ದೇಶದಾದ್ಯಂತ ಕರೊನಾ ಸೋಂಕಿನ ಹಾವಳಿ ಆರಂಭವಾಗಿ ಐದು ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ಸೋಂಕು ನಿಯಂತ್ರಣಕ್ಕೆ ನಡೆಸಲಾದ ಹೋರಾಟ ಮಹತ್ವದ ಫಲಿತಾಂಶವನ್ನು ನೀಡಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶನ, ಸಮನ್ವಯದೊಂದಿಗೆ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳು ಫಲ ನೀಡುತ್ತಿವೆ. ದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 23 ಲಕ್ಷಕ್ಕೆ ಏರಿಕೆ ಆಗಿದ್ದರೂ, ಚೇತರಿಕೆ ಪ್ರಮಾಣ ಕ್ರಮೇಣ ಹೆಚ್ಚುತ್ತ ಪ್ರಸ್ತುತ ಶೇಕಡ 70ಕ್ಕೆ ತಲುಪಿರುವುದು ಸಮಾಧಾನದ ಸಂಗತಿ. ಮರಣ ಪ್ರಮಾಣವೂ ಶೇಕಡ 2ಕ್ಕಿಂತ ಕಡಿಮೆ ಇದ್ದು, ಇದನ್ನು ಶೇ.1ಕ್ಕಿಂತ ಕಡಿಮೆಗೆ ತರುವುದು ಕೇಂದ್ರ ಸರ್ಕಾರದ ಉದ್ದೇಶ. ಆದರೆ, ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇಕಡ 80ಕ್ಕೂ ಹೆಚ್ಚು ಕರ್ನಾಟಕ ಸೇರಿ ಹತ್ತು ರಾಜ್ಯಗಳಲ್ಲೇ ಇದ್ದು, ಈ ರಾಜ್ಯಗಳು ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹತ್ತು ರಾಜ್ಯಗಳ (ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಪಂಜಾಬ್, ತಮಿಳುನಾಡು) ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ್ದು, ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ, ಇಡೀ ದೇಶ ಕರೊನಾ ವಿರುದ್ಧದ ಹೋರಾಟ ಗೆಲ್ಲಲು ಈ ಹತ್ತೂ ರಾಜ್ಯಗಳ ಪಾತ್ರ ಪ್ರಮುಖವಾಗಿದ್ದು, ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ರ್ಚಚಿಸಿದ್ದಾರೆ.
ಆರಂಭಿಕ ಹಂತದಲ್ಲೇ ಅಂದರೆ 72 ಗಂಟೆಗಳ ಒಳಗೆ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸುವುದರಿಂದ ಸೋಂಕು ಪ್ರಸರಣದ ವೇಗವನ್ನು ತಗ್ಗಿಸಬಹುದು ಎಂದಿರುವ ಪ್ರಧಾನಿ ಕರೊನಾ ಪರೀಕ್ಷೆಗಳ ಸಂಖ್ಯೆಯನ್ನೂ ಗಣನೀಯವಾಗಿ ಹೆಚ್ಚಿಸುವಂತೆ ಹೇಳಿದ್ದಾರೆ. ಮುಖಗವಸು ಧರಿಸುವ, ಮೇಲಿಂದಮೇಲೆ ಕೈತೊಳೆಯುವ, ಎಲ್ಲೆಂದರಲ್ಲಿ ಉಗುಳದೆ ಇರುವ ಕ್ರಮಗಳು ಜೀವನಮಂತ್ರದ ಭಾಗವಾಗಬೇಕಿದ್ದು, ಜನರು ನಿತ್ಯಾನುಷ್ಠಾನದಲ್ಲಿ ತರಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವ್ಯಾಪಕ ಪ್ರಮಾಣದಲ್ಲಿ ಮಾಡಬೇಕಿದೆ ಎಂಬ ಪ್ರಧಾನಿ ಸಲಹೆ ಸೂಕ್ತವಾಗಿಯೇ ಇದೆ.
ಕರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ 5 ಲಕ್ಷಕ್ಕಿಂತ ಹೆಚ್ಚು, ತಮಿಳುನಾಡಿನಲ್ಲಿ 3 ಲಕ್ಷ ಮತ್ತು ಆಂಧ್ರಪ್ರದೇಶದಲ್ಲಿ 2 ಲಕ್ಷದ ಗಡಿಯನ್ನು ದಾಟಿವೆ. ಯಾವುದೇ ಒಂದು ರಾಜ್ಯದ ಲೋಪವೂ ಇಡೀ ದೇಶದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ ಇನ್ನು ಲಸಿಕೆ ಬಂದಿಲ್ಲ. ರಷ್ಯಾದ ಲಸಿಕೆ ಮಾರುಕಟ್ಟೆಗೆ ಬರುತ್ತಿದೆ ಎಂಬ ವರದಿ ಇದೆಯಾದರೂ, ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ ಆಗಿರಲಿದೆ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಹಾಗಾಗಿ, ಸಾಮೂಹಿಕ ಬದ್ಧತೆಯ ಮೂಲಕ ಕರೊನಾ ವಿರುದ್ಧ ಹೋರಾಟವನ್ನು ಮುಂದುವರಿಸಬೇಕಿದ್ದು, ಅಂತಿಮ ವಿಜಯದವರೆಗೂ ವಿಶ್ರಮಿಸುವಂತಿಲ್ಲ. ಎಲ್ಲ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಬಲವಾದ ಹೆಜ್ಜೆಗಳನ್ನು ಇರಿಸಲಿ.