ನ್ಯೂಸ್

ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್: ಮೊದಲ‌ ಬ್ಯಾಚ್​ಗೆ ಬೀಳ್ಕೊಡುಗೆ, ಯೂಟ್ಯೂಬ್ ಚಾನಲ್ ಲೋಕಾರ್ಪಣೆ | Vijaya Sankeshwar

ಮೋಹನ್​ ಶೆಟ್ಟಿ

ಯಲ್ಲಾಪುರ: ಇಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಡಾ. ವಿಜಯ ಸಂಕೇಶ್ವರ (Vijaya Sankeshwar)ಮೀಡಿಯಾ ಸ್ಕೂಲ್​ನ ಮೊದಲ ಬ್ಯಾಚ್​ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆದಿದ್ದು, ವಿಆರ್​ಎಲ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ (Anand Sankeshwar) ಅವರು ಹೊಸ ಯೂಟ್ಯೂಬ್​ ಚಾನಲ್​ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್, ವಿಶ್ವ ದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಮೀಡಿಯಾ ಸ್ಕೂಲ್ ಪ್ರಾಚಾರ್ಯ ನಾಗರಾಜ ಭಟ್ ಇಳೆಗುಂಡಿ ಉಪಸ್ಥಿತರಿದ್ದರು.

"ವಿಶ್ವ ದರ್ಶನ ಶಿಕ್ಷಣ ಸಮೂಹದ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್​ನ ಮೊದಲ‌ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ, ಮೀಡಿಯಾ ಸ್ಕೂಲ್‌ನ ಯೂಟ್ಯೂಬ್ ಚಾನಲ್ ಲೋಕಾರ್ಪಣೆ ಮಾಡಿ, ಮಾತನಾಡಿದ ಡಾ. ಆನಂದ ಸಂಕೇಶ್ವರ ಅವರು, ಕಠಿಣ ಪರಿಶ್ರಮ, ನಿಖರ ಗುರಿಯೊಂದಿಗೆ ಕಾರ್ಯ ನಿರ್ವಹಿಸಿದರೆ ಯಶಸ್ಸು ಗಳಿಸಲು ಸಾಧ್ಯ" ಎಂದು ಹೇಳಿದರು.

ಶಿಸ್ತಿನ ಆಡಳಿತಾಧಿಕಾರಿ

"ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ಅದಕ್ಕೆ ಪರಿಶ್ರಮ ಅತ್ಯಗತ್ಯ. ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್ ಅವರ ಜೀವನದಲ್ಲೂ ಅವರದೇ ಆದ ಸವಾಲಿರುತ್ತದೆ. ನಮ್ಮ ತಂದೆ ಡಾ. ವಿಜಯ ಸಂಕೇಶ್ವರ ಅವರು ಒಂದು ಟ್ರಕ್​ನಿಂದ 1976ರಲ್ಲಿ ಉದ್ಯಮ ಪ್ರಾರಂಭಿಸಿದರು. ರಜೆ ಇಲ್ಲದೆ, ದಿನದ 24 ಗಂಟೆ ವರ್ಷದ 365 ದಿನ ಕಾರ್ಯ ನಿರ್ವಹಿಸಿದರು. ಅವರು ಒಬ್ಬ ಶಿಸ್ತಿನ ಆಡಳಿತಾಧಿಕಾರಿಯಾಗಿ ಈ ಹಂತಕ್ಕೆ ತಲುಪಿದ್ದಾರೆ. ಮನೆಯಲ್ಲೂ ಮಿಲಿಟರಿ ಅಧಿಕಾರಿಯಂತೆ ಶಿಸ್ತನ್ನು ಪಾಲಿಸುತ್ತಿದ್ದರು. ಅದನ್ನೇ ನಮಗೂ ಹೇಳಿಕೊಟ್ಟರು. ಅದೇ ನನ್ನ ಬೆಳವಣಿಗೆಗೆ ಕಾರಣ" ಎಂದರು.

ಕರ್ನಾಟಕದಲ್ಲಿ ಅದು 6 ಲಕ್ಷ

"1991ರಲ್ಲಿ ನಾನು ಕಾಲೇಜ್​ನಲ್ಲಿದ್ದೆ. ಬೆಳಗ್ಗೆ 9ರಿಂದ 11ರವರೆಗೆ ಹುಬ್ಬಳ್ಳಿಯ ಮಾಣಿಕ್ ಬಾಗ್​ನ ನಮ್ಮ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಮಧ್ಯಾಹ್ನ 3ರಿಂದ 8ರವರೆಗೆ ನಮ್ಮ ಸಮೂಹದ ವಿವಿಧ ಕಚೇರಿಗಳಿಗೆ ಹೋಗಿ, ಗ್ರಾಹಕರನ್ನು ಭೇಟಿಯಾಗುತ್ತಿದ್ದೆ. 25 ವರ್ಷದ ಹಿಂದೆ ನಾವು ಕಡಿಮೆ ವೆಚ್ಚದ ವಾಯುಯಾನ ಸೇವೆ ಪ್ರಾರಂಭಿಸುವ ಯೋಜನೆ ಹೊಂದಿದ್ದೆವು. ಆದರೆ, ವೆಚ್ಚ ಹೊಂದಾಣಿಕೆ ಆಗದ ಕಾರಣ 'ವಿಜಯ ಕರ್ನಾಟಕ' ಪತ್ರಿಕೆ ಪ್ರಾರಂಭಿಸಿದ್ದೆವು. ಆ ಪತ್ರಿಕೆ ಮಾರುವ ಪರಿಸ್ಥಿತಿ ಬಂತು. ವಿಜಯ ಕರ್ನಾಟಕ ಪ್ರಾರಂಭಿಸುವ ಮೊದಲು ನಾವು ಆಂಧ್ರ, ತಮಿಳುನಾಡು,‌ ಕೇರಳ,‌ ಮಹಾರಾಷ್ಟ್ರ ಎಲ್ಲೆಡೆ ಪತ್ರಿಕೆಗಳ ಮಾರಾಟದ ಅಧ್ಯಯನ ಮಾಡಿದ್ದೆವು. ಯಾವುದೇ ರಾಜ್ಯದಲ್ಲಿ ನಂಬರ್ 1 ಪತ್ರಿಕೆ ಪ್ರಸರಣ ಕನಿಷ್ಠ 14 ಲಕ್ಷಕ್ಕೆ ಕಡಿಮೆ ಇಲ್ಲ.‌ ಮೂರು ಪತ್ರಿಕೆಗಳು ಸೇರಿದರೆ, ಪ್ರಸರಣ ಕನಿಷ್ಠ 40 ಲಕ್ಷ ಇದೆ. ಆದರೆ, ಕರ್ನಾಟಕದಲ್ಲಿ ಅದು 6 ಲಕ್ಷಕ್ಕೆ‌ ನಿಂತಿತ್ತು.‌ ಈ ಮಾರುಕಟ್ಟೆಯ ಅವಕಾಶ ನೋಡಿ ವಿಜಯ ಕರ್ನಾಟಕ ಪ್ರಾರಂಭಿಸಿದೆವು" ಎಂದು ಹೇಳಿದರು.

