ನ್ಯೂಸ್

ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ವರ್ತುಳದೊಳಗಿನ ವರ್ತುಳ | Story writing Competition

ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ ( Story writing Competition ) -2024’ರಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು.

ವರ್ತುಳದೊಳಗಿನ ವರ್ತುಳ

1. ಲಕ್ಕೇನಹಳ್ಳಿ ಹೊರಗಿನ ಪೂರ್ವದಿಕ್ಕಿನ ದಿಣ್ಣೆ.

ಬೆವೆತ ಬೆನ್ನಿಗೆ ಸಂಜೆ ಐದರ ಬಿಸಿಲು. ಕಲ್ಲುಮುಳ್ಳು ತೆಗ್ಗುದಿಬ್ಬದ ಕಾಲುದಾರಿ. ಸುತ್ತಲೂ ಜಾಲಿಪೆಳೆ. ಆತಂಕ ಮೂಡಿಸುವ ವಿಲಕ್ಷಣ ಮೌನ. ಕಾಲುಹಾಕುತ್ತಾ ಮುಕ್ಕಾಲುಗಂಟೆ. ಜೀನ್ಸ್‍ಪ್ಯಾಂಟು ಟಿ-ಶರ್ಟಿನಲ್ಲಿದ್ದ ಪದ್ಮಾಳಿಗೆ ಸಾಕುಸಾಕಾಯಿತು. ಕಿಶೋರನಿಗೋ ಏದುಸಿರು.

‘ನಿಮ್ಮ ಸತ್ಯಪ್ಪಜ್ಜನ ಹಳೆಹೊಲದ ದಾರಿನಾ? ತೋರುಸ್ತೀನಿ ಬರ್ರಿ’

ದಾರಿಕಾಣದವಳ ನಡೆಸಿಕೊಂಡುಬಂದಿದ್ದಳು ಸಾಂತವ್ವ. ಅಪರಿಚಿತಳ ಕಣ್ಣಲ್ಲಿ ಮರುಕದ ಅಕ್ಕರೆ. ಭಾರದಪುಟ್ಟಿ ಇಳಿಸಲಾರದ ಎಲೆಯಡಿಕೆ ಉಗುಳಲಾರದ ಗಿಡ್ಡದೇಹದ ಶ್ರಮಜೀವಿ.

ಒಂದುಕಾಲದಲ್ಲಿ ಪದ್ಮಾಳ ಅಜ್ಜ ಊರ ಮುಖಂಡ.

‘ಈ ಹುಡ್ಗ ಯಾರು?’ ಸಾಂತವ್ವ.

‘ನನ್ ಗೆಳತಿ ತಮ್ಮ ಕಿಶೋರ. ಎಲ್ಲೋದ್ರೂ ಜೊತ್‍ಜೊತೆಗೇ...’

‘ಹೌದೇನೂ!’ ದಿಟ್ಟಿಸಿದಳು ಕಿಶೋರನ.

ಏರುತ್ತೇರುತ್ತ ಹೆಜ್ಜೆಗಳು ನಿಧಾನವಾದವು.

2. ‘ಅಮ್ಮಾ... ನನ್ ಹಣೆಗಾಯ ಹೆಂಗಾತು, ನಿನ್ ಎದೆ ಮೇಲೆ ಕಚ್ದೋರ್ಯಾರು.. ಬೆನ್ನಿನ ಮೇಲೇನದು ಗೀರು?’

ಹಳೆಯದನ್ನೇ ಕೆದಕುವ ಪದ್ಮಾ. ‘ಹಳೇದು ಹಳಸೋಗಿದೆ. ಹೊಸಾದು ನಳನಳಿಸ್ತಿದೆ’ -ಅಮ್ಮ ಸುಜಾತಾ. ಮಗಳ ಬ್ರೈಟ್‍ಫ್ಯೂಚರ್‍ಗೆ ರೈಟ್‍ಮ್ಯಾಚ್‍ಗೆ ಒದ್ದಾಡುತ್ತಿದ್ದ ಅಪ್ಪ ರಾಜಶೇಖರಪ್ಪ. ಬೆಂಗಳೂರಿನ ತಣ್ಣಗಿನ ಲೊಕ್ಯಾಲಿಟಿಯ ಸ್ವಂತಮನೆಯಲ್ಲಿ ತಣ್ಣಗಿನ ಬದುಕು.

ಹೈಬ್ರಿಡ್‍ಲೋಕದಲ್ಲಿ ಮಾಯವಾಗುತ್ತಿರುವ ಮೂಲತಳಿಗಳ ಸಸ್ಯಗಳನ್ನು ಗುರುತಿಸುವ ಕೆಲಸ ಪದ್ಮಾಳದ್ದು. ಡ್ಯೂಟಿ ಜಾಗದ ‘ಪದ್ಮಾ ಲವ್ಸ್ ಸುಶಾಂತ್’ - ಹೋರಾಟವಾಗಲಿಲ್ಲ. ಮಂಗಳವಾಯಿತು. ಮದುವೆಗೂ ಮುಂದಾದರು ಹೆತ್ತವರು. ನಾಸ್ಟಾಲ್ಜಿಕ್ ಪದ್ಮಾಳ ರೆಸ್ಟ್‍ಲೆಸ್‍ನೆಸ್, ಚೈಲ್ಡ್‍ಹುಡ್ ಆಕ್ಸಿಡೆಂಟ್, ಮೆಮರಿಲಾಸ್ ಕಥೆಗೂ ವಿಚಲಿತನಾಗಲಿಲ್ಲ ಸುಶಾಂತ. ‘ಪಾಸ್ಟ್ ಈಸ್ ಪಾಸ್‍ಡ್.’ ಅನ್ನುವವ.

ಬೆಳಗ್ಗೆ ಹೊರಟದ್ದು ಮಧ್ಯಾಹ್ನ ಮುಟ್ಟಿದ್ದು. ಆರುಗಂಟೆಯ ಬಸ್‍ಪ್ರಯಾಣ. ತವರುತೊರೆಯುವ ಮುನ್ನ ಅಮ್ಮನ ತವರಿನಿಂದ ಸ್ಪೆಷಲ್‍ಮೆಮೊರಿಯ ಸರ್‍ಪ್ರೈಜ್ ತರುವಾಸೆಯಲ್ಲಿ. ಅಮ್ಮನಿಗೆ ಹೇಳದೇ. ಲಕ್ಕೇನಹಳ್ಳಿಯ ಹಳೆಯ ದೊಡ್ಡಮನೆಯಲ್ಲಿ ಎರಡೇ ಗಂಡುಜೀವ. ಮಾತುಕತೆಯಿಲ್ಲದ ಅಜ್ಜ, ಕುಡಿತ ಬಿಡಲಾಗದ ಮಾವ. ಬಂದಿಳಿದ ಅರ್ಧಗಂಟೆಯಲ್ಲೆ ಸ್ನಾನಮುಗಿಸಿ ಹೊರಬಿದ್ದಿದ್ದಳು.

3. ಈಗ, ಚುರುಕುಕಾಲ್ಗಳ ಸಾಂತವ್ವನ ಹಿಂದೆ. ಪೊದೆಹಕ್ಕಿಯ, ಒಣಗಿದೆಲೆಗಳ ಸದ್ದು. ಬೆವರು, ಬಾಯಾರಿಕೆ.

‘ಅಕ್ಕಾ, ಈ ದೊಡ್ಡಮರದ ನೆರಳಲ್ಲಿ ಕುತ್ಕಂತೀನಿ. ನಡೆಯೋಕಾಗ್ತಿಲ್ಲ..’ ಕಿಶೋರ.

