ಯೋಗದ ಪ್ರಕ್ರಿಯೆಯನ್ನು ಹಠಯೋಗ ಪ್ರದೀಪಿಕೆ ಗ್ರಂಥದಲ್ಲಿ ಸ್ವಾತ್ಮಾರಾಮ ಸೂರಿ ಹೀಗೆನ್ನುತ್ತಾರೆ. ಯೋಗ ಸಾಧನೆಯನ್ನು ಯುವಕರಾದಿಯಾಗಿ ವೃದ್ಧರು, ಅತಿವೃದ್ಧರು, ವ್ಯಾಧಿಗ್ರಸ್ಥರು, ದುರ್ಬಲರೂ ಸಹ ಮಾಡಬಹುದು. ಯೋಗ ಸಿದ್ಧಿ -ಲಾಭವನ್ನು ಹೊಂದಬಹುದು. ವೃದ್ಧಾಪ್ಯದಲ್ಲಿ ಮೊದಲು ಕಾಡಬಹುದಾದದ್ದು ವ್ಯಾಧಿಗಳು. ಇವುಗಳಿಗೆ ಆಧ್ಯಾತ್ಮಿಕವಾದ ವೈಜ್ಞಾನಿಕವಾದ ಕಾರಣಗಳೂ ಇರುತ್ತವೆ. ವಂಶಾನುಗತವಾಗಿ, ಒತ್ತಡದಿಂದ, ಶರೀರ ಸ್ಥಿತಿಯಿಂದ, ಆಹಾರ ವಿಹಾರಗಳಿಂದ, ಪ್ರಾರಬ್ಧ ಫಲದಿಂದ ಬರಬಹುದಾದ ವ್ಯಾಧಿಗಳ ಪರಿಹಾರ ತೀವ್ರತೆಯಲ್ಲಿ ಇಳಿಕೆ ಇತ್ಯಾದಿ ಯೋಗದಿಂದ ಸಾಧ್ಯವೆಂಬುದು ಶಾಸ್ತ್ರ ಸಿದ್ಧವಾದ ವಿಚಾರ, ವಿಜ್ಞಾನವೂ ಒಪ್ಪಿದ ತಥ್ಯ.
ಕಷ್ಟವಿದ್ದರೂ ಇಲ್ಲವೆಂದುಕೊಂಡರೆ ಕಷ್ಟದ ತೀವ್ರತೆ ಕಡಿಮೆಯಾಗುತ್ತದೆ ಎಂಬ ತತ್ವ ನಮ್ಮ ಎಷ್ಟೋ ಸಮಸ್ಯೆಗಳನ್ನು ಸಹ್ಯವಾಗಿಸುತ್ತದೆ. ವೃದ್ಧಾಪ್ಯದ ವ್ಯಾಧಿ, ಚಿಂತೆ, ಒತ್ತಡಗಳನ್ನು ಬದಿಗೆ ಸರಿಸುವಲ್ಲಿ ಈ ಪರಿಹಾರೋಪಾಯವನ್ನು ಯೋಗ ನೀಡುತ್ತದೆ. ವ್ಯಾಧಿಗಳ ಮೂಲ ತಾಣ ಮನಸ್ಸು. ಅದನ್ನು ಆದಿಜಾ ಎನ್ನುವರು. ಮನೋಮಯ ಹಂತದಲ್ಲಿ ಆಗುವ ಒತ್ತಡ, ಉದ್ವೇಗ, ಗೊಂದಲ, ಖಿನ್ನತೆ ಹಾಗೂ ಅದರ ಋಣಾತ್ಮಕ ಪರಿಣಾಮಗಳು ಪ್ರಾಣದ ಹಂತದಲ್ಲಿ ಅಸಮತೋಲನ ತಂದು ಕ್ರಮೇಣ ಶರೀರದ ಮೂಲಕ ವಿವಿಧ ರೋಗಗಳಾಗಿ ಹೊರಬೀಳುತ್ತದೆ.
ವೃದ್ಧರು ತನಗೆ ಸಿಗಬೇಕಾಗಿರುವುದು ಸಿಗುತ್ತಿಲ್ಲ ಎಂಬುದನ್ನು ಬಿಟ್ಟು ತಾನು ಇತರರಿಗೆ ಏನು ನೀಡಬಹುದೋ ಅದರತ್ತ ಯೋಚಿಸಿದಾಗ ಬಾಳು ಹೆಚ್ಚು ಆನಂದಮಯವಾಗುತ್ತದೆ. ತನ್ನ ಪರಿಪಕ್ವ ಅನುಭವದ ಸಿರಿಯಿಂದ ಕಿರಿಯರಿಗೆ ದಾರಿದೀಪವಾಗಬಹುದು. ಸೇವಾ ತತ್ಪರತೆ ಮಾರ್ಗದರ್ಶನ, ಸ್ವಾಧ್ಯಾಯ ಸತ್ಸಂಗ ಇತ್ಯಾದಿಗಳನ್ನು ರೂಢಿಸಿಕೊಂಡರೆ ಮಾದರಿಯಾಗಬಹುದು. ಪ್ರಕೃತಿಪ್ರೇಮ, ದೇಶಪ್ರೇಮದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ವೃದ್ಧಾಪ್ಯ ಹೆಚ್ಚು ಶ್ರೀಮಂತವಾಗುತ್ತದೆ. ವಯಸ್ಸಾದಂತೆ, ನಮ್ಮ ಅಭ್ಯಾಸ ಮತ್ತು ಜೀವನ ಶೈಲಿಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಒದಗುತ್ತದೆ. ಈ ದಿನಗಳಲ್ಲಿ ಕೀಲು