ನ್ಯೂಸ್

ನುಡಿದೀಪ: ಸ್ನಾನದ ಬದಲು ವೈರಾಗ್ಯ ಮತ್ತು ಹೋಮ ಪಕ್ಷಿಯ ಕಥೆ

ವೈರಾಗ್ಯ ಎಂದಾಕ್ಷಣ ಅನೇಕರಿಗೆ ಭಯ, ವಿಹ್ವಲತೆ. ವೈರಾಗ್ಯದ ನಿಜ ಅರ್ಥ ಅರಿತಾಗಲೇ ಅದರ ಬಗ್ಗೆ ಇರುವ ಸಂದೇಹ, ಗೊಂದಲಗಳು ಮಾಯವಾಗುತ್ತದೆ. ವೈರಾಗ್ಯ ವಿವೇಚನೆ, ವಿವೇಕವಿದ್ದವನು ಹಾಗೂ ಎಲ್ಲಾ ಬಂಧನಗಳಿಂದ ಮುಕ್ತನಾದವನು ಮತ್ತು ನಾಲ್ಕು ಸಾಧನ ಚತುಷ್ಟಯಗಳಲ್ಲಿ ಎರಡನೆಯದೇ ಈ ವೈರಾಗ್ಯ ಎಂಬುದು. ಅಂದರೆ ವಿವೇಕ, ವೈರಾಗ್ಯ, ಸಮಾಧಿಷಟ್ಕ ಹಾಗೂ ಮುಮುಕ್ಷತ್ವ. ಈ ನಾಲ್ಕು ಸಾಧನಾ ಚತುಷ್ಟಯಗಳು ಎಂದೆನಿಸಿಕೊಳ್ಳುತ್ತವೆ.

ಪರಮಹಂಸರು ಸಾಧನ ಚತುಷ್ಟಯದ ನಾಲ್ಕೂ ಅಂಶಗಳನ್ನು ತಮ್ಮ ಸಾಧನಾ ಪರ್ವದಲ್ಲಿ ಜಗತ್ತಿಗೆ ತೋರಿದ್ದಾರೆ. ಮೂವತ್ತು ವರ್ಷಗಳ ನಿರಂತರ ಸಾಧನೆಯಿಂದ ಬ್ರಹ್ಮತ್ವ, ಬ್ರಹ್ಮಾನಂದ, ಪರಮಾನಂದ, ದಿವ್ಯಾನಂದ ಸ್ಥಿತಿಯನ್ನು ತಲುಪಿದ್ದೇ ಅಲ್ಲದೆ ಇಡೀ ಜಗತ್ತಿಗೆ ಅಧ್ಯಾತ್ಮ ಸಾಧನೆ ಎಂದರೇನು ಎಂಬುದನ್ನು ಜೀವನವನ್ನೇ ಪ್ರಯೋಗಾಲಯವನ್ನಾಗಿಸಿಕೊಂಡು ಸಾರಿದ್ದಾರೆ.

ವೈರಾಗ್ಯ ಬರುವುದೆಂದರೆ ಅದು ಹೇಗೆ ? ಯಾವ ರೀತಿ ಎಂಬುದನ್ನು ಪರಮಹಂಸರು ಎರಡು ಉದಾಹರಣೆಗಳ ಮೂಲಕ ಸೊಗಸಾಗಿ ವಿವರಿಸುತ್ತಾರೆ.

