ಅಭಿವೃದ್ಧಿಯ ಪಯಣದಲ್ಲಿ ಹಳ್ಳಿಗಳು ಕ್ರಮಿಸಬೇಕಾಗಿರುವ ಮಾರ್ಗ ಇನ್ನೂ ಸುದೀರ್ಘ. ಕೆಲ ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಪ್ರಸಕ್ತ ಹಲವು ಸುಧಾರಣೆಗಳು ಆಗಿರುವುದು ಹೌದಾದರೂ, ಮಹತ್ವದ ಕೆಲಸಗಳು ಆಗಬೇಕಿವೆ. ಕೊರತೆಗಳು ಕಣ್ಣಿಗೆ ರಾಚುವಂತಿವೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಸೌಕರ್ಯಗಳು ಸಮರ್ಪಕವಾಗಿ ತಲುಪಬೇಕಿವೆ. ಅಲ್ಲಿಯ ಜನರ ಜೀವನಸ್ತರ ಸುಧಾರಣೆ ಆಗಬೇಕಿದೆ. ಗ್ರಾಮಗಳನ್ನು ಅಭಿವೃದ್ಧಿಯ ಮುಖ್ಯ ಕೇಂದ್ರಗಳನ್ನಾಗಿಸಲು ಈಗ ಸಾಕಷ್ಟು ಅವಕಾಶಗಳಿದ್ದು, ಸರ್ಕಾರ ಅನುದಾನ ಸೇರಿದಂತೆ ಇತರ ಬೆಂಬಲವನ್ನೂ ನೀಡುತ್ತಿದೆ. ಹೀಗಿರುವಾಗ ಹಳ್ಳಿಗಳ ಸುಧಾರಣೆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಪ್ರಮುಖ. ಅವು ಪ್ರಬಲ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಿದರೆ ಗ್ರಾಮಗಳು ಕೊರತೆ, ಸಮಸ್ಯೆಯಿಂದ ಮುಕ್ತವಾಗಿ, ಸುಧಾರಣೆಯ ಹಾದಿಯಲ್ಲಿ ಸಾಗಬಲ್ಲವು. ಇದಕ್ಕೆ ಪೂರಕವಾಗಿ ಪರಿಣಮಿಸಬಲ್ಲ ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಇಂದು (ಗುರುವಾರ) ಚಾಲನೆ ಸಿಗಲಿದೆ. 75ನೇ ಸ್ವಾತಂತ್ರೊ್ಯೕತ್ಸವ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆ ಘೋಷಿಸಿದ್ದರು.
ರಾಜ್ಯದಲ್ಲಿ 6008 ಗ್ರಾಪಂಗಳಿದ್ದು, ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿ ಪ್ರಸಕ್ತ ಯೋಜನೆಗೆ ಗ್ರಾಮಗಳನ್ನು ಆಯ್ಕೆ ಮಾಡಲಿದೆ. 750 ಗ್ರಾಮ ಪಂಚಾಯಿತಿಗಳಲ್ಲಿ ಬೀದಿದೀಪಗಳ ಅಳವಡಿಕೆ, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು, ಶೇಕಡ 100 ಘನತ್ಯಾಜ್ಯ ವಿಂಗಡಣೆ, ವಿಲೇವಾರಿ, ತ್ಯಾಜ್ಯನೀರಿನ ವೈಜ್ಞಾನಿಕ ವಿಸರ್ಜನೆ, ಸೌರವಿದ್ಯುತ್ ಅಳವಡಿಕೆಗೆ ಒತ್ತು