ಹಾಲಿನ ಉತ್ಪಾದನೆ ಹೆಚ್ಚಿಸಲು ನೀಡುವ ಹುದುಗಿದ (ಫರ್ವೆಂಟ್) ಆಹಾರದಿಂದ ರಾಸುಗಳಲ್ಲಿ ನಾಲಿಗೆ ಹುಣ್ಣು ಕಂಡು ಬರುತ್ತಿರುವುದು ರೈತರನ್ನು ಪೇಚಿಗೆ ಸಿಲುಕಿಸಿದೆ. ಇಂತಹ ರಾಸುಗಳ ಹಾಲು ಸೇವನೆಯಿಂದ ಮನುಷ್ಯರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಇದೆ. ಇಂಥ ಅಪಸವ್ಯ ಸಂಭವಿಸಿದ್ದಾದರೂ ಹೇಗೆ? ಕಡಿಮೆ ಖರ್ಚಿನಲ್ಲೇ ಹೆಚ್ಚು ಹಾಲು ಉತ್ಪಾದಿಸಬೇಕೆಂಬ ಭರದಲ್ಲಿ ರಾಸುಗಳ ಆಹಾರ ವಿಷವಾಗುತ್ತಿದೆ. ಬ್ರಿವರಿ ಕಾರ್ಖಾನೆಗಳು ಬಿಯರ್ ತಯಾರಿಸಿದ ಬಳಿಕ ಉಳಿಯುವ ಹುದುಗಿದ ಜೋಳ, ಬಾರ್ಲಿ, ಓಟ್ಸ್ ತ್ಯಾಜ್ಯವನ್ನು ಕಡಿಮೆ ಬೆಲೆಗೆ ಖರೀದಿಸಿ ರಾಸುಗಳಿಗೆ ಆಹಾರವನ್ನಾಗಿ ಕೊಡಲಾಗುತ್ತಿದೆ ಎಂಬುದು ಆಘಾತಕಾರಿ ಸಂಗತಿ. ಇದರಿಂದ ಕಾಲುಬಾಯಿ ಜ್ವರದ ಮಾದರಿಯ ನಾಲಿಗೆ ಹುಣ್ಣುಗಳು
ಕಂಡುಬರುತ್ತಿವೆ. ಅಷ್ಟೇ ಅಲ್ಲ, ಮಳೆಗಾಲದಲ್ಲಿ ಸರಿಯಾಗಿ ಒಣಗಿಸದೇ ಸಂಗ್ರಹಿಸಿಟ್ಟ ಧಾನ್ಯಗಳು, ಜೋಳ, ಕಡಲೆಬೀಜ, ಹತ್ತಿಬೀಜ, ಸೋಯಾ ಅವರೆ, ಕೊಬ್ಬರಿ, ಕೊಯ್ಲೋತ್ತರ ಹುರುಳಿ, ಅವರೆ, ಶೇಂಗಾ ಸಿಪ್ಪೆ ಮೇಲೆ ವಿಷ ಶಿಲೀಂಧ್ರಗಳು ಬೆಳೆದ ಪರಿಣಾಮ, ಅದನ್ನು ತಿನ್ನುವ ರಾಸುಗಳಲ್ಲಿಯೂ ಈ ಬಾಧೆ ಕಾಡುತ್ತಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಅಫ್ಲೊಟಾಕ್ಸಿನ್ ಹೆಚ್ಚಿರುವ ವಿಷಯುಕ್ತ ಆಹಾರ ತಿಂದ ರಾಸುಗಳಲ್ಲಿ ರಕ್ತಹೀನತೆ, ಭೇದಿ, ಚರ್ಮದಡಿ ರಸ್ತಸ್ರಾವ ಕಂಡುಬಂದಿದೆ.
ಇಂಥ ಬೆಳವಣಿಗೆಗಳಿಂದ ರಾಸುಗಳ ಆರೋಗ್ಯಕ್ಕೆ ಹಾನಿ ಒದಗುವುದಲ್ಲದೆ ಅವುಗಳ ಹಾಲು ಸೇವಿಸುವ ಮನುಷ್ಯರಿಗೂ ಸಮಸ್ಯೆ. ಒಂದೆಡೆ, ಆರೋಗ್ಯದ ಬಗ್ಗೆ ಅರಿವು, ಸೌಲಭ್ಯಗಳ ವಿಸ್ತರಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಪಶುಆಹಾರದ ವಿಷಯದಲ್ಲಿ ಇಂಥ ನಿರ್ಲಕ್ಷ್ಯ ಧೋರಣೆ ತಳೆಯುತ್ತಿರುವುದು ಸರಿಯಲ್ಲ. ಹೈನುಗಾರಿಕೆ ಮಾಡುವವರು ಯಾವುದೇ ಕಾರಣಕ್ಕೂ ರಾಸುಗಳಿಗೆ ಕಳಪೆ ಮಟ್ಟದ ಅಥವಾ ಅಳಿದುಳಿದ ಆಹಾರವನ್ನು ನೀಡಬಾರದು. ಯಾವ ಬಗೆಯ ಮತ್ತು ಎಷ್ಟು ಪ್ರಮಾಣದ ಆಹಾರ ನೀಡಬೇಕು ಮತ್ತು ಅದರ ಲಭ್ಯತೆ ಹೇಗೆ ಎಂಬ ಮಾಹಿತಿಗಳನ್ನು ಸರ್ಕಾರದಿಂದ ಮುಟ್ಟಿಸುವ ಕೆಲಸವಾಗಬೇಕು.