ಒಂದು: ಒಬ್ಬಾತ ಸ್ನಾನಕ್ಕಾಗಿ ಅಣಿಯಾಗುತ್ತಿದ್ದ. ಅವನ ಭುಜದ ಮೇಲೆ ಟವೆಲ್ ಇತ್ತು. ಆಗ ಅವನ ಮಡದಿ, ‘ನಿಮಗೆ ವಯಸ್ಸಾಗುತ್ತಾ ಬರುತ್ತಿದೆ. ಆದರೂ ಪ್ರಾಪಂಚಿಕ ಆಸೆ ಲಾಲಸೆಗಳಿಂದ ಮುಕ್ತರಾಗುತ್ತಿಲ್ಲ. ಆ ನೆರೆ ಮನೆಯವನನ್ನು ನೋಡಿ, ಅವನು ಎಂತಹ ತ್ಯಾಗಿ! ಅವನಿಗೆ ಅನೇಕ ಮಡದಿಯರು ಇದ್ದರು. ಒಬ್ಬೊಬ್ಬರನ್ನಾಗಿ ಅವರನ್ನು ಬಿಡುತ್ತಿರುವನು, ನೀವು ಮಾತ್ರ ಇನ್ನೂ ಈ ಪ್ರಾಪಂಚಿಕತೆಯ ಸುಳಿಯಲ್ಲಿಯೇ ಇರುವಿರಿ. ನಿಮಗೆ ಆ ರೀತಿ ಎಲ್ಲವನ್ನೂ ಬಿಡಲು ಸಾಧ್ಯವೇ? ಖಂಡಿತ ಇಲ್ಲ’ ಎಂದು ಮೂದಲಿಸಿದಳು. ಅದಕ್ಕೆ ಗಂಡ, ‘ಒಬ್ಬೊಬ್ಬರನ್ನಾಗಿ ಅವನು ಬಿಡುತ್ತಿರುವನೇ? ನೀನು ಹುಚ್ಚಿ, ಸ್ವಲ್ಪ ಸ್ವಲ್ಪವಾಗಿ ಯಾರಾದರೂ ತ್ಯಾಗ ಮಾಡಲು ಸಾಧ್ಯವೇ?’ ಎಂದ. ಆದರೂ ‘ಅವನು ನಿಮಗಿಂತ ಮೇಲು’ ಎಂದು ಹೀಯಾಳಿಸುತ್ತಾಳೆ ಮಡದಿ. ಗಂಡ ಹೇಳಿದ: ‘ನೀನು ಮಂದಮತಿ, ಅವನಿಂದ ತ್ಯಾಗ-ವೈರಾಗ್ಯ ಸಾಧ್ಯವಿಲ್ಲ, ಆದರೆ ಅದು ನನಗೆ ಸಾಧ್ಯ, ನೋಡು ನಾನು ಈಗಲೇ ಹೊರಟೇ ಹೋಗುತ್ತೇನೆ’ ಎಂದು ಸ್ನಾನದ ಟವೆಲ್ ಹಾಕಿಕೊಂಡ ಸ್ಥಿತಿಯಲ್ಲಿಯೇ ಹೊರಟುಬಿಟ್ಟ. ಅದೇನೇ ತೀವ್ರ ವೈರಾಗ್ಯ. ಅವನು ಮನಸ್ಸು ಮಾಡಿದೊಡನೆ ಅದನ್ನು ಮಾಡಿದ. ಅವನು ಹೊರಟೇ ಹೋದ. ತನ್ನ ಸಂಸಾರಕ್ಕಾಗಿ ಯಾವ ವ್ಯವಸ್ಥೆಯನ್ನೂ ಮಾಡುವುದಕ್ಕೆ ಹೋಗಲಿಲ್ಲ. ಯಾರ ಕಡೆಯೂ ನೋಡಲಿಲ್ಲ. ಸ್ನಾನಕ್ಕೆ ಹೋಗುವ ಬದಲು, ನೇರವಾಗಿ ಗೃಹಗಳಾದಿಗಳನ್ನೂ ಲೆಕ್ಕಿಸದೆ ಸುಮ್ಮನೆ ನಡೆದು ಹೊರಟ. ಯಾರು ತ್ಯಾಗ ಮಾಡಬೇಕೆಂದು ಇಚ್ಛಿಸುವರೋ ಅವರು ಅದ್ಭುತವಾದ ಇಚ್ಛಾಶಕ್ತಿಯನ್ನು ಹೊಂದಿರಬೇಕು. ಇದೇ ನಿಜವಾದ ವೈರಾಗ್ಯ.

