| ರಾಘವ ಶರ್ಮ ನಿಡ್ಲೆ ನವದೆಹಲಿ
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪ್ರಬಲ ಎದುರಾಳಿಯಾಗಿದ್ದರೂ, ಕರೊನಾ ಕಾಲದಲ್ಲಿ ಸರ್ಕಾರದ ಜನಸ್ನೇಹಿ ಕಾರ್ಯಕ್ರಮಗಳು ಎಲ್ಡಿಎಫ್ಗೆ ಲಾಭವಾಗಿ ಪರಿಣಮಿಸಬಹುದು ಎಂಬ ಮಾತುಗಳಿವೆ. ಇವೆಲ್ಲದರ ಮಧ್ಯೆ, ರಾಜ್ಯದಲ್ಲಿ ತನ್ನ ಮತ ಹಂಚಿಕೆ ಪ್ರಮಾಣ ವಿಸ್ತರಣೆಗೆ ಗಂಭೀರ ಪ್ರಯತ್ನ ಮಾಡುತ್ತಿರುವ ಬಿಜೆಪಿ, ‘ಮೆಟ್ರೋ ಮ್ಯಾನ್’ ಇ. ಶ್ರೀಧರನ್ ನೇತೃತ್ವದಲ್ಲಿ ಮಧ್ಯಮ ವರ್ಗ ಹಾಗೂ ನಗರದ ಮತದಾರರನ್ನು ಸೆಳೆವ ತಂತ್ರಗಾರಿಕೆ ಅನುಸರಿಸಿದೆ.
ಈ ಬಾರಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ಕಳುಹಿಸಿಕೊಡಲಾಗಿದ್ದು, ಸಂಘಟನಾತ್ಮಕ ದೃಷ್ಟಿಯಿಂದ ರಾಜ್ಯ ಬಿಜೆಪಿಯಲ್ಲಿ ಏನೇನು ಬದಲಾವಣೆಗಳಾಗಬೇಕೆಂಬ ಬಗೆಗಿನ ಪ್ರಾಥಮಿಕ ಮಾಹಿತಿಯನ್ನು ಅವರು ಹೈಕಮಾಂಡ್ ಜತೆಗೆ ಹಂಚಿಕೊಂಡಿದ್ದಾರೆ. ಸದ್ಯ ಚುನಾವಣೆ ಮೇಲೆಯೇ ಮುಖಂಡರ ದೃಷ್ಟಿ ನೆಟ್ಟಿರುವುದರಿಂದ ಸಂಸತ್ತಿನ ಅಧಿವೇಶನ ಆರಂಭಗೊಳ್ಳುವ ತನಕ ರಾಜ್ಯದಲ್ಲೇ ಬೀಡುಬಿಟ್ಟು ಪದಾಧಿಕಾರಿಗಳೊಂದಿಗೆ ತ್ರಿಶೂರ್, ತಿರುವನಂತಪುರಂ, ಕೊಡಂಗಲ್ಲೂರ್ ಸೇರಿ ಹಲವೆಡೆ ಅವರು ಸಭೆಗಳನ್ನು ನಡೆಸಿದ್ದಾರೆ. ಗುರುವಾರದಂದು ಮತ್ತೆ ಕೇರಳಕ್ಕೆ ತೆರಳಲಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಇಲ್ಲಿ ಅಧಿಕಾರ ಸ್ಥಾಪಿಸಲು ಸಾಧ್ಯವಿಲ್ಲ. ಆದರೆ, ಕಳೆದ ಚುನಾವಣೆಗಿಂತ ಹೆಚ್ಚು ಮತಗಳನ್ನು ಬಾಚಿ, ಸಂಘಟನೆ ವಿಸ್ತರಿಸಿ, ಬಲಗೊಳಿಸಬೇಕು ಎನ್ನುವುದು ದಿಲ್ಲಿ ನಾಯಕರ ಉದ್ದೇಶ. ಆ ಮೂಲಕ ಭವಿಷ್ಯದಲ್ಲಿ ಬಿಜೆಪಿ ದೃಢವಾಗಿ ನೆಲೆಗೊಳ್ಳಬೇಕು ಎಂದೇ ಇಷ್ಟೆಲ್ಲಾ ಹರಸಾಹಸ ಪಡಲಾಗುತ್ತಿದೆ. ‘ಕೇರಳದಲ್ಲಿ ಲವ್ ಜಿಹಾದ್ಗೆ ಹಿಂದು ಮಾತ್ರವಲ್ಲ ಕ್ರಿಶ್ಚಿಯನ್ ಯುವತಿಯರೂ ಬಲಿಯಾಗುತ್ತಿದ್ದಾರೆ. ಹೀಗಾಗಿ, ನಮ್ಮ ರಕ್ಷಣೆಗೆ ನಿಲ್ಲದೆ, ಕೇವಲ ಮುಸ್ಲಿಂ ಮತಬ್ಯಾಂಕ್ ಓಲೈಕೆಯಲ್ಲೆ ತೊಡಗಿರುವ ಎಲ್ಡಿಎಫ್ ಮತ್ತು ಯುಡಿಎಫ್ಗೆ ಪರ್ಯಾಯವಾಗಿ ಬಿಜೆಪಿಯನ್ನೇಕೆ ಆಯ್ಕೆ ಮಾಡಬಾರದು ಎಂಬ ಚರ್ಚೆ ಕ್ರಿಶ್ಚಿಯನ್ನರ ಮಧ್ಯೆ ನಡೆದಿದೆ. ಇದು ಕೂಡ ನಮ್ಮ ಪ್ರಚಾರದ ಒಂದು ಭಾಗವಾಗಿದೆ’ ಎಂದು ಕೇರಳಕ್ಕೆ ಹೋಗಿ ಬಂದಿರುವ ಬಿಜೆಪಿಯ ಕೇಂದ್ರ ನಾಯಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕಾಸರಗೋಡು, ಮಂಜೇಶ್ವರ ಟಿಕೆಟ್ ಯಾರಿಗೆ?: ಗಡಿಭಾಗದ 2 ಕ್ಷೇತ್ರಗಳಲ್ಲಿ ಕನ್ನಡಿಗರ ಮತಗಳೂ ಪ್ರಮುಖ ಪಾತ್ರವಹಿಸುತ್ತಿವೆ. 2016ರ ಕಾಸರಗೋಡು ವಿಧಾನಸಭೆ ಚುನಾವಣೆಗೆ ಗಡಿನಾಡು ಕನ್ನಡಿಗ ರವೀಶ್ ತಂತ್ರಿ ಸ್ಪರ್ಧಿಸಿ, 8 ಸಾವಿರ ಮತಗಳಿಂದ ಸೋತಿದ್ದರು. ಮಂಜೇಶ್ವರದಿಂದ ಸ್ಪರ್ಧಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಇಂಡಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ವಿರುದ್ಧ ಕೇವಲ 89 ಮತಗಳಿಂದ ಸೋತಿದ್ದರು. ರವೀಶ ತಂತ್ರಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಾರೆ ಎಂದಿರುವುದರಿಂದ ಕಾಸರಗೋಡು ಟಿಕೆಟನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ಗೆ ನೀಡುವ ಬಗ್ಗೆ ಚರ್ಚೆಗಳಿವೆ. ಮಂಜೇಶ್ವರದಿಂದ ಕೆ. ಸುರೇಂದ್ರನ್ ಸ್ಪರ್ಧಿಸಬಹುದು ಎಂದೂ ಹೇಳಲಾಗುತ್ತಿದೆ. 2-3 ದಿನಗಳಲ್ಲಿ ಅಂತಿಮ ಚಿತ್ರಣ ಸಿಗಲಿದೆ.
ಎರ್ನಾಕುಲಂ ಮೇಲೆ ಕಣ್ಣು: ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ಬಿಜೆಪಿ ತೋರಿದ ನಿರ್ವಹಣೆ ಗಮನಸೆಳೆದಿದೆ. ಎರ್ನಾಕುಲಂ ಸೇರಿ ಸೇರಿ ತ್ರಿಪುಣಿತ್ತರ, ಪರವೂರ್, ವೈಪಿನ್, ಅರುವಾ, ಕಲಮಸ್ಸೆರಿ, ಪೆರುಂಬವೂರ್ ಕ್ಷೇತ್ರಗಳಲ್ಲಿ ಪಕ್ಷದ ಮತ ಪ್ರಮಾಣ ಏರುವ ನಿರೀಕ್ಷೆಯಿದೆ. ಅಲ್ಲದೆ, ಸಿಎಂ ಅಭ್ಯರ್ಥಿ ಇ. ಶ್ರೀಧರನ್ ತ್ರಿಪುಣಿತ್ತರ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.