TVK Karur Stampede: ಇತ್ತೀಚೆಗೆ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ರ‍್ಯಾಲಿ ಸಂದರ್ಭದಲ್ಲಿ ಕರೂರ್‌ನಲ್ಲಿ ನಡೆದ ಕಾಲ್ತುಳಿತದ ಬಳಿಕ, ರಾಜಕೀಯ ನಾಯಕರುಗಳು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವ ಮತ್ತು ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ನೀಡುವ ಅಗತ್ಯವನ್ನು ಡಿಎಂಕೆ ಸಂಸದೆ ಕನಿಮೋಳಿ ಒತ್ತಿ ಹೇಳಿದರು.
ಇಂಡಿಯಾ ಟುಡೇ ಜೊತೆ ಮಾತನಾಡಿದ ಕನಿಮೋಳಿ, ಇಂತಹ ಘಟನೆಗಳು ನಡೆದಾಗ ಅದಕ್ಕೆ ಸಂಬಂಧಪಟ್ಟ ನಾಯಕ ತನ್ನ ಭದ್ರತೆಗೋಸ್ಕರ ಸ್ಥಳದಿಂದ ಕಾಲ್ಕಿತ್ತಿರುವುದನ್ನು ನಾನು ಎಂದಿಗೂ ನೋಡಿಲ್ಲ, ಅವರಲ್ಲದಿದ್ದರೂ, ಎರಡನೇ ಹಂತದ ನಾಯಕರಾದರೂ ಹಾಜರಿದ್ದು ಜವಾಬ್ದಾರಿ ನಿರ್ವಹಿಸಬೇಕಿತ್ತು ಎಂದು ಅವರು ಹೇಳಿದರು.
ಇದನ್ನೂ ಓದಿ:ಮೌನವೇ ಭಾರತದ ಶಕ್ತಿ: ಟ್ರಂಪ್ ಸುಂಕಗಳ ವಿರುದ್ಧ ಹರಿಹಾಯ್ದ ಅಮೆರಿಕದ ಮಾಜಿ NSA ಜಾನ್ ಬೋಲ್ಟನ್ | Trump Tariffs
ಈ ಘಟನೆಯ ಬಳಿಕ ಅನೇಕ ಕುಟುಂಬಗಳ ಕನಸು, ಬದುಕು ಛಿದ್ರಗೊಂಡಿವೆ, ಚಿಕ್ಕ ಮಕ್ಕಳು ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ, ವಿಶೇಷ ಚೇತನ ತಾಯಂದಿರು ತಮ್ಮ ನೋವು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ, ಇಂತಹ ಸಂದರ್ಭ ಎದುರಾದಾಗ ರಾಜಕೀಯ ಪಕ್ಷಗಳು ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು, ಗಾಯಗೊಂಡ ಜನರು ಬೆಂಬಲ ಅಥವಾ ಸಹಾಯಕ್ಕೆ ಅಂಗಲಾಚುತ್ತಿದ್ದರೆ, ಕಾರ್ಯಕ್ರಮಕ್ಕೆ ಕರೆ ನೀಡಿದ ಪಕ್ಷ ಮತ್ತು ಎರಡನೇ ಹಂತದ ನಾಯಕರು ಸಹ ಅಲ್ಲಿ ಇರಲಿಲ್ಲ, ನೀವೆಲ್ಲಾ ಅವರೊಂದಿಗೆ ಇರಬೇಕಿತ್ತು ಎಂದರು. ಸಂತ್ರಸ್ತ ಕುಟುಂಬಗಳು ನ್ಯಾಯವನ್ನು ಬಯಸುತ್ತಿವೆ, ಇದಕ್ಕೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಬೇಕು, ಮುಖ್ಯಮಂತ್ರಿ ಸ್ಟಾಲಿನ್ ಪರಿಹಾರ ನೀಡಿರಬಹುದು, ಆದರೆ, ಯಾರಾದರೂ ಇದರ ಹೊಣೆ ಹೊರಬೇಕು ಎಂದು ಕನಿಮೋಳಿ ಹೇಳಿದರು.
ಘಟನೆಗೆ ರಾಜಕೀಯ ಪಿತೂರಿ ಕಾರಣ ಎಂಬ ವಿರೋಧ ಪಕ್ಷಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಕನಿಮೋಳಿ, ಎಲ್ಲವನ್ನೂ ರಾಜಕೀಯ ಅವಕಾಶವಾಗಿ ಬದಲಾಯಿಸಿಕೊಳ್ಳುವುದು ದುಃಖಕರ, ಪ್ರಧಾನಿ ಮತ್ತು ಲೋಕಸಭೆಯ ವಿಪಕ್ಷ ನಾಯಕರು ಕೂಡ ಸುರಕ್ಷಿತವಾಗಿ ಸಭೆಗಳನ್ನು ನಡೆಸಿದ್ದಾರೆ. ಸರ್ಕಾರ ಒಬ್ಬ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಪಿತೂರಿ ನಡೆಸುವ ಅನಿವಾರ್ಯತೆ ಏನಿದೆ.? ಎಂದರು.(ಏಜೆನ್ಸೀಸ್)