‘ನಂಗೂ’ ಕಿಬ್ಬೊಟ್ಟೆ ನೋವಿಗೆ ನಿಂತಳು ಪದ್ಮಾ.

‘ಅಯ್ಯಯ್ಯೋ! ಬ್ಯಾಡಾ! ನಡ್‍ನಡ್ರಿ. ಜಾಗ ಸುಮಾರೈತೆ’ ಸಾಂತವ್ವ ನಡೆಸಿಯೇಬಿಟ್ಟಳು.

‘ಹೌದಾ!’

‘ಹತ್‍ವರ್ಸದ್ ಹಳಿಕಥಿ ಮರ್ತಕಂಡಿಯೇನವ್ವಾ?’

‘ಏನು?’

‘ಆ ಕಲ್ಲೇಶ್ವರಪ್ಪ ದೇವ್ರಜಾತ್ರೆ, ಅವತ್ತೇ ಕೊನೆ. ಎಲ್ಡುವರ್ಸಕ್ಕೊಂದ್ಸಾರ್ತಿ ಆಗಾದು.. ಊರ್‍ಜನರೆಲ್ಲಾ ಸೇರೋರು.. ತೇರು.. ಅನ್ನಪ್ರಸಾದ.. ಕಿಚ್ಚ.. ಆಟ.. ಕುಣ್ತ.. ಕುಸ್ತಿ... ಎಲ್ಲಾ ನಿಂತೋತು...’

‘ಯಾಕೆ?’

‘ಊರಿಗೇ ಅನ್ನ ಹಾಕೋ ಸತ್ಯಪ್ಪನೋರ ಮನ್ಯಾಗೆ ಹಂಗಾಗಿತ್ತಲ್ಲವ್ವಾ?’

‘ಹೆಂಗಾಗಿತ್ತು?’

‘ನೀನೂ ನಿನ್ ಗೆಳ್ತಿ ಇದೇ ದೋಡ್‍ಬೇನಿಮರದ್ ಮ್ಯಾಲಿಂದ ಹೊತ್ಕಬಿದ್ದಿದ್ರಲ್ಲವ್ವಾ.. ಮೈಮ್ಯಾಲಿನ ಬಟ್ಟಿ ಖಬರಿಲ್ಲದಂಗೆ.. ಮಕಾಮಾರಿ ರಗುತ ಮಾಡ್ಕ್ಯಂಡು. ಅವೊತ್ತು ಜನಜಾತ್ರಿ!!’

‘ಹೌದಾ!’

‘ಇಬ್ರೂ ಸತ್ತೇಹೋಗ್ಬುಟ್ರಿ ಅಂತಾ ಊರಿಗೂರೇ ಕಣ್ಣೀರಾಕಿತ್ತು’

‘ಅಯ್ಯೋ!’

‘ಆಮೇಕೆಲ್ಲಾ ಸರಿಯಾತು ಬಿಡು. ಆ ನಿನ್ ಗೆಳ್ತಿ.. ಈಗ ಪಾಡದಾಳಾ?’

‘ಸತ್ತೋದ್ಲು.’ ಗದ್ಗದವಾಯಿತು ಧ್ವನಿ.

‘ಅಯ್ಯೋ ಶಿವ್ನೇ!!’ ಉಸಿರ್ಗರೆದಳು ಸಾಂತವ್ವ.

‘ಗಂಡನ ಮನೇವ್ರು ಸಾಯ್ಸಿದ್ರು. ಕೆಟ್ಟಸಂಶಯ...’ ಹೊರಳಿದಳು. ದೂರದಲ್ಲಿ ಉಚ್ಚೆಗೆ ನಿಂತಿದ್ದ ಕಿಶೋರ. ‘ಅವ್ಳ ತಮ್ಮಾನೇ ಇವ್ನು’ ಅಂದಳು. ಬಾಯಲ್ಲಿ ಸೆರಗಿಟ್ಟುಕೊಂಡಳು ಸಾಂತವ್ವ.

‘ನೋಡ್ಕಂಡ್ ನಡೀರಿ. ಇಸದ್‍ಮುಳ್ಳು, ತೊಡ್ರಬಳ್ಳಿ ಭಾಳ..’

‘ಇನ್ನೂ ಎಷ್ಟು ದೂರ..?’

‘ಮಾತಾಡ್ಕ್ಯಂತ ದೆವ್‍ದಿಣ್ಣೆ ದಾಟ್ಕ್ಯಂಡ್ವಿ. ಇನ್ನು ಸಲೀಸಾತು. ಅಗಾ.. ಆ ಹುಂಚಿಮರದ್ ಆಚಿಕಡೀದೇ ನಿಮ್ಮಜ್ಜನ ಹಳೆಹೊಲ.’

‘ಅಬ್ಬಾ!’ ಕಿಶೋರ ನಿಡುಸುಯ್ದ.

‘ಕತ್ಲಾತು, ಜ್ವಾಪಾನ. ಹೊಳ್ಳಿ ಬ್ಯಾಗ್ ಮನಿಮುಟ್ಕಳ್ರಿ.’

‘ಹ್ಞೂಂ’

‘ಅಂದಂಗೆ.. ಆ ಸುಪನಾತಗಿತ್ತಿ ಪಂಕಜಮ್ಮ ಕರುದ್ರೆ ಹೋಬೇಡಾ. ಯಾಕ್‍ಬೇಕು, ಖುಸಿಯಾಗಿ ಬಂದುದೀಯ...’

ವೀಳ್ಯೆದೆಲೆಯಲ್ಲಿ ‘ಹಾದೀಕಣ್ ಬೀದಿಕಣ್ ನಾಯಿಕಣ್ ನರಿಕಣ್..’ ಸುತ್ತಿಸಿ ತುತುತು ಉಗುಳಿಸಿ ಎಸೆದಳು ಸಾಂತವ್ವ. ಅಂತೂ ಅವಳ ಬೆವರಿನ ಬೆನ್ನು ಬೀಳ್ಕೊಟ್ಟಿತು.

4. ಎದುರಿಗೆ ಅಜ್ಜನ ಹಳೆಹೊಲ.

ಗುರುತಿಗೆ ನೆಟ್ಟ ದೊಡ್ಡಕಲ್ಲು. ಕಲ್ಲಾಗಿದ್ದಕ್ಕೆ ನೆಟ್ಟಗೇ ನಿಂತಿತ್ತು. ಕಣ್ಣ ಮುಂದಿನದು ಕಲ್ಪನೆಯ ಸ್ವರ್ಗವಲ್ಲ. ಪಾಳು-ಬೋಳು-ಬರಡು. ದೂರದಲ್ಲಿ ಅಜ್ಜಿಯ ಸಮಾಧಿ. ಬತ್ತಿಹೋದ ಹಳ್ಳ.

ಓಡಾಡಿದಳು. ಕಣ್ಣಾಡಿಸಿದಳು. ‘ನಾನು ಭೂಮಿಗೆ ಅವತರಿಸಿದ ಜಾಗ...’ ಫೋಟೋ ತೆಗೆದುಕೊಂಡಳು. ಗೂಗಲ್‍ದಾಖಲೆಯಾಗದೆ, ಫೇಸ್‍ಬುಕ್ ಪೋಸ್ಟಾಗದೇ ಉಳಿಯಿತು. ನೆಟ್‍ವರ್ಕ್ ದೋಷ. ಮೊಬೈಲ್ ಲೋ ಬ್ಯಾಟರಿ. ಭೂತಕಾಲದ ನೆನಪಿನಜಾಗದಲ್ಲಿ ವರ್ತಮಾನದ ಖಾಲಿಕ್ಷಣ.

