ನ್ಯೂಸ್

ವಿದ್ಯಾರ್ಥಿಗಳು, ಪಾಲಕರು ಯಾವುದೇ ಒತ್ತಡ, ಆತಂಕಕ್ಕೆ ಒಳಗಾಗಬೇಡಿ | ಸಚಿವ ಸುರೇಶ್ ಕುಮಾರ್ ಮನವಿ

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಯಶಸ್ಸಿಗೆ ಮೂರು ಅಂಜೆಡಾ ಇಟ್ಟುಕೊಂಡಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಸೋಮವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ತಡೆಯುವುದು, ಸಮೂಹ ಕಾಪಿ ತಡೆಗೆ ಸೂಕ್ತ ಕ್ರಮ ಹಾಗೂ ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಈ ಮೂರು ಅಂಶಗಳು ಪರೀಕ್ಷೆಯಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅವಳಡಿಕೆ ಮಾಡಲು ಸೂಚನೆ ನೀಡಿದ್ದೇವೆ. ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾರ್ಗಗಳನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರಶ್ನೆ ಪತ್ರಿಕೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿಡುತ್ತೇವೆ ಮತ್ತು ರವಾನೆ ಮಾಡುತ್ತೇವೆ. ಇದರಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಯಾವುದೇ ಗೊಂದಲ ಅಥವಾ ಆತಂಕ ಬೇಡ ಎಂದು ಸಚಿವರು ಭರವಸೆ ನೀಡಿದರು.

ನೀಲಿ ನಕ್ಷೆ ಇಲ್ಲ: ಕರೆ ಮಾಡಿದ ವಿದ್ಯಾರ್ಥಿಗಳ ಪೈಕಿ ಬಹುತೇಕರು ಪರೀಕ್ಷೆ ನೀಲಿ ನಕ್ಷೆ ನೀಡುವಂತೆ ಮನವಿ ಮಾಡಿದರು. ಆದರೆ, ಶಿಕ್ಷಣ ಇಲಾಖೆಯು ನೀಲಿ ನಕ್ಷೆ ನೀಡುವುದನ್ನು ಕಳೆದರಡು ವರ್ಷದಿಂದ ಕೈ ಬಿಟ್ಟಿದೆ. ವಿದ್ಯಾರ್ಥಿಗಳು ಪರೀಕ್ಷೆ ದೃಷ್ಟಿಯಿಂದ ಮಾತ್ರವಲ್ಲ, ಸ್ಪರ್ಧಾತ್ಮಕ ಪರೀಕ್ಷೆಯ ದೃಷ್ಟಿಯಿಂದಲೂ ಪುಸ್ತಕವನ್ನು ವ್ಯಾಸಂಗ ಮಾಡಬೇಕು. ಅಂದಾಗ ಮಾತ್ರ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಮನವರಿಕೆ ಮಾಡಿಕೊಟ್ಟರು.

ಮಕ್ಕಳೊಂದಿಗೆ ಸಂವಾದ: ಫೋನ್ ಇನ್ ಕಾರ್ಯಕ್ರಮದ ಜತೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಸಂವಾದ ಕೂಡ ಆಯೋಜಿಸಲಾಗಿತ್ತು. ಇಲ್ಲಿಯೂ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲು ಮಾಡಿರುವ ಕುರಿತಂತೆಯೇ ಹೆಚ್ಚು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ ಬದಲಾಗಿರುವುದರಿಂದ ಮಕ್ಕಳಲ್ಲಿ ಉಂಟಾಗಿರುವ ಗೊಂದಲಗಳ ನಿವಾರಣೆಗಾಗಿ ಪ್ರತ್ಯೇಕ ವೀಡಿಯೋ ಮಾಡಿ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದರು.

ಸ್ಥಳದಲ್ಲೇ ಪರಿಹಾರ: ನಾಗಮಂಗಲದಿಂದ ಪಾಲಕರೊಬ್ಬರು ಕರೆ ಮಾಡಿ ನಮ್ಮ ಮಗುವಿಗೆ ವಾಕ್ ಮತ್ತು ಶ್ರವಣ ದೋಷವಿದೆ. ಇಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಿನಾಯ್ತಿ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ನಮ್ಮ ಮಗು ಎಲ್ಲ ವಿಷಯಗಳು ಪರೀಕ್ಷೆ ಬರೆಯಬೇಕೆಂದು ಪ್ರವೇಶ ಪತ್ರದಲ್ಲಿ ತಿಳಿಸಿದೆ. ಈ ಸಂಬಂಧ ಇಲಾಖೆಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಸ್ಥಳದಲ್ಲೇ ಇದ್ದ ಪಿಯು ಇಲಾಖೆ ಜಂಟಿ ನಿರ್ದೇಶಕ(ಪರೀಕ್ಷೆ) ಪ್ರಭಾರಿ ಕಲ್ಲಯ್ಯ ಮೊಬೈಲ್ ಸಂಖ್ಯೆ ನೀಡಿ ಸಂಬಂಧ ಪಟ್ಟ ದಾಖಲೆ ನೀಡಿದರೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು.

ಫೋನ್ ಬಿಡಲು ವಿದ್ಯಾರ್ಥಿಗಳಿಗೆ ಸಲಹೆ: ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಬೇಕಾದರೆ ಮೊದಲು ಮೊಬೈಲ್ ಫೋನ್ ಬಿಡಬೇಕು. ಪರೀಕ್ಷೆ ಕಡೆ ಗಮನ ಕೊಡಬೇಕು.ಇದರೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಎರಡು ತಿಂಗಳ ನಂತರ ಮೊಬೈಲ್ ಬಳಕೆ ಮಾಡಿ ಎಂದು ಸಚಿವರು ಸಲಹೆ ನೀಡಿದರು.


ಎಕ್ಸಾಮ್ ಟಿಪ್ಸ್

  • ಎಸ್ಸೆಸ್ಸೆಲ್ಸಿ, ಪಿಯು ಒಂದು ಪರೀಕ್ಷೆ ಅಷ್ಟೆ. ಜೀವನದಲ್ಲಿ ಇದೇ ಅಂತಿಮವಲ್ಲ
  • ಪ್ರತಿ ನಿತ್ಯ ಯೋಗ ಮಾಡಿ
  • ದೀರ್ಘಾವಧಿ ಓದುವ ಬದಲು ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ
  • ಓದಿದ್ದನ್ನು ಬರೆಯುವ ಅಭ್ಯಾಸ ಮಾಡಿ
  • ಪ್ರಶ್ನೆ ಪತ್ರಿಕೆ ನೋಡಿದ ಕೂಡಲೇ ಗಾಬರಿಯಾಗದೆ ಓದಿ
  • ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ
  • ಸಂಪೂರ್ಣ ಅವಧಿ ಉಪಯೋಗಿಸಿಕೊಳ್ಳಿ
  • ಮೌಲ್ಯಮಾಪನದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