ನ್ಯೂಸ್

ಸಂಪಾದಕೀಯ| ಷಡ್ಯಂತ್ರ ಬಯಲು

ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ರೈತರ ದನಿಯನ್ನು ಆಲಿಸಿ, ಸರ್ಕಾರ ಹನ್ನೊಂದು ಸುತ್ತುಗಳ ಮಾತುಕತೆಯನ್ನೂ ನಡೆಸಿತು. ಹೊಸ ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ಅಮಾನತ್ತಿನಲ್ಲಿ ಇಡುವುದಾಗಿ ಆಶ್ವಾಸನೆ ನೀಡಿತು. ಆಗಲೂ, ಹೋರಾಟ ಅಂತ್ಯಗೊಳ್ಳುವ ಲಕ್ಷಣ ಕಾಣದಿದ್ದಾಗ, ಇದರ ಹಿಂದೆ ಯಾವುದೋ ಷಡ್ಯಂತ್ರ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡಿತು. ಗಣರಾಜ್ಯೋತ್ಸವ ದಿನದಂದೇ ಪ್ರತಿಭಟನಾಕಾರರು ಕೆಂಪುಕೋಟೆಗೆ ನುಗ್ಗಿ ಹಿಂಸಾಚಾರ ನಡೆಸಿದಾಗ ಇಡೀ ಹೋರಾಟ ದಿಕ್ಕು ತಪ್ಪಿತು. ರೈತ ಸಂಘಟನೆಗಳಲ್ಲೂ ಬಿರುಕು ಕಾಣಿಸಿಕೊಂಡಿತು. ಬುಧವಾರ ಇದ್ದಕ್ಕಿದ್ದಂತೆ ರೈತರ ಆಂದೋಲನ ‘ಜಾಗತಿಕ ಸುದ್ದಿ’ಯಾಯಿತು! ‘ನಾವು ರೈತರ ಪರವಾಗಿ ಇದ್ದೇವೆ’ ಎಂಬ ಗಣ್ಯರ ಟ್ವೀಟ್​ಗಳು ಹರಿದಾಡತೊಡಗಿದವು. ಭಾರತ, ಇಲ್ಲಿನ ಭೌಗೋಳಿಕ ಸ್ಥಿತಿ, ಕೃಷಿ ಸುಧಾರಣೆ ಮತ್ತು ರೈತರ ಪರಿಸ್ಥಿತಿ ಇದ್ಯಾವುದರ ಬಗ್ಗೆ ಅರಿವಿಲ್ಲದಿದ್ದರೂ ಈ ತಥಾಕಥಿತ ಗಣ್ಯರು ಮಾಡಿದ ಟ್ವೀಟ್​ಗಳು ಆಕ್ರೋಶಕ್ಕೆ ಕಾರಣವಾದವು. ಸಾಮಾಜಿಕ ರಂಗದ ಧುರೀಣರು, ಕ್ರೀಡಾಳುಗಳು ಸೇರಿ ಹಲವರು ಪ್ರತ್ಯುತ್ತರ ನೀಡಿ, ‘ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸಬೇಡಿ’ ಎಂದು ಸ್ಪಷ್ಟವಾಗಿ ಹೇಳಿದರು.

