ನ್ಯೂಸ್

ವಿಜಯವಾಣಿ ಸಂಪಾದಕೀಯ: ಕನ್ನಡ ಹಬ್ಬದ ಸಂಭ್ರಮಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆ-ಪರಿಹಾರ ಹೊಮ್ಮಲಿ

‘ತೊಗರಿ ಕಣಜ’ ಎಂದೇ ಖ್ಯಾತವಾದ ಕಲಬುರಗಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದು 85ನೇ ಸಮ್ಮೇಳನವಾಗಿದ್ದು, ಇದರ ಯಶಸ್ಸಿಗಾಗಿ ಸಕಲ ತಯಾರಿಗಳು ಪೂರ್ಣಗೊಂಡಿವೆ. ನಾಡಿನಾದ್ಯಂತದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಆಗಮಿಸಲಿದ್ದು, ಕನ್ನಡ ವಾತಾವರಣ ಮೈದಳೆಯಲಿದೆ. ಸಮ್ಮೇಳನ ಅಂಗವಾಗಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಇವು ಹೊಸ ಹೊಳಹು ಚೆಲ್ಲಲೆಂಬುದು ಸಹಜ ನಿರೀಕ್ಷೆ. ಕನ್ನಡದ ಪ್ರಸಿದ್ಧ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ನಾಡು-ನುಡಿ ಬಗ್ಗೆ ಕಾಳಜಿ ಮತ್ತು ತಮ್ಮದೇ ಆದ ಪರಿಕಲ್ಪನೆ ಹೊಂದಿರುವ ಅವರು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಬಹುದಾದ ಸಂಗತಿಗಳ ಬಗ್ಗೆ ಕುತೂಹಲವಿದೆ.

ಕನ್ನಡ ಸಾಹಿತ್ಯ ಸಮ್ಮೇಳನವನ್ನು ‘ನುಡಿಜಾತ್ರೆ’ ಎಂದೇ ಕರೆಯುವುದು ವಾಡಿಕೆ. ಜಾತ್ರೆಯ ಎಲ್ಲ ಲಕ್ಷಣಗಳೂ ಇಲ್ಲಿರುತ್ತವೆ. ಹಾಗೇ ಇದು ಕನ್ನಡ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಸಮ್ಮಿಲನದ ವೇದಿಕೆಯೂ ಹೌದು. ಸಮ್ಮೇಳನ ಪ್ರತಿ ವರ್ಷ ನಡೆಯುವುದು ಹೌದಾದರೂ, ಪ್ರತಿ ಸಮ್ಮೇಳನವೂ ವಿಭಿನ್ನ, ವಿಶಿಷ್ಟ. ಕನ್ನಡ ಭಾಷೆ ವರ್ತಮಾನದಲ್ಲಿ ಎದುರಿಸುತ್ತಿರುವ ಸವಾಲುಗಳು, ಆತಂಕಗಳ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ರಚನಾತ್ಮಕ ಚರ್ಚೆ ನಡೆದು, ಅರ್ಥಪೂರ್ಣ ನಿರ್ಣಯಗಳು ಹೊರಹೊಮ್ಮಬೇಕು ಮತ್ತು ಸಾಹಿತ್ಯಲೋಕದ ಭಾವನೆಗಳಿಗೆ ಆಳುಗರು ಸ್ಪಂದಿಸಬೇಕು ಎಂಬುದು ಪ್ರತಿಯೊಬ್ಬ ಕನ್ನಡಾಭಿಮಾನಿಯ ಹಂಬಲ. ಶಿಕ್ಷಣ ಮಾಧ್ಯಮ ಯಾವುದಿರಬೇಕು ಎಂಬುದು ಸದ್ಯದ ದೊಡ್ಡ ಸವಾಲುಗಳಲ್ಲೊಂದು. ಮಾತೃಭಾಷೆ ಅಥವಾ ರಾಜ್ಯಭಾಷೆ ಮಾಧ್ಯಮವೇ ಉತ್ತಮ ಎಂಬುದು ತಜ್ಞರ ಅನಿಸಿಕೆ. ಆದರೆ ಇಂಗ್ಲಿಷ್ ಶಿಕ್ಷಣ ಪಡೆದರೆ ಉದ್ಯೋಗ ಗಳಿಸಬಹುದು ಎಂಬ ಭಾವನೆ ಜನರಲ್ಲಿ ಬೇರೂರಿರುವುದರಿಂದ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಎತ್ತಿಹಿಡಿಯುವುದಕ್ಕೆ ತೊಡಕಾಗುತ್ತಿದೆ. ಅಲ್ಲದೆ ಈ ವಿಚಾರ ಕೋರ್ಟ್ ಮೆಟ್ಟಿಲೇರಿದಾಗ ಬೇರೆಯದೇ ಆಯಾಮ ಪಡೆಯುತ್ತದೆ. ಸಂಸತ್ ಈ ನಿಟ್ಟಿನಲ್ಲಿ ಕಾಯ್ದೆ ಮಾಡಬೇಕು ಎಂಬ ಸನ್ನಿವೇಶ ಈಗ ಎದುರಲ್ಲಿದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಷಯ ಸರ್ಕಾರದ ಮಟ್ಟದಲ್ಲಿದ್ದು, ಯಾವ ರ್ತಾಕ ಅಂತ್ಯಕ್ಕೆ ಹೋಗುತ್ತದೆಂಬುದನ್ನು ನೋಡಬೇಕು.

