ನ್ಯೂಸ್

ಸಂಪಾದಕೀಯ| ಹೊಸ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಜಾರಿಯಾಗಲಿ

ಶಿಕ್ಷಣ ವ್ಯವಸ್ಥೆ ಸಮಗ್ರವಾಗಿ ಸುಧಾರಣೆ ಆಗಬೇಕು ಮತ್ತು ಈ ನಿಟ್ಟಿನಲ್ಲಿ ಪಾಶ್ಚಾತ್ಯ ದೇಶಗಳ ಅನುಕರಣೆ ಮಾಡದೆ ಭಾರತೀಯತೆಯ ಮೌಲ್ಯಗಳ ಆಧಾರದಲ್ಲಿ ಶಿಕ್ಷಣ ನೀತಿ ಸಿದ್ಧಗೊಂಡು, ಅನುಷ್ಠಾನಕ್ಕೆ ಬರಬೇಕು ಎಂಬ ಬೇಡಿಕೆ ಹಲವು ದಶಕಗಳದ್ದು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಕೆಲವು ಮಹತ್ವದ ಸುಧಾರಣೆಗಳನ್ನು ಶಿಕ್ಷಣ ರಂಗದಲ್ಲಿ ಮಾಡಲು ಮುಂದಾದಾಗ ಅದಕ್ಕೆ ಕೆಲವರು ‘ಕೇಸರೀಕರಣ’ ಎಂಬ ಹಣೆಪಟ್ಟಿ ಕಟ್ಟಿ ಸರ್ಕಾರದ ಮನೋಬಲ ತಗ್ಗಿಸಿದರು. ಈಗಿನ ಕೇಂದ್ರ ಸರ್ಕಾರ ಸಾಕಷ್ಟು ತಯಾರಿ, ವಿಷಯ ತಜ್ಞರೊಂದಿಗೆ ವಿಚಾರವಿಮರ್ಶೆ, ಅಧ್ಯಯನದ ಬಳಿಕ ಹೊಸ ಶಿಕ್ಷಣ ನೀತಿಯನ್ನು ಪ್ರಕಟಿಸಿರುವುದು ಗೊತ್ತಿರುವಂಥದ್ದೇ. ಇದು ಹಂತಹಂತವಾಗಿ ಜಾರಿಗೆ ಬರಬೇಕಿದ್ದು, ಅನುಷ್ಠಾನ ಪರಿಣಾಮಕಾರಿಯಾಗಿ ಆಗಬೇಕಿದೆ. ಕರ್ನಾಟಕವೂ ಈ ನಿಟ್ಟಿನಲ್ಲಿ ಸೂಕ್ತ ತಯಾರಿ ಮಾಡಿಕೊಳ್ಳುತ್ತಿದ್ದು, ಸಂಪುಟ ಸಭೆಯಲ್ಲಿ ರ್ಚಚಿಸಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ರಾಷ್ಟ್ರೀಯ ಶಿಕ್ಷಣ ನೀತಿ-2020ರ ವರದಿಯನ್ನು ಸೋಮವಾರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ.

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ಕೆಎಸ್​ಯು) ಹೊಸ ಕಾಯ್ದೆ ಜಾರಿ, ಕರ್ನಾಟಕ ಉನ್ನತ ಶಿಕ್ಷಣ ಆಯೋಗ ಸ್ಥಾಪನೆ, ವಿಶೇಷ ಶೈಕ್ಷಣಿಕ ವಲಯಗಳ ಸ್ಥಾಪನೆ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ ಅನ್ವಯವಾಗುವ ಎಲ್ಲ ವಿದ್ಯಾರ್ಥಿವೇತನಗಳನ್ನು ಒಂದೇ ವೇದಿಕೆಯಲ್ಲಿ ತರುವ ಶಿಫಾರಸುಗಳು ಮಹತ್ವದ್ದಾಗಿವೆ. ಅದೇ ರೀತಿ ಶಾಲಾ ಶಿಕ್ಷಣದಲ್ಲೂ ಸುಧಾರಣೆಗಳನ್ನು ಸೂಚಿಸಿರುವ ವರದಿ, ಡಿಎಸ್​ಇಆರ್​ಟಿಯ ಪುನರ್ ರಚನೆ, ವಿಶೇಷ ಶೈಕ್ಷಣಿಕ ವಲಯಗಳ ಸ್ಥಾಪನೆ ಅವಶ್ಯ ಎಂದು ಪ್ರತಿಪಾದಿಸಿದೆ. ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಹಾಗೂ ಸಮಾಜ ಹೆಚ್ಚಿನ ಒತ್ತು ನೀಡಬೇಕು ಎನ್ನುವುದು ಶಿಕ್ಷಣ ನೀತಿಯ ಆಶಯವಾಗಿದ್ದು, ಹೊಸಹೆಜ್ಜೆಗಳು ಇದಕ್ಕೆ ಪೂರಕವಾಗಿ ಇರುವಂತೆ ಕಾಳಜಿ ವಹಿಸಬೇಕಿದೆ. ಶೈಕ್ಷಣಿಕ ತಜ್ಞರು, ಸಮಾಜದ ವಿವಿಧ ರಂಗಗಳ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಕೂಡ ಹೊಸ ಶಿಕ್ಷಣ ನೀತಿಯಿಂದ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಕರೊನಾ ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರದ ಹೊಸ ಸವಾಲುಗಳೂ ಅನಾವರಣ ಗೊಂಡಿವೆ. ಹೀಗಾಗಿ ಕರೊನೋತ್ತರ ಕಾಲದಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ, ಕಲಿಕಾರ್ಥಿಗಳಿಗೆ ಪೂರಕವಾಗಿ ಇರುವಂತೆ ಮಾಡುವ ಜವಾಬ್ದಾರಿ ಹೆಚ್ಚಿದೆ. ಜ್ಞಾನ ಮತ್ತು ಕೌಶಲಕ್ಕೆ ಹೊಸನೀತಿಯಲ್ಲಿ ಸಮಾನ ಆದ್ಯತೆ ಸಿಕ್ಕಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಎರಡೂ ವ್ಯವಸ್ಥೆಗಳ ಮೌಲ್ಯಮಾಪನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿ ಹಲವು ರಂಗಗಳಲ್ಲಿ ಸಾಧನೆಯ ಹೆಗ್ಗುರುತು ಮೂಡಿಸಿರುವ ಕರ್ನಾಟಕ ದೇಶದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿ ಹೊಮ್ಮಿದರೆ, ಹೊಸಪೀಳಿಗೆಗೂ, ಒಟ್ಟಾರೆ ಸಮಾಜಕ್ಕೂ ಅನುಕೂಲ.