ಕರೊನಾ ಎರಡನೆಯ ಅಲೆಯ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರ ಮೇ 24ರವರೆಗೆ ಲಾಕ್ಡೌನ್ ವಿಧಿಸಿರುವುದು ಗೊತ್ತಿರುವಂಥದೇ. ಇದರಿಂದಾಗಿ ಸಾಮಾನ್ಯ ಜನಜೀವನದ ಜತೆಗೆ ವಾಣಿಜ್ಯೋದ್ಯಮದ ಹಲವು ಚಟುವಟಿಕೆಗಳು ಸ್ಥಗಿತವಾಗಿದ್ದು ಸಹಜವೇ. ಹೀಗಾಗಿ ಇವುಗಳನ್ನು ಅವಲಂಬಿಸಿದವರು ಸಂಕಟಕ್ಕೆ ಸಿಲುಕಿದ್ದಾರೆ.
ಅದರಲ್ಲೂ ಅಸಂಘಟಿತ ವಲಯ ಹೆಚ್ಚು ಕಷ್ಟಕ್ಕೀಡಾಗಿದೆ. ಆದ್ದರಿಂದ ಜನರ ನೆರವಿಗಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂಬ ಒತ್ತಡ ಸರ್ಕಾರದ ಮೇಲೆ ಇತ್ತು. ಈ ಭಾವನೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ 1250 ಕೋಟಿ ರೂ.ಗಳ ಮೊತ್ತದ ಪ್ಯಾಕೇಜ್ ಪ್ರಕಟಿಸಿದ್ದಾರೆ. ಕ್ಷೌರಿಕ, ಅಗಸ, ಟೇಲರ್, ಹಮಾಲಿ, ಚಿಂದಿ ಆಯುವವರು, ಭಟ್ಟಿ ಕಾರ್ವಿುಕ, ಮೆಕ್ಯಾನಿಕ್, ಗೃಹ ಕಾರ್ವಿುಕರಂತಹ ಅಸಂಘಟಿತ ಕಾರ್ವಿುಕರು ಈ ನೆರವಿನ ಪಟ್ಟಿಯಲ್ಲಿದ್ದಾರೆ.
ರೈತರು ಮತ್ತು ಸ್ವಸಹಾಯ ಸಂಘಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಿರುವ ಸಣ್ಣ, ಮಧ್ಯಮ, ದೀರ್ಘಾವಧಿಯ ಸಾಲಗಳ ಮರುಪಾವತಿ ಕಂತುಗಳನ್ನು ಜುಲೈ 31ರವರೆಗೆ ವಿಸ್ತರಿಸುವ ನಿರ್ಧಾರವನ್ನೂ ಸರ್ಕಾರ ಪ್ರಕಟಿಸಿದೆ. ಇದರಿಂದ 4.25 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಈ ಅವಧಿಯ ಬಡ್ಡಿ ಪಾವತಿಯನ್ನು ಸರ್ಕಾರವೇ ಮಾಡಲಿದೆ. ಕಳೆದ ಬಾರಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸ್ವೀಕರಿಸಿ ಬ್ಯಾಂಕ್ ಫಲಾನುಭವಿಯ ಖಾತೆಗೆ ಹಾಕಲಾಗಿತ್ತು. ಈ ಬಾರಿಯೂ ಅದೇ ರೀತಿ ನಡೆಯಲಿದೆ.
ಕರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರಗಳು ಜನರ ನೆರವಿಗೆ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ದೀರ್ಘ ಲಾಕ್ಡೌನ್ನಿಂದಾಗಿ ಅಪಾರ ಜನರು ಕಷ್ಟಕ್ಕೆ ಸಿಲುಕಿದ್ದರು. ಆಗ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ವಿವಿಧ ನೆರವನ್ನು ಪ್ರಕಟಿಸಿದ್ದವು. ಇಂಥ ನೆರವಿನಿಂದ ಜನರ ಎಲ್ಲ ಕಷ್ಟ ಪರಿಹಾರವಾಗುತ್ತದೆ ಎಂದು ಹೇಳಲಾಗದು.
