ನ್ಯೂಸ್

ಖ್ಯಾತ ಮಹಿಳಾ ಉದ್ಯಮಿಗೆ ಗಲ್ಲು..ಈಕೆ ವಂಚಿಸಿದ್ದು ಅಷ್ಟಿಷ್ಟಲ್ಲ, 1 ಲಕ್ಷ ಕೋಟಿ ರೂ.!

ಹನೋಯಿ(ವಿಯೇಟ್ನಾಂ): ವಿಯೆಟ್ನಾಂನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಲಿಯನೇರ್ ಟ್ರೂಂಗ್ ಮೈ ಲ್ಯಾನ್ ಗೆ ಮರಣದಂಡನೆ ವಿಧಿಸಲಾಗಿದೆ. ದೇಶದ ಅತಿದೊಡ್ಡ ಹಣಕಾಸು ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಹೋ ಚಿ ಮಿನ್ಹ್ ನಗರದ ನ್ಯಾಯಾಲಯವು ಗುರುವಾರ ಆಕೆಗೆ ಮರಣದಂಡನೆ ವಿಧಿಸಿತು.

'ವಾನ್ ಥಿನ್ ಫಾಟ್ ಹೋಲ್ಡಿಂಗ್ಸ್ ಗ್ರೂಪ್' ಎಂಬ ರಿಯಲ್ ಎಸ್ಟೇಟ್ ಕಂಪನಿಯ ಅಧ್ಯಕ್ಷರಾಗಿರುವ 67 ವರ್ಷದ ಟ್ರೂಂಗ್ ಮೈಲ್ಯಾನ್ ತಮ್ಮ ನಿಯಂತ್ರಣದಲ್ಲಿರುವ 'ಸೈಗಾನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್'ನಲ್ಲಿ ವಂಚನೆ ಎಸಗಿದ್ದಾರೆ.

ಸರ್ಕಾರಕ್ಕೆ ಅಂದಾಜು 1.04 ಲಕ್ಷ ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಟ್ರೂಂಗ್ ಮೈಲ್ಯಾನ್ ವಾರದ ಹಿಂದಷ್ಟೇ ಕೋರ್ಟ್‌ನಲ್ಲಿ ಕೊನೆಯ ಹೇಳಿಕೆ ನೀಡಿದ್ದ, ನನಗೆ ಬ್ಯಾಂಕಿಂಗ್‌ ವ್ಯವಹಾರವೇ ಗೊತ್ತಿಲ್ಲ. ಪ್ರಕರಣದಲ್ಲಿ ನಾನು ಅಮಾಯಕಳು ಎಂದಿದ್ದರು.

ವಿಯೇಟ್ನಾಂ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಹಣಕಾಸು ವಂಚನೆ ಪ್ರಕರಣ ಇದಾಗಿದೆ. 12.5 ಶತಕೋಟಿ ಡಾಲರ್‌ (1.04 ಲಕ್ಷ ಕೋಟಿ ರೂ.) ವಂಚನೆ ನಡೆದಿದೆ ಎನ್ನಲಾಗಿದೆ.

ಮೈಲ್ಯಾನ್‌ ವ್ಯಾನ್‌ ಥಿನ್ಹ್‌ ಫಾಟ್‌ ಸಂಸ್ಥೆಯನ್ನು ಕಟ್ಟಿ ದೊಡ್ಡ ಸಾಮ್ರಾಜ್ಯದ ರಾಣಿ ಎನಿಸಿದ್ದರು. ಆದರೆ, ಈಕೆ ವಿರುದ್ಧ ಹಣದ ದುರ್ಬಳಕೆ, ಬ್ಯಾಂಕಿಂಗ್‌ ನಿಯಮಗಳ ಉಲ್ಲಂಘನೆ ಸೇರಿ ಹಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇವರಿಂದ ವಿಯೇಟ್ನಾಂನ ಒಟ್ಟು ಜಿಡಿಪಿಯ ಶೇ.6ರಷ್ಟು ಅಂದರೆ, ಸುಮಾರು 1 ಲಕ್ಷ ಕೋಟಿ ರೂ. ವಂಚನೆ ಮಾಡಲಾಗಿದೆ ಎಂಬುದು ಈಗ ಸಾಬೀತಾಗಿದೆ.

ಟ್ರೂಂಗ್ ಮೈ ಲ್ಯಾನ್ 2012ರಿಂದ 2022ರವರೆಗೆ ವಿಯೇಟ್ನಾಂನ ಸೈಗೋನ್‌ ಜಾಯಿಂಟ್‌ ಸ್ಟಾಕ್‌ ಕಮರ್ಷಿಯಲ್‌ ಬ್ಯಾಂಕ್‌ನ ಷೇರುಗಳ ಮೇಲೆ ಕಾನೂನುಬಾಹಿರವಾಗಿ ನಿಯಂತ್ರಣ ಸಾಧಿಸಿದ್ದರು. ಸರ್ಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಬ್ಯಾಂಕ್‌ನ ಹಣವನ್ನು ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡಿಸಿದ್ದರು. ಈಕೆಗೆ ಸಂಬಂಧಿಸಿದ ಒಂದು ಸಾವಿರಕ್ಕೂ ಅಧಿಕ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡಿದೆ.