ವಿಜಯನಗರ: ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ಹೆಗ್ಗುರುತು. ಆದರೆ, ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವಿನ ಕಲಹಗಳಿಂದ ಕೆಲವೊಮ್ಮೆ ದೇಶದಲ್ಲಿ ಅಶಾಂತಿ ತಲೆದೂರಿ, ಬಿಗುವಿನ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿ ಯಾರಿಗೂ ಒಳ್ಳೆಯದಲ್ಲ. ಇಲ್ಲಿ ಯಾರೂ ಶಾಶ್ವತವಲ್ಲ ಅನ್ನೋದನ್ನು ನೆನಪಿನಲ್ಲಿಡಬೇಕು. ಇದ್ದಷ್ಟು ದಿನ ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುವುದರಲ್ಲೇ ನಿಜವಾದ ನೆಮ್ಮದಿ ನೆಲಸಿದೆ ಎಂಬುದನ್ನು ವಿಜಯನಗರದ ಹನುಮನಹಳ್ಳಿಯಲ್ಲಿ ನಡೆದ ಘಟನೆ ನೆನಪಿಸುತ್ತಿದೆ.
ಹಿಂದೂಗಳೇ ಇಲ್ಲದ ಮುಸ್ಲಿಂ ಸಮುದಾಯದವರೆ ವಾಸವಿರುವ ಹನುಮನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ, ಗೋಪುರ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆದಿದ್ದು, ಹಿಂದು-ಮುಸ್ಲಿಂ ಭಾವೈಕ್ಯತೆಗೆ ಈ ಘಟನೆ ಸಾಕ್ಷಿಯಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹನುಮನ ಹಳ್ಳಿ ಗ್ರಾಮದ ಪುರಾತನ ಕಾಲದ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ವಹಣೆ ಇಲ್ಲದೆ ಪಾಳು ಬಿದ್ದಂತಾಗಿತ್ತು. ಜೀರ್ಣೋದ್ಧಾರ ಕುರಿತು ಅಣಜಿಗೆರೆ ಗ್ರಾಮದ ಕೆಲ ಮುಖಂಡರು ಹನುಮನಹಳ್ಳಿ ಮುಸ್ಲಿಂ ಸಮುದಾಯದ ಮುಖ್ಯಸ್ಥರೊಂದಿಗೆ ಚರ್ಚಿಸಿ, ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ನಿರ್ಮಾಣದ ಕಾರ್ಯಕ್ಕೆ ಕೈ ಜೋಡಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರಿದ್ದಾರೆ.
ಹನುಮನಹಳ್ಳಿ ಗ್ರಾಮದ ಮೂಲ ಹೆಸರು ಹನುಮಗೊಂಡನಹಳ್ಳಿ. ಇಲ್ಲಿ 100 ಕ್ಕೂ ಅಧಿಕ ಮುಸ್ಲಿಂ ಕುಟುಂಬಗಳು ವಾಸಿವಾಗಿವೆ. ಅಣಜಿಗೆರೆ ಗ್ರಾಮದ ಹಿಂದುಗಳ ಪೂರ್ವಜರು ವಾಸವಾಗಿ ದೇವಸ್ಥಾನ ನಿರ್ಮಾಣ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಕ್ರಮೇಣ ಅಣಜಿಗೆರೆಯಲ್ಲಿ ವಲಸೆ ಹೋಗಿದ್ದರಿಂದ ದೇವಸ್ಥಾನ ನಿರ್ವಹಣೆ ಇಲ್ಲದಂತಾಗಿತ್ತು. ಈಗ ಜಾತ್ಯಾತೀತವಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಸರ್ವ ಧರ್ಮಿಯರಿಗೂ ದೇವಸ್ಥಾನ, ಮಠ, ದರ್ಗಾಗಳು ಮಾನಸಿಕ ನೆಮ್ಮದಿ ನೀಡುವ ತಾಣವಾಗಿದೆ. ಹಿಂದು-ಮುಸ್ಲಿಮರು ಸೇರಿ ನಿರ್ಮಾಣ ಮಾಡಿರುವ ದೇವಸ್ಥಾನ ಭಾವೈಕ್ಯತೆ ಸಾರುವ ಕೊಂಡಿಯಾಗಿದೆ ಎಂದರು.
ಅಲವಂಡಿ ಮಠದ ಮರುಳಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಜಾತಿ ವ್ಯವಸ್ಥೆಯ ಅರಾಜಕತೆಯ ನಡುವೆಯೂ ಮುಸ್ಲಿಮರೇ ಇರುವ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವುದು ಮಾದರಿ ಎನಿಸಿದೆ ಎಂದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ ಧರ್ಮದಲ್ಲಿ ರಾಜಕೀಯ ನುಸುಳಿ ಪಾವಿತ್ರ್ಯ ಹಾಳಾಗಿದೆ. ಇದು ಜನಾಂಗೀಯ ವರ್ಗೀಕರಣ ಹುಟ್ಟುಹಾಕುತ್ತಿದೆ. ಅಶಾಂತಿ, ಸಂಘರ್ಷಕ್ಕೆ ಕಾರಣವಾಗುತ್ತಿರುವ ದಿನಮಾನಗಳಲ್ಲಿ ಹನುಮನಹಳ್ಳಿ ಮಾದರಿ ಗ್ರಾಮವಾಗಿ ಗಮನ ಸೆಳೆದಿದೆ ಎಂದರು.
ಈ ಸಂದರ್ಭದಲ್ಲಿ ಹಿರೇ ಹಡಗಲಿ ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣ ಹಾಲಸ್ವಾಮಿ, ಮತ್ತಿಹಳ್ಳಿ ನಿಂಗಣ್ಣ, ಹಳ್ಳೆರ ಸಿದ್ದಣ್ಣ, ರೇವಣ್ಣ, ಕಿರಣ್ ಕುಮಾರ್, ಮರಿಯಪ್ಪ, ಬಸವರಾಜ, ಆಯಿಬ್ ಸಾಬ್, ಹಸೆನ್ ಸಾಬ್, ರಿಜ್ವಾನ್, ಶಿವಣ್ಣ, ಕುಮಾರ್, ವೀರೇಶ್ ಸ್ವಾಮಿ, ರಾಮಪ್ಪ ಇದ್ದರು. (ದಿಗ್ವಿಜಯ ನ್ಯೂಸ್)