ನ್ಯೂಸ್

ಪರಿಸರವೂ ಆದ್ಯತೆಯಾಗಲಿ

vijayavani

ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. 70 ಸದಸ್ಯಬಲದ ಅಲ್ಲಿನ ವಿಧಾನಸಭೆಗೆ ಫೆಬ್ರವರಿ 8ರಂದು ಮತದಾನ ನಡೆಯಲಿದ್ದು, 11 ರಂದು ಫಲಿತಾಂಶ ಘೋಷಣೆಯಾಗಲಿದೆ. 1.46 ಕೋಟಿ ಮತದಾರರಿರುವ ದೆಹಲಿ 13,750 ಮತಗಟ್ಟೆಗಳನ್ನು ಹೊಂದಿದೆ. 2015ರಲ್ಲಿ ಭಾರಿ ಬಹುಮತ (70ರಲ್ಲಿ 67 ಸ್ಥಾನ) ಪಡೆದುಕೊಂಡ ಆಮ್ ಆದ್ಮಿ ಪಕ್ಷ ಈ ಬಾರಿಯೂ ಅಧಿಕಾರಕ್ಕೇರಲು ಸರ್ವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದ್ದು, ಕಾಂಗ್ರೆಸ್ ಸಂಘಟನಾತ್ಮಕವಾಗಿ ಸೊರಗಿದೆ. ದೆಹಲಿಯ ಅಕ್ರಮ ಕಾಲನಿಗಳನ್ನು ಈಗಾಗಲೇ ಸಕ್ರಮಗೊಳಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ.

