ನ್ಯೂಸ್

ವಿಜಯವಾಣಿ ಸಂಪಾದಕೀಯ: ಅವಕಾಶಗಳತ್ತ ಗಮನ

kumarvrl

ಕರೊನಾ ಸೋಂಕು ಹುಟ್ಟುಹಾಕಿರುವ ಸ್ಥಿತ್ಯಂತರ ಅಷ್ಟಿಷ್ಟಲ್ಲ. ಉದ್ಯಮ, ಆರ್ಥಿಕತೆ ಸೇರಿ ಎಲ್ಲ ಸಮೀಕರಣಗಳು ಬದಲಾಗಿವೆ. ನಿಖರ ನಷ್ಟವನ್ನು ಈಗಲೇ ಅಂದಾಜು ಮಾಡುವ ಸ್ಥಿತಿಯಲ್ಲಿ ಯಾವುದೇ ರಾಷ್ಟ್ರಗಳಿಲ್ಲ. ಸೋಂಕನ್ನು ನಿಯಂತ್ರಿಸುವುದು, ಜನರ ಜೀವ ಉಳಿಸುವುದು ಆದ್ಯತೆಯಾಗಿದೆ. ಅದು ಅವಶ್ಯವೂ ಹೌದು. ಈ ನಡುವೆ ಸೋಂಕು ಮೊದಲು ಕಾಣಿಸಿಕೊಂಡ ಚೀನಾ ದೇಶವನ್ನು ಈಗ ಜಾಗತಿಕ ವಲಯ ಅನುಮಾನದ ದೃಷ್ಟಿಯಿಂದಲೇ ನೋಡುತ್ತಿದೆ. ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದ, ವಾಸ್ತವ ಸಂಗತಿಗಳನ್ನು ಬಿಟ್ಟುಕೊಡದ ಚೀನಾದ ನಡೆ ಮತ್ತಷ್ಟು ಸಂಶಯಗಳನ್ನೇ ಹುಟ್ಟಿಸುತ್ತಿದೆ. ವಿಶ್ವದಲ್ಲೇ ಎರಡನೇ ದೊಡ್ಡ ಆರ್ಥಿಕ ಶಕ್ತಿ ಆಗಿರುವ ಚೀನಾ ಉದ್ಯಮ ಸಾಮ್ರಾಜ್ಯವನ್ನು ಬೃಹತ್ತಾಗಿ ಕಟ್ಟಿದ್ದು, ಉತ್ಪಾದನಾ ವಲಯದಲ್ಲಂತೂ ಹೊಸ ಎತ್ತರ ಕಂಡಿದೆ. ಆದರೆ, ಕರೊನೋತ್ತರ ದಿನಗಳಲ್ಲಿ ಚೀನಾದ ಈ ಉದ್ಯಮಸಾಮ್ರಾಜ್ಯ ಪತನಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ತಜ್ಞರು, ಚೀನಾ ಭಾರಿ ಸಂಕಷ್ಟ ಎದುರಿಸಲಿದೆ ಎನ್ನುತ್ತಿದ್ದಾರೆ. ಇದರ ಆರಂಭಿಕ ಲಕ್ಷಣಗಳೂ ಗೋಚರಿಸತೊಡಗಿವೆ.

ಹಲವು ರಾಷ್ಟ್ರಗಳು ತಮ್ಮ ಕಂಪನಿಗಳನ್ನು ವಾಪಸ್ ಕರೆಸಿಕೊಳ್ಳುತ್ತಿವೆ. ಅಲ್ಲದೆ, ಇದು ದಿಗ್ಬಂಧನದ ಅವಧಿ ಆಗಿರುವುದರಿಂದ ಪರಿಸ್ಥಿತಿ ಸಾಮಾನ್ಯಕ್ಕೆ ಬರುತ್ತಿದ್ದಂತೆಯೇ ಅಲ್ಲಿಂದ ಹಲವು ರಾಷ್ಟ್ರಗಳ ಕಂಪನಿಗಳು ಕಾಲು ಕೀಳಲಿವೆ ಎನ್ನಲಾಗಿದೆ. ಹಾಗಿದ್ದರೆ, ಇಂಥ ಕಂಪನಿಗಳು ಯಾವ ರಾಷ್ಟ್ರದತ್ತ ಮುಖ ಮಾಡಲಿವೆ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಹಲವು ರಾಷ್ಟ್ರಗಳು ಈ ಕಂಪನಿಗಳನ್ನು ಸೆಳೆಯಲು ಯತ್ನಿಸುತ್ತಿರುವಂತೆಯೇ ಭಾರತ ಕೂಡ ಈ ಪ್ರಯತ್ನದಲ್ಲಿ ಹಿಂದೆ ಬಿದ್ದಿಲ್ಲ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಜತೆಗೆ, ರಾಜ್ಯಗಳಿಗೂ ಹೂಡಿಕೆ ನಿಟ್ಟಿನಲ್ಲಿ ಇಂಥ ಕಂಪನಿಗಳನ್ನು ಸೆಳೆಯುವಂತೆ ಸೂಚಿಸಿದ್ದಾರೆ.