ರೈತರ ಹೋರಾಟವನ್ನು ಮುಂದಿರಿಸಿಕೊಂಡು ಕೆಲ ಶಕ್ತಿಗಳು ಭಾರತವಿರೋಧಿ ಅಭಿಯಾನಕ್ಕೆ ಮುಂದಾಗಿರುವ ಅಂತಾರಾಷ್ಟ್ರೀಯ ಸಂಚು ಈಗ ಬಯಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವುದು ಹಲವು ರಾಷ್ಟ್ರಗಳಿಗೆ, ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ, ಇಲ್ಲಿನ ಸಮಸ್ಯೆಗಳನ್ನು ಅರ್ಥೈಸಿಕೊಳ್ಳದೆ ಸುಖಾಸುಮ್ಮನೆ ದೊಡ್ಡದನಿಯಲ್ಲಿ ಅಪಪ್ರಚಾರ ಮಾಡಿ, ಸತ್ಯವನ್ನು ಅದುಮುವ ಪ್ರಯತ್ನಗಳು ನಡೆಯುತ್ತಿವೆ. ಕೃಷಿ ಕಾನೂನು ವಿರೋಧಿ ಆಂದೋಲನದ ಹೊತ್ತಲ್ಲೂ ಇದು ಮತ್ತೊಮ್ಮೆ ಸ್ಪಷ್ಟಗೊಂಡಿದ್ದು, ಅಂತಾರಾಷ್ಟ್ರೀಯ ಶಕ್ತಿಗಳ ಕುಮ್ಮಕ್ಕು, ಕೈವಾಡ ಬೆಳಕಿಗೆ ಬಂದಿದೆ. ಟೂಲ್ ಕಿಟ್ ಮೂಲಕ ಭಾರತ ವಿರೋಧಿ ಅಭಿಯಾನ ನಡೆಸಲಾಗುತ್ತಿದ್ದು, ಸ್ವೀಡಿಷ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್​ಬರ್ಗ್ ವೆಬ್​ಸೈಟ್​ವೊಂದು ಸಿದ್ಧಪಡಿಸಿದ ದಾಖಲೆಗನ್ನೂ ಟ್ವೀಟ್ ಮಾಡಿ, ಪೇಚಿಗೆ ಸಿಲುಕಿದ್ದಾರೆ. ಭಾರತ ವಿರೋಧಿ ಅಭಿಯಾನದಲ್ಲಿ ಗ್ರೇಟಾ ಜತೆಗೆ ಅಮೆರಿಕದ ಪಾಪ್ ಗಾಯಕಿ ರಿಹಾನ್ನಾ ಕೂಡ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ರಿಹಾನ್ನಾ ಟ್ವೀಟ್ ಕೆನಡಾದ ಸಂಸದ ಜಗ್​ವಿುೕತ್ ಸಿಂಗ್ ರೀಟ್ವೀಟ್ ಮಾಡಿದ್ದು, ಅವರ ನಂಟನ್ನು ಟ್ವೀಟ್ ಬಹಿರಂಗಗೊಳಿಸಿದೆ. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಪ್ಪುಮಾಹಿತಿ, ಅಪಪ್ರಚಾರ ಹರಡುವ ಕೆಲಸ ನಡೆಯುತ್ತಿದ್ದು, ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಭಾರತ ಈ ಹಿಂದೆ ಕೂಡ ಇಂಥ ಸವಾಲುಗಳನ್ನು ಯಶಸ್ವಿಯಾಗಿ ಹಿಮ್ಮೆಟಿಸಿದೆ. ಅಷ್ಟಕ್ಕೂ. ಇಂಥ ಅಪಪ್ರಚಾರದಿಂದ, ಸುಳ್ಳು ಮಾಹಿತಿಗಳಿಂದ ಭಾರತದ ಅಖಂಡತೆಗೆ ಧಕ್ಕೆ ತರಲು ಸಾಧ್ಯವಿಲ್ಲ. ಆದರೆ, ರಾಷ್ಟ್ರಘಾತಕ ಶಕ್ತಿಗಳ ಷಡ್ಯಂತ್ರವನ್ನು ಅರ್ಥ ಮಾಡಿಕೊಂಡು, ದೇಶದ ಐಕ್ಯತೆ ಇನ್ನಷ್ಟು ಬಲಗೊಳ್ಳಬೇಕಿದೆ. ಭಾರತವಿರೋಧಿ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪ್ರತಿಪಕ್ಷಗಳು ಎಲ್ಲವನ್ನೂ ರಾಜಕೀಯ ಲಾಭದಿಂದ ನೋಡದೆ ಭಾರತದ ದನಿಯನ್ನು ಗಟ್ಟಿಗೊಳಿಸಬೇಕಿದೆ.