ಇನ್ನೊಂದೆಡೆ, ಸಾಮಾಜಿಕವಾಗಿ ಸಹ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಸವಾಲಾಗುತ್ತಿದೆ. ವಿಶೇಷವಾಗಿ ಬೆಂಗಳೂರು ಇತ್ಯಾದಿ ನಗರಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬ ಆತಂಕವಿದೆ. ನೆಲ-ಜಲದ ವಿಚಾರದಲ್ಲಿಯೂ ಕರ್ನಾಟಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಮಸ್ಯೆ-ಗೊಂದಲಗಳನ್ನು ಪರಿಹರಿಸುವಲ್ಲಿ ಸರ್ಕಾರದ ಪಾತ್ರ ಬಹುಮುಖ್ಯವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸರ್ಕಾರ ಒಂದು ನಿರ್ಧಾರಕ್ಕೆ ಬರುವಲ್ಲಿ, ನೀತಿನಿಯಮ ರೂಪಿಸುವಲ್ಲಿ ಸಾಹಿತ್ಯ, ಸಾಂಸ್ಕೃತಿಕ ಲೋಕದ ಸಲಹೆ-ಸಹಕಾರಗಳೂ ಅಗತ್ಯವಾಗುತ್ತವೆ. ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿಯೂ ಮುಖ್ಯವಾಗುತ್ತದೆ. ಹಿಂದೆಲ್ಲ ಸಮ್ಮೇಳನದ ಕೊನೆಯಲ್ಲಿ ಹಲವು ನಿರ್ಣಯಗಳನ್ನು ಮಾಡಿ ಸರ್ಕಾರಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಸರ್ಕಾರಗಳು ಆ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನೇನೂ ತೋರುತ್ತಿರಲಿಲ್ಲ. ಹೀಗಾಗಿ ಈಚಿನ ವರ್ಷಗಳಲ್ಲಿ ಆ ಪದ್ಧತಿ ಕೈಬಿಟ್ಟು, ಈ ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೆ ತರಬೇಕೆಂಬ ಏಕನಿರ್ಣಯ ಮಾಡುವ ರೂಢಿ ಬಂದಿದೆ. ಇದೇನೇ ಇದ್ದರೂ, ಕನ್ನಡ ನೆಲ-ಜಲ-ಭಾಷೆ-ಸಂಸ್ಕೃತಿ ಇತ್ಯಾದಿ ವಿಚಾರಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅದರದೇ ಆದ ಮಹತ್ವವಿದೆ, ತೂಕವಿದೆ. ಕಲಬುರಗಿ ಸಮ್ಮೇಳನ ಈ ದಿಕ್ಕಿನಲ್ಲಿ ಅರ್ಥಪೂರ್ಣವಾಗಿ ಹೊರಹೊಮ್ಮಲೆಂಬುದು ಆಶಯ.