‘ಝೂಂಯ್...’ ಹೆಜ್ಜೇನು... ಹೆದರಿಸಿತು.

‘ಪದ್ಮಾ!’ ಕೂಗಿತೊಂದು ಸಂಭ್ರಮದ ದನಿ. ಹೊರಳಿದಳು. ಅಪರಿಚಿತ ಹೆಂಗಸು! ‘ಏಸು ವರ್ಸಾದ್ವು ನಿನ್ನೋಡಿ. ಏನ್ಕಥೆ..’ ಹಲ್ಕಿರಿಯುತ್ತಾ ಹತ್ತಿರಬಂದು ಮುಟ್ಟಿದಳು, ಮೈದಡವಿದಳು. ‘ಹ್ಞಾಂ!’ ಪದ್ಮಾ ಬೆಚ್ಚಿದಳು.

‘ನಿಮವ್ವನ ಜೀವದ್‍ಗೆಳ್ತಿ ಪಂಕಜ ಕಣೇ. ನಡೀ ಮನೀಗೆ..’

‘ಇಲ್ಲ.. ಇನ್ನೊಂದ್‍ಸಾರ್ತಿ ಬರ್ತೀವಿ.’

ಕೈಹಿಡಿದ ಪಂಕಜಮ್ಮ ಬಿಡಲಿಲ್ಲ, ‘ಇಲ್ಲೇ ಐತೆ’ ನಡೆಸಿಯೇಬಿಟ್ಟಳು. ಪಾಳುಬಾವಿ, ಮುರಿದ ಎತ್ತಿನಬಂಡಿ, ಹುಲ್ಲಿನಬಣವೆ, ಖಾಲಿಕೊಟ್ಟಿಗೆ, ನಾಗಪ್ಪನ ಕಲ್ಲು...

ಅಂತೂ ಬಂತೊಂದು ಉದ್ದನೆಯ ಹಳೆಮನೆ.

ತಲೆಬಾಗಿ ಹೊಕ್ಕರು. ನಿಗೂಢ-ಆಪ್ತತೆಯ ಮನೆ. ಸಣ್ಣಕೋಣೆಗಳು. ಹಳೆಗೋಡೆಗಳು. ಮೂಲೆಯಲ್ಲಿ ಅಟ್ಟ. ವಿಲಕ್ಷಣ ವಾಸನೆ. ಸೊಳ್ಳೆಕಾಟಕ್ಕೆ ಮರದಕುರ್ಚಿಯಲ್ಲಿ ಕಾಲುಕೆರೆದುಕೊಳ್ಳುತ್ತಾ, ಕಿಶೋರ. ನೀರು ಕುಡಿದ, ಉಂಡೆಚಕ್ಕುಲಿ ತಿಂದ, ಟೀ ಹೀರಿದ. ‘ಸ್ವಲ್ಪಹೊತ್ತಷ್ಟೇ’ ಅಂದ ಪದ್ಮಾಳಿಗೆ ಅಸ್ಪಷ್ಟ ಚಡಪಡಿಕೆ. ಎಲ್ಲೋ ಅಮ್ಮನ ಭಾಸ. ಸ್ಮರಣೆ ಕಟ್ಟುತ್ತಿರುವ ಗಾಢಚಿತ್ರ.

‘ನಿಮ್ಮಮ್ಮ ಅರಾಮಿದಾಳೇನವ್ವ?’ ಅಂದಳು.

‘ಚೆನ್ನಾಗಿದಾರೆ.’ ಧೂಳಿಡಿದ ಸಾಲುಫೋಟೋಗಳ ನೋಡುತ್ತಿದ್ದವಳು ‘ಇದು ನನ್ನಮ್ಮ!’ ಬೆರಳಿಟ್ಟು ತೋರಿಸಿದಳು.

‘ಹೌದು! ನಿನ್ನಮ್ಮನೇಯಾ. ಹೈಸ್ಕೂಲಿಂದು.’

ಕ್ಲಿಕ್‍ಕ್ಲಿಕ್!

‘ಅಮ್ಮನ ಹತ್ರಾನೇ ಈ ಫೋಟೋ ಇಲ್ಲ, ಸ್ಪೆಷಲ್ ಮೆಮೊರಿ!’

‘ನಮ್ಮಿಬ್ರೂದು ಬಾರೀದೋಸ್ತಿ. ಇಲ್ನೋಡು ಹಚ್ಚೆ!’ ಬಿಳುಚಿದ ಎಡಗೈ ತೋರಿಸಿ ‘ಸು-ಜಾ-ತ’ ಓದಿದಳು. ಕಣ್ಣು-ಬಾಯ್ತೆರೆದಳು ಪದ್ಮಾ. ‘ಸುಟ್ಟವಾಸನೆ!’ ಕಿಶೋರ ಹೆದರಿದ. ಒಳಗೋಡಿದಳು ಪಂಕಜಮ್ಮ.

ಅಮ್ಮನ ಫೋಟೋ-ಹಚ್ಚೆ ಪದ್ಮಾಳ ಮೈಮರೆಸಿತು, ಕೂರಿಸಿತು. ಮನೆಸುತ್ತಲೂ ಕಪ್ಪುಕತ್ತಲು.

ಸುಜಾತಮ್ಮ-ಪಂಕಜಮ್ಮನ ಬಾಲ್ಯದ ಕಥೆ ಮುಗಿಯುವಷ್ಟರಲ್ಲಿ ಮಂಕುಬಲ್ಬು ಮಿಣಮಿಣ ಅಂತು. ಚಡಪಡಿಕೆಗೆ ಮೊಬೈಲ್ ಎಚ್ಚರಿಸಿದಳು. ಸ್ಕ್ರೀನ್‍ಸೇವರ್ ಮೇಲೆ ಸುಶಾಂತ್. ಮುಂದಿನ ತಿಂಗಳ ಮದುವೆ -ನೆನಪಾಯ್ತು. ಎಂಗೇಜ್‍ಮೆಂಟ್ ರಿಂಗ್ ತಿರುಗಿಸಿಕೊಂಡಳು. ಹೊರಗಿನ ಕತ್ತಲ ದಿಟ್ಟಿಸುತ್ತಿದ್ದ ಕಿಶೋರ, ಪದ್ಮಾಳ ತಿವಿದ.

‘ಬರ್ತೀವಿ. ಕತ್ತಲಾಯ್ತು!’ ಧಿಗ್ಗನೆದ್ದು ನಿಂತಳು.

‘ಬ್ಯಾಡ ಕಣಮ್ಮೀ.. ಉಳ್ಕಾ.. ಬೆಳಕರ್ತಿಗೆ ಕಳ್ಸಕೊಡ್ತೀನಿ ರಂಗನ್ ಬೈಕಲ್ಲಿ’

‘ಇಲ್ಲಾ.. ಹೋಗ್ಲೇಬೇಕು!’

‘ಇವತ್ ಬ್ಯಾಡಾ.. ಕೆಟ್‍ಅಮಾಸಿ’

‘ಅದೂ..’

‘ಇಲ್‍ಬಾ.’ ಮೂಲೆಕೋಣೆಗೆ ಕರೆದೊಯ್ದು ‘ಇದನ್ನು ನೋಡು.. ನಿಮ್ಮಮ್ಮ ನಾನು ಒಬ್ಬರನೊಬ್ರು ಹಿಡ್ಕಂಡ್ ಮಕ್ಕಂತಿದ್ದ ಹಾಸಿಗೆ.’ ಅಂದಳು.

