ಈ ಸಮಸ್ಯೆ ಇಂದು-ನಿನ್ನೆಯದೇನಲ್ಲ. ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕೆಲವು ಕಡೆ ಅತೀವ ಕಾರ್ಯಭಾರದ ಸ್ಥಿತಿ ಇದ್ದರೆ, ಮತ್ತೆ ಕೆಲವೆಡೆ ಏನೂ ಕೆಲಸವೇ ಇಲ್ಲದಿರುವುದು ಅಪ್ರಿಯ ಸತ್ಯ. ಖಾಲಿ ಹುದ್ದೆಗಳ ಸ್ಥಿತಿಯೂ ದೊಡ್ಡಪ್ರಮಾಣದಲ್ಲಿದೆ. ಮತ್ತೊಂದೆಡೆ, ಜನಸಾಮಾನ್ಯರು ಅಗತ್ಯ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ಅಲೆದಾಡುವ ಸ್ಥಿತಿ ಇಂದಿಗೂ ತಪ್ಪಿಲ್ಲ. ಯಾವುದೋ ಸಬೂಬು ನೀಡಿ, ತಕ್ಷಣ ಆಗಬಹುದಾದ ಕಾರ್ಯವನ್ನೂ ವಿಳಂಬಿಸಲಾಗುತ್ತದೆ. ಒಂದು ಬಗೆಯಲ್ಲಿ ಈ ಇಲಾಖೆಗಳಲ್ಲಿ ಜಡ್ಡುಗಟ್ಟಿದ ವಾತಾವರಣವನ್ನು ಹೋಗಲಾಡಿಸಿ, ಕಾರ್ಯದಕ್ಷತೆಯನ್ನು ಹೆಚ್ಚಿಸಬೇಕಾಗಿದ್ದ ಸರ್ಕಾರ ಅದೇಕೋ ಈ ಕರ್ತವ್ಯವನ್ನು ಮರೆತುಬಿಟ್ಟಿದೆ ಅಂತೆನಿಸುತ್ತದೆ. ಹೀಗಾಗಿ, ಮಾನವ ಸಂಪನ್ಮೂಲದ ಸದ್ಬಳಕೆ ಆಗದೆ, ಸರ್ಕಾರಿ ಬೊಕ್ಕಸದ ಮೇಲೆ ಅನಗತ್ಯ ಹೊರೆ ಬೀಳುತ್ತಿದೆ. ಕರೊನಾ ಕಷ್ಟಕಾಲದಲ್ಲಿ ಹೊಸ ನೇಮಕಾತಿಗಳನ್ನೂ ತಡೆಹಿಡಿಯಲಾಗಿದೆ. ಅಂದಮೇಲೆ, ಇಲಾಖೆಗಳಿಗೆ ಕಾಯಕಲ್ಪ ಒದಗಿಸಿ, ಲಭ್ಯ ಇರುವ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೆಲ ಇಲಾಖೆಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆಯಾದರೂ, ಇಂಥ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.
ರಾಜ್ಯ ಸರ್ಕಾರದ 72 ಇಲಾಖೆಗಳಲ್ಲಿ 5.20 ಲಕ್ಷ ನೌಕರರಿದ್ದು, ವಾರ್ಷಿಕ ಅಂದಾಜು 40 ಸಾವಿರ ಕೋಟಿ ರೂ.ವೇತನಕ್ಕಾಗಿಯೇ ಖರ್ಚು ಮಾಡಲಾಗುತ್ತಿದೆ. ಕೆಲ ಇಲಾಖೆಗಳಲ್ಲಿ ಕಾರ್ಯಭಾರಕ್ಕಿಂತ ಹೆಚ್ಚಿನ ಪ್ರಮಾಣದ ಸಿಬ್ಬಂದಿಯಿದ್ದು, ಮಾಡಲು ಕೆಲಸವೇ ಇಲ್ಲದಂತಾಗಿದೆ. ಇಷ್ಟಾದರೂ ರಾಜ್ಯದಲ್ಲಿ 2.40 ಲಕ್ಷ ಸರ್ಕಾರಿ ಹುದ್ದೆ ಇನ್ನೂ ಖಾಲಿಯಿವೆ. ಈ ಅಸಮತೋಲನ ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗಬೇಕಿದೆ. ವಿವಿಧ ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವ ಪರಿಣಾಮ ವಾರ್ಷಿಕ 2 ಸಾವಿರ ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದ್ದು, ಇಲಾಖೆಗಳನ್ನು ಸಮರ್ಪಕವಾಗಿ ಪುನರ್ ರಚಿಸಬೇಕಿದೆ. ಮಾಹಿತಿ-ತಂತ್ರಜ್ಞಾನದ ಬಲದಿಂದ ಕಾರ್ಯಕ್ಷಮತೆ, ಪಾರದರ್ಶಕತೆ, ಸ್ಪಂದಿಸುವಿಕೆ ಹೆಚ್ಚಿಸಬಹುದಾಗಿದ್ದು, ಹೆಚ್ಚು ಜನಪರವಾಗಿ ಇಲಾಖೆಗಳು ಕೆಲಸ ಮಾಡಲು ಸಾಧ್ಯವಿದೆ. ಇದನ್ನೂ ಓದಿ: 90 ಸಾವಿರ ಹೊಸ ಪ್ರಕರಣ; ಕರೊನಾ ಸೋಂಕಿನಲ್ಲಿ ಭಾರತ ಮತ್ತೊಂದು ದಾಖಲೆ
ಆಡಳಿತ ಸುಧಾರಣೆ ನಿಟ್ಟಿನಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇರಿಸಿರುವ ಕೇಂದ್ರ ಸರ್ಕಾರ 30 ವರ್ಷ ಸೇವೆ ಪೂರೈಸಿದ ಅದಕ್ಷ ನೌಕರರಿಗೆ ಕಡ್ಡಾಯ ನಿವೃತ್ತಿಯಂಥ ನಿಯಮವನ್ನು ತಂದಿದೆ. ಈ ಹಿಂದೆ ಹಲವು ಅದಕ್ಷ ಅಧಿಕಾರಿಗಳಿಗೆ ಇದೇ ರೀತಿ ಕಡ್ಡಾಯ ನಿವೃತ್ತಿ ನೀಡಲಾಗಿತ್ತು ಎಂಬುದು ಗಮನಾರ್ಹ. ಕೇಂದ್ರದ ಕ್ರಮಗಳು ಮತ್ತು ಕೆಲ ರಾಜ್ಯ ಸರ್ಕಾರಗಳು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಕೈಗೊಂಡ ದಿಟ್ಟ ನಿರ್ಧಾರಗಳನ್ನು ಪರಾಮಶಿಸಿ, ಅವುಗಳನ್ನು ಇಲ್ಲೂ ಜಾರಿಗೆ ತಂದರೆ ಬೊಕ್ಕಸದ ಮೇಲಿನ ಹೊರೆಯೂ ತಗ್ಗುತ್ತದೆ, ಇಲಾಖೆಗಳ ಕಾರ್ಯವೈಖರಿಯೂ ಉತ್ತಮಗೊಳ್ಳುತ್ತದೆ. ಅನುಪಯುಕ್ತ ಹುದ್ದೆಗಳನ್ನು ರದ್ದು ಮಾಡಿ, ಅಗತ್ಯ ಹುದ್ದೆಗಳಿಗೆ ಸಮರ್ಥರನ್ನು ನೇಮಿಸಿ, ಸುಧಾರಣೆಗಳಿಗೆ ವೇಗ ನೀಡಲು ಇದು ಸಕಾಲ. ಅಂಥ ಸಮತೋಲನವನ್ನು ಸರ್ಕಾರ ಸಾಧಿಸಲಿ.