ಎರಡು: ಪರಮಹಂಸರು ಈ ಅಂಶವನ್ನು ಮತ್ತೂ ಸುಂದರವಾಗಿ ಅಂದರೆ ಜೀವನದ ಗುರಿ ಭಗವತ್ ಸಾಕ್ಷಾತ್ಕಾರ ಎಂಬುದನ್ನು ಇನ್ನೊಂದು ಉದಾಹರಣೆಯ ಮೂಲಕ ಸ್ಪಷ್ಟವಾಗಿಸುತ್ತಾರೆ. ಅದೇ ಹೋಮ ಪಕ್ಷಿಯ ಕಥೆ. ವೇದಗಳಲ್ಲಿ ಹೋಮ ಹಕ್ಕಿಯ ಕಥೆ ಇದೆ. ಅದು ಆಗಸದಲ್ಲಿ ಬಹು ಎತ್ತರದಲ್ಲಿರುತ್ತದೆ. ಅಲ್ಲಿಯೇ ತಾಯಿ ಹಕ್ಕಿ ಮೊಟ್ಟೆಯನ್ನು ಇಡುತ್ತದೆ. ಅದು ಎಷ್ಟು ಎತ್ತರದಲ್ಲಿರುತ್ತದೆ ಎಂದರೆ ಆ ಮೊಟ್ಟೆ ಕೆಳಗೆ ಬೀಳುತ್ತಿರುವಾಗಲೇ ಮೊಟ್ಟೆ ಒಡೆದು ಮರಿ ಹೊರಬಂದು ಕೆಳಗೆ ಬೀಳತೊಡಗುತ್ತದೆ. ಅಷ್ಟರಲ್ಲೇ ಮರಿಗೆ ಕಣ್ಣು ಬಂದು, ಕಣ್ಣು ಬಿಡುತ್ತದೆ. ಭೂಮಿಯ ಹತ್ತಿರ ಧಾವಿಸುವಾಗ ಭೂಮಿಗೆ ಅಪ್ಪಳಿಸಿದರೆ ಸಾವು ನಿಶ್ಚಿತ ಎಂಬುದನ್ನು ಅರಿತು ಜೋರಾಗಿ ಕೂಗಿ ಆಗಸದಲ್ಲಿರುವ ತನ್ನ ತಾಯಿಯ ಕಡೆೆ ಹಾರಲಾರಂಭಿಸುತ್ತದೆ. ಆ ಪುಟ್ಟ ಮರಿ ತನ್ನ ತಾಯಿಯನ್ನು ಹೊರತಾಗಿ ಬೇರೆಲ್ಲಿಯೂ ಗಮನವಿಡದೆ ಕೇವಲ ತಾಯಿಯನ್ನು ಪಡೆಯಲು ಮೇಲೆ ಮೇಲೆ ಹಾರುತ್ತಾ ಬರುತ್ತದೆ.

ಈ ಎರಡು ಅಂಶವನ್ನು ವಿವರಿಸುತ್ತಾ ರಾಮಕೃಷ್ಣ ಪರಮಹಂಸರು, ದೈವಾಂಶವನ್ನು ಪಡೆದು ಹುಟ್ಟುವವರಿಗೆ ಪ್ರಪಂಚದ ಸನಿಹವೇ ಭಯವೆನಿಸುತ್ತದೆ. ಹೇಗೆ ಪುಟ್ಟ ಮರಿ ತಾಯಿಯ ಸನಿಹಕ್ಕೆ ಹಾರುತ್ತದೆಯೋ ಹಾಗೆಯೇ ಜ್ಞಾನ-ವೈರಾಗ್ಯವುಳ್ಳ ದೈವಾಂಶ ಸಂಭೂತರು ಭಗವಂತನೆಡೆಗೆ, ಪರಬ್ರಹ್ಮ ತತ್ವದೆಡೆಗೆ ಜಿಗಿಯುತ್ತಾರೆ ಎಂಬುದನ್ನು ವಿವರಿಸುತ್ತಾರೆ. ಇದೇ ನಿಜವಾದ ವೈರಾಗ್ಯದ ಲಕ್ಷಣ. ಕೇವಲ ಪ್ರಪಂಚವನ್ನು ದೈಹಿಕವಾಗಿ ತ್ಯಜಿಸುವುದಲ್ಲ, ಬದಲಾಗಿ ಮಾನಸಿಕವಾಗಿಯೂ ಪ್ರಾಪಂಚಿಕತೆಯಿಂದ ಸಂಪೂರ್ಣ ದೂರವಿರಬೇಕು. ಭಗವಂತನನ್ನೇ ಸರ್ವಸ್ವ ಎಂದು ಅರಿತು ಭಗವಂತನೆಡೆಗೆ ಧಾವಿಸುವುದೇ ನಿಜ ಅರ್ಥದಲ್ಲಿ ವೈರಾಗ್ಯ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)