ದೇಶದ ಭದ್ರತೆ, ಸಮಗ್ರತೆ ವಿಷಯಗಳಲ್ಲಿ ಆಗಾಗ ದಿಟ್ಟನಿರ್ಧಾರ ಕೈಗೊಳ್ಳುವ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ದಾಳಿ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದು ಗೊತ್ತೇ ಇದೆ. ಶುಕ್ರವಾರ ಬೆಳಗ್ಗೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅವರು ದಿಢೀರನೆ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿದ್ದಲ್ಲದೆ, ಸೈನಿಕರ ಶೌರ್ಯ, ಕೆಚ್ಚದೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು, ಭಾರತ ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬ ಸಂದೇಶ ನೀಡಿ ಗಡಿಯ ಸ್ಥಿತಿಗತಿಯನ್ನು ಖುದ್ದಾಗಿ ಅರಿತುಕೊಂಡರು. ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ನಡೆದು, ಭಾರತೀಯ ಯೋಧರು ದಿಟ್ಟ ಉತ್ತರ ನೀಡಿದ ಘಟನೆಗೆ ಎರಡು ವಾರಗಳು ಕಳೆದಿವೆ. ‘ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಬಹಿರಂಗವಾಗಿಯೇ ಘೋಷಿಸಿದ್ದ ಮೋದಿ ಇತ್ತೀಚೆಗೆ ಚೀನಾದ 59 ಆಪ್ಗಳನ್ನು ನಿಷೇಧಿಸುವ ಮಹತ್ವದ ಕ್ರಮ ಕೈಗೊಂಡರು. ಇದರಿಂದ ವಿಚಲಿತವಾದಂತಿರುವ ಚೀನಾ ಭಾರತದ ವಿರುದ್ಧ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದೆ.
ಭಾರತ ಮುಂಚಿನಂತೆ ಇಲ್ಲ, ಸೇನಾಶಕ್ತಿಯಲ್ಲೂ ಕಡಿಮೆ ಇಲ್ಲ. ಸೇನೆಯ ಬಲವರ್ಧನೆ ನಿಟ್ಟಿನಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇರಿಸಿರುವ ಕೇಂದ್ರ ಸರ್ಕಾರ ಗಡಿ ತಂಟೆಗಳಿಗೆ ಸಮರ್ಥ ಉತ್ತರ ನೀಡಲು ಮತ್ತು ಭಯೋತ್ಪಾದಕರ ವಿರುದ್ಧ ದಿಟ್ಟ ಕಾರ್ಯಾಚರಣೆ ನಡೆಸಲು ಸೇನೆಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಚೀನಾ ವಿಷಯದಲ್ಲಿ ಒಂದು ಗಂಭೀರ ಎಚ್ಚರಿಕೆ ನೀಡುವ ಅಗತ್ಯವಿತ್ತು. ಆ ನಿಟ್ಟಿನಲ್ಲಿ ಲಡಾಖ್ನ ನಿಮ್ಮೋ ಪ್ರದೇಶಕ್ಕೆ (ಇದು ಸಿಂಧು ನದಿತೀರ ಮತ್ತು ಝುಂಸ್ಕಾರ್ ಪರ್ವತಶ್ರೇಣಿಯಿಂದ ಆವರಿಸಿದ್ದು, 11 ಸಾವಿರ ಅಡಿ ಎತ್ತರದಲ್ಲಿದೆ) ಪ್ರಧಾನಿ ಭೇಟಿ ಕೊಡುವ ಮೂಲಕ ಸೇನೆಯ, ಸೈನಿಕರ ಮನೋಬಲ ಹೆಚ್ಚಿಸಿದ ಜತೆಗೆ, ಲಡಾಖ್ ಪ್ರದೇಶ ಭಾರತಕ್ಕೆ ಸೇರಿದ್ದು ಎಂಬ ಸ್ಪಷ್ಟ ಸಂದೇಶವನ್ನು ಜಾಗತಿಕ ಸಮುದಾಯಕ್ಕೆ ರವಾನಿಸಿದ್ದಾರೆ. ‘ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು ಮತ್ತು ಆಕ್ರೋಶವನ್ನು ನೋಡಿದ್ದಾರೆ. ನಿಮ್ಮ ಸಾಹಸಗಾಥೆ ದೇಶದ ಪ್ರತಿ ಮನೆಯಲ್ಲೂ ಪ್ರತಿಧ್ವನಿಸುತ್ತಿದೆ. ನೀವು ತೋರಿದ ಧೈರ್ಯ ಭಾರತಶಕ್ತಿಯ ಪರಿಚಯ ಮಾಡಿಕೊಟ್ಟಿದೆ’ ಎಂದು ಸೈನಿಕರನ್ನು ಉದ್ದೇಶಿಸಿ ಹೇಳಿದ ಮಾತುಗಳು, ನಿಜಕ್ಕೂ ಸ್ಪೂರ್ತಿ ತುಂಬುವಂಥವು.
ಚೀನಾಕ್ಕೂ ಎಚ್ಚರಿಕೆಯ ಮಾತುಗಳನ್ನು ಹೇಳಿರುವ ಪ್ರಧಾನಿ ‘ವಿಸ್ತರಣೆಯ ಕಾಲ ಮುಗಿದಿದೆ, ಇದು ಅಭಿವೃದ್ಧಿಯ ಯುಗ. ಭೂಪ್ರದೇಶ ವಿಸ್ತರಣೆಗೆ ಹಪಹಪಿಸಿದವರು ಸೋತು ಹೋಗಿದ್ದಕ್ಕೆ ಇತಿಹಾಸ ಸಾಕ್ಷಿಯಾಗಿದೆ’ ಎಂದಿದ್ದಾರೆ. ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ಜತೆಗೆ ಗಡಿಪ್ರದೇಶದ ಮೂಲಭೂತ ಸೌಕರ್ಯಕ್ಕೆ ಮಾಡುತ್ತಿದ್ದ ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಭಾರತ ಗಡಿಯಲ್ಲಿ ನಿರ್ವಿುಸಿಕೊಂಡಿರುವ ರಸ್ತೆಯೇ ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ. ಸೇನೆಗಳಲ್ಲಿ ಸಮನ್ವಯಕ್ಕಾಗಿ ‘ಚಿಫ್ ಆಫ್ ಡಿಫೆನ್ಸ್’ ನೇಮಿಸಲಾಗಿದೆ. ಹಲವು ರಾಷ್ಟ್ರಗಳೊಂದಿಗೆ ಮಹತ್ವದ ರಕ್ಷಣಾ ಒಪ್ಪಂದಗಳನ್ನು ಹೊಂದಿದ್ದು, ಜಂಟಿ ಸಮರಾಭ್ಯಾಸ ಕೂಡ ನಡೆಸಲಾಗಿದೆ. ಭಾರತೀಯ ಸೇನೆಯ ಈ ಹೊಸ ಸ್ವರೂಪ ಮತ್ತು ಶಕ್ತಿಯನ್ನು ಚೀನಾ ಇನ್ನಾದರೂ ಅರ್ಥ ಮಾಡಿಕೊಂಡು ತಂಟೆಯನ್ನು ನಿಲ್ಲಿಸಿದರೆ, ಶಾಂತಿ-ಸೌಹಾರ್ದದ ದಾರಿ ತೆರೆದುಕೊಳ್ಳಲು ಸಾಧ್ಯ.