ನಿಧಾನವಾಗಿಯಾದರೂ ಸೌದಿ ಅರೇಬಿಯಾ ಬದಲಾವಣೆ ಮತ್ತು ಹೊಸ ಸುಧಾರಣೆಗಳಿಗೆ ತೆರೆದುಕೊಳ್ಳುತ್ತಿದೆ ಎಂಬುದು ಕೊಂಚ ಸಮಾಧಾನ ನೀಡುವ ಸಂಗತಿ. ಹಳೆಯ ನಿಯಮ, ಪದ್ಧತಿಗಳು ಅಲ್ಲಿಯ ಜನರನ್ನು ಮಾತ್ರವಲ್ಲ ವಲಸಿಗರನ್ನೂ ಉಸಿರುಗಟ್ಟಿಸುತ್ತಿರುವುದು ವಾಸ್ತವ. ಜಗತ್ತಿನ ಬಹುತೇಕ ದೇಶಗಳಲ್ಲಿ ಸೌದಿ ಸುತ್ತಮುತ್ತಲ ಇಸ್ಲಾಂ ದೇಶಗಳು ಕೂಡ ಬದಲಾವಣೆಯತ್ತ ಮುಖ ಮಾಡಿರುವ ಪರಿಣಾಮ, ಈ ದೇಶ ಕೂಡ ಆ ನಿಟ್ಟಿನ ಪಯಣ ಆರಂಭಿಸಿದೆ ಎನ್ನಬಹುದು.
ವಲಸೆ ಕಾರ್ವಿುಕರ ಶೋಷಣೆ ತಪ್ಪಿಸಲು ಪೂರಕವಾಗುವಂತೆ ಕಾರ್ವಿುಕ ಕಾನೂನುಗಳಲ್ಲಿ ಸುಧಾರಣೆ ತರುವುದಾಗಿ ಸೌದಿ ಅರೇಬಿಯಾ ಸರ್ಕಾರ ಬುಧವಾರ ಪ್ರಕಟಿಸಿದೆ. ಹೀನಾಯ ವಾತಾವರಣದಲ್ಲಿ ನರಳಿ ಉದ್ಯೋಗದಾತರ ಶೋಷಣೆಗೆ ಒಳಗಾಗುವ ಭಾರತ ಸಹಿತ ವಿವಿಧ ದೇಶಗಳ ಕೋಟ್ಯಂತರ ಕಾರ್ವಿುಕರಿಗೆ ಇದರಿಂದ ಒಂದಿಷ್ಟಾದರೂ ನಿರಾಳತೆ ಸಿಗಲಿದೆ. ಸೌದಿಯಲ್ಲಿ 41 ಲಕ್ಷ ಭಾರತೀಯರು ನೆಲೆಸಿದ್ದಾರೆ (ಅಲ್ಲಿಯ ಒಟ್ಟು ಜನಸಂಖ್ಯೆಯ ಶೇ.13ರಷ್ಟು). ಇವರಲ್ಲಿ ಬಹುತೇಕರು ಕಾರ್ವಿುಕರೇ. ಆದರೆ, ಈ ಸುಧಾರಣೆಯಿಂದ ಎಲ್ಲವೂ ಬದಲಾಗಿ ಬಿಡುತ್ತದೆ ಎಂದೇನಲ್ಲ. ಏಕೆಂದರೆ, ‘ಕಫಲಾ’ ಪದ್ಧತಿ ಪೂರ್ಣಪ್ರಮಾಣದಲ್ಲಿ ಕೊನೆಗೊಂಡಿಲ್ಲ. ಇದೊಂದು ಪ್ರಾಯೋಜಕತ್ವ ವ್ಯವಸ್ಥೆ. ವಿದೇಶಿ ಕಾರ್ವಿುಕರು ಅಂಥ ಪ್ರಾಯೋಜಕತ್ವದ ಉದ್ಯೋಗದಾತರಿಗೆ ಕಾನೂನುಬದ್ಧವಾಗಿ ಅಧೀನದಲ್ಲಿ ಇರಬೇಕಾಗುತ್ತದೆ. ಈ ವ್ಯವಸ್ಥೆಯ ವ್ಯಾಪಕ ದುರ್ಬಳಕೆಯಿಂದ ಅಲ್ಲಿನ ಕಾರ್ವಿುಕರು ನಲುಗಿ ಹೋಗಿದ್ದಾರೆ. ಪಾಸ್ಪೋರ್ಟ್ಗಳನ್ನು ಇಟ್ಟುಕೊಂಡು, ಅವರಿಂದ ಹೆಚ್ಚುವರಿ ಕೆಲಸ ಮಾಡಿಸುವುದು ಮತ್ತು ವೇತನ ನೀಡದಿರುವಂಥ ಶೋಷಣೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಂಥ ಘಟನೆಗಳು ನಿಲ್ಲುವವರೆಗೂ ಮತ್ತು ಕೆಲಸಕ್ಕೆ ಪೂರಕ ವಾತಾವರಣ ಸೃಷ್ಟಿ ಆಗುವವರೆಗೂ ಶ್ರಮಶಕ್ತಿಗೆ ನಿಜ ಅರ್ಥದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ.
