ನ್ಯೂಸ್

‘ವಿಜಯವಾಣಿ’ ಎಜುಕೇಷನ್ ಎಕ್ಸ್‌ಪೋನಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ: ಕೆ.ವೆಂಕಟೇಶ್

ಮೈಸೂರು: ‘ವಿಜಯವಾಣಿ’ ಹಮ್ಮಿಕೊಂಡಿರುವ ಎಜುಕೇಷನ್ ಎಕ್ಸ್‌ಪೋನಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದರು.

ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಎಜುಕೇಷನ್ ಎಕ್ಸ್‌ಪೋಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ವಿಜಯವಾಣಿ ಪತ್ರಿಕೆ ಈ ಮೇಳದ ಮೂಲಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ನಂತರ ಏನು ಓದಬೇಕು? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶ ಮಾಡುತ್ತಿದೆ. ಎಕ್ಸ್‌ಪೋನಲ್ಲಿ ಮೈಸೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಭಾಗವಹಿಸಿದ್ದು, ಯಾವ ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್‌ಗಳಿವೆ? ಯಾವ ಕೋರ್ಸ್ ಮಾಡಿದರೆ ಏನೆಲ್ಲ ಉಪಯೋಗ ಎನ್ನುವ ವಿಷಯವನ್ನು ತಿಳಿಸುತ್ತಿವೆ. ಇದು ನಮ್ಮ ಭಾಗದ ವಿದ್ಯಾರ್ಥಿಗಳಿಗೆ ವಿಜಯವಾಣಿ ಪತ್ರಿಕೆ ನೀಡುತ್ತಿರುವ ಸದಾವಕಾಶ ಎಂದು ಶ್ಲಾಘಿಸಿದರು.

ಕಾಲೇಜುಗಳನ್ನು ಹುಡುಕಿಕೊಂಡು ಹೋಗಿ ಮಾಹಿತಿ ಕಲೆ ಹಾಕುವುದು ಕಷ್ಟಕರ. ಆದರೆ, ಎಜುಕೇಷನ್ ಎಕ್ಸ್‌ಪೋಗೆ ಆಗಮಿಸಿದರೆ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಇಂತಹ ಕಾರ್ಯಕ್ರಮ ಆಯೋಜಿಸಿರುವ ವಿಜಯವಾಣಿ ಪತ್ರಿಕೆಯನ್ನು ಅಭಿನಂದಿಸುವೆ. ಇಂತಹ ಎಕ್ಸ್‌ಪೋಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದರು.