ನ್ಯೂಸ್

ಮುಂದಿನ ದಿನಗಳು ಕಷ್ಟದಿಂದ ಕೂಡಿವೆ ಎಂಬುದು ಕಹಿ ಸತ್ಯ

kumarvrl

ಕರೊನಾ ಸೋಂಕಿನ ಪರಿಣಾಮ ದೇಶಾದ್ಯಂತ ಘೋಷಿಸಿರುವ ದಿಗ್ಬಂಧನ ಇಂದಿಗೆ (ಏಪ್ರಿಲ್ 14) 21 ದಿನಗಳನ್ನು ಪೂರೈಸಲಿದೆ. ತುರ್ತು ಸೇವೆ ಹೊರತುಪಡಿಸಿ, ಎಲ್ಲ ಉದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳು ಬಂದ್ ಆಗಿರುವುದರಿಂದ ಆರ್ಥಿಕ ನಷ್ಟ ಹೆಚ್ಚುತ್ತಲೇ ಇದೆ. ಇತರೆ ರಾಜ್ಯಗಳಂತೆ ಕರ್ನಾಟಕವೂ ಉತ್ಸಾಹದಿಂದ ಬಜೆಟ್ ಮಂಡಿಸಿ, ಹೊಸ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ತಯಾರಿಯಲ್ಲಿತ್ತು. ಮಾರ್ಚ್​ನಲ್ಲೇ ಕರೊನಾ ಸಂಕಷ್ಟ ಹೆಚ್ಚಿದ್ದರಿಂದ ಮುಂದಿನ ದಾರಿ ಕಾಣದಂತಾಗಿದೆ. ಕಳೆದ ಹಣಕಾಸು ವರ್ಷದಲ್ಲಿಯೂ ನಷ್ಟ ಅನುಭವಿಸಿದ್ದ ರಾಜ್ಯ, ಈ ಹಣಕಾಸು ವರ್ಷ ಆರಂಭದಲ್ಲೇ ಸವಾಲುಗಳ ಸುಳಿಯಲ್ಲಿ ಸಿಲುಕಿದೆ. ತೆರಿಗೆ ಸಂಗ್ರಹ ಕುಸಿದಿದೆ, ಆದಾಯ ಮೂಲಗಳು ಸ್ತಬ್ಧಗೊಂಡಿವೆ. ಪರಿಸ್ಥಿತಿ ಹೀಗಿರುವಾಗ. ಕರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲೆ ಲಾಕ್​ಡೌನ್ ಏಪ್ರಿಲ್ 30ರವರೆಗೆ ವಿಸ್ತರಣೆಯಾಗಿದೆ. ಇದರ ಸ್ವರೂಪ ಏನಿರಲಿದೆ, ಯಾವುದಕ್ಕೆಲ್ಲ ವಿನಾಯ್ತಿ ಸಿಗಲಿದೆ, ಮತ್ತಷ್ಟು ಕಠಿಣ ನಿರ್ಬಂಧಗಳು ಹೇರಿಕೆ ಆಗಲಿವೆಯೇ ಎಂಬುದೆಲ್ಲ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಲಿರುವ ಭಾಷಣದ ನಂತರ ಸ್ಪಷ್ಟಗೊಳ್ಳಲಿದೆ. ಅದೇನಿದ್ದರೂ, ಕರೊನಾ ನಂತರದ ದಿನಗಳು ಕಷ್ಟದಿಂದ ಕೂಡಿರಲಿದ್ದು, ಮಿತವ್ಯಯದ ಮಂತ್ರವನ್ನು ಈಗಿನಿಂದಲೇ ಮತ್ತು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂಬ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಅರ್ಥವಾಗಿದೆ.

