ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್‌ನಲ್ಲಿ ಮಾತೆ ಮರಿಯ ಜಯಂತಿಯ ಅಂಗವಾಗಿ ಧರ್ಮಗುರು ೌಲ್ ಡಿಸೋಜಾ, ಕರನ್ ಮಸ್ಕರೇನ್ಹಸ್ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನಡೆಯಿತು. 
ನ್ಯೂಸ್

ಮರಿಯ ಜಯಂತಿ ಆಚರಣೆ ಸಂಭ್ರಮ

ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚ್‌ನಲ್ಲಿ ಭಾನುವಾರ ಕ್ರೈಸ್ತರು ಸಡಗರದಿಂದ ಮಾತೆ ಮರಿಯ ಜಯಂತಿ ಹಾಗೂ ಹೊಸಕ್ಕಿ ಹಬ್ಬ ಆಚರಿಸಿದರು. ಜಪಾನಿನಿಂದ ಆಗಮಿಸಿರುವ ಧರ್ಮಗುರು ಕರನ್ ಮಸ್ಕರೇನ್ಹಸ್ ಹಾಗೂ ಚರ್ಚ್‌ನ ಧರ್ಮಗುರು ೌಲ್ ಡಿಸೋಜಾ ಅವರು ಮರಿಯ ಜಯಂತಿ ಅಂಗವಾಗಿ ಬಲಿಪೂಜೆ ನೆರವೇರಿಸಿದರು. ಧರ್ಮಗುರು ೌಲ್ ಡಿಸೋಜಾ ಮಾತನಾಡಿ, ದೇವರು ಪ್ರಕೃತಿಯನ್ನು ಸೃಷ್ಟಿಸಿದ ಬಳಿಕ ಮನುಷ್ಯನನ್ನು ಸೃಷ್ಟಿ ಮಾಡಿದ್ದಾರೆ. ಮನುಷ್ಯನಿಗೆ ಅಗತ್ಯವಿರುವ ಎಲ್ಲ ವಸ್ತುಗಳು ಪ್ರಕೃತಿಯಲ್ಲಿ ಕೊಟ್ಟಿದ್ದಾರೆ. ಹೊಸಕ್ಕಿ ಹಬ್ಬದ ಮೂಲಕ ಪ್ರಕೃತಿ ಮಾತೆಯನ್ನು ನಮಿಸುವ ಕಾರ್ಯ ಮರಿಯ ಜಯಂತಿಯಂದು ಮಾಡಲಾಗುತ್ತಿದೆ ಎಂದು ಹೇಳಿದರು.
ಮರಿಯ ಜಯಂತಿ ಕ್ರೈಸ್ತ ಕುಟುಂಬಗಳ ಸದಸ್ಯರ ಬಾಂಧವ್ಯ ಬೆಸೆಯುವ ಹಬ್ಬ. ಪ್ರಮುಖವಾಗಿ ಕುಟುಂಬದಲ್ಲಿನ ಸದಸ್ಯರೊಂದಿಗಿನ ಪ್ರೀತಿ, ಐಕ್ಯತೆಯನ್ನು ಮೂಡಿಸಿ ಸಂಸ್ಕೃತಿ ಬೆಳೆಸುತ್ತದೆ ಎಂದರು.
ಧರ್ಮಗುರು ಕರನ್ ಮಸ್ಕರೇನ್ಹಸ್ ಮಾತನಾಡಿ, ಮರಿಯ ಜಯಂತಿ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬಗಳು ಒಗಟ್ಟಿನ ಸಂಕೇತವಾಗಿರುವ ಕುರಿತು ಪ್ರತಿಜ್ಞೆ ಕೈಗೊಳ್ಳಬೇಕಿದೆ. ಯುವಜನರು ಮೊಬೈಲ್ ದೂರ ಮಾಡಿ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕಿದೆ. ಪಾಲಕರು ಸಹ ಮಕ್ಕಳೊಂದಿಗೆ ಬೆರೆತು ಮುಂದೆ ಸಾಗಬೇಕಿದೆ ಎಂದರು. ಮರಿಯ ಜಯಂತಿ ಶುಭ ಸಂದರ್ಭದಲ್ಲಿ ಪ್ರತಿ ಕ್ರೈಸ್ತ ಕುಟುಂಬದವರಿಗೆ ಲಡ್ಡು, ಪಾಯಸ, ಕಬ್ಬು, ಭತ್ತದ ತೆನೆಗಳನ್ನು ಆಶೀರ್ವದಿಸಿ ಸಿಹಿ ವಿತರಿಸಲಾಯಿತು. ಭಕ್ತರು ಮಾತೆ ಮರಿಯಮ್ಮನವರ ವಿಗ್ರಹಕ್ಕೆ ವಿವಿಧ ಬಗೆಯ ಪುಷ್ಪಗಳನ್ನು ಅರ್ಪಿಸಿ ನಮಿಸಿದರು. ಧರ್ಮಗುರುಗಳಾದ ಕೀರ್ತಿ ಕಿರಣ್ ಮತ್ತು ಚರ್ಚ್ ಸಮಿತಿಯ ಸದಸ್ಯರು, ಕನ್ಯಾಸೀಯರು, ಐಸಿವೈಎಂ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.