ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಹುಟ್ಟಿ ಹಾಕಿರುವ ಪ್ರಶ್ನೆಗಳಿಗೆ ಉತ್ತರ, ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ವಿಧಾನಮಂಡಲ ತುರ್ತು ಅಧಿವೇಶನ ಕರೆಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ದುರ್ಘಟನೆಯು ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ, ಕ್ರೀಡಾ ಹಾಗೂ ಇತರ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಜನರಲ್ಲಿ ಆತಂಕ ಹಾಗೂ ಕಳವಳ ಉಂಟು ಮಾಡಿದೆ ಎಂದು ಉಲ್ಲೇಖಿಸಿದ್ದಾರೆ.
ಕಾರ್ಯಕ್ರಮ ಆಯೋಜನೆ, ನಿರ್ವಹಣೆಯಲ್ಲಿ ಆಡಳಿತದ ದೋಷಗಳು, ಘಟನೆ ನಂತರ ಸರ್ಕಾರದ ಕ್ರಮಗಳು ಅನೇಕ ಸಂಶಯಗಳನ್ನು ಹುಟ್ಟಿಹಾಕಿದೆ. ಕಾಲ್ತುಳಿತಕ್ಕೆ ಕಾರಣರಾದ ಬಲಾಢ್ಯರ ರಕ್ಷಣೆ, ಸತ್ಯ ಮರೆಮಾಚಲು ಮೂರು ರೀತಿಯ ತನಿಖೆಗಳನ್ನು ಮಾಡಲಾಗುತ್ತಿದೆ ಎಂಬ ಸಂದೇಹಗಳು ವ್ಯಕ್ತವಾಗಿವೆ ಎಂದು ಅರ್.ಅಶೋಕ್ ಹೇಳಿದ್ದಾರೆ.
ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ಚರ್ಚೆಯ ಅಗತ್ಯವಿದೆ. ಇದಕ್ಕಾಗಿ ಮೂರು ದಿನಗಳ ತುರ್ತು ಅಧಿವೇಶನ ಕರೆಯಬೇಕು. ಘಟನೆಗೆ ಕಾರಣವಾದ ಸಂದರ್ಭಗಳ ಸಂಪೂರ್ಣ ತನಿಖೆ, ಸುರಕ್ಷತಾ ಕ್ರಮಗಳ ಬಲವರ್ಧನೆ ಮುಂತಾದ ವಿಷಯಗಳನ್ನು ಚರ್ಚಿಸಬೇಕಾಗಿದೆ ಎಂದಿದ್ದಾರೆ.
ತುರ್ತು ಅಧಿವೇಶನವು ರಾಜ್ಯ ಸಕಾಧರದ ಬದ್ಧತೆಯನ್ನು ಜನರಿಗೆ ತೋರಿಸಲು, ದುರಂತದಿಂದ ಕಲಿತ ಪಾಠಗಳ ಆಧಾರದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗಲಿದೆ. ಹಾಗೆಯೇ ಘಟನೆಗೆ ಕಾರಣಗಳೇನು ? ಎಂಬುದನ್ನು ಜನರಿಗೆ ತಿಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ಆರ್.ಅಶೋಕ್ ಈ ಪತ್ರದಲ್ಲಿ ತಿಳಿಸಿದ್ದಾರೆ.