| ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದೆನಿಸಿರುವ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ವರ್ಷ ಹೊಸ ಪೀಳಿಗೆ ಮತ್ತು ಹಳೇ ತಲೆಮಾರಿನ ನಡುವಿನ ಮಹಾ ಸಂಗ್ರಾಮ ಏರ್ಪಟ್ಟಿದೆ. 60 ವರ್ಷದ ಹಿರಿಯ ರಾಜಕಾರಣಿ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ 27ರ ಯುವಕ, ಸಚಿವ ಆನಂದಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಸವಾಲೊಡ್ಡಿದ್ದಾರೆ. ಜತೆಗೆ ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಇಬ್ಬರು ಹಾಲಿ ಶಾಸಕರಾದ ಭೀಮಾನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕರುಣಾಕರ ರೆಡ್ಡಿ ಎರಡನೇ ಅವಧಿಗೆ ಆಯ್ಕೆಯಾಗಲು ಕಸರತ್ತು ನಡೆಸಿದ್ದಾರೆ.
ಐಎಸ್ಆರ್ ಸಕ್ಕರೆ ಕಾರ್ಖಾನೆಯಿಂದ ತಮ್ಮ ಬಂಗ್ಲೆಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸಚಿವ ಆನಂದ ಸಿಂಗ್ ಅದನ್ನು ಮುಚ್ಚಿಸಿದರು. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಸರ್ಕಾರಿ ಜಾಗ ಒತ್ತುವರಿ ಮಾಡಿ ಬಂಗ್ಲೆ ನಿರ್ವಿುಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಸಂಡೂರು ತಾಲೂಕಿನಲ್ಲಿ ಇನಾಮು ಭೂಮಿ ಖರೀದಿಸಿದ್ದಾರೆ ಮತ್ತು ಅವರಿಗೆ ರಾಜಕಿಯ ಅನುಭವ ಇಲ್ಲ ಎಂಬೆಲ್ಲ ಆರೋಪಗಳು ಬಿಜೆಪಿಗೆ ಅಡ್ಡಿಯಾಗಿವೆ. ಆದರೆ ನೂತನ ಜಿಲ್ಲೆಯ ರಚನೆ, ಪಿ.ಕೆ. ಹಳ್ಳಿ ಏತ ನೀರಾವರಿ ಜಾರಿಗೊಳಿಸಿದ್ದು, 300 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಗೆ ಶಂಕು ಸ್ಥಾಪನೆ ಸಿಂಗ್ ಕಾರಣೀಕರ್ತರು. ಸಿದ್ಧಾರ್ಥ ಸಿಂಗ್ ಕೂಡಾ ಗ್ರಾಮವಾಸ, ವಿವಿಧ ಕ್ರೀಡೆಗಳ ಆಯೋಜನೆಯಿಂದ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅದರಂತೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಬಗ್ಗೆಯೂ ಸಾಕಷ್ಟು ಪರ-ವಿರೋಧದ ಮಾತುಗಳಿವೆ. ಎಚ್.ಆರ್.ಗವಿಯಪ್ಪ ಆಗರ್ಭ ಶ್ರೀಮಂತ. ಆದರೆ, ಬೇಗನೇ ಜನ ಸಾಮಾನ್ಯರೊಂದಿಗೆ ಬೆರೆಯುವುದಿಲ್ಲ ಎಂಬ ಆರೋಪಗಳಿವೆ.
ಸಾಮಾನ್ಯ ಕ್ಷೇತ್ರವಾದ ಹರಪನಹಳ್ಳಿಯಲ್ಲಿ ಈ ಬಾರಿ ಲಿಂಗಾಯತ ಮತ್ತು ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಎಲ್ಲ ಪಕ್ಷದಲ್ಲಿ ಬಲವಾಗಿತ್ತು. ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿತ್ತು. ಸ್ವಪಕ್ಷೀಯ ನಾಯಕರ ಅಪಸ್ವರದ ಮಧ್ಯೆಯೂ ಬಿಜೆಪಿಯ ಹಾಲಿ ಶಾಸಕ ಜಿ.ಕರುಣಾಕರರೆಡ್ಡಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್ನಿಂದ ಎನ್.ಕೊಟ್ರೇಶಿ ಸ್ಪರ್ಧಿಸಿದ್ದು, ಕಾಂಗ್ರೆಸ್ಗೆ ಬಂಡಾಯವಾಗಿ ಎಂ.ಪಿ.ಪ್ರಕಾಶ ಅವರ ಪುತ್ರಿ ಎಂ.ಪಿ.ಲತಾ ಕಣಕ್ಕಿಳಿದಿದ್ದಾರೆ. ಮತ್ತೋರ್ವ ಪುತ್ರಿ ಎಂ.ಪಿ.ವೀಣಾ ಸ್ವತಂತ್ರವಾಗಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದು, ಲತಾಗೆ ಬೆಂಬಲ ಸೂಚಿಸುವ ಮೂಲಕ ಸಹೋದರಿಯರು ಪಟ್ಟು ಪ್ರದರ್ಶಿಸುತ್ತಿದ್ದಾರೆ.
