ಹುಬ್ಬಳ್ಳಿಯ ಪಿವಿಆರ್ ಚಿತ್ರಮಂದಿರದಲ್ಲಿ ಶನಿವಾರ ರಾತ್ರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ‘ವಿಜಯಾನಂದ’ ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರೂಪಾ ಶೆಟ್ಟಿ, ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಪ್ರಭು ನವಲಗುಂದಮಠ ಅವರು ಜತೆಗಿದ್ದರು. 
ನ್ಯೂಸ್

ವಿಜಯಾನಂದ ಸ್ಫೂರ್ತಿಯ ಸೆಲೆ ಎಂದ ಕೇಂದ್ರ ಸಚಿವ ಜೋಶಿ; ಹೊಸ ಸೃಷ್ಟಿಗೆ ಸಾಕ್ಷಿ

ಹುಬ್ಬಳ್ಳಿ: ‘ಒಬ್ಬ ವ್ಯಕ್ತಿ ಛಲ, ವಿಶ್ವಾಸ, ಪ್ರಯತ್ನ ಹಾಗೂ ಪರಿಶ್ರಮ ಎಂಬ ನಾಲ್ಕು ಸಂಗತಿಗಳನ್ನು ಹೊಟ್ಟೆ-ಹೃದಯದಲ್ಲಿ ಇಟ್ಟುಕೊಂಡು ಪ್ರಯತ್ನ ಪಟ್ಟರೆ, ಶೂನ್ಯದಿಂದ ಹೊಸ ಸೃಷ್ಟಿ ನಿರ್ಮಾಣ ಮಾಡಬಲ್ಲ ಎಂಬುದು ಈ ಚಲನಚಿತ್ರ ನೋಡಿದರೆ ಗೊತ್ತಾಗುತ್ತದೆ ...’

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೀಗೆ ಹೇಳಿದ್ದು ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿದ ‘ವಿಜಯಾನಂದ’ ಚಿತ್ರದ ಕುರಿತು. ಶನಿವಾರ ರಾತ್ರಿ ನಗರದ ಪಿವಿಆರ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ ಅವರು, ನಂತರ ಡಾ. ವಿಜಯ ಸಂಕೇಶ್ವರ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ‘90ರ ದಶಕದಿಂದಲೂ ನಾನು ಡಾ. ವಿಜಯ ಸಂಕೇಶ್ವರ ಅವರನ್ನು ಬಲ್ಲೆ. ಚಲನಚಿತ್ರದಲ್ಲಿರುವ ಕಾರ್​ನಲ್ಲಿ ನಾನೂ ಅವರೊಂದಿಗೆ ಓಡಾಡಿದ್ದೇನೆ. ಈ ಚಲನಚಿತ್ರದಲ್ಲಿ ಯಾವುದೇ ಉತ್ಪ್ರೇಕ್ಷೆಗಳು ಇಲ್ಲ. ದಾವಣಗೆರೆ ಗೋದಾಮು ಸುಟ್ಟಿದ್ದು ನನಗೆ ಗೊತ್ತಿದೆ. ಸುಟ್ಟಾಗ ಅಲ್ಲಿಗೆ ಹೋಗಿರುವುದು ನನಗೆ ನೆನಪಿದೆ. ಇಂಥ ಹಲವು ವಿಷಯಗಳು ಚಲನಚಿತ್ರದಲ್ಲಿ ಮೂಡಿಬಂದಿವೆ ಎನ್ನುವುದಷ್ಟೆ ಅಲ್ಲದೆ,

ಡಾ. ವಿಜಯ ಸಂಕೇಶ್ವರ ಅವರ ಜೀವನ ಹೇಗೆ ರೂಪುಗೊಂಡಿದೆ ಎನ್ನುವುದನ್ನು ಚಲನಚಿತ್ರದಲ್ಲಿ ಸತ್ಯಕ್ಕೆ ಅತ್ಯಂತ ಸಮೀಪವಾಗಿ ತೋರಿಸಲಾಗಿದೆ’ ಎಂದು ಖುಷಿಪಟ್ಟರು. ವಿಶೇಷವಾಗಿ, ಹುಬ್ಬಳ್ಳಿ-ಧಾರವಾಡ ಜನರು ಹೆಮ್ಮೆಪಡುವಂಥ ಚಲನಚಿತ್ರ ‘ವಿಜಯಾನಂದ’ ಎಂದ ಅವರು, ‘ಈ ಚಿತ್ರ ಜನರ ಪ್ರೀತಿ, ವಿಶ್ವಾಸ ಗಳಿಸುತ್ತಿದೆ. ಅದರಲ್ಲೂ ಯುವ ಜನರು ಸ್ಪೂರ್ತಿ ಪಡೆಯುವಂತಿದೆ. ವಿದ್ಯಾಭ್ಯಾಸ ಮಾಡಿದವರು, ಸರ್ಕಾರಿ ನೌಕರಿಯೇ ಬೇಕು ಎಂಬ ಮನಸ್ಥಿತಿ ಇರುವ ಯುವಕರು ಈ ಚಿತ್ರ ನೋಡಿದರೆ ಹೊಸ ಉತ್ಸಾಹ, ಹುಮ್ಮಸ್ಸು, ಹೊಸ ಯೋಚನೆ ಬರುತ್ತದೆ’ ಎಂದರು. ‘ತಂದೆಯ ಜತೆಗೆ ಡಾ. ಆನಂದ ಸಂಕೇಶ್ವರ ಅವರೂ ಪರಿಶ್ರಮ ಪಡುತ್ತಿದ್ದಾರೆ. ಹಾಗಾಗಿ ವಿಆರ್​ಎಲ್ ಸಂಸ್ಥೆ, ‘ವಿಜಯವಾಣಿ’ ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ. ಗದಗನಿಂದ ಪ್ರಾರಂಭವಾಗಿ ಹುಬ್ಬಳ್ಳಿಯಿಂದ ಮುಂದುವರಿದಿರುವ ಡಾ. ವಿಜಯ ಸಂಕೇಶ್ವರ ಮತ್ತು ಡಾ. ಆನಂದ ಸಂಕೇಶ್ವರ ಅವರ ಯಶೋಗಾಥೆ ಜಗತ್ತಿನಾದ್ಯಂತ ಪಸರಿಸಲಿ’ ಎಂದು ಶುಭ ಕೋರಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ಹು-ಧಾ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಪ್ರಭು ನವಲಗುಂದಮಠ, ಮುಂತಾದವರು ‘ವಿಜಯಾನಂದ’ ಚಿತ್ರವನ್ನು ವೀಕ್ಷಿಸಿದರು.