ನ್ಯೂಸ್

ಬೆಂಗಳೂರಲ್ಲಿ ಜನಾರೋಗ್ಯ ಕ್ಷೇಮ ಕೇಂದ್ರ ಸ್ಥಾಪನೆ: ಅನುಷ್ಠಾನ ಮುಖ್ಯ

ಬೆಂಗಳೂರು: ಆರೋಗ್ಯ ಸೇವೆಗಳ ವಿಷಯದಲ್ಲಿ ಭಾರತ ಜಗತ್ತಿನ ಮುಂಚೂಣಿ ದೇಶಗಳಲ್ಲಿ ಒಂದು. ಅತ್ಯಾಧುನಿಕ ವೈದ್ಯಕೀಯ ಸವಲತ್ತುಗಳು ಮತ್ತು ತಜ್ಞ ವೈದ್ಯರು ಈ ಹೆಗ್ಗಳಿಕೆಗೆ ಕಾರಣ. ಹೀಗಾಗಿಯೇ ಮೆಡಿಕಲ್ ಟೂರಿಸಂ (ಅಂದರೆ ಬೇರೆ ಬೇರೆ ದೇಶದವರು ಚಿಕಿತ್ಸೆಗಾಗಿ ನಮ್ಮಲ್ಲಿಗೆ ಬರುವುದು) ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದು. ಈಗ ಕರೊನಾ ಕಾರಣಕ್ಕಾಗಿ ಎಲ್ಲ ರಂಗಗಳಂತೆ ಆರೋಗ್ಯ ಕ್ಷೇತ್ರವೂ ಸಮಸ್ಯೆ ಎದುರಿಸುತ್ತಿದೆಯೆನ್ನುವುದು ಬೇರೆ ಮಾತು.

ನಮ್ಮಲ್ಲಿ ಆರೋಗ್ಯ ಸವಲತ್ತುಗಳು ಇದ್ದರೂ ಹೆಚ್ಚಿನಂಶ ಅವು ನಗರಕೇಂದ್ರಿತವಾಗಿವೆ ಮತ್ತು ಜನಸಾಮಾನ್ಯರಿಗೆ ಕೈಗೆಟುಕುವುದಿಲ್ಲ ಎಂಬ ಆಕ್ಷೇಪ ಲಾಗಾಯ್ತಿನಿಂದಲೂ ಇದೆ. ಆರೋಗ್ಯ ರಂಗದ ಸುಧಾರಣೆಗೆ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿವೆ ಎಂಬುದು ನಿಜವಾದರೂ, ಆಗಬೇಕಾದ ಕೆಲಸ ಸಾಕಷ್ಟಿವೆ ಎಂಬುದನ್ನೂ ಮರೆಯಬಾರದು.

ಜನಸಾಮಾನ್ಯರಿಗೆ ಪ್ರಾಥಮಿಕ ಆರೋಗ್ಯ ಸವಲತ್ತುಗಳನ್ನು ಸುಲಭದಲ್ಲಿ ಮತ್ತು ಉಚಿತವಾಗಿ ನೀಡುವ ನಿಟ್ಟಿನಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಮೊಹಲ್ಲಾ ಕ್ಲಿನಿಕ್ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು, ಇವು ಜನಪ್ರಿಯತೆ ಯನ್ನೂ ಗಳಿಸಿವೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ‘ಜನಾರೋಗ್ಯ ಕ್ಷೇಮ ಕೇಂದ್ರ’ಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಈ ಯೋಜನೆ ಜಾರಿಯಾಗಲಿದ್ದು, 57 ಸ್ಥಳಗಳಲ್ಲಿ ಇಂಥ ಕೇಂದ್ರಗಳನ್ನು ತೆರೆಯಲಾಗುತ್ತದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ದೇಶದ 80 ನಗರ/ಪಟ್ಟಣಗಳಲ್ಲಿ ಇಂಥ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿದೆ.