ಹೂವಿನಹಡಗಲಿ(ಎಸ್ಸಿ) ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ ಉದಾಹರಣೆಗಳಿಲ್ಲ. ಈ ಬಾರಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ ಹ್ಯಾಟ್ರಿಕ್ ಗೆಲುವಿಗೆ ಬಿಜೆಪಿಯ ಕೃಷ್ಣಾ ನಾಯ್ಕ ತೊಡರುಗಾಲಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಕಮಲ ತೆಕ್ಕೆಗೆ ಜಾರಿರುವ ಕೃಷ್ಣಾ ನಾಯ್ಕ ಈಗ ನಾಯ್ಕಗೆ ಸವಾಲೊಡ್ಡಿದ್ದಾರೆ. ಕಾಂಗ್ರೆಸ್ನ ನಾಯಕರೇ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಲ್ಲದೆ, ಸೋಲಿಸುವುದಾಗಿ ಶಪಥ ಮಾಡಿರುವುದು ಕ್ಷೇತ್ರದಲ್ಲಿ ರ್ಚಚಿತ ವಿಷಯ. ಜೆಡಿಎಸ್ನಿಂದ ಕೆ.ಪುತ್ರೇಶ್ ಕಣದಲ್ಲಿದ್ದಾರೆ.
ಹಗರಿಬೊಮ್ಮನಹಳ್ಳಿ (ಎಸ್ಸಿ) ಕ್ಷೇತ್ರದಲ್ಲಿ ಶಾಸಕ ಭೀಮಾನಾಯ್ಕ ಮತ್ತು ನೇಮಿರಾಜ್ ನಾಯ್ಕ ಸತತ ನಾಲ್ಕನೇ ಬಾರಿಗೆ ಮುಖಾಮುಖಿಯಾಗಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ನೇಮಿರಾಜ ನಾಯ್ಕ ಬಳಿಕ 2013, 2018ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಭೀಮಾನಾಯ್ಕ ಎದುರು ಮುಗ್ಗರಿಸಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್ ವಂಚಿತ ನೇಮಿರಾಜ್ ನಾಯ್ಕ ಜೆಡಿಎಸ್ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಬಲ್ಲಾಹುಣಸಿ ರಾಮಣ್ಣ ಕಣಕ್ಕಿಳಿದಿದ್ದು, ಮೊದಲ ಬಾರಿಗೆ ಬಿಜೆಪಿ ಎಸ್ಸಿ ಎಡ ಸಮುದಾಯಕ್ಕೆ ಮನ್ನಣೆ ನೀಡಿದೆ. ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಬಂಜಾರೇತರ ಸಮುದಾಯಗಳು ಬಿಜೆಪಿಗೆ ಪ್ಲಸ್ ಆಗುವ ಲೆಕ್ಕಾಚಾರ ನಡೆದಿದೆ. ಆದರೆ, ಶಾಸಕ ಭೀಮಾನಾಯ್ಕ ಮತ್ತು ನೇಮಿರಾಜ್ ನಾಯ್ಕ ಮಧ್ಯೆ ಗೆಲುವಿಗೆ ಪೈಪೋಟಿ ಏರ್ಪಡಲಿದೆ.
ಕೂಡ್ಲಿಗಿ (ಎಸ್ಟಿ) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಗೊಂಡು, ಮೂಲ ಕ್ಷೇತ್ರ ಮೊಳಕಾಲ್ಮೂರಿಗೆ ಹೋಗಿದ್ದಾರೆ. ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿದ್ದ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಪುತ್ರ ಡಾ.ಎನ್.ಟಿ.ಶ್ರೀನಿವಾಸಗೆ ಕಾಂಗ್ರೆಸ್ ಮಣೆ ಹಾಕಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಲೋಕೇಶ ನಾಯಕ ಕಮಲ ಹಿಡಿದು ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಸ್ಪರ್ಧಾಕಾಂಕ್ಷಿಯಾಗಿದ್ದ ಕೋಡಿಹಳ್ಳಿ ಭೀಮಣ್ಣ ಜೆಡಿಎಸ್ ಪಾಲಾಗಿದ್ದಾರೆ. ಇದರಿಂದಾಗಿ ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ಸಾಧನೆ, ಜನ ಸೇವೆಯನ್ನು ಮುಂದಿಡುವುದರ ಜತೆಗೆ ಮತದಾರರ ಅನುಕಂಪದ ನಿರೀಕ್ಷೆಯಲ್ಲಿದ್ದಾರೆ.