ನ್ಯೂಸ್

ಜಾನಪದದ ಬೇರು ಗಟ್ಟಿಯಾಗಿದೆ: ಸಾಹಿತಿ ವಿಜಯ ರಾಂಪುರ ಹೇಳಿಕೆ

ರಾಮನಗರ: ನಾಡೋಜ ಎಚ್.ಎಲ್.ನಾಗೇಗೌಡರು ಕಟ್ಟಿದ ಜಾನಪದದ ಬೇರು ಇಂದು ಗಟ್ಟಿಯಾಗಿದ್ದು, ಟೊಂಗೆಗಳು ಬಲಿಷ್ಠವಾಗಿ ಹಣ್ಣುಗಳನ್ನು ಬಿಡಲು ಆರಂಭಿಸಿದೆ ಎಂದು ಸಾಹಿತಿ ವಿಜಯ ರಾಂಪುರ ತಿಳಿಸಿದರು.

ನಗರದ ಸಮೀಪದ ಜಾನಪದ ಲೋಕದಲ್ಲಿ ಶನಿವಾರ ಆಯೋಜಿಸಿದ್ದ ಲೋಕಸಿರಿ ತಿಂಗಳ ಅತಿಥಿ- 69ರ ಕಾರ್ಯಕ್ರಮದಲ್ಲಿ ಕೋಲಾಟ ಕಲಾವಿದ ಮೇಲುಗಿರಯ್ಯ ಅವರಿಗೆ ಲೋಕಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಿ ವಾತನಾಡಿದರು.

ಜಾನಪದ ಲೋಕ ಜನಸಾವಾನ್ಯರಿಗೂ ಹತ್ತಿರವಾಗುತ್ತಿದೆ. ಕಲಾವಿದರನ್ನು ಹುಡುಕಿ ಗುರುತಿಸಿ ಲೋಕಸಿರಿ ಪ್ರಶಸ್ತಿಯನ್ನು ಪ್ರತಿ ತಿಂಗಳು ನೀಡುತ್ತಿರುವುದು ಸಂತೋಷ ತರುವ ಸಂಗತಿ. ಇದರಿಂದ ಕಲಾವಿದರು ಬೇರೆ ಬೇರೆ ವೇದಿಕೆಯಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ನಡೆ ಜಾನಪದ ಲೋಕದ ಕಡೆ, ಜಾನಪದ ಲೋಕದ ನಡೆ ಕಾಲೇಜಿನ ಕಡೆ ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಪೀಳಿಗೆಗೆ ಜಾನಪದದ ಸೊಗಡು ಪಸರಿಸುವಂತೆ ವಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಬಿ.ಆರ್.ಉಮೇಶ್ ವಾತನಾಡಿ, ಜನಪದ ಸಂಸ್ಕೃತಿ ನಮ್ಮ ಜೀವನವನ್ನು ರೂಪಿಸುತ್ತದೆ. ದೇಶೀಯ ಸಂಸ್ಕೃತಿ ಜಾನಪದದಲ್ಲಿ ಅಡಗಿದೆ. ನಾವು ಕಳೆದುಕೊಂಡಿರುವ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಲೋಕ ಪ್ರತಿ ತಿಂಗಳು ಲೋಕಸಿರಿಯಂತಹ ಕಾರ್ಯಕ್ರಮ ನಡೆಸುತ್ತಾ ಮೇಲುಗಿರಯ್ಯ ಅಂತಹ ಹಿರಿಯ ಕಲಾವಿದರನ್ನು ಗೌರವಿಸುವ ಮೂಲಕ ಜಾನಪದದ ಬಗ್ಗೆ ಒಲವು ಹೆಚ್ಚಲು ಕಾರಣೀಭೂತರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ವಾತನಾಡಿದ ಮೇಲುಗಿರಯ್ಯ, ವಾಗಡಿ ತಾಲೂಕು ತೂಬಿನಕೆರೆ ಗ್ರಾಮದಲ್ಲಿ ಹುಟ್ಟಿದ ನಾನು ಅನಕ್ಷರಸ್ಥ, ಕಳೆದೆರಡು ವರ್ಷಗಳ ಹಿಂದೆ ಪಾರ್ಶ್ವವಾಯು ಬಂದು ನಿಲ್ಲಲು ಕೂರಲು ಆಗುತ್ತಿಲ್ಲ. ತಂದೆ-ತಾಯಿ ಸಹಕಾರದಿಂದ ಕುಣಿಗಲ್ ತಿಮ್ಮಯ್ಯ ಎಂಬ ಗುರುಗಳ ಬಳಿ ಕೋಲಾಟ ಕಲಿತೆ.

ನಂತರ ವಿವಿಧ ಗ್ರಾಮಗಳಲ್ಲಿ ಜಾನಪದ ಕಲಾ ತಂಡಗಳಲ್ಲಿ ಕೋಲಾಟ ತಂಡ ನಡೆಸುತ್ತಾ ಜೀವನ ಸಾಗಿಸುತ್ತಾ, ಕಲಾಸಕ್ತರಿಗೆ ಕೋಲಾಟ, ಪಟಕುಣಿತ, ಸೋಮನ ಕುಣಿತ ಕಲೆಯನ್ನು ಕಲಿಸಿಕೊಟ್ಟಿದ್ದೇನೆ ಎಂದು ಹೇಳಿ, ಕೋಲಾಟದ ಪದಗಳನ್ನು ಹಾಡುವುದರ ಮೂಲಕ ತಾವು ಕರೆತಂದಿದ್ದ ಕೋಲಾಟ ತಂಡದೊಂದಿಗೆ ಹಾಡಿ ಭಾಗವಹಿಸಿದ್ದವರಿಗೆ ರಂಜಿಸಿ ಕಲೆಯ ರಸದೌತಣ ಉಣಬಡಿಸಿದರು.

ಕ್ಯೂರೇಟರ್ ಡಾ. ಯು.ಎಂ.ರವಿ, ರಂಗಸಹಾಯಕ ಎಸ್.ಪ್ರದೀಪ್ ರಾಮನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು, ಕಲಾಸಕ್ತರು, ಕಲಾವಿದರು ಜಾನಪದ ಲೋಕದ ಸಿಬ್ಬಂದಿ ಇದ್ದರು.