ವಿಆರ್​ಎಲ್​ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರ ಜತೆ ವಿಜಯಾನಂದ ಚಿತ್ರತಂಡ. 
ನ್ಯೂಸ್

ಬೆಂಗಳೂರು ಚಿತ್ರೋತ್ಸವದಲ್ಲಿ ವಿಜಯಾನಂದ; ಕನ್ನಡ ವಿಭಾಗದಲ್ಲಿ ಡಾ.ವಿಜಯ ಸಂಕೇಶ್ವರ ಬಯೋಪಿಕ್ ಸ್ಪರ್ಧೆ

ಬೆಂಗಳೂರು: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಸಿನಿಮಾ ‘ವಿಜಯಾನಂದ’. ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಮೊದಲ ಬಾರಿಗೆ ನಿರ್ವಿುಸಿರುವ ಚಿತ್ರವಿದು. ಕಳೆದ ಡಿ. 9ರಂದು ಪಂಚಭಾಷೆಗಳಲ್ಲಿ, ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ ಈ ಬಯೋಪಿಕ್​ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ವಿಜಯಾನಂದ ಚಿತ್ರ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ವಿಭಾಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದೆ.

ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ‘ಗಂಧದ ಗುಡಿ’, ಮಂಸೋರೆ ನಿರ್ದೇಶನದ ‘19.20.21’, ಶರಣ್ ಅಭಿನಯದ ‘ಗುರು ಶಿಷ್ಯರು’, ‘ಹದಿನೇಳೆಂಟು’, ‘ಕನಕ ಮಾರ್ಗ’, ‘ಕೋರಮ್ಮ’, ‘ಕುಬುಸ’, ‘ಮೇಡ್ ಇನ್ ಬೆಂಗಳೂರು’, ‘ನಲ್ಕೆ’, ‘ನಾನು ಕುಸುಮಾ’, ‘ಆರ್ಕೆಸ್ಟ್ರಾ ಮೈಸೂರು’, ‘ಫೋಟೋ’ ಹಾಗೂ ‘ಮಠ’ ಚಿತ್ರಗಳ ಜತೆ ‘ವಿಜಯಾನಂದ’ ಚಿತ್ರವು ಕನ್ನಡ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ.

‘ವಿಜಯಾನಂದ’ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿರುವುದು ನಿರ್ವಪಕನಾಗಿ ಖುಷಿಯಾಯಿತು. ಸ್ಪರ್ಧೆಗೆ ಆಯ್ಕೆಯಾಗಿರುವ 13 ಬೇರೆ ಚಿತ್ರತಂಡಗಳಿಗೂ ಅಭಿನಂದನೆಗಳು. ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ವಿುಸಿದ ಮೊದಲ ಸಿನಿಮಾ. ನಮ್ಮ ತಂದೆಯವರಾದ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್. ಸ್ಪೂರ್ತಿದಾಯಕ, ಪ್ರೇರಣಾದಾಯಕ ಚಿತ್ರವಿದು. ಎಷ್ಟು ಹೆಚ್ಚು ಜನರಿಗೆ ಇದು ತಲುಪುತ್ತದೆಯೋ, ಅಷ್ಟು ಜನರಿಗೂ ಈ ಸಿನಿಮಾ ಕಲಿಯಲು ಒಂದು ಪಾಠ. ಕೆಲವರು ಮೂರ್ನಾಲ್ಕು ಬಾರಿ ಚಿತ್ರ ನೋಡಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಸಿನಿಮಾ ಇನ್ನಷ್ಟು ಹೆಚ್ಚು ಜನರನ್ನು ತಲುಪಲಿರುವುದು ಖುಷಿಯ ವಿಚಾರ. | ಡಾ. ಆನಂದ ಸಂಕೇಶ್ವರ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ

ಇದೇ ಮಾ. 23ರಿಂದ 30ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಚಿತ್ರದ ಪ್ರದರ್ಶನವಾಗಲಿದ್ದು, ಜ್ಯೂರಿಗಳು ಅತ್ಯುತ್ತಮ ಸಿನಿಮಾ ಆಯ್ಕೆ ಮಾಡಲಿದ್ದಾರೆ. ಚಿತ್ರೋತ್ಸವದ ಕೊನೆಯ ದಿನ ಆಯ್ಕೆಯಾದ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ವಿಜಯಾನಂದ’ ಚಿತ್ರದಲ್ಲಿ ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ವಿನಯಾ ಪ್ರಸಾದ್, ನಿಹಾಲ್ ರಜಪೂತ್, ಭರತ್ ಬೋಪಣ್ಣ, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಕಾರ್ತಿಕ್ ಪತ್ತಾರ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಹೇಮಂತ್ ಕುಮಾರ್ ಸಂಕಲನವಿದೆ.