ನ್ಯೂಸ್

ವಿಜಯ್ ರ್‍ಯಾಲಿ ಕಾಲ್ತುಳಿತ: ಕರೂರ್​ಗೆ ಭೇಟಿ ನೀಡಿದ ಸಿಎಂ ಎಂ.ಕೆ.ಸ್ಟಾಲಿನ್; ಗಾಯಾಳು & ಮೃತರ ಕುಟುಂಬಸ್ಥರ ಭೇಟಿ| M K Stalin

M K Stalin: ತಮಿಳುನಾಡಿನಲ್ಲಿ ಕರೂರ್​ನಲ್ಲಿ ಶನಿವಾರ(ಸೆ. 27) ಸಂಜೆ ನಟ ದಳಪತಿ ವಿಜಯ್ ರಾಜಕೀಯ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 39 ಮಂದಿ ಸಾವನ್ನಪ್ಪಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಸಿಎಂ ಎಂ.ಕೆ.ಸ್ಟಾಲಿನ್​ ತಡರಾತ್ರಿಯೇ ಕರೂರ್​ಗೆ  ಭೇಟಿ ನೀಡಿದ್ದು, ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಪರಾಮರ್ಶಿಸಿದ್ದಾರೆ.

ಕಾಲ್ತುಳಿತ ಘಟನೆಯ ನಂತರ, ಅವರು ಚೆನ್ನೈನಿಂದ ತಿರುಚ್ಚಿಗೆ ಬಂದಿಳಿದು ರಸ್ತೆ ಮೂಲಕ ಕರೂರ್‌ಗೆ ತೆರಳಿದರು. ತಡರಾತ್ರಿ ಕರೂರ್​ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಸ್ಟಾಲಿನ್, ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಈಗಾಗಲೇ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರನ್ನು ಘೋಷಿಸಿದ್ದು,  ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ.

ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿ ಆದೇಶಿಸಿದ್ದಾರೆ. ಈ ಆಯೋಗವು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. (ಏಜೆನ್ಸೀಸ್)