ನೀಡಲಾಗುತ್ತದೆ. ಅಲ್ಲದೆ, ಸುಸಜ್ಜಿತ ಶಾಲೆ, ಅಂಗನವಾಡಿ, ಉದ್ಯಾನ ನಿರ್ಮಾಣ ಇತ್ಯಾದಿ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿ ಹಾಗೂ ಕೆರೆ-ಕಟ್ಟೆಗಳ ಪುನಶ್ಚೇತನ ಕೈಗೊಳ್ಳಲಾಗುತ್ತದೆ. ಉದ್ದೇಶಿತ ಎಲ್ಲ ಕಾಮಗಾರಿಗಳನ್ನು ಮಾರ್ಚ್ 2022ರೊಳಗೆ ಸಮರ್ಪಕವಾಗಿ ಅನುಷ್ಠಾನ ಮಾಡುವ ಗ್ರಾಪಂಗೆ 25 ಲಕ್ಷ ರೂ. ಇನ್ಸೆಂಟಿವ್ ರೂಪದಲ್ಲಿ ಅನಿರ್ಬಂಧಿತ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಲು ನಿರ್ಧರಿಸಿರುವುದು ಗಮನಾರ್ಹ. ಗ್ರಾಮೀಣ ಪ್ರದೇಶಕ್ಕೆ ಅವಶ್ಯವಾಗಿರುವ ಬಹುತೇಕ ಎಲ್ಲ ಅಂಶಗಳನ್ನು ‘ಅಮೃತ’ ಯೋಜನೆ ಒಳಗೊಂಡಿದೆ. ಇದರಿಂದ. ಮೂಲಸೌಕರ್ಯ ಅಭಿವೃದ್ಧಿಗೊಂಡು, ಹಳ್ಳಿಗಳ ಆರ್ಥಿಕ ಶಕ್ತಿ ಹೆಚ್ಚಲು ಅನುಕೂಲವಾಗಲಿದೆ. ಯೋಜನೆಯ ಸ್ವರೂಪ, ಅದರ ಆಶಯವೇನೋ ಉತ್ತಮವಾಗಿದೆ. ಆದರೆ, ಬಹಳಷ್ಟು ಗ್ರಾಮ ಪಂಚಾಯಿತಿಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅವ್ಯವಹಾರದಂಥ ಅಪಸವ್ಯಗಳಿಂದಲೇ ಸುದ್ದಿಯಲ್ಲಿವೆ. ಅನುದಾನ ದುರ್ಬಳಕೆ, ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಕುಂಟುತ್ತ ಸಾಗುವುದು, ಗುಣಮಟ್ಟ ಕಾಪಾಡಿಕೊಳ್ಳದಿರುವುದು ಹೀಗೆ ಹಲವು ಸಮಸ್ಯೆಗಳು ಈ ಹಿಂದಿನ ಯೋಜನೆಗಳ ನೈಜೋದ್ದೇಶವನ್ನೇ ಹಾಳುಗೆಡವಿವೆ.
ಈ ಬಾರಿಯೂ ಮತ್ತೆ ಆ ಸ್ಥಿತಿ ಮರುಕಳಿಸಬಾರದು. ಸ್ವಾತಂತ್ರ್ಯಪ್ರಾಪ್ತಿಯ 75 ವರ್ಷದ ಹಿನ್ನೆಲೆಯಲ್ಲಿ ಹಳ್ಳಿಗಳ ಚಹರೆ ಬದಲಾಗಬೇಕೆಂಬ ಕಳಕಳಿ ಈಡೇರಬೇಕು. ಇದಕ್ಕಾಗಿ ಕಾಮಗಾರಿಗಳ ಅನುಷ್ಠಾನ, ಗುಣಮಟ್ಟದ ಕಡೆಗೆ ಗಮನ ನೀಡಬೇಕು. ಯೋಜನೆ ಜಾರಿ ನಿಟ್ಟಿನಲ್ಲಿ ಗ್ರಾಪಂಗಳಿಗೆ ಸ್ಪಷ್ಟ ನಿಯಮಾವಳಿ ರೂಪಿಸಿ, ಅವ್ಯವಹಾರಕ್ಕೆ ಆಸ್ಪದವಾಗದಂತೆ ಮಾಡಬೇಕು. ಆಗಲೇ ಗ್ರಾಮಗಳ ಆತ್ಮವಿಶ್ವಾಸ ಹೆಚ್ಚಿ, ನಿಜಾರ್ಥದಲ್ಲಿ ಅಭಿವೃದ್ಧಿ ಕಾಣುವಂತಾಗುತ್ತದೆ.