ವಿಜಯಪುರ: ಮಸಬಿನಾಳ ಗ್ರಾಮದಲ್ಲಿ ಇವಿಎಂ ಯಂತ್ರಗಳನ್ನು ಪುಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಸವನ ಬಾಗೇವಾಡಿ ಡಿವೈಎಸ್ಪಿ ಅವರಿಗೆ ಮಾಹಿತಿ ಕಲೆ ಹಾಕಿದ್ದಾರೆ.
ಜನರ ತಪ್ಪು ಕಲ್ಪನೆಯಿಂದಾಗಿ ಘಟನೆ ನಡೆದಿರುವುದಾಗಿ ಸೆಕ್ಟರ್ ಆಫೀಸರ್ ಮಾಹಿತಿ ನೀಡಿದ್ದಾರೆ. ಬಳಿಕ ವಿವಿಪ್ಯಾಟ್, ಇವಿಎಂ ಯಂತ್ರಗಳನ್ನು ಒಡೆದು ಹಾಕಿದವರ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮಕ್ಕಳೊಂದಿಗೆ ತೆರಳಿ ಮತ ಚಲಾಯಿಸಿದ ಸಿಎಂ ಬೊಮ್ಮಾಯಿ
ಘಟನೆಯ ಬಗ್ಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮುಂಜಾಗ್ರತೆಗಾಗಿ ತರಿಸಲಾಗಿದ್ದ ಹೆಚ್ಚುವರಿ ಮತಯಂತ್ರಗಳಿಗೆ ಹಾನಿಯಾಗಿವೆ. ಸೆಕ್ಟರ್ ಅಧಿಕಾರಿ ವಾಹನದಲ್ಲಿ ಕೊಂಡೊಯ್ಯುವಾಗ ಜನರು ತಪ್ಪು ಭಾವಿಸಿ ಒಡೆದು ಹಾಕಿದ್ದಾರೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು, ಘಟನೆಯಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಈಗಾಗಲೇ ಗಲಾಟೆ ಮಾಡಿದ ಕೆಲವರನ್ನು ಬಂಧಿಸಿಲಾಗಿದೆ. ಗಲಾಟೆಯಲ್ಲಿ ಭಾಗಿಯಾಗಿರೋ 20 ರಿಂದ 25 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮುಂಜಾಗ್ರತೆಗಾಗಿ ತರಿಸಲಾಗುತ್ತಿದ್ದ ಹೆಚ್ಚುವರಿ ಮತಯಂತ್ರಗಳನ್ನು ಗ್ರಾಮಸ್ಥರು ಒಡೆದು ಹಾಕಿದ್ದ ಘಟನೆಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇಂದು ನಡೆದಿದೆ. ಮತಯಂತ್ರ ಕೆಟ್ಟು ಹೋದಲ್ಲಿ ಬಳಕೆ ಮಾಡಲು ಎಂದು ಹೆಚ್ಚುವರಿಯಾಗಿ ಇವಿಎಂ ಯಂತ್ರ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನು ತರಲಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕರ್ತವ್ಯ ನಿರತ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸರಿಯಾಗಿ ಉತ್ತರಿಸದೇ ಇದ್ದಾಗ ಅರ್ಧಕ್ಕೆ ಮತದಾನ ಸ್ಥಗಿತಗೊಳಿಸಲಾಗಿದ ಎಂದು ತಪ್ಪು ಭಾವಿಸಿದ ಜನರು ಮತಯಂತ್ರವನ್ನು ಪುಡಿ ಮಾಡಿದ್ದಾರೆ.
ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ಮತಯಂತ್ರಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ಈ ಅಚಾತುರ್ಯ ಸಂಭವಿಸಿದೆ. ಅಲ್ಲದೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗಳಿಗೂ ಥಳಿಸಿದ್ದು, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ.