ನ್ಯೂಸ್

ಸಂಕಷ್ಟದ ಹೊತ್ತಿನಲ್ಲಿ ವಿಶ್ವಾಸದ ಜಾಗೃತಿ #9ಗಂಟೆ9ನಿಮಿಷ

ಕರೊನಾ ಸೋಂಕು ಉಂಟು ಮಾಡಿರುವ ತಲ್ಲಣದ ವಿರುದ್ಧ ಹೋರಾಡಲು ಇಡೀ ದೇಶ ಒಗ್ಗಟ್ಟಾಗಿದೆ ಮತ್ತು ಈ ಏಕತೆಯೇ ನಮ್ಮನ್ನು ಕಾಪಾಡಲಿದೆ ಎಂಬ ಸಂದೇಶ ಸಾರಲು ಏಪ್ರಿಲ್ 5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಇಡೀ ದೇಶ ಅದ್ಭುತವಾಗಿ ಅಷ್ಟೇ ಭಾವನಾತ್ಮಕವಾಗಿ ಸ್ಪಂದಿಸಿದೆ. ಸಣ್ಣ ಊರುಗಳಿಂದ ಹಿಡಿದು ಮಹಾನಗರಗಳವರೆಗೂ ಜನರು ದೀಪಗಳನ್ನು ಬೆಳಗಿ, ಪ್ರಕಾಶದ ಶಕ್ತಿ ಅಂಧಕಾರವನ್ನು ಕಳೆಯಲಿದೆ ಎಂಬ ಆಶಾವಾದವನ್ನು ಬಲವಾಗಿಸಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿ ಸಂದರ್ಭದಲ್ಲಿ, ಕಾರ್ತಿಕ ಮಾಸದಲ್ಲಿ, ಇತರೆ ಶುಭ ಕಾರ್ಯಗಳ ವೇಳೆ ದೀಪೋತ್ಸವಗಳನ್ನು ನಡೆಸುವುದು, ಅದರಿಂದ ಜನರು ಹೊಸ ವಿಶ್ವಾಸವನ್ನು ಪಡೆದುಕೊಳ್ಳುವುದು ಮುಂಚೆಯಿಂದಲೂ ನಡೆದುಬಂದಿದೆ. ಹೀಗಿರುವಾಗ ಕರೊನಾ ಸಂಕಟದ ಹೊತ್ತಲ್ಲಿ ಪ್ರಧಾನಿ ದೀಪ ಬೆಳಗಲು ಕರೆ ನೀಡಿದಾಗ ಅದಕ್ಕೂ ಆಕ್ಷೇಪ, ಟೀಕೆಗಳು ವ್ಯಕ್ತವಾಗಿದ್ದವು. ದೇಶ ದೊಡ್ಡ ಸಂಕಷ್ಟದ ವಿರುದ್ಧ ಹೋರಾಡುವಾಗ ಏಕದನಿ ಹೊಮ್ಮಬೇಕೇ ಹೊರತು ಇಂಥ ಹೊತ್ತಲ್ಲಿ ರಾಜಕೀಯ, ಮತ್ತಿತರ ಸಂಗತಿಗಳು ಮುಖ್ಯವಾಗಬಾರದು.

21 ದಿನಗಳ ಅವಧಿಗೆ ವಿಧಿಸಲಾಗಿರುವ ದಿಗ್ಬಂಧನ (ಈಗ ಒಂಬತ್ತು ದಿನ ಮಾತ್ರ ಉಳಿದಿದೆ), ಅದರಿಂದ ಉಂಟಾಗಿರುವ ಸ್ಥಿತಿಯಿಂದ ಅದೆಷ್ಟೋ ಜನರು ಮಾನಸಿಕ ಕ್ಷೋಭೆ ಎದುರಿಸುತ್ತಿದ್ದಾರೆ. ಇಂಥ ಹೊತ್ತಲ್ಲಿ ಯಾರೂ ಏಕಾಂಗಿಯಲ್ಲ, ದೇಶದ 130 ಕೋಟಿ ಜನರು ಒಗ್ಗಟ್ಟಾಗಿದ್ದೇವೆ ಎಂಬ ಭಾವ ಪ್ರಕಟೀಕರಣವೇ ದೀಪಾರಾಧನೆಯ ಮುಖ್ಯ ಉದ್ದೇಶವಾಗಿತ್ತು. ಇದಕ್ಕೆ ಅನನ್ಯವಾಗಿ ಸ್ಪಂದಿಸಿದ ಜನತೆ ಮುಂದಿನ ದಿನಗಳ ಹೋರಾಟಕ್ಕೆ ನವಚೈತನ್ಯ ಪಡೆದುಕೊಂಡಿದ್ದಾರೆ ಎನ್ನಬಹುದು. ಹಿಂದೆಯೂ ಹಲವು ಸಂಕಷ್ಟಗಳು ಬಂದೆರಗಿದ್ದವು. ಈಗಲೂ ಈ ಪರಿಸ್ಥಿತಿಯನ್ನು ಮೀರಿ ನಿಲ್ಲುವ ಇಚ್ಛಾಶಕ್ತಿ ಪ್ರಕಟಗೊಂಡರೆ, ಬಹುಬೇಗ ಚೇತರಿಕೆಯನ್ನು ಕಾಣಬಹುದು.

