ಗಾಯನ ಕ್ಷೇತ್ರದ ದಿಗ್ಗಜ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಾಂಸ್ಕೃತಿಕ ಲೋಕದ ದೊಡ್ಡ ಶಕ್ತಿ. ಸಂಗೀತದ ಸವಿ, ಮಾಧುರ್ಯವನ್ನು 56 ವರ್ಷಗಳ ಕಾಲ ಅಸಂಖ್ಯ ಹೃದಯಗಳಿಗೆ ತಲುಪಿಸಿದ ಅವರ ಪ್ರತಿಭೆ ಅನನ್ಯ. ಕರೊನಾದಿಂದ ಆಸ್ಪತ್ರೆಗೆ ದಾಖಲಾದಾಗ ಅಲ್ಲೂ ಜೀವನಸ್ಪೂರ್ತಿ ಮೆರೆದು ‘ಬೇಗ, ಹುಷಾರಾಗಿ ಬರ್ತೀನಿ, ಚಿಂತೆ ಬೇಡ. ಸಣ್ಣ ಲಕ್ಷಣಗಳಿವೆಯಷ್ಟೇ’ ಎಂದು ವಿಡಿಯೋ ಮಾಡಿ ಎಲ್ಲರನ್ನೂ ಹುರಿದುಂಬಿಸಿದ್ದ ಎಸ್ಪಿಬಿ, ಬೇಗ ಹುಷಾರಾಗಿ ಬರುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅವರ ಚೇತರಿಕೆಗಾಗಿ ದೇಶಾದ್ಯಂತ ಪೂಜೆ, ಪ್ರಾರ್ಥನೆಗಳು ನಡೆದ ಪರಿ ಎಸ್ಪಿಬಿ ಮೇಲೆ ಜನರಿಗಿರುವ ಪ್ರೀತಿ ಅಭಿಮಾನಕ್ಕೆ ಸಾಕ್ಷಿ. ಆದರೆ, ವಿಧಿಯ ಲೆಕ್ಕಾಚಾರವೇ ಬೇರೆಯಾಗಿತ್ತು. ಶುಕ್ರವಾರ ಮಧ್ಯಾಹ್ನ ಅವರು ಇಹಲೋಕ ತ್ಯಜಿಸಿದರು ಎಂಬ ಸುದ್ದಿ ಸಂಗೀತ ಸೇರಿ ಇಡೀ ಸಾಂಸ್ಕೃತಿಕ ಲೋಕವನ್ನು ಶೋಕದಲ್ಲಿ ಮುಳುಗಿಸಿದೆ. ಎಲ್ಲರ ಎದೆಯಾಳದಿಂದ ನೂರೊಂದು ನೆನಪುಗಳು ಹೊರಹೊಮ್ಮುತ್ತಿವೆ.
ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ತುಳು ಸೇರಿ 16ಕ್ಕೂ ಅಧಿಕ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ, 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ ಎಸ್ಪಿಬಿ ಭಕ್ತಿ, ಪ್ರೇಮ, ಪ್ರಣಯ, ವಿಷಾದ, ಶೃಂಗಾರ-ಹೀಗೆ ಎಲ್ಲ ಪ್ರಕಾರಗಳಲ್ಲೂ ಹಾಡಿದರು. ಸಂಗೀತವನ್ನೇ ಉಸಿರಾಗಿಸಿಕೊಂಡು, ಎತ್ತರದ ಸಾಧನೆ ಮಾಡಿದರೂ ಮಗುವಿನಂಥ ಮುಗ್ಧತೆ, ಕಿರಿಯರಿಗೆ ತಾಳ್ಮೆಯಿಂದ ಹೇಳಿಕೊಡುವ ಸಹೃದಯತೆ, ವಿನಯಶೀಲ ವ್ಯಕ್ತಿತ್ವ ಬೆರಗು ಮೂಡಿಸುತ್ತವೆ. ಮೂರು ತಲೆಮಾರಿನ ನಾಯಕನಟರಿಗೆ ದನಿಯಾದ ಅವರು, ‘ಶಂಕರಾಭರಣಂ’ ಸಿನಿಮಾದಲ್ಲಿ ಶುದ್ಧ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಹಾಡನ್ನೂ ಮನೋಜ್ಞವಾಗಿ ಹಾಡಿ, ಸೈ ಎನಿಸಿಕೊಂಡಿದ್ದು ಮಾತ್ರವಲ್ಲ, ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. ಸಂಗೀತಕ್ಕೆ ಭಾಷೆಯ ಹಂಗಿಲ್ಲ ಎಂಬುದನ್ನು ರುಜುವಾತು ಮಾಡಿ, ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲೂ ತಮ್ಮ ಗಾನಮಾಧುರ್ಯದಿಂದ ಮೋಡಿ ಮಾಡಿದರು. ಕನ್ನಡದಲ್ಲೇ ಅವರು ಹಾಡಿರುವ ಹಾಡುಗಳ ಸಂಖ್ಯೆ 4 ಸಾವಿರಕ್ಕೂ ಅಧಿಕ. ಸಂಖ್ಯಾತ್ಮಕವಾಗಿ ಅಷ್ಟೇ ಅಲ್ಲ ಈ ಹಾಡುಗಳು ಗುಣಾತ್ಮಕವಾಗಿಯೂ ಮೂಡಿಬಂದು, ‘ಹಿಟ್’ ಎಂಬ ಪಟ್ಟವನ್ನು ಕಟ್ಟಿಕೊಂಡು ಶ್ರೀಸಾಮಾನ್ಯರ ನಾಲಿಗೆಯಲ್ಲೂ ನಲಿಯತೊಡಗಿದವು.
ಅವರು ಅರ್ಧ ಶತಮಾನ ಕಾಲ ಹಾಡಿದರೂ, ಯಾವುದೇ ವೇದಿಕೆ ಮೇಲೆ ಹಾಡುವ ಮುಂಚೆ ಒಂದಿಷ್ಟು ಹೊತ್ತು ಅಭ್ಯಾಸ ಮಾಡುವುದನ್ನು ಮರೆಯುತ್ತಿರಲಿಲ್ಲ. ಸ್ಪಷ್ಟ ಉಚ್ಚಾರಣೆ ಬಗ್ಗೆ ವಿಶೇಷ ಗಮನ ನೀಡುತ್ತಿದ್ದ ಅವರು, ಸಹಗಾಯಕರಿಗೂ ಈ ಬಗ್ಗೆ ಒತ್ತುಕೊಟ್ಟು ಹೇಳುತ್ತಿದ್ದರು. ನಾಯಕನಟರ ವಯಸ್ಸು, ಭಾವಕ್ಕೆ ತಕ್ಕಂತೆ ಹಾಡುವುದು ಅವರಿಗೆ ಸಿದ್ಧಿಸಿತ್ತು. ಎಸ್ಪಿಬಿ ಅವರನ್ನು ಆರಾಧಿಸುವ ಸಂಗೀತ ಕಲಾವಿದರು, ಅಭಿಮಾನಿಗಳು ಲೆಕ್ಕವಿಲ್ಲದಷ್ಟು. ಆದರೂ, ಎಂದಿಗೂ ಅಹಂಕಾರ ಪ್ರವೇಶಿಸಲು ಬಿಡಲಿಲ್ಲ. ‘ನಿಮ್ಮ ಯಶಸ್ಸಿಗೆ ಕಾರಣ ಏನು?’ ಎಂದು ಯಾರಾದರೂ ಕೇಳಿದರೆ, ಮುಗಿಲಿನತ್ತ ಕೈ ಮಾಡಿ, ಎಲ್ಲ ಶ್ರೇಯಸ್ಸನ್ನು ಭಗವಂತನಿಗೆ ಅರ್ಪಿಸುತ್ತಿದ್ದ ಅವರ ವಿನಯಶೀಲತೆ ಅಸಾಧಾರಣವಾದದ್ದು. ಅವರ ಬದುಕು, ಸಾಧನಾಪಥ, ಕೊನೆಯವರೆಗೂ ಮೆರೆದ ಜೀವನಸ್ಪೂರ್ತಿ ಯುವಪೀಳಿಗೆಗೆ ಮಾದರಿ.