ನ್ಯೂಸ್

ಸಂಪಾದಕೀಯ| ಮುನ್ನೆಚ್ಚರಿಕೆಯೇ ಮದ್ದು

ರಮೇಶ್​ ಕುಮಾರ್​​ ಬಿ ಎಡಮೋಳೆ

ಬ್ರಿಟನ್ನಿನಲ್ಲಿ ಹಾವಳಿ ಉಂಟುಮಾಡಿರುವ ರೂಪಾಂತರಿ ಕರೊನಾ ವೈರಸ್, ಅಲ್ಲಿಂದ ಬಂದ ರಾಜ್ಯದ ಕೆಲವರಲ್ಲೂ ಕಾಣಿಸಿಕೊಂಡಿದೆ. ಬೆಂಗಳೂರು, ಶಿವಮೊಗ್ಗಗಳಲ್ಲಿ ಈ ವೈರಾಣು ಪ್ರಭೇದ ಕೆಲವರಲ್ಲಿ ಪತ್ತೆಯಾಗಿದೆ. ಇವರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ರೂಪಾಂತರಿ ವೈರಾಣು ವೇಗವಾಗಿ ಪಸರಿಸುವ ಗುಣ ಹೊಂದಿದೆಯೆಂಬುದನ್ನು ಬಿಟ್ಟರೆ ರೋಗದಲ್ಲಿ ತೀವ್ರತೆ ಇಲ್ಲ. ಇದು ಸ್ವಲ್ಪ ಸಮಾಧಾನದ ಸಂಗತಿ. ಅದಕ್ಕೆ ಚಿಕಿತ್ಸೆ ಅಂತ ಹೊಸದೇನೂ ಇಲ್ಲ. ಈಗ ಕರೊನಾಕ್ಕೆ ಯಾವ ಬಗೆಯ ಚಿಕಿತ್ಸೆ ನೀಡಲಾಗುತ್ತದೆಯೋ ಅದನ್ನೇ ಇದಕ್ಕೂ ನೀಡಲಾಗುತ್ತದೆ. ಹಾಗಂತ ಜನರು ಮೈಮರೆಯಬಾರದು ಎಂಬುದು ತಜ್ಞರು ನೀಡುವ ಎಚ್ಚರಿಕೆ.

ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಬಳಕೆ ಮತ್ತು ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳುವಂತಹ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಬೇಕು ಎಂದು ಸರ್ಕಾರ ಕೂಡ ಪದೇಪದೆ ಹೇಳುತ್ತಿದೆ. ಇದೇ ವೇಳೆ, ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರ ಕಡಿವಾಣ ಹಾಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಕೆಲವೆಡೆಯಂತೂ ನಿಷೇಧಾಜ್ಞೆ ವಿಧಿಸಲಾಗಿದೆ. ಅಂದರೆ, ನಾಲ್ಕಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಕರೊನಾ ಪ್ರಕರಣಗಳು ತಗ್ಗುತ್ತಿರುವ ಸಂದರ್ಭದಲ್ಲಿ ಇಂಥ ಬಿಗಿಕ್ರಮಗಳು ಅನಿವಾರ್ಯ ಎಂಬುದರ ನಡುವೆಯೇ, ಆರ್ಥಿಕತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಮತ್ತೊಂದು ಸುತ್ತಿನಲ್ಲಿ ಶಾಲೆಗಳು ಪುನರಾರಂಭವಾಗುತ್ತಿವೆ. ಅಂದರೆ, ಜನವರಿ 1ರಿಂದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ-2 ಮತ್ತು 6ರಿಂದ 9ರ ವಿದ್ಯಾಗಮ ತರಗತಿಗಳು ಆರಂಭವಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್​ಒಪಿ)ಯನ್ನೂ ಬಿಡುಗಡೆ ಮಾಡಿದೆ.

ಈ ವಿಷಯದಲ್ಲಿ ಶಾಲೆಗಳು ಬಹಳ ಎಚ್ಚರ ವಹಿಸಬೇಕಾಗುತ್ತದೆ. ತರಗತಿ ಪುನರಾರಂಭವಾದರೂ ವಿದ್ಯಾರ್ಥಿಗಳ ಭೌತಿಕ ಹಾಜರಿಯನ್ನು ಕಡ್ಡಾಯ ಮಾಡಿಲ್ಲ. ಆನ್​ಲೈನ್ ತರಗತಿಯಲ್ಲಿ ಭಾಗವಹಿಸುವ ಅವಕಾಶವನ್ನು ಮುಂದುವರಿಸಲಾಗಿದೆ. ಎಸ್​ಎಸ್​ಎಲ್​ಸಿ ಹಾಗೂ ಪಿಯು-2 ತರಗತಿಗಳು ಭವಿಷ್ಯದ ಶಿಕ್ಷಣದ ನಿಟ್ಟಿನಲ್ಲಿ ಮಹತ್ವದಾಗಿರುವುದರಿಂದ ಅವನ್ನು ಮೊದಲು ಶುರುಮಾಡಿ, ಅದರ ಅನುಭವದ ಆಧಾರದ ಮೇಲೆ ಜನವರಿ 15ರಿಂದ 9 ಮತ್ತು 11ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ಈ ಶೈಕ್ಷಣಿಕ ವರ್ಷದ ಬಹುತೇಕ ಅವಧಿ ಮುಗಿಯುತ್ತ ಬಂದಿದ್ದು, ಇನ್ನು ಉಳಿದ ಅವಧಿಗಾದರೂ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಬಂದರೆ ಅಧ್ಯಯನದ ದೃಷ್ಟಿಯಿಂದ ಉತ್ತಮ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸರ್ಕಾರ ತಜ್ಞರ ಅಭಿಪ್ರಾಯವನ್ನೂ ಪರಿಗಣಿಸಿ ಅಳೆದುಸುರಿದು ಈ ನಿರ್ಧಾರಕ್ಕೆ ಬಂದಿದೆ. ಆನ್​ಲೈನ್ ತರಗತಿಗಳು ಅನಿವಾರ್ಯ ಸಂದರ್ಭದಲ್ಲಿ ಉಪಯುಕ್ತ ಎಂಬುದು ನಿಜವಾದರೂ, ಮಕ್ಕಳು ಶಾಲೆಗೆ ಹೋದಲ್ಲಿ ಅದರಿಂದಾಗುವ ಮಾನಸಿಕ-ದೈಹಿಕ ಪ್ರಯೋಜನಗಳೇ ಬೇರೆ ಎಂದು ಮನೋವಿಜ್ಞಾನಿಗಳೂ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಲೇ ದೈನಂದಿನ ಜೀವನಕ್ಕೆ ಹೊಂದಿಕೊಳ್ಳಲು ಸಜ್ಜಾಗಬೇಕಾಗುತ್ತದೆ.