ಮೂರು ದಶಕಗಳಿಗೂ ಹೆಚ್ಚು ಕಾಲದ ಕಮ್ಯುನಿಸ್ಟ್ ಕೋಟೆಯನ್ನು ಛಿದ್ರ ಮಾಡಿ 2011ರಲ್ಲಿ ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ. ‘ಏಕಲಾ ಚಲೋ ರೇ’ ಘೋಷಣೆ ಮೂಲಕ ಸಂಚಲನ ಮೂಡಿಸಿದ್ದ ಮಮತಾ ಈ ಬಾರಿಯೂ ಬಂಗಾಳಿ ಅಸ್ಮಿತೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದಾರೆ. ‘ಹೊರಗಿನ’ ಪಕ್ಷಗಳಿಗೆ ಬಂಗಾಳಿಗಳು ಮನ್ನಣೆ ನೀಡುವುದಿಲ್ಲ ಎಂದು ಹೇಳುತ್ತಿದ್ದರೂ, 2019ರ ಲೋಕಸಭಾ ಚುನಾವಣೆ ಫಲಿತಾಂಶ ಅವರೊಳಗೆ ಕಳವಳ ಮೂಡಿಸಿರುವುದು ಸುಳ್ಳಲ್ಲ. 294 ಸದಸ್ಯಬಲದ ವಿಧಾನಸಭೆಯಲ್ಲಿ ಕಳೆದ ಬಾರಿ (2016) ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರ. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ 42ರಲ್ಲಿ 18 ಸ್ಥಾನ ತನ್ನದಾಗಿಸಿಕೊಳ್ಳುವ ಮೂಲಕ ಪಕ್ಷ ಸಂಘಟನೆ, ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿರುವುದು ಸ್ಪಷ್ಟ. ಈ ನಡುವೆ, ಬಿಹಾರ ಚುನಾವಣೆಯಲ್ಲಿ ಸಿಕ್ಕಿರುವ ಯಶಸ್ಸಿನಿಂದ ಬೀಗುತ್ತಿರುವ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಬಂಗಾಳದಲ್ಲೂ ತಮ್ಮ ಪಕ್ಷ ವಿಧಾನಸಭೆಯಲ್ಲಿ ಖಾತೆ ತೆರೆಯುವ ವಿಶ್ವಾಸ ಹೊಂದಿದ್ದಾರೆ. ಆದರೆ, ಓವೈಸಿ ಪಕ್ಷದ ಸ್ಪರ್ಧೆಯಿಂದ ನಷ್ಟವಾಗುವುದು ಟಿಎಂಸಿಗೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಸಿಎಎ ವಿರೋಧಿ ಚಳವಳಿಯನ್ನು ಮುಂದಿಟ್ಟುಕೊಂಡು ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾದ ಮಮತಾ, ಚುನಾವಣಾ ಪ್ರಚಾರದಲ್ಲೂ ಇದನ್ನೇ ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರಿಗೆ ಟಿಎಂಸಿ ಸರ್ಕಾರ ಎಲ್ಲ ಅನುಕೂಲತೆಗಳನ್ನು ಮಾಡಿಕೊಟ್ಟಿದೆ, ಈ ಮೂಲಕ ಆಂತರಿಕ ಭದ್ರತೆಯನ್ನು ನಿರ್ಲಕ್ಷಿಸಿದೆ ಎಂಬುದು ಬಿಜೆಪಿ ಆರೋಪ. 2021ರ ಏಪ್ರಿಲ್-ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದರೂ, ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆದರೆ, ಆರೋಪ-ಪ್ರತ್ಯಾರೋಪಗಳ ಹಂತ ದಾಟಿ ರಾಜಕೀಯ ಹಿಂಸಾಚಾರ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ, ಟಿಎಂಸಿ ಪಕ್ಷಗಳ ಹಲವು ಕಾರ್ಯಕರ್ತರು ಹತ್ಯೆಗೀಡಾಗಿದ್ದು, ವೈಷಮ್ಯದ ಸ್ಥಿತಿ ತಾರಕಕ್ಕೆ ಏರುತ್ತಿದೆ. ಮುಂದೆ ಇದು ತೀವ್ರ ಹಿಂಸಾಚಾರದ ಸ್ವರೂಪ ಪಡೆದುಕೊಂಡರೆ ಅದನ್ನು ನಿಭಾಯಿಸಲು ಕಡುಕಷ್ಟ ಪಡಬೇಕಾದಿತು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಪ್ರವಾಸದ ವೇಳೆ ಅವರ ಬೆಂಗಾವಲು ಪಡೆ ಮೇಲೆ ಕಲ್ಲುತೂರಾಟ ನಡೆದಿರುವುದು ಇಂಥ ಘಟನೆಗಳಿಗೆ ತಾಜಾ ನಿದರ್ಶನ.
ಪ.ಬಂಗಾಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಆಧಾರದ ಮೇಲೆ ಮತಬೇಟೆಗೆ ಮುಂದಾಗಿದೆ. ಟಿಎಂಸಿ ಕೂಡ ಮಮತಾ ಬ್ಯಾನರ್ಜಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳಲಿದೆ. ಅದಕ್ಕೆಂದೆ, ‘ಬಾಂಗ್ಲಾರ್ ಗೂರ್ಬೊ ಮಮತಾ’ (ಬಂಗಾಳಿಯರ ಹೆಮ್ಮೆ) ಎಂಬ ಅಭಿಯಾನವನ್ನೂ ಪ್ರಾರಂಭಿಸಿದೆ. ಸಂಘಟನೆ, ವರ್ಚಸ್ಸು ಕಳೆದುಕೊಂಡಿರುವ ಎಡಪಕ್ಷಗಳು ಮತ್ತೆ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ, ನೇರ ಫೈಟ್ ನಡೆಯುವುದು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ.
ಹಿಂದೆ ಎಡಪಕ್ಷಗಳು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರದ ಘಟನೆ ನಡೆಯುತ್ತಿದ್ದವು. ಈಗ ಅದೇ ಸ್ಥಿತಿ ಮರುಕಳಿ ಸಿದ್ದು, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿವೆ. ಜನರು ಯಾವೆಲ್ಲ ಬೆಳವಣಿಗೆ ಗಳನ್ನು ಕಂಡು ರೋಸಿ ಹೋಗಿದ್ದರೋ ಮತ್ತೆ ಅದೇ ರೀತಿಯ ಘಟನೆಗಳು ನಡೆಯುತ್ತಿರುವುದು ಶೋಚನೀಯ.