20 ತಿಂಗಳಲ್ಲಿ ನಂಬರ್ 1

"ದಿನ‌ ಪತ್ರಿಕೆ ಹೂವು, ಹಾಲಿಗಿಂತ ಬೇಗ ಹಳಸುತ್ತದೆ. ಇದರಿಂದ ಬೇಗನೇ ನಾವು ಪತ್ರಿಕೆ ತಲುಪಬೇಕಿತ್ತು.‌ 2012ರಲ್ಲಿ 'ವಿಜಯವಾಣಿ' ಪ್ರಾರಂಭಿಸಿದಾಗ ರಾಜ್ಯದ ಮೂಲೆ, ಮೂಲೆಗೆ ಪತ್ರಿಕೆ ತಲುಪಿಸುವ ಜಾಲವನ್ನು ಸೃಷ್ಟಿ ಮಾಡುವುದು ಸವಾಲಾಗಿತ್ತು. ರಾಜ್ಯದ ಊರುಗಳನ್ನು ತಿರುಗಿ ಏಜೆಂಟರನ್ನು ಭೇಟಿಯಾದೆವು. ನಾನು ತಿಂಗಳಲ್ಲಿ 20 ದಿನ ಓಡಾಟ ಮಾಡುತ್ತಿದ್ದೆ. ಪರಿಣಾಮ ಉತ್ತಮವಾಯಿತು. ಮೊದಲ 'ವಿಜಯ ಕರ್ನಾಟಕ' ಪತ್ರಿಕೆ ಪ್ರಾರಂಭಿಸಿದಾಗ ನಂಬರ್ 1 ಪ್ರಸರಣ ತಲುಪಲು 40 ತಿಂಗಳಾಯಿತು. ವಿಜಯವಾಣಿ 20 ತಿಂಗಳಲ್ಲಿ ನಂಬರ್ 1 ಆಯಿತು. ನಮ್ಮ ಜಾಹೀರಾತು ಆದಾಯ ದುಪ್ಪಟ್ಟಾಯಿತು" ಎಂದರು.

ಪತ್ರಿಕೆಯ ಸಂಕಷ್ಟ

"ಪತ್ರಿಕೆ ನಡೆಸುವುದು ಸುಲಭದ ಕೆಲಸವಲ್ಲ.‌ ಪ್ರತಿ‌ ಪತ್ರಿಕೆಯ ಉತ್ಪಾದನಾ ವೆಚ್ಚ 25 ರೂ. ಬೀಳುತ್ತದೆ. ನೀವು ಕೊಡುವ 5 ರೂ. ಶೇ.50 ರಷ್ಟು ಏಜೆಂಟರಿಗೆ ಕೊಡಬೇಕು. ರಷ್ಯಾ, ಉಕ್ರೇನ್ ಯುದ್ಧದಿಂದ ಮುದ್ರಣ ಕಾಗದದ ವೆಚ್ಚ 300 ಪಟ್ಟು ಹೆಚ್ಚಿದೆ. ಜಾಹೀರಾತು ಬರದೇ ಇದ್ದರೆ ಪತ್ರಿಕೆ‌ ಬದುಕಲ್ಲ. ಪತ್ರಿಕೆಯ ಬೆನ್ನೆಲುಬು ಜಾಹೀರಾತಾಗಿದೆ" ಎಂದು ಪತ್ರಿಕೆಯ ಸಂಕಷ್ಟಗಳನ್ನು ವಿವರಿಸಿದರು.

ಸವಾಲುಗಳು

"ಜಾಹೀರಾತು ಪಡೆಯಲು ಇರುವ ಸವಾಲುಗಳನ್ನು ವಿವರಿಸಿದ ಡಾ.ಆನಂದ ಸಂಕೇಶ್ವರ ಅವರು, ಕಂಪ್ಯೂಟರ್ ಉದ್ಯಮಿ ಅಪಾಯಿಂಟ್​ಮೆಂಟ್ ಕೊಡುತ್ತಿರಲಿಲ್ಲ.‌ ನಾನು ಬಿಸಿನೆಸ್ ಕ್ಲಾಸ್ ಟಿಕೆಟ್ ಪಡೆದು ಒಮ್ಮೆ ಅವರ ಜತೆ ಪ್ರಯಾಣ ಮಾಡಿದೆ. ಪತ್ರಿಕೆಯ ವಿಶೇಷತೆಯ‌‌ ಬಗ್ಗೆ‌ ವಿವರಿಸಿದೆ. ಅವರು ಜಾಹೀರಾತು ನೀಡಿದರು. ಅವರ ಕಂಪನಿಯ ಆದಾಯ ಆ ವರ್ಷ ಶೂನ್ಯದಿಂದ 70 ಲಕ್ಷಕ್ಕೆ‌ ಹೆಚ್ಚಿತು. ಕೋವಿಡ್ ನಂತರ ವಿಶ್ವದಲ್ಲಿ ಪತ್ರಿಕೆಗಳ‌ ಪ್ರಸರಣ ಶೇ. 20 ರಷ್ಟು ಇಳಿದಿದೆ. ಎಲ್ಲೆಡೆ ಸುಳ್ಳು ಸುದ್ದಿಗಳು ಡಿಜಿಟಲ್‌ ಮಾಧ್ಯಮದ ಮೂಲಕ ಹರಡುತ್ತಿವೆ. ಅವುಗಳ ಬಗ್ಗೆ ಇದುವರೆಗೂ ಖಚಿತತೆ ಇರುವುದಿಲ್ಲ.‌ ಡಿಜಿಟಲ್ ನ್ಯೂಸ್​ನಿಂದ ಸಂಪೂರ್ಣ ಮಾಹಿತಿ ಸಿಗಲು ಸಾಧ್ಯವಿಲ್ಲ. ಇದರಿಂದ ಇನ್ನೂ ಪತ್ರಿಕೆಗಳ ಬಗ್ಗೆ ವಿಶ್ವಾಸಾರ್ಹತೆ ಇದೆ" ಎಂದು ಹೇಳಿದರು.