‘ಹೌದಾ!’

‘ಇದೇ ಅಟ್ಟದ ಮ್ಯಾಗೇ ನೀನೂ ನಮ್ ರಂಗ ಆಟ ಆಡ್ತಿದ್ರಿ..’

‘ಹ್ಞಾಂ?’

‘ಹ್ಞೂಂ. ನೀನು ಸಣ್ಣೋಳಿದ್ದಾಗ ಇಲ್ಲೇ ಇರ್ತಿದ್ದೆ. ಆ ದೊಡ್‍ಮರದಿಂದ ಬಿದ್ದ್‍ಮ್ಯಾಕೆ ಎಲ್ಲಾ ಮರ್ತಕಂಡಿದೀಯ’

‘ಇರಬೌದೇನೋ. ಹದಿನೈದು ದಿನ ಅಡ್ಮಿಟ್ಟಾಗಿದ್ನಂತೆ ನಮ್ಮೂರಲ್ಲಿ.’

‘ಆವಾಗೆಲ್ಲ ರಂಗನ್ನೇ ಲಗ್ನಾ ಅಕ್ಕೀನಿ ಅಂತಿದ್ದೆ..’ ಕೈಯಾಡಿಸಿ ನಕ್ಕಳು.

ಪದ್ಮಾಳ ಕೆನ್ನೆ ಅದುರಿದವು.

ಗೊತ್ತೇ ಇಲ್ಲದ ಹೊಸಲೋಕ, ಗೊತ್ತೇ ಇಲ್ಲದ ಗಂಡುಪ್ರಾಣಿ. ವಿಲಕ್ಷಣವಾದುದಕ್ಕೆ ವಿಚಿತ್ರಸಾಕ್ಷಿ ನಾವಿಬ್ಬರು. ನನ್ನ ಆ ರಂಗನ ಬಾಲ್ಯದ ಬೆತ್ತಲೆ ಫೋಟೋನೂ ಇರಬಹುದಾ -ಹೆದರಿದಳು.

‘ಅಕ್ಕಾ...’ ಕಿಶೋರ ಹೊಟ್ಟೆಹಿಡಿದು ಓಡಾಡತೊಡಗಿದ. ಹೊರಗಿನ ಕತ್ತಲ ಪಾಯಖಾನೆಯೊಳಗೆ ಅವನ ತೂರಿಸಿ, ಕೂರಿಸಿದಳು. ಓಡಿಬಂದ ಪಂಕಜಮ್ಮ ‘ನೀನೇ ತೊಳಿಸಬೇಕಾ!!’ ಅಂದಳು.

‘ಆಂಟೀ ಅವನೇನು ಪೆದ್ದ ಅಲ್ಲ! ಅವನಕ್ಕ ಸತ್ತೋದ್‍ಮೇಲೆ ಮಂಕಾಗಿದಾನೆ ಅಷ್ಟೇ!’ ರೇಗಿಹೋಯಿತವಳಿಗೆ.

‘ಆತ್ ಬಿಡವ್ವ.’ ಪೆಚ್ಚಾದಳು ಪಂಕಜಮ್ಮ.

‘ನಿಮ್ಮಗ ಯಾವಾಗ ಬರ್ತಾರೆ? ಹೋಗ್ಬೇಕು...’

‘ಇನ್ನೇನು ಬಂದಾ. ಆ ಸುಟ್‍ಜಾತ್ರೆ ಆದ್ಮೇಕಿಂದ ನೀನೂ ರಂಗನ್ನ ನೋಡೇಇಲ್ಲ ಅಲ್ಲಾ?’

‘ಏನಾಯ್ತು, ಜಾತ್ರೇಲಿ...’ ಕುಕ್ಕುರುಕೂತಳು. ಕಿಶೋರನ ವಿಸರ್ಜನೆಯ ಘೋರಸದ್ದುಗಳು.

‘ಕಲ್ಲೇಶ್ವರಪ್ಪ ಜಾತ್ರೆ. ಊರ್‍ತುಂಬಾ ನಿನ್ನಜ್ಜ ನಿನ್ನ ಮಾವಂದೇ ಆರ್ಭಟ. ಊರಿಂದ ನೀನು ನಿನ್ ಗೆಳತೀನೂ ಕರಕಂಡುಬಂದಿದ್ದೆ. ಜನರೆಲ್ಲ ದೊಡ್ಡಗುಡಿ ಮುಂದೆ, ತೇರಿನತ್ರ. ನೀವಿಬ್ರೂ ಊರಹೊರಗಿನ ದಿಣ್ಣೆಯ ದೊಡ್ಡಬೇನಿಮರದತ್ರ. ನೀವೇ ಹತ್ತಿದ್ರೋ ಆ ರಾವು ಹತ್ತಿಸ್ತೋ ಅಂತೂ ಮ್ಯಾಕೆ ಹೋಗ್ಬಿಟಿದ್ರಿ. ಇಬ್ರೂ ಒಂದೇ ರೆಂಬೆ ಹಿಡ್ಕಂಡು ಜೋತುಬಿದ್ದು, ಅದು ಮುರ್ಕಂಡ್ ನೀವು ಮ್ಯಾಲಿಂದ ಹೊತ್ಕಂಡುಬಿದ್ದು..’

ಕಂಪಿಸಿದಳು ಪದ್ಮ. ‘ಅಷ್ಟೇ.’ ನಿಲ್ಲಿಸಿದಳು ಪಂಕಜಮ್ಮ.

ಯಾರೂ ಮುಂದುವರೆಸಲಾರದ ಆ ಘಟನೆಯಲ್ಲಿ ಏನಿದೆ.. ಎಚ್ಚರವಾದಾಗ ತನುಜಾ ಒಬ್ಬ ಹುಡುಗ ಲಂಗ ಎತ್ತಿನೋಡುತ್ತಿದ್ದ ಅಂದಿದ್ದಳು. ನಿರ್ಜನ ಜಾಗದ ನಿರ್ಜನ ಮರ. ದೇವರು ಬಿಟ್ಟರೆ ಯಾರಿಲ್ಲ! ಅರೆಬರೆ ನೆನಪು. ನಿಡುಸುಯ್ದಳು. ಬೆಕ್ಕೊಂದು ಕೆಟ್ಟದ್ದಾಗಿ ಒದರತೊಡಗಿತು. ಹುಡುಕಿದಳು. ಪಾಳುಬಾವಿಯೊಳಗೆ ಬಗ್ಗಿ ನೋಡಿದಳು.

‘ಆ ಬಾವಿ ಬಾಬಾ ಅಂತ ಕರೀತತೆ... ಅದರತ್ರ ಹೋಗ್ಬೇಡಾ’ ಪಂಕಜಮ್ಮ ಎಳಕೊಂಡಳು.

5. ‘ಢಾಬ್‍ಢಾಬ್!!’

ಪಾಯಖಾನೆ ಬಾಗಿಲಿಗೆ ಹೊಡೆದ ಸದ್ದು. ಓಡಿಬಂದಳು ಪದ್ಮಾ. ಗುಟ್ಖಾನಾತದ ಗಂಡಸು.

‘ಪದ್ಮಾನ ಗೆಳ್ತಿ ತಮ್ಮ ಹೋಗ್ಯಾನೆ.. ತಡ್ಕಳೋ ರಂಗಾ’ ಪಂಕಜಮ್ಮ.

