ಜಾರ್ಖಂಡ್: ಜಾರ್ಖಂಡ್ನ ಬಿರ್ಸಾ ಮುಂಡಾ ಕೆಂದ್ರ ಕಾರಾಗೃಹದಲ್ಲಿ (Jail) ಇಬ್ಬರು ಖೈದಿಗಳು ನೃತ್ಯ ಮಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಇದು ಜೈಲಿನ ಭದ್ರತಾ ವೈಫಲ್ಯದ ಬಗ್ಗೆ ಭಾರೀ ಚರ್ಚೆ ವ್ಯಕ್ತವಾಗಿದೆ.
ವೀಡಿಯೊದಲ್ಲಿರುವ ಖೈದಿಗಳನ್ನು ಬಹುಕೋಟಿ ಮದ್ಯ ಹಗರಣದ ಆರೋಪಿ ವಿಧು ಗುಪ್ತಾ ಮತ್ತು ಜಿಎಸ್‌ಟಿ ಹಗರಣದ ಆರೋಪಿ ವಿಕ್ಕಿ ಭಲೋಟಿಯಾ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಸಾಮಾನ್ಯ ಖೈದಿಗಳಿಗೆ ಲಭ್ಯವಿಲ್ಲದ ಸೌಲಭ್ಯಗಳನ್ನು ಹೊಂದಿರುವ ವಿಶೇಷ ಸಭಾಂಗಣದೊಳಗೆ ನೃತ್ಯ ಮಾಡುತ್ತಿದ್ದಾರೆ. ಹಾಗೂ ಇವರು ಜೈಲಿನಲ್ಲಿ ವಿಐಪಿ ಉಪಚಾರವನ್ನು ಅನುಭವಿಸುತ್ತಿದ್ದಾರೆಂದು ಮಾಹಿತಿಗಳು ಹೊರಬಂದಿವೆ.
ಇದನ್ನೂ ಓದಿ: ಪರಮಾಣು ಪರೀಕ್ಷೆ ಬಗ್ಗೆ ಟ್ರಂಪ್: ನಾವು ಜಗತ್ತನ್ನು 150 ಬಾರಿ ಸ್ಫೋಟಿಸಬಹುದು ಎಂದ ಅಮೆರಿಕ ಅಧ್ಯಕ್ಷ | Nuclear Testing
ಈ ವಿವಾದದ ನಂತರ ಆಡಳಿತವು ಈ ವಿಷಯದ ಬಗ್ಗೆ ತಕ್ಷಣ ತನಿಖೆಯನ್ನು ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಹಾಗಾಗಿ ಸಹಾಯಕ ಜೈಲರ್ ದೇವನಾಥ್ ರಾಮ್ ಮತ್ತು ಜಮದಾರ್ ವಿನೋದ್ ಕುಮಾರ್ ಯಾದವ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದ್ದು, ಖೈದಿಗಳು ಮೊಬೈಲ್ ಫೋನ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಹೇಗೆ ಸಾಧ್ಯವಾಯಿತು ಎಂಬುದನ್ನು ಅಧಿಕಾರಿಗಳು ತನಿಖೆ ಮಾಡಲು ಪ್ರಾರಂಭಿಸಿದ್ದಾರೆ.
ಆಡಳಿತಾತ್ಮಕ ಮೂಲಗಳ ಪ್ರಕಾರ, ಈ ಘಟನೆಯು ಜೈಲಿನ ಭದ್ರತೆಯಲ್ಲಿನ ಗಂಭೀರ ಲೋಪಗಳನ್ನು ಬಹಿರಂಗಪಡಿಸುತ್ತದೆ. ಹಾಗೆಯೇ ಜೈಲಿನೊಳಗೆ ಮೊಬೈಲ್ ಫೋನ್ ಹೇಗೆ ತರಿಸಿಕೊಂಡಿದ್ದಾರೆ. ಅದನ್ನು ಬಳಸಲು ಅವಕಾಶ ಕಲ್ಪಿಸಿದ ಅಧಿಕಾರಿಗಳು ಯಾರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.
ವೈರಲ್ ಆಗಿರುವ ಈ ವಿಡಿಯೋ ಜಾರ್ಖಂಡ್‌ನಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಪೋಷಿಸುತ್ತದೆ. ಹಾಗೇ ಪ್ರಭಾವಿ ಖೈದಿಗಳಿಗೆ ವಿಐಪಿ ಸವಲತ್ತುಗಳನ್ನು ನೀಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇನ್ನು ಈ ಘಟನೆ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದೆ. (ಏಜೆನ್ಸೀಸ್)