ಚಿಕ್ಕಮಗಳೂರು: ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡರೆ ಭವಿಷ್ಯದ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ತಿಳಿಸಿದರು.
ನಗರದ ಬೈಪಾಸ್ ಸಮೀಪ ಎಸ್.ಆರ್.ಪ್ರೈಮ್ ನರ್ಚರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಶಾಲಾ ವಿದ್ಯಾರ್ಥಿಗಳ ಸಂಘ ಸ್ಥಾಪನೆಗೆ ಪ್ರಾಯೋಗಿಕವಾಗಿ ಬುಧವಾರ ಚಾಲನೆ ನೀಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಕ್ಕಳು ಮತದಾನದ ಹಕ್ಕನ್ನು ತಿಳಿದುಕೊಳ್ಳಬೇಕು. ಉತ್ತಮ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡಿದರೆ ಸದೃಢ ಸರ್ಕಾರ ರಚನೆಯಾಗಲಿದೆ. ಸಮಾಜದಲ್ಲಿ ಬಡವರು, ಹಿಂದುಳಿದವರ ಪರವಾಗಿ ಸರ್ಕಾರ ಕಾರ್ಯನಿರ್ವಹಿಸಲಿದೆ. ಹೀಗಾಗಿ ಭವಿಷ್ಯದಲ್ಲಿ ಮತದಾನಕ್ಕೆ ತೆರಳುವ ಮುನ್ನ ಯಾರನ್ನು ಆಯ್ಕೆ ಮಾಡಬೇಕೆಂಬ ಅರಿವು ಹೊಂದುವುದು ಮುಖ್ಯ ಎಂದರು.
ಮಕ್ಕಳು ಉನ್ನತ ಸ್ಥಾನ ತಲುಪಲು ಶಾಲೆಯಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪಾಲಕರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ನರ್ಚರ್ ಶಾಲೆ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಶಾಲೆ ಪ್ರಾಚಾರ್ಯೆ ಸುಪ್ರಿಯಾ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ವಿಶೇಷವಾಗಿ ಇವಿಎಂ ಮೂಲಕ ನಾಯಕನನ್ನು ಆಯ್ಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 200 ವಿದ್ಯಾರ್ಥಿಗಳು, ಬೋಧಕ, ಬೋಧಕೇತ ಸಿಬ್ಬಂದಿ ಶಾಲಾ ಚುನಾವಣೆಯಲ್ಲಿ ಭಾಗವಹಿಸಿ ಮತಯಾಚಿಸಿದ್ದಾರೆ ಎಂದರು.
ಶಾಲೆ ಉಪ ಪ್ರಾಚಾರ್ಯೆ ನಜಮೂಸ್, ವ್ಯವಸ್ಥಾಪಕ ರಾಕೇಶ್ ಶೆಟ್ಟಿ, ಪ್ರೀತೇಶ್ ಇತರರಿದ್ದರು.