ಬೇಲಿಯ ಹೂಪೊದೆಗೆ ಉಚ್ಚೆ ಹಾರಿಸುತ್ತಲೇ ‘ಊರ್‍ಜನಾ ನಮ್‍ಪಾಲಿಗೆ ಸತ್ರು ಅಂದಿದ್ಯಲ್ಲ. ಮತ್ಯಾಕ್ ಕರಕಾಬಂದೀಯ?’ ಕೂಗಿದ.

‘ಆಗಿದ್ದಾಗೋತು. ಇಬ್ರೂನೂವ ದಿಣ್ಣೆ ಇಳ್ಸಿ ಊರಾಕೆ ಬಿಟ್‍ಬಾರಲೇ’

‘ನೀನೇ ಬಿಟ್ಬಾ. ನಿನ್ ಮಾವನ್ ಮುಕ್ಳಿ ತೊಳಿಯಾದ್ ಬಿಟ್ಟು..’

‘ಹಂಗನ್‍ಬ್ಯಾಡಲೇ. ಅವನಿಗಾರ ಯಾರದಾರೆ?’

‘ನಮ್ಮಪ್ಪ ಎಲ್ಲೋದ?’

‘ನಿಮ್ಮಪ್ಪ ಊರ್ನಾಗಿದ್ದುದ್ರೆ ನಿನ್ನ ಗೋಗರೀತಿದ್ನಾ? ಹೋಗ್ಲೇ ಬಿಟ್‍ಬಾ’

ಬೆಳಕಿಗೆ ಬಂದ ಪದ್ಮಾ ಹೊಕ್ಕುಳನ್ನೇ ದಿಟ್ಟಿಸಿ ‘ಆತ್ ಬಿಡು’ ಹಲ್ಲುಕಿರಿದ. ಟಿ-ಶರ್ಟು ಜಗ್ಗಿಕೊಂಡಳು. ಕಿಶೋರ ಸುಸ್ತಾಗಿ ಹೊರಬಂದ.

‘ಇವ್ನು ಇವ್ಳ ಲವ್ವರ್ರಾ? ಆನೆ ಇದ್ದಂಗದಾನೇ..’

‘ಶಟ್-ಅಪ್!’ ಕೂಗಿದಳು, ಕಿಶೋರನ ಕೈಹಿಡಿದು ನಡೆದೇಬಿಟ್ಟಳು. ಸ್ವಲ್ಪ ದೂರವಷ್ಟೇ. ಕತ್ತಲಿಗೆ ನಿಂತೇಬಿಟ್ಟ ಕಿಶೋರ. ಗೋಗರೆದಳು, ಅತ್ತುಕರೆದಳು, ಮಿಸುಕಾಡಲಿಲ್ಲ. ಲೋಕ ಮೇಲೆ-ಕೆಳಗಾಯಿತು.

ಅಂತೂ ಬಂತು ರಂಗನ ಬೈಕು. ಕಿಶೋರನ ಹತ್ತಿಸಿದರು. ಪದ್ಮಾಳಿಗೆ ಜಾಗವಿರಲಿಲ್ಲ.

‘ಅವನ ಬಿಟ್‍ಬರ್ತಾನೆ ತಾಳು ಪದ್ಮಾ.’

ದೇಹದಿಂದ ಆತ್ಮದೂರವಾದಂತಹ ಸ್ಥಿತಿಯಲ್ಲಿ ಪದ್ಮಾ. ಅಲ್ಲಾಡುತ್ತಿದ್ದ ಬೈಕು ಹೊರಳಿನಲ್ಲಿ ಸರಾಗ ಚಲಿಸಿತು. ಆತಂಕದಲ್ಲಿ ನಿಂತ ಪದ್ಮಾಳ ಸೊಂಟಕ್ಕೆ ಕೈಹಾಕಿಹಿಡಿದಳು ಪಂಕಜಮ್ಮ.

‘ನಿಮ್ಮಮ್ಮನ್ನ ಹಿಂಗೇ ಹಿಡ್ಕಂತಿದ್ದೆ.’

‘ಆಂಟೀ... ಪ್ಲೀಸ್!!’ ಕೊಸರಿಕೊಂಡಳು. ಅನಿರೀಕ್ಷಿತ ಆಘಾತಕ್ಕೆ ವಕ್ಷಸ್ತಲಗಳು ಉಬ್ಬಿದ್ದವು.

‘ನಿಮ್ಮಮ್‍ನೂ ಹಿಂಗೇ. ಬಿಡೇ ಬಿಡೇ ಅಂತಿದ್ಲು. ನಾನು ಬಿಡ್ತಿರಲಿಲ್ಲ. ಗಿಬರುತಿದ್ಲು, ಕಚ್ಚುತ್ತಿದ್ಲು. ನೋಡಿಲ್ಲಿ...’

ಪಂಕಜಮ್ಮನ ಮುಂಗೈಮೇಲಿನ ಅಮ್ಮನದೆನ್ನುವ ಹಲ್ಲಿನ ಅಸ್ಪಷ್ಟ ಗುರುತುಗಳು.. ಸವರುತ್ತಾ ‘ನನ್ನಮ್ಮನ ವಸ್ತುಗಳೇನಾದ್ರೂ ಇದಾವಾ?’ ಅಂದಳು.

ಹುರಿಗೊಂಡಳು ಪಂಕಜಮ್ಮ. ಕುರ್ಚಿ ಹತ್ತಿ, ಮೀಟಿ, ಮೇಲಿಂದ ಗಂಟುಎಳೆದಳು. ಹಳೆಯ ವಸ್ತುಗಳು. ಬಳೆ, ಟೇಪು, ಜಾತ್ರೆಯುಂಗುರ, ಕಿವಿಯೋಲೆ.. ಚೌರಿಕುಚ್ಚು ಕೈಲಿಟ್ಟು, ‘ತಗಂಡು ಹೋಗು, ಬೇಕಾರೆ’ ಅಂದಳು. ‘ನಿಮ್ಮಮ್ಮ ಇಲ್ಲೆಲ್ಲ ಓಡಾಡ್ತಿದ್ಲು...’ ಆವೇಶ ಬಂದಂತೆ ಕೈಯಾಡಿಸಿ ತೋರಿಸಿದಳು. ಸಣ್ಣಕೋಣೆಯೊಳಗೆ ಕರೆದೊಯ್ದು ಪದ್ಮಾಳ ಅಕ್ಕಿಮೂಟೆಯ ಮೇಲೆ ಕೂರಿಸಿ ‘ಇಲ್ಲಿ ಕಾಲಲ್ಲಾಡಿಸಿಕೊಂತ ಕುಂದ್ರುತಿದ್ಲು.’ ಅಂದಳು. ಇದ್ದಕ್ಕಿದ್ದಂತೆ ವಿಕಾರವಾಗಿ ಅತ್ತಳು. ವಿಚಿತ್ರ ಸನ್ನಿವೇಶಕ್ಕೆ ಹೆದರಿದಳು ಪದ್ಮಾ. ಎಂದೂ ಇವಳ ಹೆಸರೆತ್ತಲೇ ಇಲ್ಲವಲ್ಲ ನಮ್ಮಮ್ಮ...

‘ಅವ್ಳ ಮುಖ ನೋಡಿ ಹತ್ತುವರ್ಷ!!’

‘ಅಮ್ಮ ಹಂಗೇ. ಎಲ್ಲೂ ಹೊರಗೆ ಬರಲ್ಲ..’