ಕೇಂದ್ರ, ರಾಜ್ಯ ಸರ್ಕಾರಗಳು, ವೈದ್ಯರು ಶಕ್ತಿಮೀರಿ ಕರೊನಾ ಸೋಂಕು ಹತೋಟಿಗೆ ಶ್ರಮಿಸುತ್ತಿರುವುದು ಗೊತ್ತಿರುವ ಸಂಗತಿಯೇ. ಆದರೆ, ಕೆಲವೆಡೆ ರೋಗಿಗಳು ಚಿಕಿತ್ಸೆಗೆ ಸಹಕಾರ ನೀಡದೆ ವೈದ್ಯರು ಮತ್ತು ಇತರೆ ಆರೋಗ್ಯ ಸಿಬ್ಬಂದಿ ಜತೆ ವಾಗ್ವಾದ ಮಾಡುತ್ತಿರುವುದು, ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವುದು, ವಿಚಿತ್ರ ಬೇಡಿಕೆಗಳನ್ನು ಒಡ್ಡಿ ಮುಜುಗರ ಸೃಷ್ಟಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜೀವ ರಕ್ಷಿಸುವ ವೈದ್ಯರ ಮೇಲೇ ಉಗುಳುವ ಜನರ ಬುದ್ಧಿಗೆ ಏನೆನ್ನಬೇಕು? ವೈದ್ಯರಿಗೂ ಸೋಂಕು ತಗುಲಿಸುವ ಬೆದರಿಕೆ ಒಡ್ಡುತ್ತಿರುವ ಕೆಲ ರೋಗಿಗಳ ನಡೆ ಖಂಡನಾರ್ಹ. ಅಲ್ಲದೆ, ಕೆಲವು ಕಿಡಿಗೇಡಿಗಳು ನೋಟುಗಳಿಗೆ ಎಂಜಲು ಹಚ್ಚುವುದು, ಸಾರ್ವಜನಿಕ ಪ್ರದೇಶದಲ್ಲಿ ಎಲ್ಲಿ ಬೇಕೆಂದರಲ್ಲಿ ಉಗುಳುತ್ತ ಸೋಂಕು ಹಬ್ಬಲಿ ಎಂದು ಯತ್ನಿಸುತ್ತಿರುವುದು ವಿಕೃತ ಮನಸ್ಥಿತಿಯೇ. ಇಡೀ ದೇಶ ಸೋಂಕು ಹರಡದಂತೆ ಯತ್ನಿಸುತ್ತಿರುವಾಗ, ಅದಕ್ಕಾಗಿ ಮನೆಗಳಲ್ಲೇ ಇದ್ದು ದಿಗ್ಬಂಧನ ಪಾಲಿಸುತ್ತಿರುವಾಗ ಕೆಲವರು ಉದ್ದೇಶಪೂರ್ವಕವಾಗಿ ರೋಗ ಹರಡಲು ಯತ್ನಿಸುತ್ತಿರುವುದು ದೇಶವಿರೋಧಿ ಕೃತ್ಯವಲ್ಲವೇ? ಇಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕು, ರೋಗಿಗಳು ಚಿಕಿತ್ಸೆಗೆ ಸಹಕರಿಸುವ ವಿವೇಕ ತೋರಬೇಕು.