ಕರೊನಾ ಕಾಲಘಟ್ಟ ಹಲವು ಸಂಕಷ್ಟಗಳನ್ನು ತಂದೊಡ್ಡಿರುವುದು ಗೊತ್ತಿರುವಂಥದ್ದೇ. ಅದರಲ್ಲೂ, ಹಲವು ತಿಂಗಳ ಲಾಕ್ಡೌನ್ ಪರಿಣಾಮ ಕೈಗಾರಿಕಾ ವಲಯ ಸಂಪೂರ್ಣ ನೆಲ ಕಚ್ಚಿದ್ದು, ಆದಾಯ ಸಂಗ್ರಹ, ಆರ್ಥಿಕಾಭಿವೃದ್ಧಿಗೆ ಬಲವಾದ ಪೆಟ್ಟು ಬಿದ್ದಿದೆ. ಆರ್ಥಿಕ ಸ್ಥಿತಿ ಶೋಚನೀಯವಾಗಿರುವುದರಿಂದಲೇ -ಠಿ; 33 ಸಾವಿರ ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. ವಾಣಿಜ್ಯ ವಹಿವಾಟು, ಆರ್ಥಿಕ ಚಟುವಟಿಕೆ ಚೇತರಿಕೆ ಕಾಣಲು ಇನ್ನು ಕೆಲ ತಿಂಗಳಾದರೂ ಬೇಕು. ಹಾಗಂತ, ಎಲ್ಲವೂ ತನ್ನಿಂದ ತಾನೇ ಸರಿಹೋಗುತ್ತದೆ ಎಂದು ಕೈಕಟ್ಟಿ ಕೂರುವಂತೆಯೂ ಇಲ್ಲ. ಕರೊನಾ ಸಮಸ್ಯೆಗಳನ್ನು ಸೃಷ್ಟಿಸಿರುವಂತೆಯೇ, ಅವಕಾಶಗಳನ್ನೂ ಒದಗಿಸಿದೆ. ಮುಖ್ಯವಾಗಿ, ಕೈಗಾರಿಕಾ ರಂಗ ಹೊಸ ಉತ್ಸಾಹದಿಂದ ಪುಟಿದೇಳಲು ಹಲವು ಸಾಧ್ಯತೆಗಳಿವೆ. ಅಂಥ ಹೊಸ ಮಾಗೋಪಾಯಗಳನ್ನು ಶೋಧಿಸುವ, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕಿದೆ. ಬಂಡವಾಳ ಹೂಡಿಕೆ ಮತ್ತು ಉದ್ಯೋಗಸೃಷ್ಟಿ ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೆ, ಸಮಸ್ಯೆಗಳ ತೀವ್ರತೆ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.
ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಿದೆ. ಇದರ ಪರಿಣಾಮವೇನು ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಅಂತೆಯೇ, ಕಳೆದ ಐದು ವರ್ಷಗಳಲ್ಲಿ ಆಗಿರುವ ಕೈಗಾರಿಕಾ ಬೆಳವಣಿಗೆಯ ಬಗ್ಗೆ ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ವಿಧಾನ ಪರಿಷತ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 1,226 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ, -ಠಿ; 1,95,404 ಕೋಟಿ ಬಂಡವಾಳ ಹೂಡಿಕೆ ಹಾಗೂ 8.68 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈಗಾಗಲೇ ಅನುಷ್ಠಾನಕ್ಕೆ ಬಂದಿರುವ 299 ಯೋಜನೆಗಳಿಗೆ 19,017 ಎಕರೆ ಜಮೀನನ್ನು ಕೆಎಐಡಿಬಿ ಮೂಲಕ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಲಾಗಿದೆ. ಅಲ್ಲದೆ, ಹೊಸ ಕೈಗಾರಿಕಾ ನೀತಿ ಜಾರಿಗೊಳಿಸಿ, ಹಲವಾರು ವಿನಾಯಿತಿ, ಅನುಮತಿ ಸರಳೀಕರಣ, ಕೈಗಾರಿಕೆ ಸೌಲಭ್ಯಗಳ ಕಾಯ್ದೆಗೆ ತಿದ್ದುಪಡಿ ಮುಂತಾದ ಸುಧಾರಣಾ ಕ್ರಮ ಕೈಗೊಂಡು ಕೈಗಾರಿಕೆಗಳನ್ನು ನೆಲೆಗೊಳಿಸಲು ಉತ್ತೇಜನ ನೀಡಲಾಗಿದೆ ಎಂಬ ವಿವರಣೆ ಸರ್ಕಾರದ್ದು.
ಚೀನಾದಿಂದ ಹೊರಬರಲು ಸಿದ್ಧವಿರುವ ಉದ್ಯಮಗಳನ್ನು ರಾಜ್ಯದತ್ತ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿತ ಕಾರ್ಯಪಡೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿರುವುದು ಉತ್ತಮ ಬೆಳವಣಿಗೆ. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ, ಕೌಶಲ, ಕಚ್ಚಾವಸ್ತುಗಳ ಲಭ್ಯತೆ ಹೊಂದಿರುವ ಕರ್ನಾಟಕದಲ್ಲಿ ಕೈಗಾರಿಕೆಗಳ ವಿಸ್ತರಣೆಗೆ ಸಾಕಷ್ಟು ಅವಕಾಶಗಳಿವೆ. ರಾಜಧಾನಿ ಬೆಂಗಳೂರನ್ನು ಮಾತ್ರವಲ್ಲದೆ, ಎರಡನೇ ಹಂತದ ನಗರಗಳನ್ನು ಸಹ ಬಂಡವಾಳ ಹೂಡಿಕೆಗೆ ಪೂರಕವಾಗಿ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ. ಮತ್ತು ಅನುಮೋದನೆಯಾದ ಯೋಜನೆಗಳು ಅನುಷ್ಠಾನದ ಹಂತದಲ್ಲಿ ಹಳಿ ತಪ್ಪದಂತೆ ನೋಡಿಕೊಳ್ಳಬೇಕಿದೆ. ಅಧಿಕಾರಶಾಹಿಯ ವಿಳಂಬವೋ, ಸಾಲದ ಅಲಭ್ಯತೆಯೋ ಯಾವುದೋ ಕಾರಣದಿಂದ ಪ್ರಮುಖ ಉದ್ಯಮಗಳು ರಾಜ್ಯದಿಂದ ಬೇರೆ ಕಡೆ ಮುಖ ಮಾಡುವಂತೆ ಆಗಬಾರದು. ಆ ಕಾಳಜಿಯನ್ನು ಸರ್ಕಾರ ಪ್ರದರ್ಶಿಸಲಿ.