ಗುಡಿಸಲು ಹಾಗೂ ಕೊಳೆಗೇರಿ ನಿವಾಸಿಗಳು, ಚಿಂದಿ ಆಯುವವರು, ನಿರಾಶ್ರಿತರು, ವಲಸಿಗರು ಮುಂತಾದವರು ಬೇರೆ ಬೇರೆ ಕಾರಣಗಳಿಗಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚು. ‘ಜನಾರೋಗ್ಯ ಕ್ಷೇಮ ಕೇಂದ್ರ’ಗಳಲ್ಲಿ ಈ ವರ್ಗದ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳನ್ನು ಇಲ್ಲಿ ಕೊಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಶಿಫಾರಸು ಮಾಡಲಾಗುತ್ತದೆ. 21 ಬಗೆಯ ಪ್ರಯೋಗಾಲಯ ಸೇವೆಗಳು ಸಿಗುತ್ತವೆ. ಅಲ್ಲದೆ, ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಬೆಂಗಳೂರು ಮಹಾನಗರಕ್ಕೆ ಪ್ರತಿನಿತ್ಯ ಸಾವಿರಾರು ಜನರು ಬದುಕು ಅರಸಿಕೊಂಡು ಬರುತ್ತಾರೆ. ಇವರು ಬೇರೆ ಬೇರೆ ಹಿನ್ನೆಲೆಯ, ಭಿನ್ನ ಭಿನ್ನ ಪ್ರದೇಶದವರಾಗಿರುತ್ತಾರೆ. ಮಾಹಿತಿ ಕೊರತೆ, ಆರ್ಥಿಕ ಮತ್ತಿತರ ಕಾರಣಕ್ಕಾಗಿ ಎಲ್ಲರಿಗೂ ಸರಿಯಾದ ಸಮಯದಲ್ಲಿ ವೈದ್ಯರ ಭೇಟಿ ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವೊಮ್ಮೆ ಸಣ್ಣ ಆರೋಗ್ಯ ತೊಂದರೆಯೂ ಗಂಭೀರ ಕಾಯಿಲೆಯಾಗಿ ಮಾರ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಉತ್ತಮವಾಗಿದೆ. ಆದರೆ ಅನುಷ್ಠಾನ ಪರಿಣಾಮಕಾರಿಯಾಗಿ ಆಗಬೇಕಾದುದು ಮುಖ್ಯ.

ಏಕೆಂದರೆ, ಸರ್ಕಾರದ ಎಲ್ಲ ಯೋಜನೆಗಳು ಕಾಗದದ ಮೇಲೆ ಆಕರ್ಷಕವಾಗಿಯೇ ಇರುತ್ತವೆ. ಆದರೆ ಜಾರಿ ಹಂತದಲ್ಲಿ ಎಡವುತ್ತವೆ. ಬೆಂಗಳೂರಿನಲ್ಲಿ ಈ ಯೋಜನೆಯ ಅನುಭವ ನೋಡಿಕೊಂಡು ಇತರ ನಗರಗಳಲ್ಲಿಯೂ ಜಾರಿ ಮಾಡುವ ಬಗ್ಗೆ ಆಲೋಚಿಸಬಹುದಾಗಿದೆ. ಹಣ ಇರುವವರು ಖಾಸಗಿ ಆಸ್ಪತ್ರೆಗಳಲ್ಲಿಯಾದರೂ ಚಿಕಿತ್ಸೆ ಪಡೆಯುತ್ತಾರೆ. ಬಡವರಿಗೂ ಆರೋಗ್ಯ ಸೇವೆ ಸುಲಭದಲ್ಲಿ ದೊರೆಯುವಂತಾಗಬೇಕು. ಆರೋಗ್ಯವಂತ ಜನರು ಮಾತ್ರ ಆರೋಗ್ಯವಂತ ದೇಶದ ಆಸ್ತಿಯಾಗಬಲ್ಲರು.