ನ್ಯೂಸ್

ವಿಜಯವಾಣಿ ಸಂಪಾದಕೀಯ: ಸದ್ವಿದ್ಯೆ ಬಿತ್ತಿದವರು

ಕನ್ನಡಕ್ಕಾಗಿ ಹಂಬಲಿಸಿ, ಕನ್ನಡವನ್ನು ಅನನ್ಯವಾಗಿ ಪ್ರೀತಿಸಿದವರು ಕವಿ ನಿಸಾರ್ ಅಹಮದ್. ಈ ಭಾಷೆಯ ಋಣ ಎಷ್ಟು ಜನ್ಮವಾದರೂ ತೀರಿಸಲು ಅಸಾಧ್ಯ ಎಂದು ಹೇಳಿ ನಾಡಿನ ಜನರ ಅಂತರಂಗವನ್ನು ಹೊಕ್ಕಿ, ಜಾಗೃತಿಯ, ಪ್ರಜ್ಞಾವಂತಿಕೆಯ ಪ್ರಬಲ ಅಲೆಗಳನ್ನು ನಿರ್ವಿುಸಿದರು. ಕನ್ನಡದ ಕಾವ್ಯ ಪರಂಪರೆಗೆ ಹೊಸ ಶಕ್ತಿ ತುಂಬಿದರಲ್ಲದೆ, ಕಾವ್ಯದ ಉದ್ದೇಶ, ಸಾರ್ಥಕತೆಯನ್ನೂ ಮನದಟ್ಟು ಮಾಡಿಕೊಟ್ಟರು.

ಜನಪರ ಕಾಳಜಿ, ವೈಚಾರಿಕತೆಯೊಂದಿಗೆ ಕವಿತೆಯು ಅನನ್ಯತೆ ಹೊಂದಿರಬೇಕು. ಸಹೃದಯನಿಗೆ ಕಾವ್ಯವು ರಸಾನುಭೂತಿ ನೀಡಬೇಕು ಎಂದು ನಂಬಿ, ಅದರಂತೆ ನಡೆದವರು ಅವರು. ಹಾಗಾಗಿಯೇ, ‘ಜೋಗದ ಸಿರಿ ಬೆಳಕಿನಲ್ಲಿ’ ಕವಿತೆ ಖ್ಯಾತಿಯ ಉತ್ತುಂಗಕ್ಕೆ ಏರಿಸಿದರೂ, ಮತ್ತೆ ಅದೇ ಬಗೆಯ ಕವಿತೆಗಳನ್ನು ಬರೆಯಲು ಅವರು ಮುಂದಾಗಲಿಲ್ಲ. ಕನ್ನಡದ ಬಗೆಗಿನ ಆತಂಕಗಳನ್ನು ಅಲ್ಲಗಳೆಯುತ್ತಿದ್ದ ಅವರು ತಂತ್ರಜ್ಞಾನವನ್ನು ಭಾಷೆಯ ಅಭಿವೃದ್ಧಿಗಾಗಿ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಪ್ರತಿಪಾದಿಸಿ ದರು. ಭಾವಗೀತೆಗಳಿಗೆ ಮರುಹುಟ್ಟು ನೀಡಿ, ಅವುಗಳನ್ನು ಜನರ ಮನಸಿನ ಅಂಗಳಕ್ಕೆ ತಲುಪಿಸಿದರು. ನಿರ್ಭಿಡೆಯಿಂದ ವ್ಯಕ್ತಪಡಿಸುವ ಪ್ರಖರ ವಿಚಾರಗಳು ಅವರ ಕಾವ್ಯದ ಒಳಶಕ್ತಿ. ಪ್ರಕೃತಿಯ ಒಡನಾಟ, ಮನುಷ್ಯತ್ವದ ಬಗೆಗಿನ ಅಗಾಧ ನಂಬಿಕೆ, ಮಣ್ಣಿನ ವಾಸನೆ ಹೊಂದಿರುವ ಅವರ ಕಾವ್ಯ ಎಂದೆಂದೂ ಸಂಭ್ರಮ ಮೂಡಿಸುವಂಥದ್ದು. ಭಾವೈಕ್ಯತೆ ಬಗ್ಗೆ ಗಟ್ಟಿದನಿಯಲ್ಲೇ ಮಾತನಾಡಿದ ನಿಸಾರ್ ವೈಚಾರಿಕ ಕೃತಿ, ಸಂಪಾದಿತ ಕೃತಿಗಳ ಮೂಲಕ ಸದ್ವಿದ್ಯೆ ಬಿತ್ತಿದರು. ಮಕ್ಕಳ ಸಾಹಿತ್ಯಕ್ಕೂ ಕೊಡುಗೆ ನೀಡಿದರು. ಅರಿವಿನ ಬೆಳಕು ಹರಡಿಕೊಳ್ಳದೆ ಬದುಕು ‘ನಿತ್ಯೋತ್ಸವ’ ಆಗಲು ಸಾಧ್ಯವಿಲ್ಲ ಎಂದೂ ಎಚ್ಚರಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷಸ್ಥಾನದಿಂದ ನಾಡಿನ ನಾಳೆಗಳು ಹೇಗಿರಬೇಕು ಎಂಬ ದಿಕ್ಸೂಚಿ ತೋರಿದರು. ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಿ ಇಲ್ಲಿಯ ಪರಂಪರೆಯ ಶಕ್ತಿ ಎಷ್ಟು ಸತ್ವಯುತವಾದದ್ದು ಎಂಬುದನ್ನು ಸಾರಿದರು. ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದರೂ, ಇವರ ಸಾಹಿತ್ಯಕ್ಕೆ ಅಪಾರ ಜನಮನ್ನಣೆ ದೊರೆತರೂ ನಿಸಾರ್ ಅದೇ ಸೌಜನ್ಯ, ಮುಗ್ಧತೆ ಹೊಂದಿದ್ದರು. ಅವರ ಭೌತಿಕ ಅಗಲಿಕೆಯಿಂದ ನಾಡು ಸೃಜನಶೀಲ, ವೈಚಾರಿಕ ದನಿಯನ್ನು ಕಳೆದುಕೊಂಡಿದೆ. ಆದರೆ, ನಿಸಾರರು ನೀಡಿರುವ ಕಾವ್ಯಚೇತನ ಕನ್ನಡ ಮನಸ್ಸುಗಳಿಗೆ ನಿರಂತರ ಪ್ರೇರಣೆ ಒದಗಿಸಲಿದೆ.