ನ್ಯೂಸ್

ಕರೊನಾ ಸೃಷ್ಟಿಸಿದ ಪ್ರಶ್ನೆಗಳು

kumarvrl

ಕರೊನಾ ಸೋಂಕು ಜಾಗತಿಕವಾಗಿ ಹರಡಿಕೊಂಡು, ಇದಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಚೀನಾದಲ್ಲಿ ಕರೊನಾ ಸೋಂಕಿನ ಹರಡುವಿಕೆ, ಗಂಭೀರತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮುಚ್ಚಿಟಿತು ಎಂಬ ಗಂಭೀರ ಆರೋಪ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೇ ಕಾರಣದಿಂದ ಡಬ್ಲುಎಚ್​ಒಗೆ ಸಹಾಯಧನ ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಕಳೆದ ವರ್ಷವಷ್ಟೇ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ 400 ಮಿಲಿಯನ್ ಡಾಲರ್ ಸಹಾಯಧನ ನೀಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕರೊನಾ ಸೋಂಕು ಸಾಂಕ್ರಾಮಿಕ ಆಗಿರುವುದರಿಂದ ಜಗತ್ತಿನಾದ್ಯಂತ 75 ಸಾವಿರ ಜನ ಸಾಯಬಹುದು ಎಂದು ಡಬ್ಲುಎಚ್​ಒ ಅಂದಾಜಿಸಿತ್ತು. ಆದರೆ, ಈಗಾಗಲೇ ಸೋಂಕಿಗೆ ಬಲಿಯಾದವರ ಸಂಖ್ಯೆ 1.30 ಲಕ್ಷದ ಗಡಿ ದಾಟಿದ್ದರೆ, ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ. ಅಲ್ಲದೆ, ಡಬ್ಲುಎಚ್​ಒ ಆರಂಭದ ದಿನಗಳಲ್ಲಿ ‘ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ’ ಎಂದು ಹೇಳುವ ಮೂಲಕ ಜಗತ್ತಿಗೆ ತಪು್ಪಸಂದೇಶ ರವಾನಿಸಿತ್ತು.

ಟ್ರಂಪ್ ಈ ಹಿಂದೆಯೇ ಚೀನಾದ ವಿರುದ್ಧವೂ ಗುಡುಗಿದ್ದಾರೆ. ಕರೊನಾ ಸೋಂಕನ್ನು ‘ಚೀನಾ ವೈರಸ್’ ಎಂದೇ ಕರೆದಿದ್ದಾರೆ. 2019ರ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಮೊದಲು ಈ ಸೋಂಕು ಕಾಣಿಸಿಕೊಂಡಿತು. ಆದರೆ, ಇಷ್ಟೊಂದು ಸಾವುನೋವಿಗೆ ಕಾರಣವಾದ ಮತ್ತು ಜಗತ್ತಿನಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಈ ಸೋಂಕು ಹೇಗೆ ಹುಟ್ಟಿಕೊಂಡಿತು? ಅದಕ್ಕೇನು ಕಾರಣ? ಸೋಂಕು ಪ್ರಸರಣಗೊಂಡಿದ್ದು ಹೇಗೆ? ಆರಂಭದಲ್ಲೇ ಈ ಬಗ್ಗೆ ಜಗತ್ತನ್ನು ಎಚ್ಚರಿಸುವ ಕೆಲಸವನ್ನು ಚೀನಾ ಏಕೆ ಮಾಡಲಿಲ್ಲ? ಹೀಗೆ ಕರೊನಾ ಸಂಬಂಧಿತ ಹಲವು ಜ್ವಲಂತ ಪ್ರಶ್ನೆಗಳಿಗೆ ಈವರೆಗೆ ಉತ್ತರವೇ ಸಿಕ್ಕಿಲ್ಲ. ಈ ಬಗ್ಗೆ ನಿರ್ದಿಷ್ಟವಾಗಿ ಉತ್ತರಿಸಿ ಅನುಮಾನಗಳನ್ನು ಬಗೆಹರಿಸಬೇಕಿದ್ದ ಚೀನಾ ಮೌನಕ್ಕೆ ಶರಣಾಗಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟಿಸಿದೆ.

ಒಂದು ವಾದದ ಪ್ರಕಾರ, ಕರೊನಾ ಸೋಂಕು ವುಹಾನ್​ನ ಹಸಿ ಮಾಂಸದ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತು. ಇನ್ನೊಂದು ವಾದದ ಪ್ರಕಾರ, ಜೈವಿಕ ಅಸ್ತ್ರದ ರೂಪದಲ್ಲಿ ಇದನ್ನು ಪ್ರಯೋಗಾಲಯದಲ್ಲೇ ಸಿದ್ಧಪಡಿಸಲಾಗಿದೆ. ಆದರೆ, ವಾಸ್ತವವೇನು? ಏಕಾಏಕಿ ಈ ಸೋಂಕು ಕಾಣಿಸಿಕೊಳ್ಳಲು ಕಾರಣವೇನು? ಈ ಬಗ್ಗೆ ಚೀನಾಕ್ಕೆ ಮೊದಲೇ ಗೊತ್ತಾಗಿದ್ದರೂ ವಿಳಂಬಧೋರಣೆ ಅನುಸರಿಸಿ, ಇಡೀ ಜಗತ್ತನ್ನು ಸಂಕಷ್ಟಕ್ಕೆ ತಳ್ಳಿದ್ದು ಏಕೆ? ಎಂಬೆಲ್ಲ ಪ್ರಶ್ನೆಗಳಿಗೆ ಅದು ಇಂದಿಲ್ಲ, ನಾಳೆ ಉತ್ತರಿಸಲೇಬೇಕಾಗುತ್ತದೆ. ವಿಶ್ವಸಂಸ್ಥೆಯಲ್ಲಿ ಅಥವಾ ಇತರೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಏನೋ ಸಬೂಬು ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಚೀನಾ ಅರ್ಥಮಾಡಿಕೊಳ್ಳಬೇಕು. ಅಮೆರಿಕ ಈಗ ತೋರುತ್ತಿರುವ ಆಕ್ರೋಶ ಸ್ವಾಭಾವಿಕವೇ. ಏಕೆಂದರೆ, ಚೀನಾಕ್ಕಿಂತ ಹಲವು ಪಟ್ಟು ಹೆಚ್ಚು ಜೀವಹಾನಿ, ಆರ್ಥಿಕಹಾನಿಯನ್ನು ಅದು ಎದುರಿಸುತ್ತಿದೆ. ಚೀನಾದಿಂದ ಸತ್ಯ ಹೊರಡಿಸಲು ಅಂತಾರಾಷ್ಟ್ರೀಯ ಒತ್ತಡವೊಂದೇ ಮಾರ್ಗ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕಿದ್ದು, ಆದಷ್ಟು ಬೇಗ ಅದನ್ನು ಹತೋಟಿಗೆ ತರಬೇಕಿದೆ. ಇಲ್ಲದಿದ್ದಲ್ಲಿ ಮತ್ತಷ್ಟು ದೇಶಗಳ ಸ್ಥಿತಿಯೂ ಶೋಚನೀಯವಾಗುವ ಆತಂಕವಿದೆ. ಕರೊನಾ ಸಮರವನ್ನು ಮೊದಲು ಗೆದ್ದು, ಬಳಿಕ ವಾಸ್ತವ ಅನಾವರಣಗೊಳಿಸುವ ಕಾರ್ಯವಾಗಲಿ.