ್ಟಿಕೊಡುತ್ತಿದ್ದಾರೆ. ಇನ್ನು ಸ್ವಲ್ಪ ಬಾಕಿ ಉಳಿಯುತ್ತದೆ. ಆ ಬಗ್ಗೆ ಗಮನ ಕೊಡುತ್ತೇವೆ.

  • ಕೆಎಚ್​ಬಿಯಿಂದ ನಿರ್ಮಾಣ ಮನೆಗಳ ಬಗ್ಗೆ ಟೀಕೆ ಬರುತ್ತದಲ್ಲವೇ, ಏಕೆ?

ಅದು ಅಪಪ್ರಚಾರ. ಖಾಸಗಿಯವರು ಹಾಗೆ ಮಾಡುತ್ತಾರೆ. ಬೇಕಿದ್ದರೆ ಬನ್ನಿ ನಾನೇ ನಿಮ್ಮನ್ನು ಕರೆದೊಯ್ದು ತೋರಿಸುತ್ತೇನೆ. ಗುಣಮಟ್ಟದ ಬಗ್ಗೆ ಸವಾಲು ಹಾಕುತ್ತೇನೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಪೋನ್ ಸಂಪರ್ಕ ಸಿಗದಿದ್ದವರು ಈ ಜಾಲತಾಣಗಳನ್ನು ಸಂಪರ್ಕಿಸಬಹುದು.

ಇನ್​ಸ್ಟಾಗ್ರಾಂ office.of.v.somanna

ಫೇಸ್​ಬುಕ್- office of v somanna

ಟ್ವಿಟರ್- @office v somanna