‘ಜಡೆಹಾಕಿ ಹೂಮುಡ್ಸಿದ್ರೆ ನಿಮ್ಮಮ್ಮನೇ..’ ಕೆನ್ನೆಗಿಂಡಿದಳು, ಅತ್ತಳು.

ಪದ್ಮಾ ‘ಅಮ್ಮಾ ನಾನು ನಿನ್ಹಂಗೇ’ ಅಂದಾಗೆಲ್ಲ ‘ಅಯ್ಯೋ! ಬಿಡ್ತು ಅನ್ನು’ ಅನ್ನುತ್ತಿದ್ದಳು. ಈಗ ನೆನಪಾಯಿತವಳಿಗೆ.

‘ಊರಿಗೋಗಿದ್ದೇ ಕಾಲ್ ಮಾಡಿಸ್ತೀನಿ ಬಿಡಿ. ಅಮ್ಮನಿಗೆ ನೀವು, ನಿಮ್ಮನೆ, ಈ ರೂಮು ಎಲ್ಲ ಫೋಟೋ ತೋರಿಸ್ತೀನಿ.’

‘ಈ ಕೋಣೀದು ಫೋಟೋ ಮಾತ್ರ ತೋರಿಸಬೇಡಾ!!’ ಅರಚಿದಳು.

‘ಯಾಕೆ!!’

‘ಬ್ಯಾಡಂದ್ರೆ ಬ್ಯಾಡಾ...’ ಒಳಗೆ ಹೋದಳು. ಹೊಗೆ. ಸ್ನಾನದ ಒಲೆಗೆ ಸೀಮೆಎಣ್ಣೆ ಸುರುವಿದಳು. ಮನೆಯೇ ಹೊತ್ತಿಕೊಂಡಂತಹ ಬೆಂಕಿ. ‘ಯಾಕೆ ತೋರಿಸಬಾರ್ದು?’ ಹಿಂದೆಹಿಂದೆಯೇ ಪದ್ಮ. ‘ಹೇಳ್ರೀ ಪ್ಲೀಸ್...’ ಮತ್ತೆ ಅದೇ ಕೋಣೆಯೊಳಗೆ ಕೈಹಿಡಿದು ಕರೆತಂದು ‘ಏನಿದೆ ಈ ರೂಮಲ್ಲಿ ಹೇಳ್ರೀ...’ ಕಾಡಿದಳು.

‘ಇದೇ ಕೋಣೀಲೇ ಎಲ್ಲಾ ಆಗಿ ಹೋಗಿದ್ದು!!’ ಹಣೆಹಣೆ ಚಚ್ಚಿಕೊಂಡಳು ಪಂಕಜಮ್ಮ.

ಇಂದೇ ಪರಿಚಯವಾದ, ಈಗಷ್ಟೇ ಗೊತ್ತಾದ ಹೆಂಗಸು!

‘ಏನು?’

‘ಇದೇ ಕ್ವಾಣೀಲಿ ಅವಳನ್ನ ಕೆಡ್ಸಬಿಟ್ಟ ನನ್ನ ಮಾವ.. ನಾಗಪ್ಪ!’

‘ಹ್ಞಾಂ!!’

‘ಕೇಡಿ ಬಡ್ಡೀಮಗ. ಎರಡೇ ನಿಮಿಷದಲ್ಲಿ ಎಲ್ಲಾ ಮುಗಿಸಿಬಿಟ್ಟಾ ಕಣವ್ವಾ...’

‘ನಾನ್ ನಂಬಲ್ಲಾ...’ ಕೂಗಿದಳು ಪದ್ಮಾ.

‘ನಾನೂ ನಂಬಾದಿಲ್ಲ ಕಣಮ್ಮ. ಇದುನ್ನ ಅವ್ಳೂ ನಂಬ್‍ಬಾರ್ದು. ಯಾರೂ...’ ಪದ್ಮಾಳ ಅವಚಿಹಿಡಿದಳು.

‘ವ್ರಾ...ವ್ಯಾ..ವ್ರೂ...’

ಮತ್ತೆ ಪಾಳುಬಾವಿಯೊಳಗಿನ ಬೆಕ್ಕಿನ ಆರ್ತನಾದ. ಅಮ್ಮನದೇ ಆರ್ತನಾದದಂತೆ.. ಗೋಡೆಗುರುತುಗಳು ಅಮ್ಮನ ಉಗುರುಗಳಾದವು. ನಾಲ್ಕುಗೋಡೆಗಳು ಹತ್ತಿರತ್ತಿರವಾದಂತೆ.. ಪದ್ಮಾಳ ಹಿಸುಕಿ ಉಸಿರುಕಟ್ಟಿಸಿದಂತೆ... ಕೊಸರಾಡಿದಳು.

‘ಬೆಂಗ್ಳೂರಿನ ಗಂಡು ಬಂದು ನೋಡಿ, ಒಪ್ಪಿಕೊಂಡು ಹೋಗಿದಾನೆ -ಅಂತ ನಂಗೆ ಹೇಳೋಕೆ ಉಟ್ಟಸೀರೇಲೇ ಖುಷೀಲೇ ಬಂದಿದ್ಳು. ಪಾಪ ಅದೇ ಸೀರೇಲೇ....’

‘ಅಮ್ಮಾ...’

ಪದ್ಮಾಳ ಎದೆಗೊತ್ತಿಕೊಂಡಳು ಪಂಕಜಮ್ಮ.

‘ಅವತ್ತು ನಿಮ್ಮಾವನೇ ನನ್ನ ಮಾವನಿಗೆ ಕಂಠಮಟ್ಟ ಕುಡಿಸಿದ್ದಂತೆ..’

‘ನಿಲ್ಸೀ..’

‘ಮನೇಲಿರೋರೆಲ್ಲಾ ನಾಗಪ್ಪನ ಚಚ್ಚಿಹಾಕಿದ್ವಿ. ಅವಳ ಕಾಲಿಗ್‍ಬಿದ್ದು ತಪ್ಪಾತು ಅಂದ.’

‘ಸಾಕೂ...’

‘ಇಷ್ಟೆಲ್ಲ ಆದ್ಮೇಲೆ, ಅವತ್ತು ಮನೆಗೆ ಹೋಗ್ತೀನಂತ ಹೊರಟೋಳು, ಹೊರಗಿನ ಬಾವಿಗೆ ಹಾರಕಂಡೇ ಬಿಟ್ಲು!! ಅವನೇ ಹಾರಿ ಈಜಿ ಅವಳನ್ನ ಮೇಲೆತ್ತಿ ತಂದ!’

ಆಂಟಿ ಹಿಡಿತಕ್ಕೆ ಉಸಿರುಸಿಕ್ಕಿಹೋಯಿತವಳಿಗೆ.

‘ವಿಷಯ ದೊಡ್ಡಮನೆಗೆ ಗೊತ್ತಾತೋ, ಇವ್ಳೇ ಹೇಳಿದ್ಲೋ.. ಅಂತೂ ಸುಜಾತಾ ಮಾಯ! ಎರಡು ತಿಂಗಳು.. ನನ್ನ ದೊಡ್ಡಮನೆಹತ್ರ ಬಿಟ್ಕಣ್ಲಿಲ್ಲ. ನಿನ್‍ಮಾವ ನನ್ನ ಕೂದಲಿಡಿದು ನಡುರಸ್ತೆಲಿ ಎಳದಾಡಿದ. ನಾಗಪ್ಪನ ನಡಮುರ್ದಾ. ಸಾಯಮಟಾ ಹೊಡ್ದು ಕೆರೆನಾಗೆ ಬಿಸಾಕಿದ್ದ.’

‘ಬಿಟ್ಬಿಡಿ ನನ್ನಾ’

‘ಊರ್ನೋರ್ಗೂ ಕರೀದೆ ನಿಮ್ಮಮ್ಮನ ಮದ್ವಿ ಮಾಡ್ದ್ರು... ಸತ್ಯಪ್ಪಜ್ಜ ಅಂತೂ ಸತ್ಯ ಮರೆಮಾಚಿದ. ಒಂದಿನ ಇದ್ದಕ್ಕಿದ್ದಂಗೆ ಸುಜಾತಾ ನಮ್‍ಕೊಟ್ಟಿಗೇಲಿ! ಅಳ್ಕಂತ ಕುಂತಿದ್ಲು!’ ಹಿಡಿತ ಸಡಿಲಿಸಿದಳು ಪಂಕಜಮ್ಮ.

‘ಯಾಕೆ!’

‘ಅದು ನಿಂತ್ ಬಿಟ್ಟೈತೆ ಕಣೇ ಏನ್ಮಾಡ್ಲೀ.. ಅಂತ ಗೋಗರದ್ಲು.. ಸಾಯ್ತೀನೀ ಅಂದ್ಲು..’

‘ಏನ್ ಮಾಡ್ದ್ರಿ!’

‘ಕಳ್ಳನಾಟಿ ಔಸ್ಧಿ ಮಾಡಿಸ್ದೆ.’

‘ಏನಾಯ್ತು!’

‘ರಕ್ತ ಹೋಗ್ತೈತೆ ಸದ್ಯ! ಅದು ನಿಲ್ಲಂಗೆ ಕಾಣ್ತಿಲ್ಲ ಬಿಡು.. ನಾನು ಹೊರಡ್ತೀನಿ ಅಂದ್ಲು.. ಹೋಗೇಬಿಟ್ಲು.’

‘ಅಯ್ಯೋ! ಸಾಯ್ಸೇಬಿಟ್ರಾ!!’

‘ಅದು ಅವತ್ತು ಸತ್ತುಹೋಗಿದ್ರೆ.. ಇವತ್ತು ನಂಗೆ ಈ ಪ್ರಶ್ನೆ ಯಾರು ಕೇಳಬೇಕಿತ್ತು ಕಣವ್ವಾ!’

ನೆಲಕ್ಕೆ ಹಣೆಯಿಟ್ಟಳು ಪದ್ಮಾ. ಹಿಂಬದಿ ಜೀನ್ಸು ಇಳಿದುಹೋಗಿತ್ತು. ನಡುವಿನಿಂದ ಕೆಂಪುಬಣ್ಣ ಹರಡಿಕೊಳ್ಳುತ್ತಿತ್ತು.

‘ಜಾತ್ರೇಲೇ ನಿಂಗೆ ಹೇಳ್ಬೇಕೂಂತಿದ್ದೆ. ಹಂಗಾಗ್‍ಬಿಡ್ತಲ್ಲ..’

ಕಿಲುಬುವಾಸನೆ ಕಮಟುನಾತ ಹೆಚ್ಚಾಗತೊಡಗಿತು.. ವಾಕರಿಕೆ.. ಹುಡುಕಿದಳು... ಕೋಣೆ ಹೊಸ್ತಿಲ ಬಳಿ ರುಂಡ! ತಲೆ ದೇಹವಾಗಿ ಕೈಹೆಜ್ಜೆಯಲ್ಲಿ ತೆವಳುತ್ತಾ ಹತ್ತಿರತ್ತಿರ.. ನಾಗರಹಾವಿನಂತೆ..

ಪದ್ಮಾ ಚೀರಿ ಹೊರಗೋಡಿದಳು. ತಾನು ಹುಟ್ಟಿದ ಜಾಗದಿಂದ.

‘ನನ್‍ಮಾವ ನಾಗಪ್ಪ ಕಣೇ ಪದ್ಮಾ... ಹೆದ್ರಬ್ಯಾಡ. ಕಾಲು ಬುದ್ಧಿ ಸ್ವಾಧೀನ ಇಲ್ಲ.’ ಪಂಕಜಮ್ಮ ಬೆನ್ನುಹತ್ತಿದಳು.

ಕತ್ತಲಲ್ಲಿ ದಿಕ್ಕೆಟ್ಟು ಓಡುತ್ತಲೇ ಹೋದಳು. ಮೊಬೈಲ್ ಬೆಳಕೂ ಸತಾಯಿಸಿತು. ಉಸಿರ ಲೆಕ್ಕತಪ್ಪುವಷ್ಟು ಹೊತ್ತಿಗೆ ಮುಗ್ಗರಿಸಿಬಿದ್ದಳು. ರಕ್ತಮುಖದಲ್ಲಿ ಎದ್ದು ನಿಂತರೆ, ಕಣ್ಣಿಗೇ ಬೆಳಕು.

ಎದುರಿಗೇ ರಂಗನಾಥ!

‘ಹ್ಞುಂ.. ಹತ್ಕಳೇ ಗಿಡ್ಡೀ’ ಅಂದ. ಕಿಶೋರನ ನೋಡುವ ತವಕದಲ್ಲಿ ಮಾತಾಡದೇ ಹಾರಿಕೂತಳು. ಚಲನೆ ಧೈರ್ಯ ತಂದಿತು. ‘ಕತ್ಲಾಗ್ಯಾಕೆ ಓಡಿ ಬರಾಕೋದೆ. ನಮ್ ನಾಗಪ್ಪ ಕಚ್ಚುದ್ನಾ?’ ಅಂದು ನಕ್ಕ.

‘ಕಿಶೋರನ್ನ ಮನೆಗೆ ಬಿಟ್‍ಬಂದ್ಯ?’ ಅರ್ಧ ಉಸಿರಲ್ಲಿ ಪದ್ಮಾ.

‘ಆನೆಭಾರಕ್ಕೆ ಬೈಕು ದಿಣ್ಣೆ ಹತ್ಲಿಲ್ಲ. ಅಲ್ಲೇ ಉದುರಿಸ್ಬಂದೆ..’

‘ಕಥೆ ಹೇಳ್ಬೇಡ, ನಿಜಾ ಹೇಳು’

‘ನಿನ್ನಾ ಅವನಕ್ಕನ ಬೀಳ್ಸಿದ್ದ ಬಟ್ಟೆಬಿಚ್ಚಿದ್ದ ಕಥೆನೂ ಹೇಳ್ದೆ’

‘ತೂ! ಕರುಣೆ ಇಲ್ವಾ ನಿಂಗೆ..’ ಬೆನ್ನಿಗೆ ಹೊಡೆದಳು.

‘ಆವಾಗ ನಿನ್ನ ಮಾವನಿಗೆ ಕರುಣೆ ಇರಲಿಲ್ಲಾ? ಜಾತ್ರೀಲಿ ನಿನ್ನ ಗೆಳತಿ ಜಡೆ ಎಳೆದಿದ್ಕೆ ನನ್ನ ಚಚ್ಚಿಹಾಕಿದ್ನಲ್ಲ..’

‘ಅದ್ಕೆ?’

‘ನಾನು ಗಂಡ್ಸುಕಣೆ. ಸೇಡು ತೀರಿಸ್ಕಂಡೆ.’

‘ಹ್ಞಾಂ?’ ತಲೆಗೂದಲು ಜಗ್ಗಿದಳು.