ಭಾರತದಲ್ಲಿ 10 ಪತ್ರಿಕೆ ಮಾತ್ರ ಮಾರಾಟ ಇತ್ತು

"ಹುಬ್ಬಳ್ಳಿಯಲ್ಲಿ ನವರಾತ್ರಿ ನವೋಲ್ಲಾಸ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಿದ್ದೆವು. 9 ದಿನ ಹುಬ್ಬಳ್ಳಿ ಆವೃತ್ತಿಗೆ ಪ್ರತಿ ದಿನ 4 ಸಾವಿರಕ್ಕೂ ಅಧಿಕ ಫೋಟೋಗಳು ಮುದ್ರಣಕ್ಕಾಗಿ ಬರುತ್ತಿದ್ದವು. ಇದು ಪತ್ರಿಕೆಯ ವಿಶ್ವಾಸಾರ್ಹತೆ ತಿಳಿಸುತ್ತದೆ. ಓದುವರ ಸಂಖ್ಯೆ ಕಡಿಮೆ ಆಗುತ್ತಿರುವುದು‌ ದೊಡ್ಡ ಸವಾಲು ಎಂದು ಹೇಳಲಾಗುತ್ತಿದೆ. ಅದು ತಪ್ಪು ತಿಳುವಳಿಕೆ. ಕೋವಿಡ್ ಶುರುವಾದಾಗ ಪೂರ ಭಾರತದಲ್ಲಿ 10 ಪತ್ರಿಕೆ ಮಾತ್ರ ಮಾರಾಟ ಇತ್ತು. ಆಗ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ‌ ಅವರ ಜತೆ ಮಾತನಾಡಿದೆ. ಅವರು ಎಲ್ಲ ಅಂಶಗಳನ್ನು ನೋಟ್ ಮಾಡಿಕೊಂಡು ಈಡೇರಿಸಿದರು" ಎಂದು ವಿವರಿಸಿದರು.

