ನ್ಯೂಸ್

ಗಡಿಯ ತಲ್ಲಣ ಕರಗಲಿ

ಸಂಕಷ್ಟಗಳು ಬಂದರೆ ಸಾಲುಸಾಲಾಗಿ ಬರುತ್ತವೆ ಎನ್ನುತ್ತಾರಲ್ಲ ಅಕ್ಷರಶಃ ಭಾರತ ಈಗ ಅದೇ ಸ್ಥಿತಿಯನ್ನು ಅನುಭವಿಸುತ್ತಿದೆ. ಕರೊನಾ ಸೋಂಕಿನ ವಿರುದ್ಧವಂತೂ ಹೋರಾಟ ನಡೆದಿದೆ, ಇನ್ನಷ್ಟು ಅವಧಿಗೆ ಅದು ಮುಂದುವರಿಯಲಿರುವುದು ದಿಟ. ಇನ್ನೊಂದೆಡೆ ಲಡಾಖ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೇನಾಪಡೆ ನಿಯೋಜಿಸಿ, ಯುದ್ಧಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ತನ್ನ ಯೋಧರಿಗೆ ಕರೆ ಕೊಟ್ಟಿರುವ ಚೀನಾ, ಸುಖಾಸುಮ್ಮನೆ ಗಡಿವಿವಾದವನ್ನು ಕೆದಕಿದೆ. ಈ ಮೂಲಕ ಉದ್ವಿಗ್ನ ಸ್ಥಿತಿ ಸೃಷ್ಟಿಸಲು ಯತ್ನಿಸಿದೆ. ಅದರ ಈ ತಂತ್ರಗಳಿಗೆ ಭಾರತ ಸಮರ್ಥ ಉತ್ತರವನ್ನೇ ನೀಡುತ್ತಿರುವುದರಿಂದ ಚೀನಾ ಸ್ವಲ್ಪ ಮೆದುವಾದಂತಿದೆ. ಆದರೆ, ಜಮ್ಮು-ಕಾಶ್ಮೀರ ಭಾಗದಲ್ಲಿ ಪಾಕಿಸ್ತಾನ ಭಯೋತ್ಪಾದನೆಯ ರಫ್ತನ್ನು ಮುಂದುವರಿಸಿದೆ. ಬೇಸಿಗೆಯಲ್ಲಿ ಹಿಮ ಕರಗಿದ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು, ಉಗ್ರರನ್ನು ಭಾರತದ ಗಡಿಯೊಳಕ್ಕೆ ನುಸುಳಿಸಲು ಯತ್ನಿಸಿದೆ. ಹಲವು ಎನ್​ಕೌಂಟರ್​ಗಳಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಹೊಡೆದುರಳಿಸಿವೆ. ಆದರೆ, ಗುರುವಾರ ಉಗ್ರರ ದಾಳಿ ಸಂಚು ವಿಫಲಗೊಳಿಸಿರುವ ಭದ್ರತಾ ಪಡೆಗಳಿಗೆ ಭಾರಿ ಯಶಸ್ಸು ಸಿಕ್ಕಿದೆ. ಅಲ್ಲದೆ, ಈ ಪ್ರಶಂಸನೀಯ ಕಾರ್ಯಾಚರಣೆ ನಮ್ಮ ಸೇನೆ, ಸಿಆರ್​ಪಿಎಫ್, ಪೊಲೀಸ್ ಪಡೆಯ ದಕ್ಷತೆ, ಶೌರ್ಯಕ್ಕೆ ಸಾಕ್ಷಿ.

