ಬೆಂಗಳೂರು: ರೇಣುಕಾ ಸ್ವಾಮಿ ಎನ್ನುವ ವ್ಯಕ್ತಿಯೊರ್ವನ ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪತಿ ಅರೆಸ್ಟ್ ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ ಎನ್ನುವ ಮಾತು ಇತ್ತು. ದರ್ಶನ್ ಬಂಧನವಾಗಿ 9 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಪತಿಯನ್ನು ನೋಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಪತಿ ದರ್ಶನ್ ಅವರ ಕುರಿತಾಗಿ ಕೊಲೆ ಆರೋಪ ಕೇಳಿ ಬರುತ್ತಿದ್ದಂತೆ ವಿಜಯಲಕ್ಷ್ಮಿ ಅವರು ಇನ್ಸ್ಟಾಗ್ರಾಮ್ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿ ದರ್ಶನ್ ಅವರನ್ನು ಅನ್‌ಫಾಲೋ ಮಾಡಿದ್ದರು. ಆದರೆ ಈ ಎಲ್ಲಾ ವಿಚಾರಗಳಿಂದ ಮನನೊಂದು ದರ್ಶನ್ ಅವರ ಪತ್ನಿ ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದರು. ಆದರೆ ಮತ್ತೆ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಪತಿಯನ್ನು ನೋಡಲು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಬಂದಿದ್ದಾರೆ. ಪತಿ ಜತೆ ಮಾತನಾಡಲು ಅಧಿಕಾರಿಗಳ ಬಳಿ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರ ಜಾಮೀನಿನಾಗಿ ಅವರ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿರುವ ವಕೀಲರಾದ ರಂಗನಾಥ ರೆಡ್ಡಿ ಮತ್ತು ಅನಿಲ್ ಬಾಬು ಅವರನ್ನು ವಿಜಯಲಕ್ಷ್ಮಿ ಅವರೇ ನೇಮಿಸಿದ್ದು, ಈ ವಕೀಲರು ವಕಾಲತ್ತು ವಹಿಸಿರುವುದು ಸಹ ವಿಜಯಲಕ್ಷ್ಮಿ ಮತ್ತು ಅವರ ತಂದೆ-ತಾಯಿಯ ಮೂಲಕವೇ ಎನ್ನಲಾಗಿದೆ.
ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರು ಪ್ರೀತಿಸಿ 2003 ರಲ್ಲಿ ವಿವಾಹವಾದರು. ಇವರಿಗೆ ಒಬ್ಬ ಮಗನಿದ್ದಾನೆ. ಈ ಹಿಂದೆ 2011 ರಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ವಿಜಯಲಕ್ಷ್ಮಿಯ ಮುಖ, ಕೈಗೆ ತೀವ್ರ ಪೆಟ್ಟಾಗಿತ್ತು. ಆಗ ವಿಜಯಲಕ್ಷ್ಮಿ ಅವರೇ ದೂರು ಹಿಂಪಡೆದು ನ್ಯಾಯಾಲಯದ ಹೊರಗೆ ಸಂಧಾನ ಮಾಡಿಕೊಂಡು ಸಂಸಾರ ಮುಂದುವರೆಸಿದ್ದರು. ಬಳಿಕ ದರ್ಶನ್, ಪವಿತ್ರಾ ಗೌಡ ಮೋಹಕ್ಕೆ ಸಿಲುಕಿದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ತುಂಬಾ ಬೇಸರವಾಗಿದ್ದರು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಇನ್‌ಸ್ಟಾ ಖಾತೆಯನ್ನು ಡಿ- ಆಕ್ಟಿವೇಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ಇನ್‌ಸ್ಟಾದಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಅನ್‌ಫಾಲೋ ಮಾಡಿದ್ದರು. ಅಲ್ಲದೇ ದರ್ಶನ್ ಫ್ಯಾನ್ ಪೇಜ್ ಅನ್ನು ಅನ್‌ಫಾಲೋ ಮಾಡಿ ಇನ್‌ಸ್ಟಾಗೆ ಇದ್ದ ಡಿಪಿ ಫೋಟೋವನ್ನು ತೆಗೆದು ಹಾಕಿದ್ದರು. ಇದರಿಂದ ಇನ್‌ಸ್ಟಾ ಖಾತೆಯ ಡಿಪಿ ಬ್ಲಾಂಕ್‌ನಲ್ಲಿತ್ತು. ಸದ್ಯ ಈ ಎಲ್ಲದರ ಬೆನ್ನಲ್ಲೇ ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ವಿಜಯಲಕ್ಷ್ಮಿ ಅವರು ಡಿ-ಆ್ಯಕ್ಟಿವೇಟ್ ಮಾಡಿ ಮತ್ತೆ ಸಕ್ರೀಯ ಗೊಳಿಸಿದ್ದರು.
ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದರ್ಶನ್ ಕೊಲೆ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ.
ಏನಿದು ಪ್ರಕರಣ?: ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.
ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.