ಕರೊನಾ ವೈರಸ್ ಇಡೀ ಜಗತ್ತನ್ನು ಅಲುಗಾಡಿಸಿದೆ. ಕರೊನಾಪೀಡಿತರ ಸಾವಿನ ಪ್ರಮಾಣ ನಿಯಂತ್ರಿಸುವ ಜತೆಗೆ ಸೋಂಕಿತರ ಪ್ರಮಾಣ ತಗ್ಗಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರುವ ಬಗ್ಗೆ ದೇಶಗಳು ತಲೆಕೆಡಿಸಿಕೊಂಡಿವೆ. ಇಂಥ ಸಂಕಷ್ಟ, ಬಿಕ್ಕಟ್ಟಿನ ನಡುವೆಯೇ ಹಣಕಾಸು ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿರುವುದು ವ್ಯವಸ್ಥೆಯ ಅಣಕವೇ ಸರಿ. ಕರೊನಾ ಪರಿಸ್ಥಿತಿಯನ್ನು ಸೈಬರ್ ಖದೀಮರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದು ಬೇರೆ ಬೇರೆ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದಾರೆ.
ಕರೊನಾಗೆ ಚಿಕಿತ್ಸೆ, ಆರೋಗ್ಯ ವಿಮೆ, ಉದ್ಯೋಗಾವಕಾಶ, ದೇಣಿಗೆ ಸಂಗ್ರಹಿಸುವ ಟ್ರಸ್ಟ್ಗಳ ಹೆಸರಿನಲ್ಲಿ ಸೈಬರ್ ವಂಚಕರು ಜನರನ್ನು ಗುರಿಯಾಗಿಸುತ್ತಿದ್ದಾರೆ. ಸರ್ಕಾರದ ಹೆಸರಿನಲ್ಲೇ ಲಿಂಕ್ ಅಥವಾ ಇಮೇಲ್ ಕಳುಹಿಸಿ ನಡೆಯಬಹುದಾದ ಸೈಬರ್ ಮೋಸದ ಬಗ್ಗೆ ಎಚ್ಚರದಿಂದಿರುವಂತೆ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟಿದೆ. ದೇಶದಲ್ಲಿ 2020 ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 16 ಲಕ್ಷ ಸೈಬರ್ ವಂಚನೆ ಪ್ರಕರಣಗಳು ವರದಿಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಕೋವಿಡ್-19 ಹೆಸರಲ್ಲಿ ಇಮೇಲ್ ಕಳುಹಿಸಿ, ವೈಯಕ್ತಿಕ ವಿವರ ಕದ್ದು ಹಣ ಲಪಟಾಯಿಸುವ ಪ್ರಕರಣಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿವೆ. ಸರ್ಕಾರದ ವಿವಿಧ ಇಲಾಖೆಗಳು ಸಹ ಸೈಬರ್ ದಾಳಿಕೋರರ ಗುರಿಯಾಗಿರುವುದು ಆತಂಕದ ಸಂಗತಿ.