ಯಾವುದೇ ನೌಕರ ತನ್ನ ಉದ್ಯೋಗದಾತ ಪ್ರಾಯೋಜಕರನ್ನು ಬದಲಾಯಿಸಿ, ಬೇರೆ ನೌಕರಿಗೆ ಸೇರಲು ಕಾರ್ವಿುಕ ಕಾನೂನಿನ ಸುಧಾರಣೆ ಅವಕಾಶ ಮಾಡಿಕೊಡಲಿದೆ. ಅಲ್ಲದೆ, ಉದ್ಯೋಗ ಬಿಡಲು, ದೇಶದೊಳಗೆ ಮತ್ತೆ ಪ್ರವೇಶಿಸಲು ಅವಕಾಶ ಕಲ್ಪಿಸುವ ‘ಕಾರ್ವಿುಕ ಸಂಬಂಧ ಉಪಕ್ರಮ’ ಎಂಬ ಸುಧಾರಣೆ 2021ರ ಮಾರ್ಚ್ನಿಂದ ಅನುಷ್ಠಾನಗೊಳ್ಳಲಿದೆ. ಒಟ್ಟು ವಿದೇಶಿ ಕಾರ್ವಿುಕರ ಸಂಖ್ಯೆ 1 ಕೋಟಿಯಷ್ಟಿದ್ದು, ಇವರೆಲ್ಲ ಸೌದಿಯ ಆರ್ಥಿಕತೆ ಹೆಚ್ಚಿಸಲು, ಉದ್ಯಮ ರಂಗ ಸಶಕ್ತವಾಗಲು ಮಹತ್ವದ ಕೊಡುಗೆಯನ್ನು ನೀಡುತ್ತಿದ್ದಾರೆ. ಶ್ರಮಸಂಸ್ಕೃತಿಯನ್ನು ಗೌರವಿಸುವುದು ಯಾವುದೇ ಸಮಾಜದ ಮೂಲಭೂತ ಕರ್ತವ್ಯ ಕೂಡ ಹೌದು. ಇಂಥ ಸುಧಾರಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದಲ್ಲದೆ, ಕಫಲಾ ಪ್ರಾಯೋಜಕತ್ವ ಪದ್ಧತಿಯ ನ್ಯೂನತೆಗಳನ್ನು ಸಂಪೂರ್ಣವಾಗಿ ನಿವಾರಿಸಬೇಕು. ‘ವಿಷನ್ 2030’ ಯೋಜನೆ ಪ್ರಯುಕ್ತ ಸುಧಾರಣೆಯತ್ತ ಮುಖ ಮಾಡಿರುವ ರಾಜಕುಮಾರ ಮಹಮದ್ ಬಿನ್ ಸಲ್ಮಾನ್, ಆ ಪಯಣದಲ್ಲಿ ದೇಶದ ದೌರ್ಬಲ್ಯಗಳನ್ನು ತೊಡೆದು ಹಾಕಲಿ. ಕಾಲಕಾಲಕ್ಕೆ ಕಾರ್ವಿುಕ ಕಾನೂನುಗಳನ್ನು ಪರಿಷ್ಕರಿಸಲಿ.