ನೋವು, ಸ್ನಾಯು ಸೆಳೆತ-ಬಿಗಿತ, ಆಯಾಸ ನಡೆಯುವಾಗ ಸಮತೋಲನ ತಪ್ಪುವುದು, ನಿದ್ರಾಹೀನತೆ, ವಯಸ್ಸಿಗೆ ಸಂಬಂಧಿಸಿದ ಇತರ ಖಾಯಿಲೆಗಳು ಬಾಧಿಸಿ ವ್ಯಾಯಾಮ ಮಾಡಲು ಕಷ್ಟಕರವಾಗಿಸುತ್ತದೆ. ಈ ರೀತಿಯ ಆರೋಗ್ಯ ಕುರಿತ ಕಾಳಜಿ ಹೆಚ್ಚಾಗಿ ಹಿರಿಯರನ್ನು ನಿಷ್ಕ್ರಿಯ ಅಥವಾ ಜಡ ಜೀವನ ಶೈಲಿಗೆ ಕರೆದೊಯ್ಯುತ್ತದೆ. ಇದು ಆರೋಗ್ಯವನ್ನೂ ಜೀವನ ಶೈಲಿಯನ್ನೂ ಇನ್ನಷ್ಟು ಹದೆಗೆಡಿಸುತ್ತದೆ. ಆದರೆ, ಎಷ್ಟೇ ವೃದ್ಧಾಪ್ಯ ಹಿರಿತನ ಬಂದರೂ ಸ್ವಲ್ಪ ಮನಸ್ಸು ಮಾಡಿ ಕುರ್ಚಿ, ಕೋಲು, ಗೋಡೆ, ಕಿಟಕಿಯ ಸಹಾಯದಿಂದ ಹಿತಮಿತ ನಿಯಮಿತವಾಗಿ ಮಾಡುವ ಯೋಗಾಭ್ಯಾಸವು ಮನೋದೈಹಿಕ ಆರೋಗ್ಯ ಜೀವನಶೈಲಿಯನ್ನು ಸುಧಾರಿಸಲು ಉಪಯೋಗಿಯಾಗಿದೆ. ಪ್ಲೈಯೊಮೆಟ್ರಿಕ್ಸ್ ನಂತಹ ದುಬಾರಿ ಪರಿಕರಗಳನ್ನು ಉಪಯೋಗಿಸದೆ, ಯಾವುದೇ ಸಹಾಯವಿಲ್ಲದೆ ಮಾಡುವ ಕುರ್ಚಿ ಯೋಗಾಭ್ಯಾಸವು ನಮ್ಮ ಕೀಲುಗಳಲ್ಲಿ ಸುಲಭ ಮತ್ತು ಇತರ ರೀತಿಯ ವ್ಯಾಯಾಮಗಳಿಗೆ ರಹದಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಚೇರ್ ಯೋಗವು ಕ್ರಮೇಣ ಯಾವುದೇ ವೃದ್ಧರನ್ನು ಫಿಟ್ನೆಸ್ ಮಟ್ಟಕ್ಕೆ ತೆಗೆದುಕೊಂಡು ಹೋಗುವುದರ ಜತೆಗೆ ಹಿಂದಿನ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ. ಕುರ್ಚಿಯೋಗವು ವೃದ್ಧರಿಗೆ ವೃದ್ಧಾಪ್ಯದ ಕೀಲುಗಳ ಮೇಲೆ ಒತ್ತಡ ಕಡಿಮೆ ಮಾಡುವುದು, ಒತ್ತಡ ನಿಯಂತ್ರಣ ಭಾವನೆ ಸಂಸ್ಕಾರದೊಂದಿಗೆ ನೋವು ನಿರ್ವಹಣೆ ಸಾಮರ್ಥ್ಯ ಹೆಚ್ಚಿಸುತ್ತದೆ. ಖಿನ್ನತೆ ಆತಂಕ ಎದುರಿಸಿ ಸುಧಾರಿಸುವ ತಂತ್ರ ಕಲಿಸುತ್ತದೆ. ರಕ್ತಪರಿಚಲನೆ ಸುಧಾರಣೆಯೊಂದಿಗೆ ಸ್ವಯಂ ಯೋಗಕ್ಷೇಮಕ್ಕೆ ಉತ್ತೇಜಿಸುತ್ತದೆ. ಇದು ಕಡಿಮೆ ಅಪಾಯ ಹಾಗೂ ಹಿತಮಿತ ವ್ಯಾಯಾಮವಾಗಿದೆ. ಲಾಭ ನಿಧಾನವಾದರೂ ಸರಿಯಾದ ಕುರ್ಚಿ ಉಪಕರಣ ಅಗತ್ಯ. ತೋಳು ರಹಿತ, ಸ್ಥಿರವಾದ, ಸಮತಟ್ಟಾದ ಕುರ್ಚಿ ಅವಶ್ಯ. ಯೋಗಾಭ್ಯಾಸಕ್ಕೆ ಸೂಕ್ತ ಉಡುಪು ಧರಿಸಬೇಕು. ಸ್ಪಾಂಡಿಲೋಸಿಸ್, ಅತಿರಕ್ತದೊತ್ತಡ, ಬೆನ್ನು ನೋವು ಇರುವವರು ವೈದ್ಯರ ಸಲಹೆ ಪಡೆಯುವುದು ಸೂಕ್ತ. ಯೋಗತಜ್ಞರ ಮಾರ್ಗದರ್ಶನದಲ್ಲಿ ಮಾಡುವ ಕುರ್ಚಿಯೋಗವು ವೃದ್ಧಾಪ್ಯದಲ್ಲಿ ಹೆಚ್ಚಿನ ಲಾಭ ನೀಡುತ್ತದೆ.