‘ಹ್ಞೂಂ. ನಿಮ್ಮಿಬ್ರನ್ನ ಹೆದ್ರಿಸಿ ಮರದಿಂದ ಬೀಳ್ಸಿದೆ, ಬಟ್ಟೆ ಎಲ್ಲಾ ಕಿತ್ತಾಕಿದೆ, ನಿಮ್ಮಿಬ್ರ ಮೇಲೆ ಉಲ್ಡಾಡಿದೆ..’

‘ರ್ಯಾಸ್ಕಲ್!’ ಬೈಕಿನಿಂದ ಹಾರಿಬಿದ್ದಳು. ‘ಹೋ’ ಚೀರುತ್ತಾ ಎದ್ದು ಕಪ್ಪುಲೋಕದಲ್ಲಿ ಉಸಿರುಗಟ್ಟಿ ಓಡಿದಳು. ಗಿರಕಿ ಹೊಡೆದೊಡೆದು ಬಕ್ಕಬಾರಲೆಬಿದ್ದಳು. ತಲೆಯೆತ್ತಿ ಕಣ್ಬಿಟ್ಟಾಗ ಅವನಿರಲಿಲ್ಲ. ನಟ್ಟನಡುರಾತ್ರಿ. ದಿಣ್ಣೆಯ ಏರು ರಸ್ತೆ! ಓಡಿದಂತೆ ಓಲಾಡುತ್ತಾ ಹೆಜ್ಜೆಹಾಕಿದಳು.

‘ಅಲ್ಲೋದ್ರೆ ನನ್ನಾಣೆ’ -ಅನ್ನುತ್ತಿದ್ದಳು ಅಮ್ಮ. ಅವಳಾಣೆ ಮುರಿದೆ.. ಅವಳ ಕೈಯಾರೆ ಕೊಂದೆ ನಾನು... ನಾಳೆಬೆಳಗ್ಗೆ ಅಪ್ಪ ನನ್ನ ಪ್ರೀತಿಯ ಮಗಳೇ ಅಂತ ಎಬ್ಬಿಸ್ತಾನಾ... ನಾಳೆ ಅನ್ನುವುದು ಇರುವುದಾ.. ಕೈಯೆಲ್ಲ ರಕ್ತ!

ಇದ್ದಕ್ಕಿದ್ದಂತೆ ಗಾಳಿ ನಿಂತು ವಿಲಕ್ಷಣ ಮೌನ ಆವರಿಸಿತು. ದೆವ್ವಗಾಳಿ ಶುರುವಾಯಿತು. ದೊಡ್ಡಬೇವಿನಮರ ಗಲಗಲ ಎಲೆಗಳ ಅಲ್ಲಾಡಿಸಿತು.. ಇದೇ ರಾವು, ಇದೇ ದೆವ್ವದಿಣ್ಣೆ!

ಕಾಲಿಗೆ ಹಬ್ಬತೊಡಗಿದ ತೊಡರುಬಳ್ಳಿ... ಎಡಪಕ್ಕದಿಂದ ಗೋರಿ.. ಬಲಪಕ್ಕದಿಂದ ನಾಗಪ್ಪನ ಕಲ್ಲು.. ಹಿಂದಿನಿಂದ ಆ ತೆವಳುವ ಮನುಷ್ಯ ಹತ್ತಿರತ್ತಿರ.. ಇಷ್ಟು ವರ್ಷ ಕಿವಿಯಿಂದ ಕೇಳಿಸಿಕೊಂಡ ಘಟನೆ ಮಿದುಳೊಳಗಿನ ಸ್ಪಷ್ಟ ನೆನಪಾಗತೊಡಗಿತು! ಅದೇ ದೊಡ್ಡಮರದ ರೆಂಬೆಗೆ ಇನ್ನಾದರೂ ರಕ್ತದಲ್ಲಿ ಬೆತ್ತಲೆ ತೂಗುತ್ತಿರುವ ತನುಜಾ..

ನಿಟ್ಟುಬಿದ್ದು ತಲೆಕೊಡವಿ ಕಣ್ಬಿಟ್ಟಳು. ಗಾಳಿಧೂಳಿ ನಿಂತಿತು. ದೂರದಲ್ಲಿ ಕಿಶೋರನ ದೊಡ್ಡದೇಹ... ತೊಡರುಬಳ್ಳಿಯ ಸಣ್ಣಗುಂಡಿಯಲ್ಲಿ! ‘ಕಿಶೋರಾ...’ ಓಡಿದಳು.

6. ಕತ್ತಲಲ್ಲಿ ಕಣ್ಣುಕೀಲಿಸಿದಳು. ಕಟುವಾಸ್ತವ ಘೋರವಾಗಿ. ನಕ್ಕು ಆಡಿ ಸ್ವಚ್ಛಂದ ಬೆಳೆಯಬೇಕಿದ್ದ ಹುಡುಗ ಕೊರಡಂತೆ.. ಬಾಗಿ ಹಿಡಿದೆಬ್ಬಿಸಿದಳು, ಕುಸಿದುಬಿದ್ದ. ‘ಏಳೋ...’ ಮೇಲೆಳೆಯತೊಡಗಿದಳು...

‘ರೋಂಯ್...’ ಸದ್ದು. ದುಷ್ಟಸವಾರಿಯ ಅನಿಷ್ಟಬೈಕು ಕೊಲ್ಲಲೆಂದೇ ಬರತೊಡಗಿತು.. ಕಿಶೋರನಿಗೆ ಅಡ್ಡ ನಿಂತಳು. ಮಣ್ಣು ಗೆಬರಿ ತೂರತೊಡಗಿದಳು.

‘ಟರ್ರರ್ರ್..’

ಸಣ್ಣಸದ್ದು ಕಿವಿಕೆಪ್ಪಾಗಿಸುವ ಘೋರಸದ್ದಾಗಿ ಅದೇ ದೊಡ್ಡಮರದ ದೊಡ್ಡರೆಂಬೆ ರಪ್ಪನೆ ಮುರಿದುಬಿತ್ತು. ನಡೂಮಧ್ಯ. ಕಂಪಿಸಿತು ನೆಲ-ಬಾನು. ಬೈಕು ದೊಪ್ಪನೆ ದೊಡ್ಡಕಮರಿಗೆ ಬಿತ್ತು!

ದಾಟಿಕೊಂಡಳು ಪದ್ಮಾ ಮೂರನೆಯ ಗಂಡಾಂತರ.. ಮೂರನೆಯದಕ್ಕೆ ಮುಕ್ತಾಯವಾಗಲಿಲ್ಲ.

‘ಅಕ್ಕಾ...’ ಕಿಶೋರ. ನರಕವ ಸ್ವರ್ಗವಾಗಿಸಿದ ದನಿ! ಎದ್ದು ನಿಂತ. ‘ಅವನ ಬುರುಡೆ ಚಚ್ಚಿದೆ’ ಕಲ್ಲು ತೋರಿಸಿದ.

ಕೈಕೈಹಿಡಿದು ಊರದಿಕ್ಕಿಗೆ ನಿಧಾನ ಇಳಿಯತೊಡಗಿದರು. ‘ಟಿಣ್!’ ಮೊಬೈಲ್ ಬೆಳಕಾಯಿತು. ಮೆಸೇಜ್.

‘ಮೈ ಪ್ಯೂರೆಸ್ಟ್ ಲೇಡಿ, ಹೌ ಆರ್ ಯೂ...’ - ಸುಶಾಂತ್.