2019 ಫೆಬ್ರವರಿ 14ರಂದು ಜೈಶ್-ಎ-ಮೊಹಮ್ಮದ್ ಸಂಘಟನೆ ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿತ್ತು. 350 ಕೆ.ಜಿ. ಸ್ಪೋಟಕ ಬಳಸಿ ನಡೆಸಲಾದ ಈ ಪೈಶಾಚಿಕ ದಾಳಿಯಲ್ಲಿ 44 ಯೋಧರು ಹುತಾತ್ಮರಾದರು. ಪುಲ್ವಾಮಾ ಮಾದರಿಯಲ್ಲಿ ದಾಳಿಯನ್ನು ನಡೆಸಲು ಹಿಜ್ಬುಲ್ ಮುಜಾಹಿದ್ದೀನ್ ಸಂಚು ರೂಪಿಸಿ, ಕಾರಿನಲ್ಲಿ 50 ಕೆಜಿಗಿಂತ ಹೆಚ್ಚು ಸ್ಪೋಟಕ ಸಾಗಿಸಿತ್ತು. ಬುಧವಾರ ಈ ಮಾಹಿತಿ ದೊರೆತೊಡನೆ ಕಾರಿನ ಪತ್ತೆಗೆ ಮುಂದಾದ ಭದ್ರತಾ ಪಡೆಗಳು ಗುರುವಾರ ಬೆಳಗ್ಗೆ ಆ ವಾಹನವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಸುತ್ತಮುತ್ತಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಿ, ಬಳಿಕ ಕಾರನ್ನು ಸ್ಪೋಟಿಸುವ ಮೂಲಕ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ. ‘ಸಿಆರ್​ಪಿಎಫ್​ನ 400 ಯೋಧರನ್ನು ಬಲಿ ಪಡೆಯುವುದು ಉಗ್ರರ ಸಂಚಾಗಿತ್ತು’ ಎಂದು ಜಮ್ಮು-ಕಾಶ್ಮೀರ ಐಜಿಪಿ ವಿಜಯಕುಮಾರ್ ತಿಳಿಸಿದ್ದಾರೆ.

ಪಾಕಿಸ್ತಾನ ಕೃಪಾಪೋಷಿತ ಭಯೋತ್ಪಾದಕ ಸಂಘಟನೆಗಳು ಮೇಲಿಂದಮೇಲೆ ಇಂಥ ದಾಳಿಗೆ ಯತ್ನಿಸುತ್ತಲೇ ಇವೆ. ಮೇ 3ರಂದು ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಹೈದರ್ ಸೇರಿ ಇಬ್ಬರು ಉಗ್ರರು ಹತರಾದರೆ, ದೇಶ ಐವರು ದಿಟ್ಟ, ಸಾಹಸಿ ಅಧಿಕಾರಿಗಳನ್ನು ಕಳೆದುಕೊಂಡಿತು! ಇದರ ಬೆನ್ನಲ್ಲೇ, ಮೇ 4ರಂದು ಕುಪ್ವಾರಾ ಜಿಲ್ಲೆಯ ಹೆದ್ದಾರಿಯಲ್ಲಿ ಉಗ್ರರ ಗುಂಡಿನ ದಾಳಿಗೆ ಮೂವರು ಸಿಆರ್​ಪಿಎಫ್ ಯೋಧರು ಹುತಾತ್ಮರಾದರು. ಶಾಂತಿ ಕದಡುವ, ಹಿಂಸೆ ಹಬ್ಬುವ ಅವಿರತ ಪ್ರಯತ್ನಗಳು ನಡೆಯುತ್ತಿದ್ದರೆ, ಅವುಗಳಿಗೆ ಅಷ್ಟೇ ದಿಟ್ಟ ಉತ್ತರವನ್ನು ಭಾರತ ನೀಡಿದೆ. ಆದರೆ, ಗಡಿಯಲ್ಲಿನ ಈ ತಲ್ಲಣ ಕರಗಲೇಬೇಕು. ಆ ನಿಟ್ಟಿನಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಂತಾರಾಷ್ಟ್ರೀಯ ವಲಯ ಬಲ ತುಂಬಬೇಕಿದೆ. ಚೀನಾ ಕೂಡ ಗಡಿ ಕ್ಯಾತೆಯನ್ನು ಬದಿಗಿರಿಸಿ, ರಾಜತಾಂತ್ರಿಕ ಸಂಬಂಧಗಳನ್ನು ಗೌರವಿಸಬೇಕಿದೆ. ಮನುಕುಲವೇ ಸಂಕಷ್ಟದಲ್ಲಿ ಇದ್ದರೂ ಕೆಲ ರಾಷ್ಟ್ರಗಳು ಪಾಠ ಕಲಿತಿಲ್ಲ ಎಂಬುದಕ್ಕೆ ಚೀನಾ, ಪಾಕ್​ನ ವರ್ತನೆಗಳು ಸಾಕ್ಷಿ.