ನ್ಯೂಸ್

ಸಂಪಾದಕೀಯ| ದೂರಗಾಮಿ ಯೋಜನೆ ಇರಲಿ-ಅಭಿವೃದ್ಧಿ ನಿಗಮದಿಂದ ಏನು ಪ್ರಯೋಜನ?

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಲವು ಕಡೆಯಿಂದ ಆಕ್ಷೇಪದ ದನಿಗಳು ಎದ್ದಿದ್ದು, ಈ ನಿರ್ಧಾರ ಮರುಪರಿಶೀಲಿಸುವಂತೆ ಒತ್ತಡವೂ ಹೆಚ್ಚುತ್ತಿದೆ. ಈ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಹೊರಬಿದ್ದಿದೆ. ತರಾತುರಿಯಲ್ಲಿ ಸರ್ಕಾರ ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಅಚ್ಚರಿಯ ಜತೆಗೆ ವಿರೋಧವೂ ತೀವ್ರವಾಗಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ಮಾಡದೆಯೇ ನಿಗಮ ಸ್ಥಾಪನೆಗೆ ಹೊರಟಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದ ಹಲವು ಸ್ವಾಮೀಜಿಗಳು ಕೂಡ ಈ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿರುವುದು ಗಮನಾರ್ಹ. ‘ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತಿರುವ ವಿಚಾರ ಕೇಳಿ ಆಶ್ಚರ್ಯವಾಗಿದೆ. ಹೀಗೆ ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತ ಹೋದರೆ ಅದಕ್ಕೆ ಮಿತಿಯೇ ಇರುವುದಿಲ್ಲ’ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. ಗದಗನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ, ‘ಯಾವುದೇ ಗೊತ್ತು ಗುರಿ ಇಲ್ಲದ ಈ ನಿಗಮದಿಂದ ಯಾರಿಗೆ ಪ್ರಯೋಜನವಿದೆ? ನಿಗಮ ಸ್ಥಾಪನೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇಡೀ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ, ಆ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ಹೀಗೆ ಜಾತಿಗೆ ಒಂದರಂತೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತ ಹೋದರೆ ಅದರಿಂದಾಗುವ ತೊಂದರೆಗಳು ಅಷ್ಟಿಷ್ಟಲ್ಲ. ಇಲ್ಲಿ ಒಂದು ವಾಸ್ತವ ಸ್ಥಿತಿಯನ್ನು ಸರ್ಕಾರ ಪ್ರಾಂಜಲ ಮನಸ್ಸಿನಿಂದ ಗಮನಿಸಬೇಕು. ಎಲ್ಲ ಜಾತಿಗಳಲ್ಲೂ ಹಿಂದುಳಿದವರಿದ್ದಾರೆ, ಕಡು ಬಡವರಿದ್ದಾರೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು ವಿವೇಕದ ನಡೆಯಾಗಬಲ್ಲದೆ ಹೊರತು ಅಭಿವೃದ್ಧಿ ನಿಗಮಗಳ ಸ್ಥಾಪನೆಯಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಸಮಾಜದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಜಾತಿಗೆ ಸೀಮಿತವಾಗಿ ಅಭಿವೃದ್ಧಿ ನಿಗಮ ಸ್ಥಾಪಿಸುತ್ತ ಹೊರಟರೆ ಸರ್ಕಾರ ಅದಕ್ಕೆ ಅನುದಾನ ಎಲ್ಲಿಂದ ತರುತ್ತದೆ? ಸೂಕ್ತ ಅನುದಾನವೇ ಇಲ್ಲದೆ ಇಂಥ ಕ್ರಮಗಳನ್ನು ಜಾರಿಗೆ ತಂದರೂ ಅದರಿಂದ ಯಾರಿಗೂ ಪ್ರಯೋಜನ ಇಲ್ಲ. ಒಂದು ಜಾತಿಗೆ ಅಭಿವೃದ್ಧಿ ನಿಗಮ ದಕ್ಕಿದರೆ, ಮತ್ತೊಂದು ಜಾತಿ, ಸಮುದಾಯದಿಂದಲೂ ಬೇಡಿಕೆ ಭುಗಿಲೇಳುತ್ತದೆ. ಆಗ, ಸಾಮಾಜಿಕ ಸಮೀಕರಣಗಳನ್ನು, ಸಾಮರಸ್ಯದ ವಾತಾವರಣವನ್ನು ಕಾಪಾಡುವುದೇ ಕಷ್ಟವಾಗಿ ಬಿಡುತ್ತದೆ.

ಇಂಥ ಕ್ರಮಗಳ ಬದಲು ಸರ್ಕಾರ ದೂರಗಾಮಿ ಚಿಂತನೆಯನ್ನು ಇರಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಿ. ಅದರಿಂದ ಸಮಾಜದಲ್ಲಿ ನಿಜವಾಗಿಯೂ ಶೋಷಿತರಿಗೆ, ಬಡವರಿಗೆ ಆಶಾಕಿರಣ ಸಿಗುವಂತಾಗಲಿ. ಕರೊನಾ ಹೊತ್ತಲ್ಲಿ ಆರ್ಥಿಕ ಚೇತರಿಕೆ ಸೇರಿ ಹಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಹೀಗಿರುವಾಗ ಸರ್ಕಾರ ಅನಗತ್ಯ ವಿವಾದಗಳನ್ನು ಸೃಷ್ಟಿಸದಿರಲಿ.