ಭಾರತ ಈಗ ಕೈಗಾರಿಕೆಗಳಿಗೆ ಅನುಕೂಲಕರ ರಾಷ್ಟ್ರವೆಂದೇ ಗುರುತಿಸಿಕೊಂಡಿದೆ. ಅದಕ್ಕೆ ಕೆಲ ಜಾಗತಿಕ ಸಮೀಕ್ಷೆಗಳು ನೀಡಿದ ರ‍್ಯಾಂಕಿಂಗ್ ಸಾಕ್ಷಿ. ಮಾನವ ಸಂಪನ್ಮೂಲ, ಮೂಲಸೌಕರ್ಯ, ಕೌಶಲ ಹೊಂದಿದ ಯುವಸಮೂಹ, ಮಾಹಿತಿ- ತಂತ್ರಜ್ಞಾನ, ಜೈವಿಕ-ತಂತ್ರಜ್ಞಾನದ ಬಲ, ಎಲ್ಲರೂ ಹೊಂದಿಕೊಳ್ಳುವಂಥ ವಿಶಿಷ್ಟ ಭೌಗೋಳಿಕ ಪರಿಸರ ಇವೆಲ್ಲವೂ ಪೂರಕವಾಗಿ ಕಂಡುಬರುವ ಸಂಗತಿಗಳು. ಬಹುತೇಕ ರಾಜ್ಯಗಳು ಈ ವಿಷಯದಲ್ಲಿ ಉತ್ತಮ ಸಾಮರ್ಥ್ಯ ಹೊಂದಿವೆ. ಹಾಗಾಗಿ, ಬಂಡವಾಳ ಹೂಡಿಕೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರಗಳು ದೊಡ್ಡ ಉದ್ಯಮಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೆ, ಮುಂದಿನ ದಿನಗಳ ಹಲವು ಆತಂಕಗಳನ್ನು ತಗ್ಗಿಸಬಹುದು. ಹಾಗಾಗಿ, ಪ್ರಧಾನಿ ಮೋದಿ ನೀಡಿರುವ ಈ ಸೂಚನೆಯನ್ನು ಎಲ್ಲ ರಾಜ್ಯ ಸರ್ಕಾರಗಳು ಸೂಕ್ತವಾಗಿ ಪರಾಮಶಿಸಿ, ಕ್ರಮ ಕೈಗೊಳ್ಳಬೇಕು. ಚೀನಾದಲ್ಲಿ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳ ಉದ್ಯಮಗಳೂ ನೆಲೆಸಿವೆ. ಇವುಗಳನ್ನು ಭಾರತಕ್ಕೆ ಕರೆತಂದರೆ ಇಲ್ಲಿನ ಕೈಗಾರಿಕಾ ಚಿತ್ರಣ ಬದಲಾಗುವ ಜತೆಗೆ, ಉದ್ಯೋಗಸೃಷ್ಟಿಗೂ ಪೂರಕವಾಗುತ್ತದೆ. ಸಂಕಟಗಳು ಮುಸುಕಿನಲ್ಲಿ ಅವಕಾಶವನ್ನೂ ತಂದಿರುತ್ತವೆ. ಕರೊನಾದ ಸಂದರ್ಭ ಕೂಡ ಹೀಗೆಯೇ ಇದೆ. ಆದ್ದರಿಂದ, ನಮ್ಮ ಮುಂದಿರುವ ಅವಕಾಶಗಳನ್ನು ಅವಲೋಕಿಸಿ, ಬಳಸಿಕೊಳ್ಳುವುದು ಜಾಣತನ.