ಒಟ್ಟು 1,731 ಕಾಲನಿಗಳು ಸಕ್ರಮಗೊಂಡಿವೆ. ಮತ್ತೊಂದೆಡೆ, ವಿದ್ಯುತ್, ಶಿಕ್ಷಣ, ನೀರು ಸೇರಿ ಮೂಲಸೌಕರ್ಯ ವಿಷಯಗಳಲ್ಲಿ ದೆಹಲಿ ಸಾಕಷ್ಟು ಬೆಳವಣಿಗೆ ಸಾಧಿಸಿದೆ. ಆದರೆ, ಈ ಪ್ರಗತಿಯ ಓಟದಲ್ಲಿ ಹೊಸ ತೆರನಾದ ಸಮಸ್ಯೆಗಳು ಸೃಷ್ಟಿಯಾಗಿ, ಅವು ದೊಡ್ಡ ಸ್ವರೂಪ ಪಡೆದುಕೊಂಡಿರುವುದನ್ನು ಬಹುತೇಕ ರಾಜಕೀಯ ಪಕ್ಷಗಳು, ಅವುಗಳ ನಾಯಕರು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಮುಖ್ಯವಾಗಿ, ವಾಯುಮಾಲಿನ್ಯ ಸಮಸ್ಯೆ. ತೀವ್ರವಾಗಿ ಬೆಳೆಯುತ್ತಿರುವ ಮತ್ತು ಧಾರಣಾ ಸಾಮರ್ಥ್ಯವನ್ನೂ ಮೀರಿರುವ ದೆಹಲಿ ಅನೇಕ ಅಪಾಯಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ 1,650 ನಗರಗಳ ಸಮೀಕ್ಷೆ ನಡೆಸಿದ್ದು, ಇತರೆ ನಗರಗಳಿಗಿಂತ ದೆಹಲಿ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಮೀಕ್ಷಾವರದಿ ವಿವರಿಸಿದೆ. ಕಳೆದ ವರ್ಷ ವಾಯುಮಾಲಿನ್ಯ ಪ್ರಮಾಣ ಹೆಚ್ಚಾದ ಪರಿಣಾಮ ಹಲವು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕಾಗಿ ಬಂತು. ವಾಯುಮಾಲಿನ್ಯ ಸಮಸ್ಯೆ ಸುಪ್ರೀಂ ಕೋರ್ಟ್​ಗೂ ತಲುಪಿ ನ್ಯಾಯಾಲಯ ಆಳುಗರ ನಿರ್ಲಕ್ಷ್ಯಕ್ಕಾಗಿ ತರಾಟೆಗೆ ತೆಗೆದುಕೊಂಡಿತು. ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತು. ವಾಹನಗಳ ಸಂಚಾರಕ್ಕೆ ಸಮ-ಬೆಸ ಪದ್ಧತಿ ಪ್ರಾಯೋಗಿಕವಾಗಿ ಜಾರಿಗೆ ತಂದರೂ, ಹೇಳಿಕೊಳ್ಳುವಂಥ ಪ್ರಯೋಜನವಾಗಲಿಲ್ಲ. ಹೀಗೆ ಪರಿಸರವನ್ನು ನಿರ್ಲಕ್ಷಿಸಿ ಬರೀ ಭೌತಿಕ ಅಭಿವೃದ್ಧಿಯತ್ತ ಸಾಗಿದರೆ ಎಷ್ಟೊಂದು ಅಧ್ವಾನಗಳು ಸೃಷ್ಟಿಯಾಗುತ್ತವೆ ಎಂಬುದಕ್ಕೆ ದೆಹಲಿ ದೊಡ್ಡ ನಿದರ್ಶನ. ಆದರೆ, ರಾಜಕೀಯ ಪಕ್ಷಗಳ ಪ್ರಣಾಳಿಕೆ, ಇತರೆ ಭರವಸೆಗಳಲ್ಲಿ ಪರಿಸರ ರಕ್ಷಣೆ ಆದ್ಯತೆಯ ವಿಷಯವೇ ಆಗಿರುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಬಿಹಾರದಲ್ಲಿ ಅಲ್ಲಿನ ಮುಖ್ಯಮಂತ್ರಿ ನಿತೀಶ್​ಕುಮಾರ್ ಜಲಮೂಲಗಳ ಪುನಶ್ಚೇತನ ಮತ್ತು ಮರಗಿಡಗಳ ಸಂಖ್ಯೆ ಹೆಚ್ಚಿಸಲೆಂದೇ ಯಾತ್ರೆ ಕೈಗೊಂಡಿದ್ದು ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಅಚ್ಚರಿ ಹುಟ್ಟುಹಾಕಿತ್ತು. ರಾಜಕೀಯವರ್ಗ ಪರಿಸರರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಪರಿಸರವನ್ನು ಕಡೆಗಣಿಸಿ ಮಾಡುವ ಅಭಿವೃದ್ಧಿಗೆ ಯಾವುದೇ ಅರ್ಥವಿಲ್ಲ. ಪ್ರಕೃತಿ ಮುನಿದರೆ ಎಷ್ಟೆಲ್ಲ ಅನಾಹುತವಾಗುತ್ತದೆ ಎಂಬುದನ್ನು ಹಲವು ಬಾರಿ ಕಂಡಿದ್ದೇವೆ. ದೆಹಲಿಗೆ ಮೊದಲು ಬೇಕಾಗಿರುವುದು ಶುದ್ಧ ಗಾಳಿ ಮತ್ತು ಶುದ್ಧ ನೀರು. ಮಾಲಿನ್ಯದ ಪ್ರಮಾಣ ಇದೇ ರೀತಿಯಲ್ಲಿ ಮುಂದುವರಿದರೆ ದೆಹಲಿಗರ ಬದುಕು ಕಡುಕಷ್ಟ. ಹಾಗಾಗಿ, ಚುನಾವಣೆ ಹೊತ್ತಿನಲ್ಲಿ ಬಣ್ಣಬಣ್ಣದ ಭರವಸೆ ನೀಡುವುದಕ್ಕಿಂತ ರಚನಾತ್ಮಕ ಮತ್ತು ಪರಿಸರ ರಕ್ಷಣೆಯ ದಿಟ್ಟ ಕ್ರಮಗಳನ್ನು ರಾಜಕೀಯ ಪಕ್ಷಗಳು ಘೋಷಿಸಿ, ಅನುಷ್ಠಾನಕ್ಕೆ ತರಲಿ. ಆಗ ನಿಜಾರ್ಥದಲ್ಲಿ ಸಾಮಾನ್ಯರ ಬದುಕು ಹಳಿಗೆ ಬರುತ್ತದೆ.