ಈ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನೂ ಘೋಷಿಸಲಾಗಿದೆ. ಸಂಪನ್ಮೂಲ ಸಂಗ್ರಹಿಸುವ ಹಾದಿಯನ್ನು ಶೋಧಿಸಲಾಗಿದೆ. ಅಭಿವೃದ್ಧಿಗೆ ಹಿನ್ನಡೆ, ಯೋಜನೆಗಳು ನನೆಗುದಿಗೆ ಬೀಳುವುದು, ಹೊಸ ನೇಮಕಾತಿಗಳಿಗೆ ತಡೆ, ನಿಗಮ-ಮಂಡಳಿಗಳ ವೆಚ್ಚಕ್ಕೆ ಮೂಗುದಾರ ಹೀಗೆ ಹಲವು ಅಡೆತಡೆಗಳು ಈಗ ಎದುರಾಗಲಿರುವುದು ಹೌದಾದರೂ, ಭಾರಿ ಸವಾಲೊಡ್ಡಿರುವ ಆರ್ಥಿಕ ಸ್ಥಿತಿಯನ್ನು ಅವಲೋಕಿಸಿದರೆ ಇಂಥ ‘ಕಹಿಗುಳಿಗೆ’ಗಳು ಮದ್ದು ಉಪಶಮನಕ್ಕೆ ಅನಿವಾರ್ಯ, ಅವಶ್ಯಕ. ವೆಚ್ಚವನ್ನು ತಗ್ಗಿಸಿದಷ್ಟು ಅಸಮತೋಲನದ ಹೊರೆಯನ್ನು ತಗ್ಗಿಸಬಹುದು. ಹಾಗಾಗಿಯೇ, ಹೊಸ ವಾಹನ, ಪೀಠೋಪಕರಣ ಖರೀದಿಗೆ, ಹೊಸ ಕಟ್ಟಡ ನಿರ್ವಣಕ್ಕೆ, ಹೊರರಾಜ್ಯಗಳಲ್ಲಿ ತರಬೇತಿಗೆ ತಡೆ ಹಾಕಲಾಗಿದೆ. ಲಭ್ಯವಿರುವ ಅನುದಾನವನ್ನು ದುಂದುವೆಚ್ಚ ಮಾಡದೆ ಕಟ್ಟುನಿಟ್ಟು ವಹಿಸಲು ಹೇಳಲಾಗಿದೆ. ಸುಸ್ತಿದಾರರಾಗದಂತೆ ಮುನ್ನೆಚ್ಚರಿಕೆ ವಹಿಸಲು ನಿಗಮ ಮಂಡಳಿಗಳಿಗೆ ಸೂಚಿಸಲಾಗಿದೆ. ಮೇ ತಿಂಗಳಲ್ಲೂ ವ್ಯಾಪಾರ-ವಹಿವಾಟು ಚೇತರಿಸಿಕೊಳ್ಳುವ ಲಕ್ಷಣವಿಲ್ಲ. ಅಲ್ಲದೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಜಿಎಸ್​ಟಿ ಪಾಲು -ಠಿ; 6320 ಕೋಟಿ ಮತ್ತು ಪರಿಹಾರ ರೂಪದಲ್ಲಿ ಬಾಕಿ ಇರುವ -ಠಿ; 8000 ಕೋಟಿ ಬರಬೇಕಿದೆ. ಮಾರ್ಚ್​ನಲ್ಲಿ ತೆರಿಗೆ ಸಂಗ್ರಹ -ಠಿ; 12 ಸಾವಿರ ಕೋಟಿ ಆಗಬೇಕಿತ್ತು. ಆದರೆ, ಶೇಕಡ 60ರಷ್ಟು ತೆರಿಗೆಯಷ್ಟೇ ಸಂಗ್ರಹವಾಗಿದೆ. ಏಪ್ರಿಲ್​ನ ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಸರ್ಕಾರ ಮಿತವ್ಯಯದ ಕ್ರಮಗಳಿಗೆ ಮುಂದಾಗಿರುವುದು ಒಳ್ಳೆಯ ಹೆಜ್ಜೆಯೇ. ಇವುಗಳ ಅನುಷ್ಠಾನದಲ್ಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಸಮರ್ಪಕ ಕಾಳಜಿ ತೋರುವಂತಾಗಲಿ. ಇಲ್ಲದಿದ್ದಲ್ಲಿ ಆರ್ಥಿಕ ಸಂಕಷ್ಟದ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ತಳೆಯಬಲ್ಲದು. ಹಾಗಾಗದಿರಲಿ.