ಆದರೆ ತಾತ್ಕಾಲಿಕವಾಗಿ ಸ್ವಲ್ಪ ಅನುಕೂಲವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಂದು ಪ್ರಾಯೋಗಿಕ ಸಮಸ್ಯೆ ಇದೆ. ಸರ್ಕಾರವೇನೋ ವಿವಿಧ ಜನವರ್ಗಗಳಿಗೆ ಪರಿಹಾರ ಪ್ರಕಟಿಸುತ್ತದೆ. ಇಂಥ ನೆರವು ವಿತರಿಸುವಾಗ ಕೆಲ ದಾಖಲೆಗಳೂ ಅನಿವಾರ್ಯ. ಇಲ್ಲವಾದಲ್ಲಿ ಅನರ್ಹರೂ ನೆರವು ಪಡೆದುಕೊಂಡು ಅರ್ಹರಿಗೆ ಸಿಗದಿರುವ ಸಾಧ್ಯತೆಗಳೂ ಇರುತ್ತವೆ. ನಮ್ಮಲ್ಲಿ ಅಸಂಘಟಿತ ವಲಯದಲ್ಲಿ ದೊಡ್ಡ ಸಂಖ್ಯೆಯ ಶ್ರಮಿಕರಿದ್ದಾರೆ. ಇವರಲ್ಲಿ ಎಷ್ಟೋ ಮಂದಿಗೆ ಗುರುತಿನ ಚೀಟಿಯಾಗಲಿ ಅಥವಾ ಸರ್ಕಾರದ ನೆರವಿಗೆ ಅಗತ್ಯವಾಗಿ ಬೇಕಾದ ಬೇರೆ ದಾಖಲೆಯಾಗಲಿ ಇರುವುದಿಲ್ಲ. ಇಂಥವರನ್ನು ಗುರುತಿಸಿ ಅವರಿಗೆ ನೆರವು ತಲುಪುವಂತೆ ಮಾಡುವುದು ದೊಡ್ಡ ಸವಾಲು.
ಪರಿಹಾರ ಪಡೆಯುವ ಅರ್ಹರು ಎಷ್ಟು? ಇವರಲ್ಲಿ ನಿಜವಾಗಿಯೂ ತೊಂದರೆಗೆ ಒಳಗಾದವರು ಎಷ್ಟು ಮಂದಿ ಮುಂತಾದ ನಿಖರ ಮಾಹಿತಿ ಅಧಿಕಾರಿಗಳ ಬಳಿ ಇಲ್ಲ. ಕಳೆದ ಸಲ ಕೂಡ ಇಂತಹ ಮಾಹಿತಿ ಕೊರತೆಯಾಗಿತ್ತು. ಕೆಲವು ಅರ್ಹರಿಗೆ ದಾಖಲೆ ಇಲ್ಲದ ಕಾರಣಕ್ಕಾಗಿ ನೆರವು ದೊರೆಯದೆ ಹೋದರೆ, ಕೆಲವು ಅನರ್ಹರಿಗೂ ನೆರವು ಸಂದಾಯವಾಗಿತ್ತು. ಹೀಗಾದಾಗ ಮೂಲೋದ್ದೇಶ ಈಡೇರುವುದಿಲ್ಲ. ಆದ್ದರಿಂದ ಮಾಹಿತಿ ದಾಖಲೀಕರಣದ ಕೆಲಸ ಆಗಬೇಕು. ಅಂದಾಗ ಸರ್ಕಾರಕ್ಕೂ ಸುಲಭವಾಗುತ್ತದೆ; ಜನರಿಗೂ ಸವಲತ್ತು ಪಡೆಯಲು ತೊಂದರೆ ಆಗುವುದಿಲ್ಲ.
******