"ಹರಿಪ್ರಕಾಶ ಕೋಣೆಮನೆ, ತುಂಬಾ ಕ್ರಿಯಾಶೀಲ ಹಾಗೂ ನಿಖರ ಗುರಿ ಇರುವ ವ್ಯಕ್ತಿ ಎಂದರು. ಪ್ರಜಾವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್, ಪತ್ರಿಕೆಗಳಿಗೆ ಇಂದು ಮೊಬೈಲ್ ಹಾಗೂ ಡಿಜಿಟಲ್ ಮಾಧ್ಯಮ ಪ್ರತಿಸ್ಪರ್ಧಿ. ಪತ್ರಿಕೆ ಎನ್ನುವುದು ಪತ್ರಿಕೆಯಾಗಿ ಉಳಿದಿಲ್ಲ. ಅದೊಂದು ಸಮೂಹವಾಗಿದೆ. ಡಿಜಿಟಲ್ ಸುದ್ದಿ ಇದೆ. ಯುಟ್ಯೂಬ್ ಚಾನಲ್ ಇದೆ, ಪಾಡ್ ಕಾಸ್ಟ್ ಇದೆ. ಅದಕ್ಕೆ ಬೇಕಾದ ಕೌಶಲವನ್ನು ಇಂದು‌ ಅಭ್ಯರ್ಥಿಗಳಿಂದ ಬಯಸುತ್ತೇವೆ. ಎಲ್ಲರೂ ಪತ್ರಕರ್ತರಾಗಿರುವಾಗ ಪತ್ರಕರ್ತರ ಜವಾಬ್ದಾರಿ ತಿಳಿಸುವ ಕಾರ್ಯವನ್ನು ಪತ್ರಿಕೋದ್ಯಮ ಕೋರ್ಸ್ ಮಾಡಬೇಕು. ಯಾವುದೇ ವಿವಿಯ ಪತ್ರಿಕೋದ್ಯಮ ತರಗತಿಗಳು ಭಾಷೆಯನ್ನು ಒಂದು ವಿಷಯ ಎಂದು ಪರಿಗಣಿಸಿಲ್ಲ. ಗಂಭೀರವಾಗಿ ಬರೆಯುವ ಪತ್ರಕರ್ತರ ಕೊರತೆ ಇದೆ. ಭಾಷಾಂತರ ಹಾಗೂ ಗ್ರಹಿಕೆ ಸಮಸ್ಯೆಯನ್ನು ನಾವು ಅನುಭವಿಸುತ್ತಿದ್ದೇವೆ" ಎಂದರು.

ಮುಂದಿನ ಸುದೀರ್ಘ ಹಾದಿಗೆ ಕನಸಿಗೆ ದಿಗ್ಧರ್ಶೆ

ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಪ್ರಾಚಾರ್ಯ ನಾಗರಾಜ ಭಟ್ ಇಳೇಗುಂಡಿ ಮಾತನಾಡಿ, "ಧಾರವಾಡ ಕವಿವಿ ಪಠ್ಯಕ್ರಮದ ಚೌಕಟ್ಟಿಗೆ ಒಳಪಟ್ಟು, ಮಾಧ್ಯಮದ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜು ಮಾಡಿದೆ. ಮೀಡಿಯಾ ಸ್ಕೂಲ್​ನಲ್ಲಿ ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳಿದ್ದು, ಮಲ್ಟಿ‌ ಕಲ್ಚರ್ಡ್ ಸೆಂಟರ್​ನಂತಾಗಿದೆ.‌ ಒಂದು ವರ್ಷದ ಅನುಭವ ನಮಗೆ ಮುಂದಿನ ಸುದೀರ್ಘ ಹಾದಿಗೆ ಕನಸಿಗೆ ದಿಗ್ಧರ್ಶೆ ನೀಡಿದೆ" ಎಂದರು. ಶಿಕ್ಷಕಿಯರಾದ ಶ್ಯಾಮಲಾ ಕೆರೆಗದ್ದೆ, ಪ್ರೇಮಾ ಗಾಂವಕರ್ ಪ್ರಶಸ್ತಿ ವಿತರಣಾ‌ ಕಾರ್ಯಕ್ರಮ ನಡೆಸಿಕೊಟ್ಟರು. ಡಿ.ಕೆ. ಗಾಂವಕರ್ ಕಾರ್ಯಕ್ರಮ ನಿರೂಪಿಸಿದರು. ಕೌಸ್ತುಭಾ ಮತ್ತು ಅನನ್ಯಾ ಸಂಗಡಿಗರು ಪ್ರಾರ್ಥಿಸಿದರು. ವಿಶ್ವ ದರ್ಶನ ಶಿಕ್ಷಣ‌ ಸಂಸ್ಥೆಯ ಎಸ್.ಎಲ್‌.ಭಟ್ ವಂದಿಸಿದರು.