ನ್ಯೂಸ್

ಸಂಪಾದಕೀಯ: ಮತ್ತಷ್ಟು ಗಟ್ಟಿಗೊಂಡ ಸ್ನೇಹ

ಬಹುನಿರೀಕ್ಷಿತ ಮತ್ತು ಅಷ್ಟೇ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಎರಡು ದಿನಗಳ ಭಾರತ ಭೇಟಿ ಮಂಗಳವಾರ ಸಂಪನ್ನಗೊಂಡಿದೆ. ಈ ಭೇಟಿಯ ಫಲಶ್ರುತಿಯೇನು, ಯಾವೆಲ್ಲ ಕ್ಷೇತ್ರಗಳಲ್ಲಿ ಒಪ್ಪಂದಗಳು ಏರ್ಪಡಲಿವೆ ಎಂಬ ಕುತೂಹಲಕ್ಕೂ ತೆರೆ ಬಿದ್ದಿದ್ದು, ಸಕಾರಾತ್ಮಕ ಫಲಿತಾಂಶವೇ ಹೊರಹೊಮ್ಮಿದೆ. ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಹೈದರಾಬಾದ್ ಹೌಸ್​ನಲ್ಲಿ ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಅವುಗಳ ವಿವರ ನೀಡಿದರು. ಮೂರು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಸೇರಿ ಮೂರು ಒಪ್ಪಂದ ಏರ್ಪಟ್ಟಿವೆ. ವಿಶ್ವದ ಅತ್ಯಾಧುನಿಕ ಅಪಾಚಿ ಎಂಎಚ್-60 ಹೆಲಿಕಾಪ್ಟರನ್ನು ಅಮೆರಿಕದಿಂದ ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ. ಆರೋಗ್ಯ ಉಪಕರಣಗಳು, ರಕ್ಷಣೆ, ತೈಲಕ್ಷೇತ್ರದಲ್ಲಿ ಸಹಕಾರದ ಒಡಂಬಡಿಕೆ ಏರ್ಪಟ್ಟಿರುವುದು ಗಮನಾರ್ಹ. ಅಲ್ಲದೆ, ಅಮೆರಿಕ ಆರು ಪರಮಾಣು ರಿಯಾಕ್ಟರ್​ಗಳನ್ನು ಭಾರತಕ್ಕೆ ಪೂರೈಕೆ ಮಾಡಲಿದೆ. ‘ರಕ್ಷಣೆ ಮತ್ತು ಭದ್ರತೆ, ಇಂಧನ ಕ್ಷೇತ್ರದಲ್ಲಿ ಸಹಭಾಗಿತ್ವ ಕಾರ್ಯತಂತ್ರ ಕುರಿತು ಮಹತ್ವದ ಮತ್ತು ಸಕಾರಾತ್ಮಕ ಚರ್ಚೆ ನಡೆದಿದೆ’ ಎಂದು ಮೋದಿ ವಿಶ್ವಾಸದಿಂದ ಹೇಳಿದ್ದು, ಹಲವು ರಂಗಗಳಲ್ಲಿ ಬಾಂಧವ್ಯವೃದ್ಧಿ ಆಗಿರುವುದರ ದ್ಯೋತಕ. ಟ್ರಂಪ್ ಸೋಮವಾರ ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ಮಾತನಾಡುತ್ತ ವ್ಯಾಪಾರ ನೀತಿಗೆ ಸಂಬಂಧಿಸಿದ ಒಪ್ಪಂದವೂ ಏರ್ಪಡುವುದರ ಸುಳಿವು ನೀಡಿದ್ದರು. ಆ ಕುರಿತು ಅಂಕಿತ ಬಿದ್ದಿಲ್ಲವಾದರೂ, ಮುಂದಿನ ದಿನಗಳಲ್ಲಿ ಆ ಬಗೆಯ ಒಪ್ಪಂದ ಆಗಲಿದೆ ಎಂದು ಮೋದಿ ಸೂಚ್ಯವಾಗಿ ಹೇಳಿದ್ದಾರೆ. ಮುಕ್ತ ವ್ಯಾಪಾರ ನೀತಿಯ ಬಗ್ಗೆ ಉಭಯ ಮುಖಂಡರು ಪ್ರಮುಖವಾಗಿ ಚರ್ಚೆ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ-ಅಮೆರಿಕ ನಡುವಿನ ವಾಣಿಜ್ಯ ವಹಿವಾಟು ಏರಿಕೆ ಆಗಿರುವುದು ಕೂಡ ಟ್ರಂಪ್ ಉತ್ಸಾಹವನ್ನು ಹೆಚ್ಚಿಸಿದೆ.

ಮತ್ತೊಂದು ಪ್ರಮುಖ ಅಂಶ ಭಯೋತ್ಪಾದನೆಗೆ ಸಂಬಂಧಿಸಿದ್ದು. ಭಯೋತ್ಪಾದನೆ ವಿರೋಧಿ ಸಮರವನ್ನು ತೀವ್ರಗೊಳಿಸಬೇಕೆಂದು ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ದನಿ ಎತ್ತಿದೆ. ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳು ಸೇರಿ ಭಯೋತ್ಪಾದನೆಯನ್ನು ಅಂತ್ಯಗೊಳಿಸಲು ಪಾಕಿಸ್ತಾನದ ಮೇಲೆ ಒತ್ತಡ ಹಾಕಲು ಮುಂದಾಗಿವೆ. ಇದರಿಂದ, ಪಾಕ್​ನ ಸಂಕಷ್ಟ ಹೆಚ್ಚಿದ್ದರೆ, ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ.

ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಬರೀ ಎರಡು ಸರ್ಕಾರಗಳ ನಡುವಿನ ಸಂಬಂಧವಲ್ಲ; ಅದು ಜನಕೇಂದ್ರಿತವಾದದ್ದು ಎಂಬ ಮಾತನ್ನು ಪ್ರಧಾನಿ ಮೋದಿ ಹೇಳಿದ್ದು, ಅಮೆರಿಕ ಕೂಡ ಈ ದಿಕ್ಕಿನಲ್ಲಿ ಸಾಗಿದೆ. ಒಟ್ಟಾರೆ ಈ ಭೇಟಿ ಹೊಸ ಭರವಸೆಯೊಂದಿಗೆ 21ನೇ ಶತಮಾನದಲ್ಲಿ ಜತೆಯಾಗಿ ಸಾಗಿದರೆ ಮಹತ್ವದ್ದನ್ನು ಸಾಧಿಸಬಹುದು ಎಂಬ ಸಂದೇಶವನ್ನು ರವಾನಿಸಿದೆ.