ಇದು ಖಾಸಗಿ ವ್ಯಕ್ತಿಗಳಿಂದ ಆಗುತ್ತಿರುವ ವಂಚನೆಯ ಮುಖವಾದರೆ, ಸರ್ಕಾರ ಕರೊನಾ ಹೆಸರಿನಲ್ಲಿ ನಡೆಸಿರುವ ವ್ಯವಹಾರಗಳಲ್ಲಿ ಅಕ್ರಮದ ಆರೋಪ ಕೇಳಿಬಂದಿರುವುದು ವ್ಯವಸ್ಥೆಯ ಆರೋಗ್ಯಕ್ಕೆ ಉತ್ತಮವಾದ ಬೆಳವಣಿಗೆಯಲ್ಲ. ಸ್ಯಾನಿಟೈಸರ್, ಪಿಪಿಇ ಕಿಟ್, ಮಾಸ್ಕ್ ಖರೀದಿ, ಆಹಾರ ಕಿಟ್ ವಿತರಣೆ ಹಾಗೂ ಪಡಿತರ ವಿತರಣೆ ಯೋಜನೆಗಳಲ್ಲಿ ಅಕ್ರಮ ನಡೆದಿರುವ ಆರೋಪಗಳು ವ್ಯಕ್ತವಾಗಿವೆ. ಕೆಲ ಸಾಮಗ್ರಿಗಳನ್ನು ಹೆಚ್ಚಿನ ದರದಲ್ಲಿ ಖರೀದಿಸಿದ ನಿದರ್ಶನಗಳಿವೆ. ಅಲ್ಲದೆ, ಫುಡ್ಕಿಟ್ ವಿತರಣೆ ಕೆಲವೆಡೆ ಸರಿಯಾಗಿ ನಡೆದಿಲ್ಲವೆಂಬ ಆಕ್ಷೇಪಗಳೂ ಇವೆ. ಕರೊನಾ ವೈರಸ್ ನಮ್ಮೆದುರು ಅನೇಕ ಮಾನವೀಯ ಸಮಸ್ಯೆಗಳನ್ನು, ಇಕ್ಕಟ್ಟುಗಳನ್ನು ತಂದಿಟ್ಟಿದೆ. ಜನರ ಪ್ರಾಣಕ್ಕೆ ಅಪಾಯ ಒಂದಾದರೆ, ಉದ್ಯೋಗ ನಷ್ಟ, ಉತ್ಪಾದನೆ ನಷ್ಟಗಳಿಂದಾಗಿ ಜನರ ಜೀವನೋಪಾಯಕ್ಕೂ ತೊಂದರೆ ಎದುರಾಗಿದೆ. ಜಾಗತಿಕವಾಗಿ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ. ಲಸಿಕೆ ಬರುವವರೆಗಂತೂ ಕರೊನಾ ಕಾಟ ಮುಂದುವರಿಯುವುದು ನಿಶ್ಚಿತ ಎಂದು ತಜ್ಞರು ಹೇಳುತ್ತಾರೆ.
ಇಂಥ ಸಂದರ್ಭದಲ್ಲಿ. ಕರೊನಾ ನಿಯಂತ್ರಣ ಎಲ್ಲರ ಗುರಿಯಾಗಿರಬೇಕು. ಹಾಗೇ, ಅಗತ್ಯವಿರುವವರಿಗೆ ಸಹಕಾರದ ಹಸ್ತ ಚಾಚಬೇಕಾದುದು ಅನಿವಾರ್ಯ. ಪರಿಸ್ಥಿತಿ ಹೀಗಿರುವಾಗ, ಈ ಕರಾಳ ಸನ್ನಿವೇಶವನ್ನೂ ಹಣಮಾಡಲು ಬಳಸುವುದಕ್ಕೆ ಮುಂದಾಗುವವರಿಗೆ ಏನೆನ್ನಬೇಕೋ ಅರ್ಥವಾಗದು. ಸೈಬರ್ ಅಪರಾಧಕ್ಕೆ ಒಳಗಾಗದಂತಿರಲು ಜನರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು. ಆನ್ಲೈನ್ ವಂಚನೆಯ ನಾನಾ ಮುಖಗಳನ್ನು ಅರಿತು ಆ ಬಗ್ಗೆ ಜಾಗರೂಕರಾಗಿರಬೇಕು. ಇನ್ನು, ಸರ್ಕಾರದ ಮಟ್ಟದಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಆ ವ್ಯವಸ್ಥೆಯಲ್ಲಿರುವವರೇ ಕಡಿವಾಣ ಹಾಕಬೇಕಾಗುತ್ತದೆ. ಅಗತ್ಯವಾದಲ್ಲಿ ಈ ಬಗ್ಗೆ ತನಿಖೆ ನಡೆಸಿ, ಅವ್ಯವಹಾರ ತಡೆಯಲಿ. ಒಟ್ಟಿನಲ್ಲಿ, ಇಂಥ ಸನ್ನಿವೇಶದಲ್ಲಿ ಪಾರದರ್ಶಕತೆ ಬಹುಮುಖ್ಯವಾದುದು ಎಂಬುದನ್ನು ಸಂಬಂಧಪಟ್ಟವರು ಮರೆಯಬಾರದು.