ನ್ಯೂಸ್

ಮರದ ಮೇಲೆ ಕುಳಿತು ಪಹಲ್ಗಾಮ್ ದಾಳಿಯ ಚಿತ್ರೀಕರಣ ಮಾಡಿದ್ದ ವಿಡಿಯೋಗ್ರಾಫರ್; NIA ಯ ಪ್ರಮುಖ ಸಾಕ್ಷಿ | Terror attcak

Pahalgam| ಕೇಂದ್ರ ಗೃಹಸಚಿವಾಲಯ ನೀಡಿದ ನಿರ್ದೇಶದ ಮೇರೆಗೆ ಏ.22ರಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡದೊಂದಿಗೆ ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ ಸಾಕ್ಷ್ಯ ಹುಡುಕಾಟವನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಮುಖ ಸಾಕ್ಷಿಯೊಂದು ಎನ್‌ಐಎಗೆ ಲಭ್ಯವಾಗಿದೆ.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಆರಂಭಿಸಿದೆ. ಇನ್ನೂ ಬೈಸರನ್‌ನಲ್ಲಿ ಪ್ರವಾಸಿಗರಿಗಾಗಿ ರೀಲ್‌ಗಳನ್ನು ಚಿತ್ರೀಕರಿಸಿದ ಸ್ಥಳೀಯ ವಿಡಿಯೋಗ್ರಾಫರ್ ಪ್ರಮುಖ ಸಾಕ್ಷಿಯಾಗಿ ಹೊರಹೊಮ್ಮಿದ್ದಾರೆ. ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆಯುತ್ತಿದ್ದಂತೆ ಭಯಕ್ಕೆ ಮರ ಏರಿದ್ದ ರೀಲ್ಸ್‌ ವಿಡಿಯೋ ಗ್ರಾಫರ್‌ ಇಡೀ ಕೃತ್ಯವನ್ನು ಮರದ ಮೇಲೆ ಕುಳಿತುಕೊಂಡೆ ಸೆರೆ ಹಿಡಿಯುತ್ತಿದ್ದರು. ಇದೀಗ ಎನ್‌ಐಎಗೆ ಆ ವಿಡಿಯೋ ಗ್ರಾಫರ್‌ ಪ್ರಮುಖ ಸಾಕ್ಷಿಯಾಗಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ, ನಾಲ್ವರು ಭಯೋತ್ಪಾದಕರು ಎರಡು ಗುಂಪುಗಳಾಗಿ ವಿಂಗಡಿಸಲ್ಪಟ್ಟು ಹುಲ್ಲುಗಾವಲಿನ ಎರಡು ಬದಿಗಳಿಂದ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಬಂದೂಕುಧಾರಿಗಳು ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಗಳ ಬಳಿ ಬೀಡುಬಿಟ್ಟಿದ್ದರು.

ಮಧ್ಯಾಹ್ನ 2.30 ರ ಸುಮಾರಿಗೆ, ಅಂಗಡಿಗಳ ಹಿಂದೆ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದರು. ಅವರು ಮೊದಲು ಅಲ್ಲಿ ತಿಂಡಿ ತಿನ್ನುತ್ತಿದ್ದ ಸ್ಥಳೀಯರಲ್ಲದವರನ್ನು ಅವರ ಧರ್ಮದ ಬಗ್ಗೆ ಕೇಳಿದರು. ಕೆಲವರಿಗೆ ಕಲ್ಮಾ ಪಠಿಸಲು ಹೇಳಲಾಗಿದೆ. ಪಠಿಸಲು ಸಾಧ್ಯವಾಗದವರನ್ನು ಕೊಲ್ಲಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಬದುಕುಳಿದವರ ಪ್ರಕಾರ, ಮೊದಲ ಇಬ್ಬರು ಭಯೋತ್ಪಾದಕರು ನಾಲ್ವರು ಪ್ರವಾಸಿಗರ ತಲೆಗೆ ಗುಂಡು ಹಾರಿಸಿದಾಗ ಭಯ ಭುಗಿಲೆದ್ದಿತು. ನಂತರ ಇತರ ಇಬ್ಬರು ಭಯೋತ್ಪಾದಕರು ಜಿಪ್ ಲೈನ್ ಸಮೀಪದಿಂದ ಹೊರಬಂದು ಓಡಿಹೋಗುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಗುಂಡು ಹಾರಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭೀತಿ ಉಂಟಾಗಿ ಕೆಲವರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಹುಲ್ಲುಗಾವಲಿನ ಜಿಪ್‌ಲೈನ್‌ನಲ್ಲಿ ಅವಿತಿದ್ದವರೂ ಗುಂಡು ಹಾರಿಸಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಗಳು ತಿಳಿಸಿವೆ.

(ಏಜೆನ್ಸೀಸ್)

ಭಯೋತ್ಪಾದಕರು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಒಂದು ಪ್ರವಾಸಿಗರಿಗೆ ಸೇರಿದ್ದು ಮತ್ತು ಇನ್ನೊಂದು ಸ್ಥಳೀಯರಿಗೆ ಸೇರಿದ್ದಾಗಿದೆ. ಭಯೋತ್ಪಾದಕರ ಪ್ರಸ್ತುತ ಸ್ಥಳ ಅಥವಾ ಚಲನವಲನಗಳ ಬಗ್ಗೆ ನಿರ್ಣಾಯಕ ಪುರಾವೆಗಳನ್ನು ಒದಗಿಸಬಹುದಾದ್ದರಿಂದ ಏಜೆನ್ಸಿಗಳು ಎರಡೂ ಫೋನ್‌ಗಳನ್ನು ಟ್ರ್ಯಾಕ್ ಮಾಡುತ್ತಿವೆ. ಅಂದಹಾಗೆ ಘಟನೆಯ ನಂತರ ಫೋನ್​ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.